Monday 30 May 2016

ಕೇಳುವ ಕಿವಿ ಸತ್ತು ಹೋದರೆ ಆಡುವ ಬಾಯಿಯೂ ಸತ್ತು ಹೋಗುತ್ತದಂತೆ.

ಹಾಗೆಂದು ಎಲ್ಲೋ ಕೇಳಿದ್ದೆ. ಕೇಳುವ ಕಿವಿ ಸತ್ತು ಹೋದರೆ ಆಡುವ ಬಾಯಿಯೂ ಸತ್ತು ಹೋಗುತ್ತದಂತೆ. ನಮ್ಮ ಮಾತನ್ನು ಕೇಳುವ, ನಾವು ಓದಿದ, ತಿಳಿದ ವಿಷಯಗಳನ್ನು ಕೇಳಿ, ಸಂತಸದಿಂದ ಮುಖ ಅರಳಿಸಿ, ತಲೆ ನೇವರಿಸಿ, ಬೆನ್ನು ತಟ್ಟಿ ಖುಷಿ ಪಡುವ ಜೀವವೊಂದು ಬಳಿಯಲ್ಲಿದ್ದರೆ ಹೊಸಹೊಸತನ್ನು ಕಲಿಯುವ, ಓದುವ, ಓದಿ ಮತ್ತೊಬ್ಬರಿಗೆ ಹೇಳುವ ಹುಮ್ಮಸ್ಸು ನೂರ್ಮಡಿಗೊಳ್ಳುತ್ತದೆ. ನಾವು ಏನೇ ಹೇಳಿದರೂ ಕೇಳುವ ಜೀವವೊಂದು ಇದೆ ಎನ್ನುವ ಅರಿವೇ ನಮ್ಮನ್ನು ವಿನೂತನ ಸಾಹಸಗಳಿಗೆ ಅಣಿಯಾಗಲು, ಇನ್ನೂ ಏನನ್ನೋ ಕಲಿಯಲು ಹುರಿದುಂಬಿಸುತ್ತದೆ. ಮನಸ್ಸು ಖುಷಿಯಿಂದ ಪುಟಿಯುತ್ತದೆ. 

ನನ್ನ ಬಳಿಯೂ ಅಂತಹ ಒಂದು ಜೀವವಿತ್ತು. ನಾನು ಏನೇ ಹೇಳಿದರೂ ಮಗುವಿನಷ್ಟೇ ಮುಗ್ಧತೆಯಿಂದ ಎಲ್ಲವನ್ನೂ ಕೇಳಿ, ಎಷ್ಟು ತಿಳಿದುಕೊಂಡಿದ್ದೀಯಮ್ಮ ಎಂದು ತಲೆ ಆಡಿಸುತ್ತಾ, ನೋಡಿದ್ಯೇನೇ? ನಮ್ಮ ಅಮ್ಮು ಹೇಗೆ ಎಲ್ಲ ಹೇಳುತ್ತಾಳೆ ನೋಡು ಎಂದು ಸಂಭ್ರಮಿಸುತ್ತಾ, ನಮ್ಮ ಅಮ್ಮುಗೆ ಅದು ಗೊತ್ತು, ನನ್ನ ಮಗಳು ಇದರ ಬಗ್ಗೆ ಚೆನ್ನಾಗಿ ತಿಳಿದಿದ್ದಾಳೆ ಎಂದು ಎಲ್ಲರ ಬಳಿ  ಹೇಳಿಕೊಂಡು ಓಡಾಡುತ್ತಾ ಸಂತಸಪಡುತ್ತಿದ್ದ ಜೀವ. ನನ್ನೆಲ್ಲ ಕೆಲಸಗಳಿಗೆ ಆಸರೆಯಾಗಿ, ಹುರಿದುಂಬಿಸುತ್ತಾ ನನ್ನ ಬೆನ್ನೆಲುಬಾಗಿದ್ದ ಜೀವ. ನಾನು ಪದೇ ಪದೇ ಪುಸ್ತಕಗಳನ್ನು ಕೊಳ್ಳುವಾಗ ಯಾಕೆ ಹಣ ಹಾಳು ಮಾಡುತ್ತೀಯ ಎಂದು ಗದರಿಕೊಳ್ಳಲಿಲ್ಲ, ನಾನು ದುಡಿಯುತ್ತ, ಓದುತ್ತ ನನ್ನ  ಪಾಡಿಗೆ ನಾನು ಓಡಾಡುತ್ತಿದ್ದರೂ ಮನೆಗೆ ಯಾಕೆ ಕೊಡುವುದಿಲ್ಲ ಎಂದು ಪ್ರಶ್ನಿಸಲಿಲ್ಲ. ನಾನು ಏನೇ ಕೇಳಿದರೂ ಇಲ್ಲ ಅನ್ನಲಿಲ್ಲ, ನನ್ನಿಂದ ಯಾವುದೇ ನಿರೀಕ್ಷೆಗಳಿರಲಿಲ್ಲ. ನಾನು ಓದಿ- ತಿಳಿದ ವಿಷಯಗಳನ್ನು ಅವರಿಗೆ ಹೇಳುತ್ತಿದ್ದರೆ ಅದೇ ಅವರಿಗೆ ದೊಡ್ಡ ಖುಷಿ. ಅದನ್ನು ಊರ ತುಂಬಾ ಹೇಳಿಕೊಂಡು ಓಡಾಡಬೇಕು. 

