Monday 1 April 2013

ಏಕೆ ಓದಬೇಕು?

ಯಾವುದೋ ಒಂದು ಲಹರಿ ಮೂಡಬೇಕು, ಆ ಮೂಡಿನಲ್ಲಿದ್ದಾಗ ಮನದ ಸಂತಸವನ್ನೆಲ್ಲ ಅಕ್ಷರ ರೂಪದಲ್ಲಿ ಮೂಡಿಸಬೇಕು, ಲಹರಿ ಚೂರು ಅತ್ತಿತ್ತ ವಾಲಿತು ಅಂದರೆ ಮುಗಿಯಿತು, ಮನದ ಕ್ಯಾನ್ವಾಸಿನಲ್ಲಿ ಮತ್ತೇನೂ ಮೂಡಲಾರದು, ಹೀಗೆಲ್ಲ ಅಂದುಕೊಂಡೇ ನನ್ನ ಬರವಣಿಗೆ ಕುಂಟುತ್ತಾ ಸಾಗುತ್ತಿದೆ. ನೆನ್ನೆ ಸುಮ್ಮನೆ ಒಂದು ಯೋಚನೆ ಬಂತು, ಅಷ್ಟಕ್ಕೂ ಈ ಲಹರಿ ಅಂದರೇನು? ಅದಕ್ಕೇಕೆ ಕಾಯುತ್ತಾ ಕುಳಿತಿರುತ್ತೇನೆ ನಾನು? ಬರೆಯುವ ಹಂಬಲವಿರುವವರೆಲ್ಲರೂ ನನ್ನ ಹಾಗೆಯೇ ಕಾಯುತ್ತಾರ? ಅಥವಾ ಸುಮ್ಮನೆ ಅಕ್ಷರಗಳ ಗೊಂಚಲು ಪೋಣಿಸುತ್ತಾರ? ಎದುರಾಗುವ ಪ್ರತಿ ಸಂದರ್ಭವನ್ನೂ ಅನುಭವಿಸುವ, ಅದರಲ್ಲಿ ಸಂತಸವನ್ನು ಕಾಣುವ ಕಲೆ ಸಿದ್ಧಿಸಿದರೆ ಪ್ರತಿಕ್ಷಣವೂ ಒಳ್ಳೆ ಜೀವನಪಾಠವೇ ತಾನೇ? ಹಾಗಿದ್ದರೆ ಎಲ್ಲವನ್ನೂ ಅಕ್ಷರಗಳಲ್ಲಿ ಮೂಡಿಸಲು ಏಕೆ ಸಾಧ್ಯವಾಗುವುದಿಲ್ಲ? ಅಥವಾ ಸಾಧ್ಯವಿದೆಯೋ?

ಪ್ರತಿಯೊಂದು ಘಟನೆಗೂ ಎರಡು ಆಯಾಮಗಳಿರುತ್ತವೆ, ಇಬ್ಬರು ವ್ಯಕ್ತಿಗಳಿಗೆ ಒಂದೇ ಘಟನೆ ಬೇರೆ ಬೇರೆ ತೆರನಾಗಿ ಕಾಣಬಹುದು, ನಮ್ಮ ದೃಷ್ಟಿಕೋನವನ್ನು ತರ್ಕದ ಸಹಾಯದಿಂದ ಜಾಲಿಸುತ್ತಾ ಅಕ್ಷರಗಳಲ್ಲಿ ಹರವಿಡುತ್ತಾ ಹೋದರೆ ಅದನ್ನೇ ತಾನೆ ಸಾಹಿತ್ಯ ಎನ್ನುವುದು? ಕೆಲವರು ತಮ್ಮ ಅನುಭವಕ್ಕೆ, ಮನದ ಭಾವಕ್ಕೆ ಪ್ರಾಸದ ರೂಪ ನೀಡಿ ಪದ್ಯ ಬರೆಯುತ್ತಾರೆ, ಕೆಲವರು