Tuesday 2 October 2012

ಪ್ರಾಮಾಣಿಕತೆಯ ಸಾಕಾರ ಮೂರ್ತಿ, ಚಿರಂತನ ಸ್ಫೂರ್ತಿ

ಆರು ವರ್ಷದ ಒಬ್ಬ ಹುಡುಗ ತನ್ನ ಗೆಳೆಯರೊಡನೆ ಶಾಲೆ ಮುಗಿಸಿ ಬರುತ್ತಾ ಒಂದು ತೋಟಕ್ಕೆ ಹೋಗುತ್ತಾನೆ. ಗೆಳೆಯರ ಗುಂಪು ತೋಟದಲ್ಲಿ ಹಣ್ಣನ್ನು ಕದಿಯಲು ಹೊಂಚು ಹಾಕಿ, ಮರವನ್ನು ಹತ್ತುತ್ತಾರೆ, ಈ ಹುಡುಗ ಕಾವಲಿಗೆ ನಿಲ್ಲುವವನಂತೆ ಕೆಳಗೆ ನಿಂತಿರುತ್ತಾನೆ. ಎಲ್ಲರೂ ಮಾವಿನ ಹಣ್ಣನ್ನು ಕೀಳುತ್ತಿರುವಾಗ, ತೋಟದ ಒಡೆಯ ಬಂದು ಕೆಳಗೆ ನಿಂತಿದ್ದ ಇವನನ್ನು ಹಿಡಿದು ಥಳಿಸಲು ಪ್ರಾರಂಭಿಸುತ್ತಾನೆ. ತಪ್ಪಿಸಿಕೊಳ್ಳುವ ದಾರಿ ಕಾಣದೆ ಆ ಹುಡುಗ, ತಾನೊಬ್ಬ ಅನಾಥನೆಂದೂ ಆದ್ದರಿಂದ ತನ್ನನ್ನು ಬಿಡಬೇಕೆಂದೂ ಬೇಡಿದಾಗ, ಆ ವ್ಯಕ್ತಿ "ನೀನು ಅನಾಥ ಆಗಿರೋದ್ರಿಂದ, ಎಲ್ಲಕ್ಕಿಂತ ಮುಖ್ಯ ಒಳ್ಳೆ ನಡತೆ ಕಲಿತುಕೊಬೇಕು" ಎಂದು ಹೇಳಿ ಆ ಹುಡುಗನನ್ನು ಬಿಡುತ್ತಾನೆ, ಇದು ಆ ಹುಡುಗನ ಮೇಲೆ ಎಷ್ಟು ಪರಿಣಾಮ ಬೀರುತ್ತದೆಂದರೆ, ಮುಂದೆಂದೂ ಅವನು ಸುಳ್ಳನ್ನು ಹೇಳುವಂತಹ ಕೆಲಸ ಮಾಡುವುದೇ ಇಲ್ಲ. ತನ್ನ ಒಳ್ಳೆಯ ಗುಣದಿಂದ ನೈತಿಕತೆಗೆ ಇನ್ನೊಂದು ಹೆಸರು ಎಂಬಂತೆ ಬಾಳುತ್ತಾನೆ.

ಆ ವ್ಯಕ್ತಿ ಯಾರೆಂದರೆ "Force will be met by Force" ಎಂದು ಶತ್ರು ಸೈನ್ಯಕ್ಕೆ ಸಾರಿ ಹೇಳಿದ, ಹೇಳಿದಂತೆ ಮಾಡಿ ತೋರಿಸಿ ಭಾರತೀಯರ ಶೌರ್ಯವನ್ನು ಎತ್ತಿ ಹಿಡಿದ ಪ್ರಥಮ ವ್ಯಕ್ತಿ. ಪ್ರಾಮಾಣಿಕತೆಯ ಸಾಕಾರ ಮೂರ್ತಿ. ಇವರು ಭಾರತ ಸರ್ಕಾರದಲ್ಲಿ ಗೃಹಮಂತ್ರಿಯಾಗಿದ್ದಾಗ Home less Home minister ಎಂದೇ ಕರೆಸಿಕೊಳ್ಳುತ್ತಿದ್ದರು. ಭಾರತ ಸರ್ಕಾರದ ಗೃಹಮಂತ್ರಿಯಾಗಿದ್ದರೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು, ಅವರೇ ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರಿ.

ಇವರ ಹೆಸರು ನೋಡಿದವರನೇಕರು ಇವರು ಶಾಸ್ತ್ರಿ ಮನೆತನಕ್ಕೆ ಸೇರಿದ ಬ್ರಾಹ್ಮಣರಿರಬೇಕೆಂದು ಭ್ರಮಿಸುತ್ತಾರೆ, ಆದರೆ ಶಾಸ್ತ್ರಿ ಎಂಬುದು ಕಾಶಿ ವಿದ್ಯಾ ಪೀಠದಿಂದ ಅವರಿಗೆ ಸಿಕ್ಕ ಒಂದು ಪದವಿಯಷ್ಟೇ. ಅದು ಈಗಿನ ಕಾಲದ ಬ್ಯಾಚಲರ್ಸ್ ಡಿಗ್ರೀಗೆ ಸಮನಾದ ಒಂದು ಪದವಿ. ಆದರೆ ಅವರ ಹೆಸರಿನೊಡನೆ ಅವಿನಾಭಾವವಾಗಿ ಸೇರಿ ಹೋಯಿತು. ಇವರ ಜನನ 02 October 1904 ರಂದು ಮುಘಲ್ ಸರೈ (Mughalsarai) ಎಂಬಲ್ಲಿ. ತಂದೆ ಶಾರದಾ ಪ್ರಸಾದ್, ತಾಯಿ ರಾಮ್ ದುಲಾರಿ ದೇವಿ.

ಒಬ್ಬ ನಾಯಕರಾಗಿ ಅವರು ತಮ್ಮ ಪಾಲಿನ ಕರ್ತವ್ಯವನ್ನು ಚ್ಯುತಿಯಿಲ್ಲದೆ ನಿಭಾಯಿಸುತ್ತಿದ್ದರು. ಜವಾಬ್ದಾರಿಗಳನ್ನು ತನ್ನ ಹೆಗಲಿಗೆ ತೆಗೆದುಕೊಳ್ಳುತ್ತಿದ್ದರು, ಅವರ ಸರಳತೆ, ದೂರದೃಷ್ಟಿ, ಪ್ರಾಮಾಣಿಕತೆ,  ಕರ್ತೃತ್ವ ಶಕ್ತಿ ಇವುಗಳಿಂದ ಅವರು ರಾಜಕೀಯವಾಗಿ ಮೇಲೇರುತ್ತಾ ಹೋದರು, ಆದರೆ ಒಂದು ಕ್ಷಣಕ್ಕೂ ತಮ್ಮ ಸ್ವಾರ್ಥದ ಬಗೆಗೆ ಯೋಚಿಸಿದವರಲ್ಲ.

ಅವರು ಜವಾಬ್ದಾರಿಗಳನ್ನು ತಮ್ಮ ಹೆಗಲಿಗೆ ತೆಗೆದುಕೊಳ್ಳುತ್ತಿದ್ದ ಪರಿಗೆ ಸಾಕ್ಷಿ ಈ ಘಟನೆಗಳು - ರೈಲ್ವೆ ಇಲಾಖೆ ಇವರ ಅಡಿಯಲ್ಲಿದ್ದಾಗ 1956 ರ ಸೆಪ್ಟೆಂಬರ್ ನಲ್ಲಿ ಮಹಬೂಬ್ ನಗರದಲ್ಲಿ ನಡೆದ, 112 ಜನರನ್ನು ಬಳಿ ಪಡೆದ ರೈಲ್ವೆ ಅಪಘಾತದ ನೈತಿಕ ಹೊಣೆ ಹೊತ್ತು ತಕ್ಷಣವೇ ರಾಜಿನಾಮೆ ನೀಡಿದ್ದರು, ಅದು ಸ್ವೀಕಾರವಾಗಲಿಲ್ಲ. ಮೂರು ತಿಂಗಳುಗಳ ನಂತರ ತಮಿಳು ನಾಡಿನ ಅರಿಯಲುರ್ ನಲ್ಲಿ 144 ಜನರ ಬಲಿ ಪಡೆದ ರೈಲು ಅಪಘಾತದ ನಂತರ ಅವರು ಮತ್ತೆ ಆ ಪದವಿಯಲ್ಲಿ ಮುಂದುವರೆಯಲಿಲ್ಲ. ಅವರ ರಾಜಿನಾಮೆ ಸ್ವೀಕರಿಸುವಾಗ ಪ್ರಧಾನಿಯಾಗಿದ್ದ ನೆಹರು ಸಂಸತ್ತಿನಲ್ಲಿ, "ಶಾಸ್ತ್ರೀಜಿಯವರ ರಾಜಿನಾಮೆ ರಾಜಕೀಯದಲ್ಲಿ ಮುಂದಿನ ಪೀಳಿಗೆಗೆ ಒಂದು ಮಾದರಿಯಾಗಿ ನಿಲ್ಲುವುದೆಂಬ ಒಂದೇ ಕಾರಣಕ್ಕೆ ಇದನ್ನು ಸ್ವೀಕರಿಸುತ್ತಿದ್ದೇನಷ್ಟೇ, ನಡೆದ ಅಪಘಾತಗಳಿಗೆ ಶಾಸ್ತ್ರೀಜಿಯವರು ಹೊಣೆಗಾರರೆಂದು ಅಲ್ಲ" ಎಂದು ಘೋಷಿಸಿದ್ದರು. ಮಾದರಿಯೇನೋ ನೆಲೆ ನಿಂತಿತು, ಆದರೆ ಇಂದಿನ ರಾಜಕಾರಣದಲ್ಲಿ ಯಾರು ಅದನ್ನು ಪಾಲಿಸುತ್ತಿದ್ದಾರೆ?

27 May 1964 - ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಹೃದಯಾಘಾತದಿಂದ ಮರಣವನ್ನಪ್ಪಿದ ದಿನ. ರಾಷ್ಟ್ರೀಯ ಕಾಂಗ್ರೆಸ್ ದೃಷ್ಟಿಯಲ್ಲಿ ಪರ್ಯಾಯ ನಾಯಕನಾಗಿ ಕಂಡವರೇ ಶಾಸ್ತ್ರೀಜಿ. ಭಾರತದ ದ್ವಿತೀಯ ಪ್ರಧಾನಿಯಾಗಿ ಇವರು ಅಧಿಕಾರ ಸ್ವೀಕಾರ ಮಾಡಿದ ನಂತರ ಭಾರತದ ಚಿತ್ರಣವೇ ಬದಲಾಗುತ್ತಾ ಹೋಯಿತು.ಶ್ವೇತ ಕ್ರಾಂತಿಗೆ ಉತ್ತೇಜನ ಕೊಟ್ಟು ಅದರ ಹರಿಕಾರರೆನಿಸಿದರು. ಹಸಿರು ಕ್ರಾಂತಿಯ ಪ್ರಾರಂಭವೂ ಇವರ ಕಾಲದಲ್ಲೇ. ಪ್ರಧಾನಿಯಾಗಿ ಆರಿಸಿಬಂದ ಮೇಲೆ ಅವರ ಮೊದಲ ಭಾಷಣದಲ್ಲೇ ಅವರು ತಮ್ಮ ದೃಷ್ಟಿಯನ್ನು ಸ್ಪಷ್ಟಗೊಳಿಸಿದ್ದರು. "There comes a time in the life of every nation when it stands at the cross-roads of history and must choose which way to go. But for us there need be no difficulty or hesitation, no looking to right or left. Our way is straight and clear—the building up of a socialist democracy at home with freedom and prosperity for all, and the maintenance of world peace and friendship with all nations." ಎಂದು ಸಾರಿದ್ದರು. 

ಪ್ರಧಾನಿಗಳ ಮಕ್ಕಳಾಗಿದ್ದರೂ, ಅವರ ಮಕ್ಕಳು ಶಾಲೆಗೆ ಹೋಗಲು ಜಟಕಾವನ್ನು ಅವಲಂಬಿಸಿದ್ದರಂತೆ, ಒಮ್ಮೆ ತಿಂಗಳ ಅಂತ್ಯದಲ್ಲಿ ತುರ್ತಾಗಿ ಹಣದ ಅಗತ್ಯ ಬಂದಾಗ, ಭಾರತದ ಪ್ರಧಾನಿ ಕೈಲಿ ಹಣವಿಲ್ಲದೇ ಒದ್ದಾಡುತ್ತಿದ್ದರು. ಅವರ ಪತ್ನಿ ಹಣ ತಂದುಕೊಟ್ಟಾಗ ಆಕೆಗೆ ಅದು ಎಲ್ಲಿಂದ ಬಂತೆಂದು ಇವರು ಕೇಳುತ್ತಾರೆ, ಅವರ ತಿಂಗಳ ಸಂಬಳದಲ್ಲಿ ತಾನು ಹತ್ತು ರುಪಾಯಿ ಉಳಿತಾಯ ಮಾಡುತ್ತಿರುವುದಾಗಿ ಆಕೆ ಹೇಳಿದಾಗ, ಸರ್ಕಾರಕ್ಕೆ ಪತ್ರ ಬರೆದು ಇನ್ನು ಮುಂದೆ ತನಗೆ ಹತ್ತು ರುಪಾಯಿ ಸಂಬಳ ಕಡಿಮೆ ಕೊಡಬೇಕೆಂದು ಕೇಳಿಕೊಂಡಿದ್ದರು! ರೈಲ್ವೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ, ಸರ್ಕಾರಿ ವಸತಿಯಿಂದ ಅವರು ಹೊರಬಂದಾಗ ಅಕ್ಷರಶಃ ಅನಿಕೇತನರಾಗಿದ್ದರು. ವಾಸ ಮಾಡಲು ಮನೆಯೇ ಇಲ್ಲದೇ ಒದ್ದಾಡಿದ್ದರು.

ಪ್ರಧಾನಿಯಾದಾಗ, ಅವರ ಅಧಿಕಾರಾವಧಿಯಲ್ಲಿ ಅನೇಕ ಸಂಕಷ್ಟಗಳು ಬಂದರೂ ಧೃತಿಗೆಡಲಿಲ್ಲ. ಮದ್ರಾಸಿನಲ್ಲಿ ಶುರುವಾಗಿದ್ದ ಹಿಂದಿ ವಿರೋಧಿ ಅಭಿಯಾನ, ಆಹಾರ ಕೊರತೆ, ನೆರೆ ರಾಷ್ಟ್ರಗಳ ದಾಳಿಯ ಭೀತಿ, ಕಾಶ್ಮೀರ ಸಮಸ್ಯೆ ಹೀಗೆ ಅನೇಕ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಿದರು. ಆಹಾರ ಕೊರತೆಯುಂಟಾಗಿದ್ದಾಗ ಶಾಸ್ತ್ರೀಜಿ, ಜನ ವಾರದಲ್ಲಿ ಒಂದು ದಿನ ತಮ್ಮ ಒಪ್ಪೊತ್ತಿನ ಊಟ ಬಿಟ್ಟರೆ ಕೊರತೆಯನ್ನು ಸರಿದೂಗಿಸುವುದು ಸಾಧ್ಯ ಎಂಬ ಕರೆ ನೀಡಿದರು, ಇಡೀ ದೇಶಕ್ಕೆ ದೇಶವೇ ಅವರ ಕರೆಗೆ ಸ್ಪಂದಿಸಿ, ಕರೆ ಬಿತ್ತರಗೊಂಡ ಸೋಮವಾರದಿಂದ ಆರಂಭಿಸಿ ಪ್ರತಿ ಸೋಮವಾರ ಒಪ್ಪೊತ್ತು ಊಟ ಕೈಬಿಟ್ಟಿತು. ಆ ಸಮಸ್ಯೆ ತನ್ನ ಪರಿಹಾರದ ಹಾದಿಯನ್ನು ಕಂಡುಕೊಂಡಿತ್ತು. ದೇಶದ ಜನತೆಗೆ ತಮ್ಮ ಪ್ರಧಾನಿಯ ಮೇಲೆ ಇದ್ದ ನಂಬಿಕೆಗೆ, ಆ ವ್ಯಕ್ತಿ ಜನರ ಹೃದಯ ತಲುಪಿದ್ದರೆನ್ನಲು ಇದಕ್ಕಿಂತ ನಿದರ್ಶನ ಬೇಕೇ? ಇದೇ ನಂಬಿಕೆ, ಇದೇ ರಾಷ್ಟ್ರದ ಜನತೆಗೆ ಇಂದಿನ ಪ್ರಧಾನಿಯ ಮೇಲೆ ಇರುವುದೇ ಎಂದು ಕೇಳಿಕೊಂಡರೆ ಬಹುಶಃ ಪ್ರಶ್ನೆಯೇ ವ್ಯಂಗ್ಯವಾಗಬಹುದೇನೋ.

ಇನ್ನು ಅವರು ಶತ್ರು ರಾಷ್ಟ್ರಗಳನ್ನು ಅವರು ನಿಭಾಯಿಸಿದ ರೀತಿ ಅದೂ ಅದ್ಭುತ. 1962ರಲ್ಲಿ ಚೀನಾ ಆಕ್ರಮಣ ಮಾಡಿದಾಗ, ನಮ್ಮ ಸೇನೆಗೆ ಆದೇಶ ನೀಡಲು "ಹಿಂದಿ - ಚೀನೀ ಭಾಯಿ ಭಾಯಿ" ಮಂತ್ರ ಜಪಿಸುತ್ತಿದ್ದ ಪ್ರಧಾನಿ ನೆಹರು ಮೀನ ಮೇಷ ಎಣಿಸುತ್ತಿದ್ದರು, ಪರಿಣಾಮ ಭಾರತ ತನ್ನ ಅಧೀನದಲ್ಲಿದ್ದ ಅನೇಕ ಭೂ ಪ್ರದೇಶವನ್ನು ಕಳೆದುಕೊಂಡಿತು. ಆದರೆ 1965ರಲ್ಲಿ ಚುಕ್ಕಾಣಿ ಹಿಡಿದ್ದವರು ಇಂತಹ ಅನರ್ಥಕ್ಕೆ ಆಸ್ಪದ ಕೊಡಲಿಲ್ಲ. ಅನೇಕ ಪ್ರಮುಖ ದೇಶಗಳನ್ನು ಸುತ್ತಿದರು, ಅಲ್ಲಿನ ನಾಯಕರಿಗೆ ಭಾರತದ ನಿಲುವನ್ನು ಸ್ಪಷ್ಟಪಡಿಸಿದರು. ನೆರೆ ರಾಷ್ಟ್ರ ಪಾಕಿಸ್ತಾನ ತನ್ನ ಕುಚೇಷ್ಟೆಗಳನ್ನು ಪ್ರಾರಂಭಿಸಿತ್ತು, 1965ರ ಮೇ - ಜೂನ್ ನಲ್ಲಿ ಗುಜರಾತ್ ರಾಜ್ಯದ ಕಛ್ಹ್ ಪ್ರಾಂತ್ಯದಲ್ಲಿ ಆಕ್ರಮಣ ಮಾಡಿತು, ಶಾಸ್ತ್ರೀಜಿ ಹಿಂದೆ ಮುಂದೆ ಯೋಚಿಸಲಿಲ್ಲ, ನಮ್ಮ ಸೈನ್ಯವನ್ನು ಅಲ್ಲಿಗೆ ಅಟ್ಟಿದರು. ಪಾಕಿಸ್ತಾನದ ಪ್ರಯತ್ನ ವಿಫಲವಾಯಿತು, ನಂತರ ಎರಡೂ ದೇಶಗಳೂ ಹೋರಾಟ ನಿಲ್ಲಿಸಲು ಒಂದು ಒಪ್ಪಂದಕ್ಕೆ ಬಂದರು. ಕಛ್ಹ್ ನಲ್ಲೇನೋ ಸರಿ ಹೋಯಿತು, ಆದರೆ ಇನ್ನೂ ಒಪ್ಪಂದದ ಶಾಯಿ ಆರುವ ಮೊದಲೇ ಪಾಕಿಸ್ತಾನ ಮತ್ತೆ ತನ್ನ ನಿಜರೂಪ ತೋರಿತು, ಕಾಶ್ಮೀರದಲ್ಲಿ ಮತ್ತೆ ಆಕ್ರಮಣ ಮಾಡಿದ್ದಲ್ಲದೇ, ಶಾಸ್ತ್ರೀಜಿ ಒಬ್ಬ ಹಿಂದೂ ಎಂದು ಬಿಂಬಿಸಿ ಭಾರತೀಯ ಮುಸ್ಲಿಮರನ್ನು ಅವರ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನ ಮಾಡಿತು. ಒಂದು ಕಡೆ ಕಾಶ್ಮೀರದಲ್ಲಿ, ಇತ್ತ ಪೂರ್ವ ಪಾಕಿಸ್ತಾನದ (ಈಗಿನ ಬಾಂಗ್ಲಾದೇಶ) ಕಡೆಯಿಂದ ಒಟ್ಟಿಗೇ ಆಕ್ರಮಣವಾಗುವ ಸಾಧ್ಯತೆಯಿತ್ತು. ಅದೇ ಸಮಯದಲ್ಲಿ ಚೀನಾ ಇಲ್ಲದ ಆರೋಪ ಮಾಡುತ್ತಾ ಭಾರತಕ್ಕೆ ಬೆದರಿಕೆ ಹಾಕಲು ಪ್ರಾರಂಭಿಸಿತ್ತು, ಎಲ್ಲವನ್ನೂ ಶಾಸ್ತ್ರೀಜಿ ಉಕ್ಕಿನ ಗುಂಡಿಗೆ ತೋರಿ ನಿಭಾಯಿಸಿದರು. "Go Forward & Strike" ಎಂದು ಸೇನೆಯ ಕಮಾಂಡರ್ ಗೆ ಆದೇಶವಿತ್ತು ಅವನಿಗೆ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ಕೊಟ್ಟರು. "Force will be met by Force" ಎಂದು ಶತ್ರು ರಾಷ್ಟ್ರಕ್ಕೆ ಪ್ರತ್ಯುತ್ತರ ಕೊಟ್ಟರು.

ಆ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ನಿಂತು ಅವರು ಮಾಡಿದ ಭಾಷಣದಲ್ಲಿ  - "It does not matter if we are destroyed. We will fight to the last to maintain the high honor of the Indian nation and its flag." ಎಂದು ಘೋಷಿಸಿದ್ದರು. ಯಾರು ಏನೆಂದು ಭಾವಿಸಿದರೂ ಚಿಂತೆಯಿಲ್ಲ, ನಮ್ಮ ರಾಷ್ಟ್ರದ ಸಾರ್ವಭೌಮತ್ವಕ್ಕೆ ಧಕ್ಕೆ ಬರಲು ಕೊಡುವುದಿಲ್ಲ ಎಂದು ಗುಡುಗಿದ್ದರು. ಅಂತಹ ಧೀಮಂತ ನಾಯಕನನ್ನು ಕಂಡಿದ್ದ ದೇಶ, ಇಂದು ತನ್ನ ನಿಲುವನ್ನು ವಿಶ್ವಕ್ಕೆ ಸಾರಲು ಒಂದು ಧ್ವನಿಯಿಲ್ಲದೇ ಪರಿತಪಿಸುತ್ತಿರುವುದು ವಿಪರ್ಯಾಸವಲ್ಲವೇ? ಶತ್ರುಗಳಿಗೆ ಪ್ರತ್ಯುತ್ತರ ಕೊಡುವುದಿರಲಿ, ಮಾನವ ಹಕ್ಕು ಎಂಬ ಹೆಸರಿನಲ್ಲಿ ರಾಷ್ಟ್ರದ ಗೌರವಕ್ಕೆ ಧಕ್ಕೆಯುಂಟು ಮಾಡಿದ ಭಯೋತ್ಪಾದಕರಿಗೂ ರಕ್ಷಣೆ ಕೊಡುತ್ತಾ, ಅವರನ್ನು ಸಾಕುತ್ತಿದೆ ನಮ್ಮ ಸರ್ಕಾರ. ಮತಗಳ ಮೇಲೆ ಕಣ್ಣಿಟ್ಟು ಅವರನ್ನು ಶಿಕ್ಷಿಸದೆ, ಜನತೆಗೆ ನೆಪ ಹೇಳುತ್ತಾ ಕಾಲ ದೂಡುತ್ತಿದೆ.