ನಮ್ಮಣ್ಣ ಯಾವಾಗಲೂ ಹಾಗೇ. ಯಾವುದೇ ವಿಷಯವಿರಲಿ, ಸಂತಸ ಪಡುವಂಥದ್ದಾದರೆ ನಗುನಗುತ್ತಾ ಎಲ್ಲರ ಬಳಿ ಹೇಳಿಕೊಳ್ಳಬೇಕು. ಅದು ಒಡಹುಟ್ಟಿದ ತಮ್ಮನೇ ಆಗಿರಲಿ, ಅಥವಾ ಈಗ ತಾನೇ ಪರಿಚಯವಾದ ಆಟೋ ಡ್ರೈವರೇ ಆಗಿರಲಿ, ಅವರು ಏನು ತಿಳಿಯುತ್ತಾರೆ ಎಂಬುದನ್ನೂ ಯೋಚಿಸದೇ ಎಲ್ಲರ ಬಳಿಯೂ ಹೇಳಿಕೊಳ್ಳುತ್ತಾ ಬರುತ್ತಿದ್ದರು. ಅದು ಬರೀ ಮಕ್ಕಳ ಬಗ್ಗೆ ಹೇಳಿಕೊಳ್ಳುವುದಕ್ಕಷ್ಟೇ ಸೀಮಿತವಲ್ಲ. ವಿಷಯ ಯಾವುದೇ ಇರಲಿ, ಯಾರನ್ನಾದರೂ ಕ್ಷೇಮ ವಿಚಾರಿಸುವುದಾದರೂ ಸೈ. ಇವರು ಊರಗಲ ಮುಖ ಅರಳಿಸಿ, ನಗುತ್ತಾ ಆರೋಗ್ಯಾನ ಸ್ವಾಮಿ ಎಂದು ಮಾತನಾಡಿಸಿದರೆ, ಎದುರಿರುವ ಮನುಷ್ಯ ಎಷ್ಟೇ ಕೋಪದಿಂದ ಸೆಟೆದುಕೊಂಡಿದ್ದರೂ, ಬಲವಂತದ ಮುಗುಳ್ನಗೆಯನ್ನು ತಂದುಕೊಂಡು ಉತ್ತರಿಸಲೇ ಬೇಕು ಹಾಗೆ ಮಾಡುತ್ತಿದ್ದರು. ನನ್ನ ಮಾತುಗಳನ್ನು ಬೇರೆ ಯಾರು ಕೇಳದಿದ್ದರೂ, ಅವರಿದ್ದಾರಲ್ಲ, ಅವರೊಬ್ಬರಿಗಾಗಿ ಹೊಸ ಹೊಸ ವಿಷಯಗಳನ್ನು ತಿಳಿಯಬೇಕು, ಇನ್ನೂ ಹೆಚ್ಚು ಓದಿ ಹೇಳಬೇಕೆಂಬ ಉತ್ಸಾಹ ನನ್ನಲ್ಲಿ ತಾನೇ ತಾನಾಗಿ ಮೂಡುತ್ತಿತ್ತು. 