ಗಂಭೀರವಾದ ಚಿಂತನೆಗಳನ್ನು ಅಷ್ಟೇ ಗಂಭೀರವಾದ ಶೈಲಿಯಲ್ಲಿ  ವಾಕ್ಯರೂಪೇನ ಹರವಿಡುತ್ತಾರೆ. ಏನೇ ಆದರೂ ಎಲ್ಲದರ ಕೊನೆಯಲ್ಲಿ ಸಿಗುವುದು ಒಂದೇ, ಅಪಾರವಾದ ಜೀವನಾನುಭವ. ಹಾಗಿದ್ದರೆ ಮತ್ತೊಂದು ಪ್ರಶ್ನೆ ಮೂಡುತ್ತದೆ, ಸಾಹಿತ್ಯ  ರಚನೆಗೆ ಸ್ವಾನುಭವವೇ ಆಗಬೇಕೋ? ಅದಿಲ್ಲದಿದ್ದರೆ ಕಂಡ, ಕೇಳಿದ ಅನುಭವಗಳನ್ನು ನಾವು ಬರೆದರೂ ಆದೀತು ಎನ್ನುವುದಾದರೆ, ಅದು ನಮ್ಮ ಸ್ವಂತ ಎನಿಸಿಕೊಳ್ಳುವುದು ಹೇಗೆ?

ಹೀಗೆ ನನ್ನ ತರ್ಕ ತಲೆಬುಡವಿಲ್ಲದೆ ಎಲ್ಲಿಂದೆಲ್ಲಿಗೋ ಸಾಗುತ್ತಿತ್ತು. ಆದರೆ ಈ ಯೋಚನೆ ಮೂಡಲು ಕಾರಣವಾದ ಘಟನೆ ನಾನು ಮತ್ತೆ ಮತ್ತೆ ಯೋಚಿಸುವಂತೆ ಮಾಡುತ್ತಿತ್ತು. ಈಗ್ಗೆ ಸರಿಸುಮಾರು ತಿಂಗಳ ಕೆಳಗೆ ನಾನು ನನ್ನ ಗೆಳತಿ ಒಂದು ಪುಸ್ತಕದ ಮಳಿಗೆಗೆ ಹೋಗಿದ್ದೆವು, ಅವರು ಯಾವುದೋ ಪುಸ್ತಕ ಹುಡುಕುತ್ತಿದ್ದರು, ನಾನು ಭೈರಪ್ಪನವರ section ನೋಡುತ್ತಿದ್ದೆ, ನನ್ನ ಹಿಂದೇ ಸುತ್ತುತ್ತಿದ್ದ ಆ ಅಂಗಡಿಯ sales girl ಒಂದೊಂದೇ ಕಾದಂಬರಿಯ ಹೆಸರು ಓದಿ "ಇದೆಲ್ಲ ತೊಗೊಂಡ್ ಓದ್ತೀರಾ?" ಎಂದು ಕೇಳಿದಳು. ಅವಳ ಮುಖಭಾವ ನೋಡಿದರೆ ಯಾವುದೋ ಅದ್ಭುತವನ್ನು ಕಾಣುತ್ತಿದ್ದಾಳೇನೋ  ಎನ್ನುವಂತಿತ್ತು. ನಾನು ನಗುತ್ತಾ "ಮತ್ಯಾಕೆ ತೊಗೊಳ್ಳಿ? ಆಗ್ಲೇ ಎಲ್ಲಾ ಓದಾಗಿದೆ" ಎಂದೆ. ತಕ್ಷಣ ಅವಳ ಪ್ರತಿಕ್ರಿಯೆ ನಗುತರಿಸುವಂತಿತ್ತು, ಅಂತೆಯೇ ಯೋಚಿಸುವಂತೆಯೂ... ಬಾಯಿಮೇಲೆ ಕೈಯಿಟ್ಟು "ಯಪ್ಪಾ! ಇಷ್ಟ್ ದಪ್ಪ ದಪ್ಪ ಬುಕ್ಸ್ ಹೆಂಗ್ ಓದ್ತೀರಾ? ನಮ್ಗೆ ನಮ್ syllabus ಓದಿ ಮುಗ್ಸಿದ್ರೆ ಸಾಕಪ್ಪಾ ಅನ್ನಿಸಿಬಿಡುತ್ತೆ" ಅಂದಳು. ಅವಳಿಗೆ ಯಾರೋ ಇದೇ ಪ್ರಶ್ನೆಗೆ "ಇದನ್ನೆಲ್ಲಾ ಓದೋಕ್ಕಾಗುತ್ತ? ಸುಮ್ಮನೆ ಮನೆಗ್ ತೊಗೊಂಡ್ ಹೋಗಿ ಇಟ್ಕೊತೀವಿ, ನೋಡಿದೋರು ನಮ್ಮನ್ನ ಒಂದು standard ಅಂದ್ಕೋತಾರೆ" ಅಂದಿದ್ನಂತೆ, ಆ ಪುಣ್ಯಾತ್ಮ ಯಾರೋ ತಿಳಿದಿಲ್ಲ, ಆದರೆ ಅದನ್ನು ಕೇಳಿದಾಗ ಮಾತ್ರ ಬೇಸರವಾಯಿತು. ಜನ ಹೀಗೂ ಇರುತ್ತಾರ ಎನಿಸಿದ್ದಷ್ಟೇ ಅಲ್ಲ, ಗಂಭೀರ ಸಾಹಿತ್ಯದ ಪ್ರಕಾರವನ್ನು ತರ್ಕಬದ್ಧವಾಗಿ ಅಧ್ಯಯನ ಮಾಡುವ ಜನ ಎಷ್ಟಿದ್ದಾರೆ ಎಂಬ ಯೋಚನೆಯೂ ಬಂದಿತು.

ಒಂದು ಅಧ್ಯಯನದ ಪ್ರಕಾರ ಅಂತರ್ಜಾಲದ ಪ್ರಭಾವ ಎಷ್ಟೇ ಇದ್ದರೂ ಪ್ರಕಟಿತ ಪುಸ್ತಕಗಳಿಗೆ ಭಾರತ ಅತ್ಯಂತ ದೊಡ್ಡ ಮಾರುಕಟ್ಟೆ. ಪ್ರಕಟಿತ ಪುಸ್ತಕಗಳಿಗೆ ಇಲ್ಲಿ ಬೇಡಿಕೆ ಬಹಳ. ಆದರೆ ಪುಸ್ತಕ ಕೊಂಡವರಲ್ಲಿ ಎಷ್ಟು ಜನ ಅದನ್ನು ಓದುತ್ತಾರೆ ಎಂದು ಸಮೀಕ್ಷೆ ಮಾಡಲು ಸಾಧ್ಯವಿದೆಯ? ಬಹುಶಃ ಆ ಸಮೀಕ್ಷೆಯಾದರೆ ಬಹಳಷ್ಟು ಪುಸ್ತಕಗಳು ಕೇವಲ ಪ್ರದರ್ಶನದ ವಸ್ತುವಾಗುತ್ತಿವೆಯೆಂಬ ಅಂಶ ಬೆಳಕಿಗೆ ಬಂದೀತೇನೋ? ಇರಲಿ, ನನ್ನ ಮೂಲ ಸಮಸ್ಯೆ ಈ ವಿಚಾರದಲ್ಲಲ್ಲ. ಆ ಹುಡುಗಿ ಕೇಳಿದ ಎರಡನೇ ಪ್ರಶ್ನೆ ನನ್ನನ್ನು ಬಹಳ ದಿನದಿಂದ ಕಾಡಿಸುತ್ತಿದೆ. ಒಮ್ಮೊಮ್ಮೆ ಒಂದೊಂದು ಉತ್ತರವನ್ನೀಯುತ್ತಾ...