ಶಾಸ್ತ್ರೀಜಿ ಕೇವಲ ರಾಷ್ಟ್ರದ ಜನತೆಗೆ ಹೇಳಿದುದಷ್ಟೇ ಅಲ್ಲ, ಚೀನಾ "ಭಾರತ ತನ್ನ ನೆಲದಲ್ಲಿ ಸೇನೆ ನಿಲ್ಲಿಸುತ್ತಿದೆ, ಅದು ತನ್ನ ಸೈನ್ಯ ಹಿಂತೆಗೆದುಕೊಳ್ಳಬೇಕು" ಎಂಬ ಸುಳ್ಳು ಆರೋಪವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಡಿದಾಗ, ಅದಕ್ಕೆ ಪ್ರತ್ಯುತ್ತರ ಕೊಡಲು ಸ್ವಲ್ಪವೂ ತಡ ಮಾಡಿರಲಿಲ್ಲ, ಪರಿಸ್ಥಿತಿ ಬಹಳ ಸೂಕ್ಷ್ಮವಾಗಿತ್ತು, ಸೈನ್ಯ ಹಿಂತೆಗೆದು ಕೊಂಡರೆ ಚೀನಾದ ಆರೋಪ ಸತ್ಯವೆಂದು ಒಪ್ಪಿಕೊಂಡಂತೆ ಆಗುತ್ತಿತ್ತು. ಬಹಳಷ್ಟು ದೇಶಗಳು ಭಾರತದ ಪ್ರತ್ಯುತ್ತರವೇನಿರಬಹುದೆಂಬ ನಿರೀಕ್ಷೆಯಲ್ಲಿದ್ದವು. ಆಗ ಲಾಲ್ ಬಹದ್ದೂರರು - "China's allegation is untrue. If China attacks India it is our firm resolve to fight for our freedom. The might of China will not deter us from defending our territorial integrity." ಎಂದು ಹೇಳಿ ಚೀನಾದ ಬಾಯಿ ಮುಚ್ಚಿಸಿದ್ದರು. 1965ರ ಇಂಡೋ-ಪಾಕ್ ಕದನದಲ್ಲಿ ಭಾರತ ಜಯ ಸಾಧಿಸಿ ಕಾಶ್ಮೀರವನ್ನು ವಶ ಪಡಿಸಿಕೊಂಡಿತಲ್ಲದೆ ಲಾಹೋರ್ ವರೆಗಿನ ಪಂಜಾಬ್ ನ ಭೂಮಿ ಭಾರತದ ವಶಕ್ಕೆ ಬಂದಿತ್ತು. ನಂತರ ಅಂತರರಾಷ್ಟ್ರೀಯ ಒತ್ತಡಕ್ಕೆ ಮಣಿದು, ಎರಡು ದೇಶಗಳೂ ಒಂದು ಒಪ್ಪಂದಕ್ಕೆ ಬರಲು ಒಪ್ಪುತ್ತವೆ, ಪಾಕಿಸ್ತಾನಕ್ಕೆ ಅದರಿಂದ ವಶಪಡಿಸಿಕೊಂಡ ಭೂಮಿಯನ್ನು ಅದಕ್ಕೆ ಹಿಂತಿರುಗಿಸುವುದೆಂದೂ, ಕಾಶ್ಮೀರ ವಿಚಾರವಾಗಿ ಪಾಕ್ ಇನ್ನೆಂದೂ ತಂಟೆ ಮಾಡುವುದಿಲ್ಲವೆಂದೂ, ಎರಡು ರಾಷ್ಟ್ರಗಳೂ ಸೌಹಾರ್ದದಿಂದ ವ್ಯವಹರಿಸಬೇಕೆಂದೂ ಒಪ್ಪಂದವಾಗಿರುತ್ತದೆ.

ಒಪ್ಪಂದಕ್ಕೆ ಸಹಿ ಹಾಕಲು ಶಾಸ್ತ್ರೀಜಿ ರಷ್ಯಾದ ತಾಷ್ಕೆಂಟ್ ಗೆ ತೆರಳುತ್ತಾರೆ, ಭಾರತದ ಪರವಾಗಿ ಒಪ್ಪಂದಕ್ಕೆ 11 ಜನವರಿ 1966ರಂದು ಸಹಿಯನ್ನೂ ಮಾಡುತ್ತಾರೆ, ಆದರೆ ಅದೇ ರಾತ್ರಿಯಂದು ಅವರಿಗೆ ಹೃದಯಾಘಾತವಾಗುತ್ತದೆ, ಅಲ್ಲೇ ಮರಣವನ್ನಪ್ಪುತ್ತಾರೆ. ಅವರ ದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಲು ಭಾರತ ಸರ್ಕಾರವೂ ಮುಂದೆ ಬರುವುದಿಲ್ಲ, ರಷ್ಯಾ ಸರ್ಕಾರವೂ ಅದರ ಅಗತ್ಯವಿಲ್ಲವೆಂದು, ಅವರಿಗೆ ಹೃದಯಾಘಾತವಾಗಿದ್ದೆ ನಿಜವೆಂದು ಸಾರಿ ಬಿಡುತ್ತವೆ. ಹೃದಯಾಘಾತವಾಗಿದ್ದರೆ ಅವರ ದೇಹವೇಕೆ ನೀಲಿಗಟ್ಟಿತ್ತು ಎಂಬ ಅವರ ಕುಟುಂಬವರ್ಗದವರ ಪ್ರಶ್ನೆಗೆ ಇದುವರೆಗೂ ಉತ್ತರ ದೊರೆತಿಲ್ಲ. 2009ರಲ್ಲಿ ಅವರ ಸಾವಿನ ಸತ್ಯಾಸತ್ಯತೆ ತಿಳಿಯಲು ಮಾಹಿತಿ ಹಕ್ಕು ಕಾಯ್ದೆಯಡಿ ಸರ್ಕಾರಕ್ಕೆ ಬಂದ ಅರ್ಜಿಯನ್ನು ಕೇಂದ್ರ ಸರ್ಕಾರ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರಬಹುದಾದ ಗೌಪ್ಯ ವಿಚಾರ ಎಂದು ಘೋಷಿಸಿ, ಮಾಹಿತಿ ನೀಡಲು ನಿರಾಕರಿಸುತ್ತದೆ. ಇದು ಅಂತಹ ಮಹಾನ್ ನಾಯಕನಿಗೆ ನಾವು ಸಲ್ಲಿಸಿದ ಕೃತಜ್ಞತೆ.

ಶಾಸ್ತ್ರೀಜಿ ಕಾಲದಲ್ಲಿದ್ದ, ರಾಷ್ಟ್ರದ ಪ್ರತಿಯೊಬ್ಬ ನಾಯಕರ ಜನ್ಮದಿನವನ್ನು ಒಂದಲ್ಲಾ ಒಂದು ದಿನಾಚರಣೆಯ ಹೆಸರಿನಲ್ಲಿ ಆಚರಿಸಲಾಗುತ್ತದೆ. ಇಂದು ಶಾಸ್ತ್ರೀಜಿಯವರ 108ನೇ ಜನ್ಮದಿನ, ಈ ದಿನ 2 October ಮಾತ್ರ ಗಾಂಧೀಜಿಯವರ ಗುಣಗಾನದಲ್ಲೇ ಕಳೆದು ಹೋಗುತ್ತದೆ. ಎಲ್ಲೋ ಕೆಲವೊಂದು ಶಾಲೆಗಳಲ್ಲಿ ಗಾಂಧೀಜಿಯವರ ಭಾವಚಿತ್ರದ ಪಕ್ಕದಲ್ಲಿ, ಶಾಸ್ತ್ರೀಜಿಯವರ ಪಟವನ್ನೂ ಇಟ್ಟಿರುತ್ತಾರಾದರೂ, ಮಕ್ಕಳಿಗೆ ಅವರ ಸಾಧನೆಗಳ ಬಗೆಗೆ ಪರಿಚಯ ಮಾಡಿಸಲು ಸಮಯವೇ ಸಾಲದು. ಗಾಂಧೀಜಿಯವರ ಜೀವನಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ನಾಯಕರಲ್ಲಿ ಶಾಸ್ತ್ರೀಜಿ ಅಗ್ರಗಣ್ಯರು, ಇಂದು ಕೇವಲ ಗಾಂಧೀಜಿಯವರ ಉಪದೇಶಗಳನ್ನು ನೆನಸಿಕೊಂಡರೆ ಸಾಲದು, ಶಾಸ್ತ್ರೀಜಿಯವರ ಕರ್ತವ್ಯ ರೀತಿ, ಅವರ ಕರ್ತೃತ್ವ ಶಕ್ತಿಗಳನ್ನೂ ಸ್ಮರಿಸಬೇಕು. ಇಂದಿನ ದಿನವನ್ನು ಅವರಿಗೆ ಮೀಸಲಾಗಿಡ ಬಹುದೇ???

Happy Birth Day Shastriji. Our country needs you today. 

Thursday 2 August 2012

ಏಕೆ ಹೀಗೆ ನಮ್ಮ ಮನವು...

ಕೆಲವೊಮ್ಮೆ ನಮ್ಮ ಮನಸ್ಸೇಕೆ ಹೀಗೆ ರಚ್ಚೆ ಹಿಡಿದು ಕುಳಿತು ಬಿಡುತ್ತದೆ? ಏನು ಮಾಡಲೂ ಒಲ್ಲೆನೆಂದು ಹಠ ಮಾಡುತ್ತಾ, ಸುಮ್ಮನೇ ಒಂದು ಮೂಲೆಯಲ್ಲಿ ಯೋಚಿಸುತ್ತಾ ಕೂಡುವ ಭಾವವೇಕೆ ಮನವನ್ನಾವರಿಸಿಬಿಡುತ್ತದೆ? ಏನಾದರೂ ಸಮಸ್ಯೆಯೋ? ಇಲ್ಲ. ಆರ್ಥಿಕ ತೊಂದರೆ, ಕಷ್ಟ, ಪ್ರೇಮವೈಫಲ್ಯ, ಓದಿನಲ್ಲಿ ನಪಾಸು, ಕಛೇರಿಯಲ್ಲಿ ಕಿರುಕುಳ, ಉಹ್ಞುಂ, ಯಾವುದೂ ಇಲ್ಲ. ಹುಟ್ಟಾಸೋಮಾರಿಯೋ? ಅದಂತೂ ಖಂಡಿತಾ ಅಲ್ಲ. ಕೆಲಸಕ್ಕೆ ಹೋಗುವಾಗ, ತನ್ನ ಕಾರ್ಯದಕ್ಷತೆಗೆ ಹೆಸರಾಗಿ, ಅದಕ್ಕಾಗೇ ಗುರುತಿಸಲ್ಪಟ್ಟು ಪ್ರಶಸ್ತಿಯನ್ನೂ ಪಡೆದಿದ್ದ ಹುಡುಗಿ. ಕೆಲಸ ಶುರುವಿಟ್ಟುಕೊಂಡರೆ  ಊಟ, ತಿಂಡಿಯ ಪರಿವೆಯಿಲ್ಲದಂತೆ ಕಛೇರಿಯಲ್ಲಿದ್ದ ಒಂಭತ್ತು ತಾಸೂ ಕೆಲಸದ ಕಡೆಗೇ ಗಮನವಿಟ್ಟು ಕೂಡುತ್ತಿದ್ದವಳು, ಈಗ ಅನಿವಾರ್ಯ ಕಾರಣಗಳಿಂದ ಕೆಲಸ ಬಿಟ್ಟು ಮನೆಯಲ್ಲಿ ಕೂತರೆ, ಮನೆಕೆಲಸ ಮಾಡುವುದಕ್ಕೂ ಮನಸು ಬಾರದು.