ಕಳೆದ ವರ್ಷ ಕಲಾಂ ಸರ್ ಹೋದಾಗ ಮನಸ್ಸು ಖಿನ್ನಗೊಂಡಿತ್ತು. ಅವರ ಕುರಿತು ನನ್ನ ಬಾಲಿಶ ಬರವಣಿಗೆಯಲ್ಲಿ ಬರೆಯುವಾಗ, ಇನ್ನು ನಾಲ್ಕು ತಿಂಗಳಲ್ಲಿ ಇದಕ್ಕಿಂತ ದೊಡ್ಡ ಆಘಾತ ಕಾದಿದೆಯೆಂದು ಕನಸು ಮನಸಿನಲ್ಲಿಯೂ ಕಲ್ಪಿಸಿಕೊಂಡಿರಲಿಲ್ಲ. ಹುಟ್ಟು - ಸಾವು ಎರಡನ್ನೂ ಕಣ್ಣಾರೆ ಕೇವಲ ಒಂದೇ ತಿಂಗಳ ಅವಧಿಯಲ್ಲಿ ನೋಡುತ್ತೇನೆಂದೂ ನೆನೆಸಿರಲಿಲ್ಲ. ನನ್ನ ಮಗ ಹುಟ್ಟಿದ ಸಡಗರವಿನ್ನೂ ಮುಗಿದಿರಲೇ ಇಲ್ಲ. ಮೊಮ್ಮಗು ಬರುತ್ತದೆಂದು ಅಷ್ಟೆಲ್ಲ ಸಂಭ್ರಮದಿಂದ ತಯಾರಿ ನಡೆಸಿದ್ದ ನಮ್ಮಣ್ಣ, ಕೇವಲ ಇಪ್ಪತ್ನಾಲ್ಕೇ  ದಿನಗಳಿಗೆ ಮೊಮ್ಮಗನ ಋಣ ಹರಿದುಕೊಂಡು ಹೊರಟೇಬಿಟ್ಟರು.  ಚಿಕ್ಕ ಸುಳಿವೂ ಕೊಡದೆ, ಉಳಿಸಿಕೊಳ್ಳಲು ಅವಕಾಶವನ್ನೇ ನೀಡದೆ ನನ್ನಿಂದ ದೂರ ಸರಿದರು. ಆ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಲಾರದ ನನ್ನ ಅಸಹಾಯಕತೆ ಅವರನ್ನು ಉಳಿಸಿಕೊಳ್ಳಲು ಇರಬಹುದಾಗಿದ್ದ ಒಂದೇ ಒಂದು ಚಿಕ್ಕ ಸಾಧ್ಯತೆಯನ್ನೂ ಅಳಿಸಿಹಾಕಿತು. 

ನನ್ನ ಮಗನಿಗೀಗ ಆರೂವರೆ ತಿಂಗಳು. ಅಣ್ಣ ಹೋಗಿ ಆರು ತಿಂಗಳು ಸಂದು ಹೋದವು. ಆದರೆ ಈಗಲೂ ನಡೆದದ್ದನ್ನೆಲ್ಲ ನೆನೆಸಿಕೊಂಡರೆ, ಅಣ್ಣ ಹೋದ ದಿನದ ಘಟನೆಗಳು ಹಸಿ ಹಸಿಯಾಗಿ ಮನಸ್ಸಿನ ಪದರದ ಮೇಲೆ ಮೂಡುತ್ತವೆ. ಇನ್ನೂ ಇಲ್ಲೇ ಎಲ್ಲೋ ಇದ್ದಾರೆಂಬ ಭಾವ ಮನಸ್ಸನ್ನು ತುಂಬಿಕೊಳ್ಳುತ್ತದೆ. ನಾನು ಅಮ್ಮನಿಗೆ ಕರೆ ಮಾಡಿದಾಗಲೆಲ್ಲ ಮೊದಲು ಫೋನ್ ಎತ್ತಿಕೊಂಡು " ಹಲೋ... ಏನ್ರೀ, ನಿಮಗೆ ಮಾಡೋಕೆ ಬೇರೆ ಕೆಲಸ ಇಲ್ವಾ? ಯಾವಾಗ ನೋಡಿದ್ರೂ ಫೋನ್ ಮಾಡ್ತಾನೇ ಇರ್ತೀರಲ್ಲ??" ಎಂದು ಪ್ರತಿದಿನವೂ ರೇಗಿಸಿ, ಮತ್ತು ಪ್ರತಿ ಬಾರಿಯೂ ಹಾಗೆ ರೇಗಿಸಿದ ನಂತರ "ಅಮ್ಮು ತಪ್ಪು ತಿಳ್ಕೊಬೇಡಮ್ಮ, ಏನೋ ತಮಾಷೆಗೆ ಹಾಗೆ ಅಂತೀನಿ ಅಷ್ಟೇ. ನೀನು ನನ್ನ ಮಾತು ಕೇಳಿ ನಕ್ಕರೆ ಅಷ್ಟೇ ಸಾಕು. ಅದೇ ನನಗೆ ಒಂದು ರೀತಿ ಸಂತೋಷ" ಎಂದು