ಅವಳು ಕೇಳಿದಳು "ಇದ್ನೆಲ್ಲ ಯಾಕ್ ಓದ್ತೀರಾ? ನಾವ್ ಓದಿದ್ರೆ marks ಸಿಗುತ್ತೆ, ಪಾಸ್ ಆಗ್ತೀವಿ, ಇದ್ನೆಲ್ಲ ಓದಿದ್ರೆ ಏನು use?"
ಪ್ರಶ್ನೆ ಬಂದ ತಕ್ಷಣ ಸುಮ್ಮನಾದೆ, ಹೌದಲ್ಲಾ, ಯಾಕ್ ಓದ್ಬೇಕು ಇದ್ನೆಲ್ಲಾ ಅನ್ನೋದನ್ನೇ ಯೋಚಿಸುತ್ತಿದ್ದೆ. ಅವಳಿಗೆ ಏನೋ ಉತ್ತರ ಹೇಳಿ ನುಣುಚಿಕೊಂಡು ಬಂದಿದ್ದೆ, ಆದರೆ ನೆನ್ನೆ ಯೋಚಿಸುತ್ತಿದ್ದಾಗ ಮೇಲಿನ ಯೋಚನೆ ಬಂದಿತು. ಎಷ್ಟು ಮಹನೀಯರ, ಪ್ರತಿಭಾವಂತರ ಜೀವನಾನುಭವ ಅಡಕವಾಗಿರುತ್ತದೆ ಸಾಹಿತ್ಯದಲ್ಲಿ, ಪ್ರತಿಯೊಂದೂ ಜೀವನದ ಬಗೆಗೆ ಹೊಸದೊಂದು ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು, ಜೀವನದ ಬೆಲೆ ಅರಿಯಲು ಸಹಾಯ ಮಾಡುತ್ತವೆ. ನಮ್ಮ ಸ್ವಂತ ಅನುಭವಕ್ಕೆ ಬಾರದಂತಹ ಘಟನೆ, ನಮ್ಮ ಆಲೋಚನೆಗೆ ನಿಲುಕದ್ದು, ಬೇರೆಯವರ ಅನುಭವಕ್ಕೆ ಬಂದಿರಬಹುದು, ಅವರ ಆಲೋಚನೆಗೆ ನಿಲುಕಿರಬಹುದು, ಪ್ರತಿಯೊಂದು ಅನುಭವವನ್ನೂ ತರ್ಕದ ಮೂಸೆಯಡಿ ತಿಕ್ಕಿ ಸಾಮೂಹಿಕವಾಗಿ ಹಂಚಿಕೊಳ್ಳುವ ಮಾಧ್ಯಮವೇ ಸಾಹಿತ್ಯ, ಅಲ್ಲವೇ? ಅದಕ್ಕಾಗಿಯೆ ತಾನೇ ಓದಬೇಕು? ಬಹುಶಃ ಈ ತರ್ಕ ಬೇರೆ ರೂಪದಲ್ಲಿ ಬೇರೆಯವರ ಮನದಲ್ಲಿ ಮೂಡಿ ಅದೂ ಈಗಾಗಲೇ ಸಾಹಿತ್ಯದ ರೂಪು ಪಡೆದಿದೆಯೇನೋ? ಏನೇ ಆಗಲಿ ಇದನ್ನೆಲ್ಲಾ ಆ ಹುಡುಗಿಗೆ ಹೇಳಬೇಕು ಅನಿಸುತ್ತಿದೆ. ಅದು ಆ ಹುಡುಗಿಯಿಂದ ಅವಳ ಪ್ರಶ್ನೆಗೆ ಮೊದಲು ಉತ್ತರ ಕೊಟ್ಟ ವ್ಯಕ್ತಿಗೂ ಮುಟ್ಟುವಂತಿದ್ದರೆ ಚೆನ್ನಾಗಿರುತ್ತಿತ್ತೇನೋ.