ಅಮ್ಮನೇನೋ ತುಟಿಪಿಟಕ್ ಎನ್ನದೆ ತಮ್ಮ ಕೆಲಸವಿದೆಂದು ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಾರೆ. ಆದರೆ ಅವರು ಕೆಲಸ ಮಾಡುವುದನ್ನೂ ನಮ್ಮ ಹುಡುಗಿಗೆ ನೋಡಲಾಗದು. ಏನೋ ಕಸಿವಿಸಿ, ಸಂಕಟ ಒಳಗಿನಿಂದ ಒದ್ದುಕೊಂಡು ಬರುತ್ತದೆ. ತಾಯಿಯ ಮೇಲೆ ಎಲ್ಲಾ ಭಾರವನ್ನೂ ಹಾಕಿ ತಾನು ಆರಾಮಾಗಿ ಕುಳಿತಿರುವೆನೆಂಬ ಯೋಚನೆ ಮನಸ್ಸನ್ನು ಮುತ್ತಿ ನೋಯಿಸುತ್ತದೆ. ಆದರೆ, ಕೆಲಸ ಮಾಡಲು ಮಾತ್ರ ಏಳಲಾರಳು. ಕೈ ಕಾಲುಗಳು ಕುಳಿತಿರುವ ಜಾಗಕ್ಕೆ ಅಂಟಿ ಹೋಗಿವೆಯೇನೋ ಎಂಬಂತೆ, ಕುಳಿತಲ್ಲಿಂದ ಎದ್ದು ಹೋಗುವ ಮನಸ್ಸಾಗುವುದಿಲ್ಲ.

ಯಾವುದೋ ಒಂದು ಕೆಲಸಕ್ಕೆ ಬಾರದ ಹಿಂದಿ ಸೀರಿಯಲ್ಲು. ಅದನ್ನು ನೋಡಿ ಅಂತರ್ಜಾಲದಲ್ಲಿ ಅದರ ಕೊಂಡಿಯನ್ನು ಹುಡುಕುತ್ತಾ ಕೂಡುತ್ತಾಳೆ. ಅದರ ಹುಚ್ಚರಾಗಿರುವ ಕೆಲ ಜನ, ಅದರ ಬಗೆಗೆ ಬರೆಯುವ ಮುನ್ನೋಟಗಳನ್ನು, ಅದರ ಬಗೆಗೆ ಬರುವ ಸುದ್ದಿಗಳನ್ನು ನೋಡುತ್ತಾ ಕಾಲಯಾಪನೆ ಮಾಡುತ್ತಾಳೆ. ಅದನ್ನು ದಿನಕ್ಕೆ ನಾಲ್ಕು ಬಾರಿ ಮೂರ್ಖರ ಪೆಟ್ಟಿಗೆಯಲ್ಲಿ ಹಾಕಿದರೂ ತಪ್ಪದೇ ನೋಡುತ್ತಾಳೆ. ಅದೇ ಜಗವೆಂಬ ಭ್ರಮೆಯಲ್ಲಿದ್ದಾಳೆನೋ ಎಂದನಿಸುತ್ತದೆ, ಒಮ್ಮೊಮ್ಮೆ. ಅದು ತನ್ನ ಸಮಯ ಹಾಳುಮಾಡುತ್ತಿದೆ ಎಂದು ಅವಳೇ ಹೇಳುತ್ತಾಳೆ, ಆದರೆ ಅದನ್ನು ಬಿಡಲಾರಳು. ಹಾಗಿದ್ದರೆ ಮುಂಚಿಂದಲೂ ಟಿ. ವಿ. ದಾಸಿಯೋ, ಸೀರಿಯಲ್ಲುಗಳ ಹಾವಳಿಗೆ ತುತ್ತಾದವಳೋ? ಅಲ್ಲ. ಮನಸ್ಸು ಬಂದರೆ ಅದನ್ನು ಚಾಲೂ ಮಾಡುವ, ಇಲ್ಲದಿದ್ದರೆ ಇಲ್ಲ ಎಂಬಂತಿದ್ದಳು. ದಿನಕ್ಕೆ ಹದಿನೈದು ನಿಮಿಷ ಟಿ. ವಿ. ನೋಡಿದರೆ ಅದೇ ಹೆಚ್ಚು ಎನ್ನುವ ಸ್ವಭಾವ. ತಾನಾಯಿತು, ತನ್ನ ಕೆಲಸ, ಪುಸ್ತಕ, ಓದು ಇಷ್ಟೇ ಪ್ರಪಂಚವೆಂಬಂತಿದ್ದಳು. ಅವಳಲ್ಲಾದ ಬದಲಾವಣೆ ಸ್ವತಃ ಅವಳಿಗೂ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಟಿ. ವಿ. ನೋಡುವುದೇನೂ ಅಪರಾಧವಲ್ಲ ಬಿಡಿ. ಉಪಯುಕ್ತ ಕಾರ್ಯಕ್ರಮಗಳಾದರೆ ಸರಿ. ಆದರೆ ವರ್ಷಾನುಗಟ್ಟಲೆ ಸಾಗುವ ಈ ಧಾರಾವಾಹಿಗಳು ನುಂಗುವ ನಮ್ಮ ಸಮಯ?? ಅದರ ಬೆಲೆ ಕಟ್ಟಲಾದೀತೇ?

ಅವಳಿಗೆ ಇದೆಲ್ಲವೂ ಗೊತ್ತು. ನಿರಂತರ ಕಲಿಯುವ, ಕಲಿಸುವ ಮನಸ್ಸಿರುವ ಹುಡುಗಿ. ಆಕೆಗೆ ತನ್ನ ಸಮಯದ ಬೆಲೆಯೂ ಗೊತ್ತು. ಕಳೆದ ಕ್ಷಣಗಳು ಮರಳಿ ಬಾರವೆಂಬ ಅರಿವೂ ಇದೆ (ಹೇಳಿದೆನಲ್ಲ, ಅದನ್ನು ಅವಳೇ ಒಪ್ಪಿಕೊಳ್ಳುತ್ತಾಳೆಂದು). ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಬಹಳ ಆಳವಾಗಿ ಓದಬೇಕೆಂಬ ಆಸ್ಥೆಯೂ, ಇತರರಿಗೂ ಆ ಕ್ಷೇತ್ರದಲ್ಲಿ ಆಸಕ್ತಿ ಮೂಡಿಸಬೇಕೆಂಬ ಕಾಳಜಿಯೂ ಅವಳಲ್ಲಿ ಜಾಗ್ರತವಾಗಿವೆ. ಅದಕ್ಕೆ ಸಮಯ ಹೊಂದಿಸಲೆಂದೇ ಸಾಧಿಸಿದ್ದ ಕೆಲಸವನ್ನೂ ಬಿಟ್ಟಿದ್ದಾಳೆ. ಕಳೆದೊಂದಷ್ಟು ದಿನಗಳಲ್ಲಿ ತನ್ನ ಇಡೀ ಜೀವನವನ್ನು, ತನ್ನನ್ನು ಕಾಡುತ್ತಿರುವ ಆ ಧ್ಯೇಯಕ್ಕಾಗಿಯೇ ಮುಡಿಪಿಡಬೇಕೆಂಬ ನಿರ್ಧಾರವೂ ಆಗಿದೆ. ಅದಕ್ಕಾಗಿ ಕೆಲವರ ಕೈಯಲ್ಲಿ ಹುಚ್ಚಿಯೆಂದು ಬೈಸಿಕೊಂಡಿದ್ದೂ ಇದೆ. ಆದರೆ ಮನೆಯಲ್ಲಿ ಕೂತಾಗಿನಿಂದ.....

ರೆಪ್ಪೆಯಾಡಿಸುವಷ್ಟು ವೇಗದಲ್ಲಿ ದಿನಗಳು ಓಡುತ್ತಿವೆ. ಆದರೆ ಓದು??? ಒಂದಿಂಚೂ ಸಾಗಿಲ್ಲ. ಅತ್ತ ಓದಲು ಮನಸ್ಸಿದ್ದರೂ ಮನಸ್ಸು ಬರುತ್ತಿಲ್ಲ, ಇತ್ತ ಮನೆಕೆಲಸವನ್ನೂ ಮಾಡದ ಮೈಗಳ್ಳತನ ಆವರಿಸಿಕೊಳ್ಳುತ್ತಿದೆ. ಸಾಲದೆಂಬಂತೆ ಜತೆಗೆ ಮೂರ್ಖರ ಪೆಟ್ಟಿಗೆ!!! ತನ್ನ ನಡೆ ತಪ್ಪೆಂದು ತಿಳಿದಿದ್ದರೂ, ಏನು ಮಾಡಲೂ ತೋಚದೆ ಕುಳಿತಿರುವ ಅವಳಿಗೆ, ತಿದ್ದಿಕೊಳ್ಳಲು ಮಾರ್ಗ ತೋರಿಸುವ, ಅವಳ ಮನವನ್ನು ಅರ್ಥೈಸಿಕೊಂಡು, ಅವಳಿಗೆ ಕಿವಿಯಾಗಿ, ಅವಳ ಭಾವಕ್ಕೆ ಸ್ಪಂದಿಸುವ ಸ್ನೇಹಿತರೂ, ಹಿತೈಷಿಗಳೂ ಯಾರಿಲ್ಲ. ಸ್ನೇಹಿತರಿದ್ದರೂ, ಅವರಿಗೆ ಅವಳ ಮಾತನ್ನು ಆಲಿಸುವಷ್ಟು ತಾಳ್ಮೆಯಿಲ್ಲ.

ಕೆಲವೊಮ್ಮೆ ಮಾಯೆ ಯಾವುಯಾವುದೋ ರೂಪದಲ್ಲಿ ಬಂದು ಆವರಿಸಿಕೊಳ್ಳುತ್ತದೆ ಎಂದು ಕೇಳಿದ್ದೇನೆ. ಆದರೆ ಎಲ್ಲವೂ ತಿಳಿದಿದ್ದೂ ಅದರಿಂದ ಬಿಡಿಸಿಕೊಳ್ಳಲಾರದಷ್ಟು  ನಮ್ಮ ಮನ ಅಸಹಾಯಕವಾಗುತ್ತದಲ್ಲ, ಏಕೆ ಹೀಗೆ???


Monday 23 July 2012

ಭದ್ರೆ...

ಇದ್ದಾಳೆ, ಇಲ್ಲಿವಳೊಬ್ಬಳು -

ಸದ್ದಿಲ್ಲದಂತೆ ತನ್ನ ಪಯಣ ಸಾಗಿಸುವ
ಮೌನಗೌರಿ !

ಆರ್ಭಟ ಹೆಚ್ಚೆಂದು ಶಪಿತಳಾಗಿ
ಮೂಲೆಗುಂಪಾದ ಪತಿತೆ? ಅಲ್ಲ ಪಾವನೆ.

ಕಡು ಕಾಡು-ಕಣಿವೆಗಳ ದಾಟಿ ಬಂದವಳು,
ಒಡಹುಟ್ಟಿದವಳಿಂದ ದೂರಾಗಿ,
ಕವಲು ದಾರಿಯ ಹಿಡಿದ ಏಕಾಂಗಿ.

ತನ್ನ ಸಣ್ಣ ಬಳುಕುವ ನಡು, ಒಡಲಾಳದ ಚೆಲುವಿಂದಲೇ
ಜಗವ ಸೆಳೆಯಬಲ್ಲ ಕೃಷ್ಣಸುಂದರಿ.

ಆದರೆ -
ಹಾದಿಯುದ್ದಕ್ಕೂ ಇವಳನ್ನು ದೋಚುವವರೇ!!
ನಿರ್ಮಲವಾದ ಇವಳನ್ನು ಹಾಳುಗೆಡವಿ ಬೀಗುವ
ಸಾಧಕರು!!!

ಇವಳು -
ಹಿಡಿದ ಹಾದಿಯೇ ತಪ್ಪಾಗಿರಲು ಯಾರನ್ನು ತಾನೇ
ಶಪಿಸುವಳು?
ಎಲ್ಲ ದೌರ್ಜನ್ಯ ಸಹಿಸುತ್ತ, ಅನ್ಯರ ಮನೆದೀಪ
ಬೆಳಗಿದಳು.

