Sunday 2 October 2011

ಕಾರಿರುಳಿನಾಗಸದಿ...

ಪ್ರತಿದಿನವೂ ಕಾರ್ಯನಿಮಿತ್ತ ಊರಿ೦ದೂರಿಗೆ ಓಡಾಡುವ ಅನಿವಾರ್ಯತೆ ನನ್ನದು. ಕೆಲವೊಮ್ಮೆ ಪ್ರಯಾಣ ಪ್ರಯಾಸಕರವೆನ್ನಿಸಿದರೂ, ಬಹಳಷ್ಟು ಸಲ ಮರೆಯಲಾರದ ಸಂತಸದ ಘಳಿಗೆಗಳನ್ನು ಕಟ್ಟಿಕೊಡುತ್ತದೆ. ಇಂದೂ ಅಷ್ಟೇ, ಇಂದಿನ ಪ್ರಯಾಣ, ಆಹ್! ಅದರ ಆಹ್ಲಾದತೆಯನ್ನು ಯಾವ ಪದಗಳಲ್ಲಿ ನಿರುಕಿಸಲಿ, ತಿಳಿಯುತ್ತಿಲ್ಲ. ಪ್ರಯಾಣದಲ್ಲಿ ಕಿಟಕಿಯ ಬದಿಯ ಜಾಗ ಸಿಕ್ಕಿಬಿಟ್ಟರೆ ಸಾಕು ಜಗವೇ ದಕ್ಕಿದಷ್ಟು ಸಂತಸ ನನಗೆ. ಅದರಲ್ಲೂ ಬರುವಾಗ ಕತ್ತಲೆಯಾಗಿದ್ದರಂತೂ ಸೈ, ಕಿಟಕಿಯಿಂದಾಚೆ ಇಣುಕಿದರೆ ಆಗಸದ ತುಂಬೆಲ್ಲ ಎಳೆಗಳ ಹಂಗಿಲ್ಲದ ಚುಕ್ಕಿಗಳ ರಂಗವಲ್ಲಿ. ಸಾಲದ್ದಕ್ಕೆ, ರೋಗಿ ಕೇಳಿದ್ದೂ ವೈದ್ಯ ಹೇಳಿದ್ದೂ ಎಂಬಂತೆ ನಮ್ಮ ಘನ ಸರ್ಕಾರ ಲೋಡ್ ಶೆಡ್ಡಿಂಗ್ ಬೇರೆ ಶುರುಮಾಡಿದೆ ಇಂದಿನಿಂದ. ಯಾವುದೇ ಕೃತಕತೆಯ ಸೊಂಕಿಲ್ಲದೆ ಸಹಜವಾಗಿ ಮಿನುಗುತ್ತಿರುವ ಕೋಟಿದೀಪಗಳ ಸೌಂದರ್ಯ ಇಮ್ಮಡಿಯಾಗಿ ಕಂಗೊಳಿಸುವುದು ಈ ಸಮಯದಲ್ಲೇ.

ಕಪ್ಪನೆ ದಪ್ಪ ಕಂಬಳಿಯ ನಡುನಡುವೆ ಚಿಕ್ಕ ಚಿಕ್ಕ ತೂತುಗಳಾಗಿ, ಅಲ್ಲಿಂದ ಬೆಳಕು ಹಣುಕಿದಂತೆ, ಮೇಲೆ ಭೂಮಿಯನ್ನೆಲ್ಲ ಹೊಚ್ಚಿರುವ ಕಾರಿರುಳಿನಾಗಸದ ತುಂಬೆಲ್ಲ ಝಗಮಗಿಸುವ ತಾರೆಗಳು, ನಮಗಿಂತಲೂ ದೀಪ ಬೇಕೇ ನಿಮಗೆ ಎಂದು ಕೊಪಿಸಿಕೊಂಡಂತಿದ್ದವು. ಒಂದಕ್ಕೊಂದು ಸ್ಪರ್ಧೆಯನ್ನಿತ್ತು ಮಿನುಗುತ್ತಿದ್ದವು. ಅಮಾವಾಸ್ಯೆ ಹತ್ತಿರವಿದೆ. ಚಂದ್ರನಿಲ್ಲದ ರಾತ್ರಿಯೂ ಎಷ್ಟೊಂದು ಸೊಬಗು, ಕಾಣಬಲ್ಲವರಿಗಷ್ಟೇ ತಿಳಿಯುವುದು ಅದರ ಸೌಂದರ್ಯ. ತಾರೆಗಳ ರೂಪವನ್ನು ತನ್ನನ್ನು ಬಿಟ್ಟು ಬೇರೆ ಯಾರೂ ಸವಿಯಬಾರದೆಂದೇ ಚಂದ್ರ ತನ್ನ ಬೆಳಕಿನಿಂದ ಅವುಗಳನ್ನು ಮರೆಮಾಚುತ್ತಾನೋ ಏನೋ? ಅಥವಾ ತಾರೆಗಳ ಮುಂದೆ ತನ್ನ ಸೌಂದರ್ಯವನ್ನು ಯಾರೂ ಹೊಗಳಲಾರರೆಂದೇ ಅತಿಯಾಗಿ ಬೆಳಗುತ್ತಾನೆಂದೆನಿಸುತ್ತೆ.