ಸಮಜಾಯಿಷಿಕೊಡುತ್ತಿದ್ದ  ಅವರ ಮುಗ್ಧತೆ ಬಿಟ್ಟೂ ಬಿಡದೇ ಕಾಡುತ್ತದೆ. ಪುಟ್ಟ ಮಗ ಕೈಯಲ್ಲಿರಲಿ, ಅಥವಾ ಕಛೇರಿಯಲ್ಲೇ ಕುಳಿತಿರಲಿ, ಎಲ್ಲಿದ್ದೇನೆಂಬ ಅರಿವೂ ಇಲ್ಲದಂತೆ ಕಣ್ಣು ತುಂಬಿಕೊಳ್ಳುತ್ತದೆ. ಅವರಿಲ್ಲದ ಜಗತ್ತೇ ನನಗೆ ಇರಲಿಲ್ಲ. ಈಗ ನೆನೆಸಿಕೊಂಡರೆ ಏನೂ ಇಲ್ಲ, ಏನೂ ಬೇಡವೆಂಬ ಭಾವ ಮನಸ್ಸನ್ನು ಆವರಿಸಿಕೊಳ್ಳುತ್ತದೆ. 

ಇಗೋ ಈಗ, ಈಗಷ್ಟೇ ನಮ್ಮೆದುರು ಕುಳಿತು ಮಾತನಾಡುತ್ತಿದ್ದರು. ಇನ್ನವರು ಇಲ್ಲ ಎಂದರೆ?? ಹೇಗೆ ಅರಗಿಸಿಕೊಳ್ಳುವುದು?? ಪ್ರತೀದಿನ ದಿನಪತ್ರಿಕೆಗಳಲ್ಲಿ ಸುದ್ದಿಯನ್ನು ಓದುವಾಗ, ಚಾನಲ್ ಗಳಲ್ಲಿ ನೋಡುವಾಗ, ಅಪಘಾತ,  ಅಷ್ಟು ಸಾವು, ಇಷ್ಟು ಸಾವು ಎಂದು ಇದ್ದರೆ, ಹೃದಯಾಘಾತ ಕಣ್ಮರೆ ಎಂದೆಲ್ಲ ಇದ್ದರೆ ಛೆ, ಛೆ, ಎಂದು ಲೊಚಗುಟ್ಟಿಬಿಡುತ್ತೇವೆ. ನಮ್ಮವರು ಯಾರೋ ಹಾಗೆ ಹೋದಾಗಲೇ ಆ ನೋವಿನ ತೀವ್ರತೆ ಎಂತಹುದೆಂದು ಅರ್ಥವಾಗಬಲ್ಲುದೇನೋ. ಅಣ್ಣ ಹೋದಾಗಿನಿಂದ ನಾನು ಅಂತಹ ಸುದ್ದಿಗಳನ್ನು ನೋಡುವ ರೀತಿಯೇ ಬದಲಾಗಿದೆ. ಹಾಗೆ ಹೋದವರ ಮನೆಯವರು, ಸಂಬಂಧಿಗಳ ದುಃಖ ಎಷ್ಟಿರಬಹುದೆಂದು ಯೋಚಿಸುತ್ತಾ ಕುಳಿತು ಬಿಡುತ್ತೇನೆ. ಎಲ್ಲೋ ಒಂದುಕಡೆ ನಾವೆಲ್ಲಾ ಯಾಕೆ ಇಷ್ಟು ಒದ್ದಾಡುತ್ತೇವೆ ಎನಿಸುತ್ತದೆ. ಕೇವಲ ತಿಂಗಳ ಹಿಂದಷ್ಟೇ ನಮ್ಮ ತಂದೆ ಬಂದು ನನ್ನನ್ನು ತವರಿಗೆ ಕರೆದೊಯ್ದರು, ಮಗಳ ಬಾಣಂತನ ಮಾಡುತ್ತೇನೆಂಬ ಸಡಗರದಿಂದ. ಇನ್ನು ಒಂದು ತಿಂಗಳಲ್ಲಿ ನಾನೇ ಇರುವುದಿಲ್ಲವೆಂದು ಅವರೇನಾದರೂ ಕನಸಿದ್ದರಾ?? ಇಲ್ಲ. ನಾವೂ ಖುಷಿಯಾಗಿ ಏನೋ ಅಂದುಕೊಳ್ಳುತ್ತೇವೆ, ದುಃಖದಲ್ಲಿ ಕೊರಗುತ್ತೇವೆ, ಕೋಪದಲ್ಲಿ ಹಠ ಸಾಧಿಸುತ್ತೇವೆ, ಚಿಕ್ಕ ಚಿಕ್ಕ ವಿಷಯಗಳನ್ನೂ ದೊಡ್ಡದು ಮಾಡಿ, ಜಗಳ ಹಚ್ಚಿಕೊಂಡು ಕೂಡುತ್ತೇವೆ. ಯಾವ ಕ್ಷಣದಲ್ಲಿ ವಿಧಿ ನಮ್ಮನ್ನು ಕರೆದೊಯ್ಯುವುದೋ ಯಾರಿಗೆ ಗೊತ್ತು?? ಇಷ್ಟೆಲ್ಲಾ ತಿಳಿದಿದ್ದರೂ ಸುಮ್ಮನೇ ಬಡಿದಾಡುತ್ತೇವೆ. 