ಬಾಳಹಾದಿಯ ನಡುವೆ ಸೋತು ಮತ್ತೆ ತನ್ನಕ್ಕನ
ಮಡಿಲ ಸೇರಿದಳು.
ಒಂಟಿಪಯಣದ ಹಾದಿ ಮುಗಿಯಿತೆಂದು ಮನದ ಒಳಗೊಳಗೇ
ಹಿಗ್ಗಿ ಉಬ್ಬಿದಳು!

ನಂತರ -
ಸ್ವಂತಿಕೆಯೆ ಕಳೆದು ಹೊರಾಟವಳಿದು,
ತನ್ನ ಹೆಸರನ್ನೂ ಕಳೆದುಕೊಂಡ ನಿತ್ಯ ನಿರಂತರ ಅ'ಭದ್ರೆ' !!!


Sunday 3 June 2012

ಮರೆವಿಗೆ ಸಂದಿವೆ ಇಲ್ಲಿ ಹರುಷದ ಬಣ್ಣಗಳು

ಈ ಸಾಲುಗಳು ನಿಮಗೆ ನೆನಪಿವೆಯ? ಎಂಟ್ಹತ್ತು ವರ್ಷಗಳ ಕೆಳಗೆ ಈ-ಟಿವಿ ಕನ್ನಡ ವಾಹಿನಿಯಲ್ಲಿ ಒಂದು ಧಾರಾವಾಹಿ ಬರುತ್ತಿತ್ತು.. ಮನ್ವಂತರ ಎಂದದರ ಹೆಸರು. ಆ ಧಾರಾವಾಹಿಯ ಟೈಟಲ್ ಸಾಂಗ್ (ಕನ್ನಡದಲ್ಲಿ ಹೆಸರಿನ ಗೀತೆಯಗುವುದೋ?) ಆದ "ಮರಳಿ ಬಾ ಮನ್ವಂತರವೇ ಕಂಬನಿಗಳ ಬಳಿಗೆ" ಅನ್ನೋ ಹಾಡಿನ ಚರಣದಲ್ಲಿ ಬರುವ ಒಂದು ಸಾಲಿದು. ಹಾ ಹಾ, ಅಂದ ಮಾತ್ರಕ್ಕೆ ಆ ಧಾರಾವಾಹಿಯ ಬಗ್ಗೆ ಬರೆಯ ಹೊರಟೆನೆಂದುಕೊಳ್ಳಬೇಡಿ. ಅದು ಬರುತ್ತಿದ್ದ ಕಾಲಕ್ಕೆ ನಾನಿನ್ನೂ ಕೇವಲ ದೂರದರ್ಶನದ ವೀಕ್ಷಕಿ, ಅದರ ಕಥೆಯ ಬಗೆಗೆ ನನಗೇನೂ ತಿಳಿಯದು.

ಆದರೆ ಇತ್ತೀಚಿಗೆ ಒಮ್ಮೆ ಆ ಹಾಡು ಕೇಳಲಿಕ್ಕೆ ಸಿಕ್ಕಿತು. ಎಷ್ಟು ಅರ್ಥಪೂರ್ಣವಾಗಿವೆ ಸಾಲುಗಳು.. ನಿಜಕ್ಕೂ ಅದನ್ನೂ ಭಾವಗೀತೆಗಳ ಸಾಲಿನಲ್ಲೇ ಸೇರಿಸಬಹುದು, ಅಷ್ಟೊಂದು ಅರ್ಥ ಧ್ವನಿಸುತ್ತದೆ ಅದರಲ್ಲಿ. ಅದರಲ್ಲಿನ ಒಂದು ಸಾಲು, ಈ "ಮರೆವಿಗೆ ಸಂದಿವೆ ಇಲ್ಲಿ ಹರುಷದ ಬಣ್ಣಗಳು". ಆಫೀಸಿನಲ್ಲಿ, ಈ ಹಾಡನ್ನು ನನಗೆ ಕೊಟ್ಟು, ಕೇಳು ಎಂದು ಒತ್ತಾಯ ಮಾಡಿದ ಗೆಳತಿ, ಇಡೀ ಗೀತೆಯ ಧ್ವನಿಯನ್ನು ಅರ್ಥ ಮಾಡಿಕೊಳ್ಳುವ ಆಸೆಯಲ್ಲಿದ್ದಳು. ನನಗೆ ಈ ಸಾಲಿನ ಅರ್ಥ ಕೇಳಿದಳು. ನಾನೋ ಮೊದಲೇ ಟ್ಯೂಬ್ ಲೈಟು. ಅದರ ಅರ್ಥ ಪೂರ್ತಿ ತಿಳಿಯದೆ ಸುಮ್ಮನೆ ಮರೆವೆಯಿಂದ ಸಂತೋಷ ಸಿಗುತ್ತೆ ಅಂದಿದ್ದೆ. ಹಾಗಿದ್ದರೆ ನೆನಪುಗಳೇ ಬೇಡವಾ? ಅವಳ ಪ್ರಶ್ನೆಗೆ ಉತ್ತರಿಸಲಾಗದೆ, ಕೆಲವೊಂದು ನೆನಪುಗಳು ಹಾಗೆ ಅಲ್ಲವಾ, ಮರೆತರೇ ಸುಖ. ಎಂದು ಹಾರಿಕೆಯ ಉತ್ತರನೀಡಿ ಪಾರಾಗಿದ್ದೆ.

ಆದರೆ ಮನೆಗೆ ಬಂದು ಅದೇ ಹಾಡಿನ ಗುಂಗಿನಲ್ಲೇ ಯೋಚನೆ ಮಾಡ ಹೊರಟಾಗ, ಬೇರೆಬೇರೆಯದೆ ರೀತಿಯ ಅರ್ಥಗಳು ಹೊಳೆಯತೊಡಗಿದವು. ಹಾಡು ಒಂದು ಹೊಸ ಮನ್ವಂತರಕ್ಕೆ ಆಹ್ವಾನ ಕೊಡಲೋಸುಗ ಬರೆದಿರುವಂಥದ್ದು. ಪ್ರಸ್ತುತ ಕಾಲಘಟ್ಟ ಎಷ್ಟು ಹದಗೆಟ್ಟು ಹೋಗಿದೆಯೆ೦ಬುದನ್ನು ನವಿರಾಗಿ ವರ್ಣಿಸುತ್ತಾ, ಹೊಸಕಾಲಘಟ್ಟವನ್ನು ಬಾ ಎಂದು ಕರೆಯುತ್ತಿರುವುದು. ಹಾಗೆ ಪ್ರಸ್ತುತ ಸಮಾಜವನ್ನು ವರ್ಣಿಸುತ್ತಾ, "ಬೆಳಕನು ನುಂಗಿವೆ ಇಲ್ಲಿ ಕತ್ತಲ ಕಣ್ಣುಗಳು, ಮರೆವಿಗೆ ಸಂದಿವೆ ಇಲ್ಲಿ ಹರುಷದ ಬಣ್ಣಗಳು" ಎನ್ನುತ್ತವೆ ಈ ಸಾಲುಗಳು. ಅಂದರೆ ಈ ಕಾಲ ನಿಜವಾದ ಸಂತೋಷವನ್ನು ಮರೆತು ಬಿಟ್ಟಿದೆ, ಅದರ ಮರೆವಿಗೆ ಹರುಷವೆಂಬ ಬಣ್ಣದ ಹೆಸರು ಕೊಟ್ಟು, ಇಲ್ಲದ ಸಂತಸವನ್ನು ಇದೆಯೆಂದು ಭ್ರಮಿಸುತ್ತ ಕುರುಡಾಗಿ ನಡೆಯುತ್ತಿದೆ ಎಂದಲ್ಲವೇ? ಹಾಗಿದ್ದರೆ ನಿಜವಾದ ಸಂತಸ ಯಾವುದು, ನಾವು ಯಾವುದನ್ನು ಮರೆತಿದ್ದೇವೆ?

ನಮ್ಮ ಸಮಾಜ ಎತ್ತ ಸಾಗುತ್ತಿದೆ, ಎಂದು ಯೋಚಿಸ ಹೊರಟರೆ ನಮಗೆ ಇದರ ಉತ್ತರ ಸಿಗಬಹುದೇನೋ. ಇಂದು ಯಾವ ತಂದೆಗೆ ತನ್ನ ಕಂದನ ಓದಿನ ಬಗೆಗೆ ಸ್ವತಃ ಕುಳಿತು ಪರೀಕ್ಷಿಸುವ, ಮಗುವಿಗೆ ಓದಿಸುವ ತಾಳ್ಮೆಯಿದೆ? ಮಗುವನ್ನು ಆಯಾ ಅಥವಾ ಆಧುನಿಕ ಮಕ್ಕಳ ಕೇಂದ್ರಗಳ (ಅದೇನಪ್ಪಾ ಬೇಬಿ ಸಿಟ್ಟಿಂಗು) ಬಳಿ ಬಿಟ್ಟು ಕಚೇರಿಗೆ ಓಡುವ ಧಾವಂತದಲ್ಲಿರುವಾಗ ಮಗುವಿನ ನಿಜವಾದ ಮನವನ್ನು ಅದರಾಸೆಯನ್ನು ಅರಿಯುವಷ್ಟು ಪುರುಸೊತ್ತು ಇಂದಿನ ಯಾವ ಪೋಷಕರಿಗಿದೆ? ಅದರ ತೊದಲು ಮಾತುಗಳನ್ನು, ತುಂಟಾಟವನ್ನು, ಮಾತು, ನಡಿಗೆಯ ಕಲಿಕೆಯ ಆರಂಭದ ದಿನಗಳನ್ನು ಸೂಕ್ಷ್ಮವಾಗಿ ಗಮನಿಸಿ ಅದರಲ್ಲಿರುವ ಆನಂದವನ್ನು ಸವಿಯುವ ಮನಸ್ಸು ಆ ತಾಳ್ಮೆಯನ್ನು ಇಂದಿನ ಪೀಳಿಗೆ ಉಳಿಸಿಕೊಂಡಿದೆಯೇ? ನಮ್ಮನ್ನು ಸಾಕಿ ಬೆಳೆಸಿದ ಹಿರಿಯರ ಬೇಕು ಬೇಡಗಳನ್ನು ಗಮನಿಸಿಕೊಂಡು, ಅವರ ಹಿತನುಡಿಗಳನ್ನು ಕೇಳುವ ಕೆಲಸ ಈಗೆಷ್ಟು ಜನ ಮಾಡುತ್ತಾರೆ? ಖಂಡಿತಾ ಇವೆಲ್ಲಕ್ಕೂ ಅಪವಾದವೆನಿಸುವ ಮಂದಿ, ಈ ಎಲ್ಲ ಘಳಿಗೆಗಳ ಸವಿಯನ್ನು ಸವಿಯುವ ಜನ ನಮ್ಮ ನಡುವೆ ಇರಬಹುದು. ಜೀವನದ ಎಲ್ಲ ಸಣ್ಣಪುಟ್ಟ ಸಂತಸಗಳನ್ನು ಅನುಭವಿಸುವವರು ಈಗಲೂ ಇದ್ದಾರೆ, ಆದರೆ ಅಂಥವರ ಸಂಖ್ಯೆಯೆಷ್ಟು?

ಸುಮ್ಮನೆ ಹಾಗೆ ಕಣ್ಣು ಹಾಯಿಸಿದರೆ ಸಾಕು, ಇಂಥವರು ಬಹಳ ಕಡಿಮೆಯೆಂದು ತಿಳಿದು ಹೋಗುತ್ತದೆ. ಎಲ್ಲವೂ ದುಡ್ಡಿನ ಮೇಲೆ ನಿಂತಿದೆ, ಹಣವೊಂದಿದ್ದರೆ ಜಗತ್ತನ್ನೇ ಕೊಳ್ಳಬಹುದೆಂಬ ಭ್ರಮೆಯಲ್ಲಿ ಇಡೀ ಜಗ ತೇಲುತ್ತಿದೆ! ತನ್ನ ನಿಜವಾದ ಸಂತಸಗಳನ್ನು ಮರೆತು, ಹಣವೆಂಬ ಮಾಯಾಜಿಂಕೆಯ ಬೆನ್ನು ಬಿದ್ದು, ತನ್ನ ಮರೆವೆಯನ್ನೇ ಸಂತಸವೆಂದು ತಿಳಿದು, ಆ ಮರೆವೆಗೆ ಹರುಷದ ಬಣ್ಣ ಕೊಟ್ಟಿದೆ. ಹೌದಲ್ಲ, ಇದೇ ಅರ್ಥ ಧ್ವನಿಸುವುದು ಆ ಹಾಡಿನಲ್ಲಿ.

ಆದರೆ ಜಾಣಮರವನ್ನು ತಂದುಕೊಂಡಿರುವ ಎಷ್ಟು ಜನ ಇದನ್ನು ಅರ್ಥೈಸಿಯಾರು? ಹಣದಿಂದ ಕಟ್ಟಡವನ್ನು ಕಟ್ಟಬಹುದು, ಮನೆ ಮಾಡಲಾಗುವುದಿಲ್ಲ. ಮಗುವಿಗೆ ಒಳ್ಳೆ ಓದನ್ನು ನೀಡಬಹುದು, ಅದರ ಬೆಳವಣಿಗೆಯ ಕ್ಷಣಗಳನ್ನು, ಆ ತೊದಲು ನುಡಿಗಳ ಇಂಪನ್ನು ಕೊಂಡು ತರಲಾಗುವುದಿಲ್ಲ. ಹಿರಿಯರಿಗೆ ಒಳ್ಳೆ ಸೌಲಭ್ಯಗಳನ್ನು ಕಲ್ಪಿಸಬಹುದು, ಅವರ ಜೀವನಾನುಭವ ನಮಗೆ ಸಿಗುವುದಿಲ್ಲ.

ಎಲ್ಲೋ ಒಮ್ಮೆ ಓದಿದ ಕಥೆಯೊಂದು ಕಾಡುತ್ತಿದೆ. ಹಂಚಿಕೊಳ್ಳಲೇ ಬೇಕೆನಿಸಿತು..

ದೊಡ್ಡ ನಗರವೊಂದರಲ್ಲಿ, ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವ ದಂಪತಿಗಳಿಗೆ ಚೊಚ್ಚಲ ಮಗುವಿನ ಸಂಭ್ರಮ. ಆದರೇನು, ಇಬ್ಬರೂ ಖಾಸಗಿ ಕಂಪನಿಗಳ ಉದ್ಯೋಗಿಗಳು. ಮುಂದೆ ತಮ್ಮ ಮಗುವಿಗೆ ಒಳ್ಳೆ ಭವಿಷ್ಯ ರೂಪಿಸಬೇಕೆಂದು ಕನಸುತ್ತಾ, ಹಗಲೂ ರಾತ್ರಿ ದುಡಿಯುವವರು. ಮನೆಯಲ್ಲಿ ಹೆಚ್ಚೆಂದರೆ ಒಂದೆರಡು ತಾಸು ಸಮಯವಾಗಬಹುದೇನೋ, ಅದರಲ್ಲೂ ನಾಳೆಗೆ ತಯಾರಿ, ಬೇಗ ಮಲಗಿ ಹೊರಡಬೇಕೆಂಬ ಧಾವಂತ. ಮಗುವನ್ನು ನೋಡಿಕೊಳ್ಳಲು ಒಬ್ಬಳು ಆಯಾ. ಹೀಗೆ ಒಂದು ವರ್ಷ ಕಳೆಯಿತು. ಮಗು ಈಗತಾನೇ ನಡೆಯಲು, ತೊದಲಾಡಲು ಶುರು ಮಾಡಿತ್ತು. ಇವರು ಕಚೇರಿಗೆ ಹೋಗುವಾಗ ಅದು ಅಳುವುದನ್ನು ನಿಲ್ಲಿಸಲು ಕೆಲಸದವಳಿಗೆ ಸಾಕು ಬೇಕಾಗುತ್ತಿತ್ತು.

ಒಮ್ಮೆ  ಇಬ್ಬರೂ ಕೆಲಸ ಮುಗಿಸಿ ರಾತ್ರಿ ಬಂದಾಗ, ಮಗು ಚಂದ್ರನನ್ನು ತೋರಿಸಿ ಅದು ಬೇಕು ಎಂಬಂತೆ ಅಳಲು ಶುರುವಿಟ್ಟುಕೊಂಡಿತು. ತಕ್ಷಣವೇ ಅದರ ತಂದೆ ಖುಷಿಯಿಂದ ಕುಣಿದು, ಹೆಂಡತಿಗೆ " ಡಾರ್ಲಿಂಗ್, ನಮ್ಮ ಮಗ ಚಂದ್ರ ಬೇಕೆಂದು ಕೇಳುತ್ತಿದ್ದಾನೆ. ಅಂದರೆ, he wants to be an astronaut.ನಾವು ಇಂದಿನಿಂದಲೇ ಇನ್ನೂ ಸಂಪಾದಿಸಲು ಶುರು ಮಾಡಬೇಕು. ದಿನಕ್ಕೆ ಹದಿನೈದು ತಾಸು ದುಡಿದರೂ ಪರವಾಗಿಲ್ಲ. ಅವನನ್ನು ಒಳ್ಳೆ residential school ಸೇರಿಸೋಣ...." ಹೀಗೆ ಸಾಗಿತ್ತು ತಂದೆಯ ಕನಸು. ಆದರೆ ಟಿವಿಯಲ್ಲಿ ಬರುತ್ತಿದ್ದ ಹಾಡಿನಲ್ಲಿ ತಾಯಿ ಚಂದ್ರನನ್ನು ತೋರಿಸುತ್ತಾ ಕಂದನಿಗೆ ಊಟ ಮಾಡಿಸುತ್ತಿರುವ ದೃಶ್ಯವನ್ನು ನೋಡಿ ತನಗೂ ಅದು ಬೇಕೆಂದು ಹಠ ಮಾಡುತ್ತಿದ್ದ ಕಂದನ ಮನಸು ಮನೆಕೆಲಸದಾಕೆಗೆ ಮಾತ್ರ ಅರ್ಥವಾಗುತ್ತಿತ್ತು. ಹೀಗೆ ಮುಗಿಯುತ್ತದೆ ಆ ಕಥೆ. ಹೇಳಿ, ಮರೆವಿಗೆ ಸಂದಿರುವ ಹರುಷದ ಬಣ್ಣಗಳೆಂದರೆ ಇವೇ ಅಲ್ಲವೇ?

ಇದನ್ನೇ ಅವಳಿಗೆ ಹೇಳಿದೆ. ಆ ಸಾಲಿನಲ್ಲಿ ಇದೇ ಅರ್ಥ ಧ್ವನಿಸುತ್ತದೆಂದು ಅವಳು ಒಪ್ಪಿದಳು. ಈ ತರ್ಕವೆಲ್ಲ ನಡೆದದ್ದು ನಾಲ್ಕೈದು ತಿಂಗಳ ಕೆಳಗೆ. ಆದರೆ ಆ ಹಾಡೇಕೋ ಇಂದು ಬಿಟ್ಟೂ ಬಿಡದೆ ಕಾಡುತ್ತಿದೆ. ಸಾಹಿತ್ಯ ಇಲ್ಲಿದೆ, ಓದಿಕೊಳ್ಳಿ..

ಮನ್ವಂತರ,

ಮರಳಿ ಬಾ ಮನ್ವಂತರವೇ ಕಂಬನಿಗಳ ಬಳಿಗೆ
ಮರಳಿಸು ಹೊಸಚೇತನವ ಬಳಲಿದ ಮನಗಳಿಗೆ

ಬೆಳಕನು ನುಂಗಿವೆ ಇಲ್ಲಿ ಕತ್ತಲ ಕಣ್ಣುಗಳು
ಮರೆವೆಗೆ ಸಂದಿವೆ ಇಲ್ಲಿ ಹರುಷದ ಬಣ್ಣಗಳು
ತೋರು ಬಾ ಮನ್ವಂತರವೇ ಕನಸಿನೂರ ದಾರಿ
ಸಾರು ಬಾ ಶುಭ ಸಂದೇಶ ಕಾಲರಥವನೇರಿ

ಕಣ್ಣೀರೆ ಕಡಲಾಗಿ ಭಾವಗಳೋ ಬರಡಾಗಿ
ಮನದ ಮರಳ ತುಂಬಾ ನೋವಿನಲೆಯ ಬಿಂಬ
ನೀಡು ಬಾ ಮನ್ವಂತರವೇ ಭಾವಕೆ ಉಸಿರನ್ನು
ಬರಡು ಹೃದಯಗಳಿಗೆ ಜೀವದ ಹಸಿರನ್ನು

ಮನಸಿನ ಪುಟಗಳ ನಡುವೆ ನೆನಪಿನ ನವಿಲುಗರಿ
ಕಾರ್ಮುಗಿಲ ಅಂಚಿನಲ್ಲಿ ಭರವಸೆ ಹೊನ್ನಝರಿ
ಹಾಡು ಬಾ ಮನ್ವಂತರವೇ ಮರೆತ ಗಾನದೆಳೆಯ
ಬೆಳಗು ಬಾ ಬದುಕನ್ನು ತೊಳೆದು ತಮದ ಕೊಳೆಯ





Wednesday 2 May 2012

ಏನು ನೆನಪೆಂದರೆ?

ನೆನಪೆಂದರೆ ಸುತ್ತಣ 
ವಾಸ್ತವದಿಂದಾಚೆ ದಾಟಿ ನಡೆವ
ಬಾಲ್ಯದ ಎಳೆ ಬಿಸಿಲು..
ದಣಿದ ಮನಕೆ ತ೦ಪನ್ನೆರೆಯುವ
ಬಿದಿಗೆಯ ಚಂದ್ರನ ನೆಳಲು..

ದೂರ ತಾರಲೋಕದೊಳಗಿನಿಂದೆಲ್ಲೋ 
ಬಂದು ಮಿಂಚಿ ಮಾಯವಾದ ಉಲ್ಕೆ..
ವರ್ತಮಾನದ ಚಿಂತೆಯ ಸರಿಸಿ 
ನಲುಮೆಯುಕ್ಕಿಸುವ ಭಾವಗಳ ಕಾಣ್ಕೆ..

ಕಡಲಿನ ಅಲೆಗಳ ನಡುವೆ ತೇಲಿ 
ಬರುವ ನೌಕೆಯ ರೀತಿ 
ಮನಸಿನ ಪದರಗಳಾಳದಿಂದ ತೂರಿ
ಬರುವ ನಲ್ಮೆಯ ಪ್ರೀತಿ

ಒಮ್ಮೊಮ್ಮೆ ಮೃದು ಗಂಭೀರ,
ಪ್ರೀತಿ ತುಂಬಿದ ಝೇಂಕಾರ
ಮಗದೊಮ್ಮೆ ಘನಘೋರ, ಕಠಿಣತೆಯ 
ತೋರುವ ಹರಿಕಾರ 

ಸಿಹಿಕಹಿಯ ಮೆಲುಕು ಮಾಡುವವು ಮನವ ಹದ
ನೆನಸುವಾಗಲೂ ಬೇಕು ಆಯ್ಕೆ 
ಕಠಿಣತೆಯ ಸೂಸುತ್ತ, ಕಹಿ ನೆವವನ್ನೆ ಕೆದಕುತ್ತ 
ನಮ್ಮ ಅಹಮ್ಮನ್ನು ತಣಿಸಬೇಕೆ?

ಹೌದು, ಏನು... ನೆನಪೆಂದರೆ?
                                ನೆನಪಾಗುತ್ತಿಲ್ಲ!!!

Sunday 25 March 2012

ಬದುಕು.. ಮೊಬೈಲು.. ಗುಬ್ಬಕ್ಕ...