ಅಣ್ಣ ಯಾವಾಗಲೂ ಹೇಳುತ್ತಿದ್ದರು - ಮನುಷ್ಯ ಏನೂ ತೊಗೊಂಡು ಹೋಗೋಲ್ಲ ಕಣಮ್ಮ, ಏನೋ ಒಂದು ಒಳ್ಳೇತನ, ಒಂದು ಕೆಟ್ಟತನ ಅಷ್ಟೇ. ನಾವು ಏನು ಮಾಡಿರ್ತೀವೋ ನಮಗೆ ಅದೇ ಸಿಗೋದು. ಏನೋ ಇರೋ ಅಷ್ಟು ದಿನ ನಾಲ್ಕಾರು ಜನರ ಜೊತೆ ಖುಷಿ ಖುಷಿಯಾಗಿ ಮಾತಾಡ್ತಾ, ನಗು ನಗ್ತಾ ಇದ್ರೆ ಸಾಕು. ಇನ್ನೇನ್ ಬೇಕಮ್ಮ ಮನುಷ್ಯಂಗೆ ಅಂತ. ಅವರು ಹಾಗೆ ಹೇಳುತ್ತಾ, ಅದೇ ರೀತಿ ಬಾಳಿ ತೋರಿಸಿದರು. ಈಗಿನ ವ್ಯಾವಹಾರಿಕ ಜಗತ್ತಿನಲ್ಲಿ ಅವರ ರೀತಿ ಬದುಕುವುದು ಬಹಳ ಕಷ್ಟ. ಅಷ್ಟು ಒಳ್ಳೆಯತನದಲ್ಲಿ ಬದುಕಿ, ಬೀದಿಯ ಮಕ್ಕಳನ್ನೆಲ್ಲ ಆಡಿಸಿ, ಬೆಳೆಸಿದ ನಮ್ಮಪ್ಪ ನನ್ನ ಮಗುವನ್ನ ಎತ್ತಿಕೊಳ್ಳುವ ಸಮಯಕ್ಕೆ ಇಲ್ಲ ಎನ್ನುವ ನೆನಪು ಬಂದಾಗಲೆಲ್ಲ ಸಂಕಟದಿಂದ ದುಃಖ ಉಮ್ಮಳಿಸಿ ಬರುತ್ತದೆ. ನನ್ನ ಮಾತಿಗೆ ಕಿವಿಯಾಗಿದ್ದ ಅಣ್ಣ ಇನ್ನಿಲ್ಲ, ಇನ್ನು ಯಾರಿಗಾಗಿ ಓದಲಿ ಎನಿಸುತ್ತದೆ.  ಹಾಗೇ ಮನಸ್ಸಿನ ಮೂಲೆಯಲ್ಲಿ, ಎಲ್ಲೋ ಒಂದು ಕಡೆ ಅವರ ಈ ಅನಿರೀಕ್ಷಿತ ನಿರ್ಗಮನಕ್ಕೆ ಪರೋಕ್ಷವಾಗಿ ನಾನೇ ಕಾರಣಳಾಗಿ ಬಿಟ್ಟೆನಾ?? ಎನ್ನುವುದು ಮಾತ್ರ ನಾನು ಬದುಕಿರುವವರೆಗೂ ನನ್ನನ್ನು ಕಾಡುವ ಕೊರಗು.