ಈಗ್ಗೆ ಹತ್ತನ್ನೊಂದು ವರ್ಷದ ಕೆಳಗೆ, ಆಗಿನ್ನೂ ನಾನು ಹೈಸ್ಕೂಲಿನ ಕೊನೆಯ ವರ್ಷದಲ್ಲಿದ್ದ ಸಮಯ, ಒಂದು ಹಳೆಕಾಲದ ಬಾಕ್ಸ್ ಟೈಪಿನ ಬ್ಲ್ಯಾಕ್ ಅಂಡ್ ವೈಟ್ ಟಿವಿ, ಲ್ಯಾಂಡ್ ಲೈನ್ ಫೋನು, ಅಜ್ಜನ ಸೈಕಲ್ಲು ದೊಡ್ಡ ಆಸ್ತಿಯೆ೦ಬ೦ತಿದ್ದ ಚಿಕ್ಕ ಚೊಕ್ಕ ಮನೆ ನಮ್ಮದು. ನಮ್ಮ ಮನೆಗೂ ಒಂದು ಮೊಬೈಲ್ ಎಂಬ ಮಾಯಯಂತ್ರವನ್ನು ತರೋಣವೆಂದು ಆಗಿನ್ನೂ ಅಪ್ಪ ಯೋಚಿಸುತ್ತಿದ್ದರು. ಮೊದಲಿನಿಂದಲೂ ಅಪ್ಪನಿಗೆ ಒಂದು ಅಭ್ಯಾಸ ಇದೆ, ಮನೆಗೆ ಏನೇ ತರುವ ಮೊದಲು ಮನೆಯವರೆಲ್ಲರನ್ನು ಕೇಳಿ ಎಲ್ಲರ ಅಭಿಪ್ರಾಯದ ನಂತರ ಹೆಜ್ಜೆಯಿಡುವುದು. ಆದರೆ, ಮೊಬೈಲಿನ ವಿಚಾರ ಬಂದಾಗ ಮಾತ್ರ ನಾನು ಬೇಡ ಎಂದಿದ್ದೆ. ಅದರ ಬಗ್ಗೆ ಕೇಳಿ ಮಾತ್ರ ಗೊತ್ತಿದ್ದ, ಕಂಡರಿಯದ ಆ ವಸ್ತುವಿನ ಬಗ್ಗೆ ನನಗಿದ್ದ ಕೋಪಕ್ಕೆ ಕಾರಣ, ಅದನ್ನು ಬಳಸುವಾಗ ಅದರಿಂದ ಹೊರಸೂಸುವ ತರಂಗಗಳು ಗುಬ್ಬಿಗಳ ಜೀವಕ್ಕೆ ಎರವಾಗುತ್ತದೆ ಎಂದು! ನಾವು ಮೊಬೈಲ್ ಬಳಸಿದ್ರೆ ಗುಬ್ಬಿ ಸಾಯ್ತವಂತಪ್ಪಾ ಪಾಪ ಅಲ್ವಾ, ಅದರ ಅಗತ್ಯ ನಮಗೇನು ಇಲ್ಲ ಅಲ್ವಾ ಅಂತ ಅಂದಿದ್ದ ನೆನಪು ಮನದ ಮೂಲೆಯಲ್ಲೆಲ್ಲೋ ಹಾಗೆ ಕುಳಿತಿದೆ. ನನ್ನ ಮಾತನ್ನು ಕೇಳಿ ನಕ್ಕು, ಅಪ್ಪ ಸುಮ್ಮನಾಗಿ ಬಿಟ್ಟಿದ್ದರು.

ಇದಾದ ಕೆಲದಿನಗಳಲ್ಲೇ, ನನ್ನ ತಮ್ಮ ಅವನ ಸ್ನೇಹಿತನ ಮನೆಯದೆಂದು ಹೇಳಿ ಒಂದು ಮೊಬೈಲನ್ನು ಮನೆಗೆ ತಂದಿದ್ದ, ಕ್ಯಾಮೆರ, ಸಂಗೀತ ಹೀಗೆ ಎಲ್ಲ ಅನುಕೂಲತೆಗಳಿದ್ದ ದುಬಾರಿ ಫೋನದು. ಅದನ್ನು ಹಿಡಿದು ಬಳಸುವ ಬಗೆ ತೋರಿಸಿಕೊಟ್ಟ .. ನೋಡನೋಡುತ್ತಿದ್ದಂತೆ ಎಷ್ಟು ಬೇಗ ಮನಸ್ಸು ಬದಲಾಯಿಸಿ ಬಿಟ್ಟಿತು! ಅದನ್ನು ಹುಚ್ಚಿಯಂತೆ ಹಿಡಿದು ಮನೆಯ ಗೋಡೆಯ ಫೋಟೋಗಳನ್ನೆಲ್ಲ ಕ್ಲಿಕ್ಕಿಸುತ್ತ ನೋಡುತ್ತಿದ್ದೆ. ಮನಸ್ಸನ್ನು ಆ ಯಂತ್ರ ಸೂಜಿಗಲ್ಲಿನಂತೆ ಸೆಳೆದು ಬಿಟ್ಟಿತ್ತು. ಆ ನಂತರ ನಮ್ಮ  ಮನೆಗೆ ಯಾವ ಅಡಚಣೆಯೂ ಇಲ್ಲದೆ ಒಂದು ಬೇಸಿಕ್ ಸೆಟ್ ಬಂದು ಪುನೀತವಾಯ್ತು. ಹಿತ್ತಲಿನ ದಾಸವಾಳದ ಗಿಡಗಳ ಮೇಲೆ ಕುಳಿತಿದ್ದ ಗುಬ್ಬಿಗಳ ಚಿಲಿಪಿಲಿ ಕೇಳಿದಾಗ, ನಾವೊಬ್ಬರು ಬಳಸಲಿಲ್ಲ ಎಂದ ಮಾತ್ರಕ್ಕೆ ಬೇರೆ ಯಾರೂ ಬಳಸೋದೆ ಇಲ್ಲವಾ, ನಾವು ನಿಲ್ಲಿಸಿದರೆ ಇವೇನು ಶಾಶ್ವತವಾಗಿ ಬದುಕುತ್ತವಾ, ನನಗೆ ಹುಚ್ಚು ಅಷ್ಟೇ ಎಂಬ ಭಾವ, ಸಮಜಾಯಿಷಿ ಮನಸ್ಸನ್ನು ತುಂಬಿಕೊಂಡಿತು...ಈಗೀಗಲಂತೂ ಮನೆಗೆ ಈ ಯಂತ್ರ ಎಷ್ಟು ಅನಿವಾರ್ಯವಾಗಿ ಹೋಗಿದೆಯೆಂದರೆ, ಅದನ್ನು ಬಿಟ್ಟು ದಿನಚರಿಯನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯವೆನ್ನುವ ಮಟ್ಟ ತಲುಪಿದೀನಿ, ಮತ್ತು ಈಗ ನಮ್ಮ ಮನೆಯಲ್ಲಿ ಎಲ್ಲರಿಗೂ ಪ್ರತ್ಯೇಕ ಫೋನ್ ಇದೆ!

ಮೊನ್ನೆ ಕಳೆದ ವಾರದ ತರಂಗದಲ್ಲಿ ಪ್ರಕಟವಾಗಿದ್ದ, "ಗುಬ್ಬಕ್ಕಾ... ಗುಬ್ಬಕ್ಕಾ.. ಎಲ್ಲಿಗೆ ಹೊದ್ಯೇ ಗುಬ್ಬಕ್ಕಾ..." ಲೇಖನ ಓದುತ್ತಿದ್ದಾಗ ಮನದಲ್ಲಿ ಈ ಎಲ್ಲ ದೃಶ್ಯಗಳು ಮೂಡಿ ಬಂದವು. ಜೊತೆಗೆ ನಮ್ಮ ಹಿತ್ತಲಿನ ಕೆಂಪು ದಾಸವಾಳದ, ಮರದಂತಿದ್ದ ಗಿಡದಲ್ಲಿ, ಮುಸ್ಸಂಜೆ ಹೊತ್ತಲ್ಲಿ ಒಟ್ಟಿಗೆ ಬಂದು ಕೂತು, ನಾನು ಗಿಡಕ್ಕೆ ನೀರು ಹಾಕಲು ಹೋದಾಗ ಬೆದರಿ ಒಟ್ಟಿಗೆ ಹಾರುತ್ತಿದ್ದ, ಆ ನಲುವತ್ತೈದು-ಐವತ್ತು ಗುಬ್ಬಿಗಳ ಗುಂಪಿನ ಚಿತ್ರವೂ ಮಸುಕು ಮಸುಕಾಗಿ ಗೋಚರಿಸಿತು.

ಜತೆಗೆ ಮನದಲ್ಲಿ ನೂರಾರು ವಿಚಾರಗಳು, ನಾವೆಲ್ಲಾ ಎತ್ತ ಸಾಗುತ್ತಿದ್ದೇವೆ, ಎಂಬ ಅಳುಕು. ಇದೇ ವಾರಪತ್ರಿಕೆಯಲ್ಲಿ ತುಂಬ ಹಿಂದೆ ಓದಿದ ಒಂದು ಕಥೆಯಲ್ಲಿ, ಹೀಗೆ ಗುಬ್ಬಿಗಳ ಕ್ಷೇಮಕ್ಕಾಗಿ ಸಂಚಾರಿ ದೂರವಾಣಿಯನ್ನು ಬಳಸದೆ ಸ್ಥಿರವನ್ನು ನೆಚ್ಚಿಕೊಂಡಿದ್ದ ತಾಯಿಗೆ ದೂರದೇಶದಿಂದ ಬಂದ ಮಗಳು "ಸರ್ವೈವಲ್ ಆಫ್ ದ ಫಿಟ್ಟೆಸ್ಟ್" ಎಂಬ ಸಿದ್ಧಾಂತ ಹೇಳಿ, ಅವು ಸತ್ತರೆ ನಾವೇನು ಮಾಡೋದು, ತಂತ್ರಜ್ಞಾನ, ಅಭಿವೃದ್ಧಿಯ ವೇಗಕ್ಕೆ ಹೊಂದಿಕೊಂಡು ಯಾವ ಜೀವಿ ಬದುಕುವುದಿಲ್ಲವೋ ಅದು ಬದುಕುವುದಕ್ಕೆ ಯೋಗ್ಯವಲ್ಲ ಎಂದು ಉಪದೇಶ ಮಾಡಿದ ನೆನಪು. ಹಾಗಿದ್ದರೆ ನಮ್ಮ ಗುಬ್ಬಕ್ಕ ಇನ್ನು ಮುಂದೆ ಕಾಣುವುದೇ ಇಲ್ಲವಾ, ಅವಳ ಬಗ್ಗೆ ಯಾರಿಗೂ ಚಿಂತೆಯೇ ಇಲ್ಲವಾ ಅಂದುಕೊಂಡರೆ, ಈಗೊಂದು ಓಯಸಿಸ್ ಕಾಣುತ್ತಿದೆ.

ಹೌದು, ಎಲ್ಲರಿಗೂ ತಿಳಿದಿದೆಯೋ ಇಲ್ಲವೋ ಆದರೆ ಕಳೆದ ಇಪ್ಪತ್ತನೆ ತಾರೀಕು ಅಂದರೆ, ಪ್ರತಿ ವರ್ಷ ಮಾರ್ಚ್ 20, ಗುಬ್ಬಚ್ಚಿಗಳಿಗೆಂದೇ ಮೀಸಲಾದ ದಿನ. ಈ ದಿನವನ್ನು 'ವಿಶ್ವ ಗುಬ್ಬಚ್ಚಿಗಳ ದಿನ' ವನ್ನಾಗಿ ಆಚರಿಸಲಾಗುತ್ತಿದೆ. "ನೇಚರ್ ಫಾರ್ ಎವರ್" ಸಂಘಟನೆ, ಅಮೆರಿಕಾದ "ಕಾರ್ನೆಲ್ ಲ್ಯಾಬ್ ಆಫ್ ಆರ್ನಿಥಾಲಜಿ", ಫ್ರಾನ್ಸ್ ದೇಶದ "ಇಕೋಸಿಸ್ಟಂ ಆಕ್ಷನ್ ಫೌಂಡೇಶನ್", ಬ್ರಿಟನ್ ನ "ಏವನ್ ವೈಲ್ಡ್ ಲೈಫ್ ಟ್ರಸ್ಟ್" ಹಾಗೂ ಭಾರತದ "ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ"ಗಳು ಜತೆಗೂಡಿ ಈ ದಿನಾಚರಣೆಯನ್ನು ಯೋಜಿಸಿದ್ದಾರಂತೆ. ಓದಿ ಖುಷಿಯಾಯಿತು. ಜತೆಗೆ ಮರುಕವೂ ಉಂಟಾಯಿತು. ನಮ್ಮ ನಿರ್ಲಕ್ಷ್ಯ ಎಷ್ಟು ಬೆಳೆದು ಬಿಟ್ಟಿದೆಯಲ್ಲ ಎಂಬ ಭಾವನೆ. ಮನೆಯ ಸುತ್ತ-ಮುತ್ತ ಸುತ್ತುತ್ತಲೇ ಇರುತ್ತಿದ್ದ ಈ ಪುಟ್ಟ ಜೀವಿಗೆ ನಮ್ಮಿಂದ ಎಷ್ಟೊಂದು ಹಾನಿಯಾಗುತ್ತಿದೆಯಲ್ಲಾ ಅನ್ನುವ ಚಿಂತೆ.

ನಮ್ಮ ಮನೆಯ ಸುತ್ತ-ಮುತ್ತ ಅವು ಸುಳಿದರೆ ಅವಕ್ಕೊಂದಿಷ್ಟು ಅಕ್ಕಿ ಕಾಳು ಉದುರಿಸುವಷ್ಟೂ ಪುರುಸೊತ್ತಿಲ್ಲದ ರೇಸ್ ನಂತಹ ಬದುಕು ಬದುಕುತ್ತಿದ್ದೆವೇನೋ ಅನ್ನಿಸಲು ಶುರುವಿಟ್ಟುಕೊಂಡಿದೆ. ಮನುಷ್ಯ ತನ್ನ ಸಾಮಾಜಿಕ ಜವಾಬ್ದಾರಿಗಳನ್ನೆಲ್ಲ ಮರೆತು, ತೊರೆದು, ತನ್ನ ಸ್ವಾರ್ಥ, ಸ್ವಹಿತಾಸಕ್ತಿಯ ವ್ಯಾಪ್ತಿಯಿಂದಾಚೆಗೆ ಏನೂ ಇಲ್ಲವೇನೋ ಎಂಬಷ್ಟು ವ್ಯಸ್ತನಾಗಿ ಹೋಗಿದ್ದಾನೆ. ಇದರ ಮಧ್ಯೆ ಈ ಹಕ್ಕಿ-ಪಿಕ್ಕಿಗಳ ಬಗೆಗೆ ಯೋಚಿಸಲು ಸಮಯವೆಲ್ಲಿದೆ? ಅಲ್ಲವೇ..

ಆದರೆ ಈಗ ಸಮಯವಿಲ್ಲದಿದ್ದರೂ ಅಗತ್ಯವಿದೆ, ಹೌದು. ನಿಮ್ಮ ಮನೆಯೆದುರು ಗುಬ್ಬಚ್ಚಿ ಕಾಣಿಸಿದರೆ ನಿಮ್ಮಷ್ಟು ಅದೃಷ್ಟವಂತರು ಯಾರೂ ಇಲ್ಲವೆಂದು ಹೇಳುತ್ತವೆ ಈ ಸಂಘಟನೆಗಳು. ಕನಿಷ್ಠ ಪಕ್ಷ ಆ ಅದೃಷ್ಟ ನಮಗಿದ್ದರೆ, ಅವು ಕಂಡರೆ ದಯವಿಟ್ಟು ಅವನ್ನು ಆಕರ್ಷಿಸಿ. ಅವಕ್ಕೊಂದಿಷ್ಟು ಅಕ್ಕಿ ಕಾಳು, ಅನ್ನದ ಅಗುಳು ದೂರದಲ್ಲಿ ಹಾಕಿದರೆ ಅವು ಬರತೊಡಗುತ್ತವೆ. ಸಾಧ್ಯವಿದ್ದರೆ ಒಂದು ಚಿಪ್ಪಿನಲ್ಲಾದರೂ ಸರಿ, ನೀರನ್ನಿತ್ತು, ಅಳಿಲು-ಬೆಕ್ಕುಗಳಿಂದ ದೂರವಿರುವ ಸ್ಥಳದಲ್ಲಿ ಒಂದು ಮರದ ಹಲಗೆಯನ್ನೋ, ಚಿಕ್ಕ ರಟ್ಟಿನ ಡಬ್ಬಿಯನ್ನೂ ಇಟ್ಟರೆ, ಅವು ಅಲ್ಲಿ ಮನೆಮಾಡಿಕೊಳ್ಳುತ್ತವೆ ಎಂಬುದು ಇವರ ಪುಟ್ಟ ವಿನಂತಿ.

ಅಷ್ಟು ಮಾತ್ರ ಕರ್ತವ್ಯವನ್ನು ನಾವು ಮಾಡಬಹುದೆಂದುಕೊಳ್ಳುತ್ತೇನೆ. ನಾಳೆ ನಾವು ನಮ್ಮ ಮಕ್ಕಳಿಗೆ ಕಾಗಕ್ಕ-ಗುಬ್ಬಕ್ಕನ ಕಥೆ ಹೇಳಿದಾಗ, ಗುಬ್ಬಕ್ಕ ಅಂದರೆ ಯಾರಮ್ಮಾ ಎಂಬ ಪ್ರಶ್ನೆ ಬಂದರೆ ನಾವು ನಿರುತ್ತರರಾಗಬಾರದಲ್ಲಾ!!!

ನೂತನ ಸಂವತ್ಸರದ ಶುಭಾಶಯಗಳು.

Sunday 26 February 2012

ಬ್ಲಾಗಿಂಗ್... ಕಾಲ... ಹೆಸರು...

ಗಣಕ ಯಂತ್ರದ ಮಣಿಗಳೊಡನೆ
ಅನುದಿನವೂ ಭಾವಯಾನ
ಹೆಸರೇ ತಿಳಿಯದ ಹೊಸಕವಿಗಳ
ಕವನ ಜಾತ್ರೆಯಲಿ
ಕಾಲನ ಚಲನೆಯ ಪರಿವೆಯೂ
ಆಗದಂತೆದುರುನಿಲ್ಲುವ ಈ ರಸ ನಿಮಿಷಗಳಿಗೆ ಏನು ಹೆಸರಿಡಲಿ?

ಕೇವಲ ಸಂತಸವೇ? - ಅಲ್ಲ
ಆತ್ಮತೃಪ್ತಿ - ಅದೂ ಅಲ್ಲ
ಅವೆಲ್ಲವನ್ನೂ ಮೀರಿದ ಮನಸ್ಸಿನಾಳಕ್ಕಿಳಿಯುವ
ಮಧುರಾನುಭೂತಿ.

ಅನುಭಾವ ಅನುಭೂತಿಗಳಿಗೂ ಹೆಸರಿಡುವುದಾದರೆ
ಈ ಮನೋಲ್ಲಾಸಕ್ಕೆನು ಹೆಸರು? - ಗೊಂದಲದಲ್ಲಿದ್ದೆ.

ಹೆಸರುಸಿರಿನ ಕೆಸರಿನಲ್ಲಿ ನೀನು ಕೊಸರಾಡುತ್ತಿರು
ಎಂದು ಸರಿದ ಕಾಲನು ಮಾತ್ರ ಕೀಲಿಮಣೆಗಳ ಲೆಕ್ಕಕ್ಕೆ
ಈ ಗಣಕದ ಗುಣಿತಕ್ಕೆ ದಕ್ಕಲೇ ಇಲ್ಲ!!!

Wednesday 4 January 2012

ಎರಡು ಸಾವಿರದ ಹನ್ನೆರಡು

ಎರಡು ಸಾವಿರದ ಹನ್ನೊಂದು ಎಷ್ಟು ಬೇಗ ಪುಟ ಮಗುಚಿತಲ್ಲ? ಮತ್ತೊಂದು ಸಂವತ್ಸರ ನಮ್ಮೆದುರು ಕೈ ಚಾಚಿ ನಿಂದಿದೆ. ಹೊಸ ವರ್ಷ, ಹೊಸ ಹರ್ಷ, ಹೊಸ ಕನಸು, ಹೊಸ ಹೊಸ ನೆನಹುಗಳು.. ಈ ವರ್ಷ ತನ್ನ ಸೆರಗಲ್ಲಿ ಏನೇನನ್ನು ಬಚ್ಚಿಟ್ಟುಕೊಂಡಿದೆಯೋ ಯಾರು ಬಲ್ಲವರು, ಆದರೆ ಅನುಕ್ಷಣ ಒಳಿತಿನ ನಿರೀಕ್ಷೆ, ಬದುಕಿನ ಬಗ್ಗೆ ಭರವಸೆ ಇದೇ ತಾನೇ ಜೀವನ.

ಕಳೆದ ವರ್ಷದ ಕಹಿಯನ್ನು ಮರೆಯುತ್ತ ಸಿಹಿಯನ್ನು ಮೆಲುಕು ಹಾಕುತ್ತ ಬದುಕಿನ ಬಗೆಗೆ ಒಂದು ನಿರಂತರ ನಂಬಿಕೆಯಲ್ಲಿ ಮುಂದುವರಿದರಷ್ಟೇ ಮತ್ತೊಂದಷ್ಟು ಸುಂದರ ನೆನಪುಗಳ ಗೊಂಚಲನ್ನು ಕಟ್ಟಿಕೊಳ್ಳಬಹುದು.

ನನಗಂತೂ ಕಳೆದ ವರ್ಷ ಹಿಡಿದಿರಲಾರದಷ್ಟು ನೆನಪುಗಳ ಗುಚ್ಛವನ್ನು ಕೊಟ್ಟಿದೆ. ಜೀವನದ ಅರ್ಥ ಹುಡುಕುತ್ತಿದ್ದವಳಿಗೆ ಜೀವದ ಗೆಳತಿ, ಬ್ಲಾಗಿಗಳಾದ ಸಂಭ್ರಮ, ಭಾವಗೀತೆಗಳ ಸಂಗ್ರಹ ನೀಡುತ್ತಿರುವ ಮನಃಶಾಂತಿ, ಉಲ್ಲಾಸ, ಮೌನದ ಮಾತುಗಳನ್ನು ಕೂಡಿಹಾಕುತ್ತಿರುವ ಬಗೆಗೆ ಒಳಗೊಳಗೇ ಉಂಟಾಗುತ್ತಿರುವ ಕೌತುಕ, ಹೀಗೆ ನನ್ನೆಲ್ಲ ಹುಚ್ಚಾಟಗಳಿಗೆ ಹೊಸ ಹುರುಪನ್ನು, ಹೊಸ ಉನ್ಮಾದವನ್ನು ದೊರಕಿಸಿದ್ದು ಎರಡು ಸಾವಿರದ ಹನ್ನೊಂದು. ಬರವಣಿಗೆಯಲ್ಲಿ ದೊರಕುವ ಆನಂದವನ್ನು ರೂಪಿಸಿದ್ದೂ ಸಹ ಈ ವರ್ಷವೇ. ಇನ್ನು ಅದನ್ನು ಓದುವವರ, ಓದಿ ಜೀರ್ಣಿಸಿಕೊಳ್ಳಬೇಕಾದವರ ಅಭಿಪ್ರಾಯವನ್ನು ಮಾತ್ರ ವಿಶದಪಡಿಸಿಲ್ಲ, ಇನ್ನೂ.

ಹನ್ನೆರಡು ಅದಕ್ಕೆ ಒತ್ತಾಸೆಯಾಗುತ್ತದೆಯೋ ಅಥವಾ ಇಲ್ಲವೋ, ಕಾದು ನೋಡಬೇಕಷ್ಟೇ. ಮತ್ತಷ್ಟು ಹೊಸ ಕನಸುಕಂಗಳ ಮೂಟೆಯೊಂದಿಗೆ ಹೊಸವರ್ಷಕ್ಕೆ ಶುಭ ಸ್ವಾಗತ.