ಹುಣ್ಣಿಮೆಯ ಸೊಬಗನ್ನು ಅಷ್ಟೆಲ್ಲಾ ಹೊಗಳುವ ಕವಿಗಳು, ಈ ತಾರೆಗಳನ್ನೇಕೆ ಕಡೆಗಣಿಸುವುದು? ನನ್ನ ಕಂಗಳಿಗಂತೂ ಸಗ್ಗದ ಸಿರಿ ಎದುರು ಬಂದು ನಿಂತಿದೆಯೇನೋ ಎಂಬಷ್ಟು ಸಂತಸ. ದಾರಿಯುದ್ದಕ್ಕೂ ಕಣ್ಣು ಕೈಗಳು ಕಿಟಕಿಯಿಂದಾಚೆಯೇ ಹೊಲಿದುಕೊಂಡಿದ್ದವು. ಆದರೆ ಡ್ರೈವರ್ ಮಾತ್ರ ಹೆದರಿದಂತಿದ್ದ. ಎಲ್ಲಿ ನಾನು ಕತ್ತು ಪೂರ್ತಿ ಹೊರಗೆ ತೂರಿಸುತ್ತೇನೋ ಎಂದು ಹೆದರಿ "ಮೇಡಮ್,ಸ್ವಲ್ಪ ಒಳಗೆ" ಎಂದು ಪದೇ ಪದೇ ಹೇಳುತ್ತಿದ್ದ. ಅವನದೂ ತಪ್ಪಿಲ್ಲ, ನನ್ನ ಮನದೊಳಗಣ ಭಾವೋತ್ಕರ್ಷ ಅವನಿಗೆ ತಿಳಿಯುವ ಬಗೆಯಾದರೂ ಹೇಗೆ? ಈ ಕೋಟಿ ತಾರೆಗಳೊಡನೆ ನನ್ನ ಬಾಲ್ಯದ ಕೋಟಿ ನೆನಪುಗಳೂ ತೆಕ್ಕೆ ಹಾಕಿಕೊಂಡಿವೆ. ಇವನ್ನು ನಿಟ್ಟಿಸಿದಾಗೆಲ್ಲ ಬಾಲ್ಯದ ಆ ದಿನಗಳು ಕಣ್ಣೆದುರು ನಿಂದು, ಮನಸ್ಸಿಗೆ ಮುದವೀಯುತ್ತವೆ.

ಒಂದೊಂದೇ ಚುಕ್ಕಿ ಸೇರಿಸಿ ಅವಕ್ಕೆ ಆಕಾರ ಕೊಡುವುದಿದೆಯಲ್ಲ, ಅದರಷ್ಟು ಸಂತಸವನ್ನೀಯುವ ಘಳಿಗೆಗಳು, ನನ್ನ ಮಟ್ಟಿಗೆ ಬೇರಾವುದೂ ಇಲ್ಲ. ಚುಕ್ಕಿಗಳೊಡನೆ ಒಮ್ಮೆ ಗೆಳೆತನವಾದರೆ ಮುಗಿದೇ ಹೋಯಿತು, ನಮ್ಮ  ಸುತ್ತಣ ಪ್ರಪಂಚವನ್ನೆಲ್ಲ ಮರೆಸಿ ನಮ್ಮನ್ನು ತಮ್ಮೊಳಗೆ ಲೀನವಾಗಿಸಿಕೊಂಡು ಬಿಡುತ್ತವೆ ಅವು. ಚಿಕ್ಕಂದಿನಲ್ಲಿ ಹೀಗೆ ಕರೆಂಟು ಕೈ ಕೊಟ್ಟಾಗೆಲ್ಲ, ನಾವು ಒಂದೋ ಎಲ್ಲಾ ಸೇರಿ ಕಣ್ಣಾಮುಚ್ಚಾಲೆ ಆಡುತ್ತಿದ್ದೆವು, ಇಲ್ಲವೇ, ಹೀಗೆ ತಾರೆಗಳನ್ನು ಸೇರಿಸಿ ರಾಶಿಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೆವು. ಒಂದಷ್ಟನ್ನು ಜೋಡಿಸಿ, ಇನ್ನೇನು ಒಂದು ರಾಶಿ ಮಾಡಿದೆವು ಅನ್ನೋಷ್ಟರಲ್ಲಿ, ಯಾವುದಾದರೂ ನಕ್ಷತ್ರ ಬಿದ್ದೋ ಅಥವಾ ನಮ್ಮ ಕಣ್ತಪ್ಪಿಯೋ ಮತ್ತೆ ಜೋಡಣೆ  ಕೈ ಕೊಡುತ್ತಿತ್ತು. ಮತ್ತೆ ಛಲಬಿಡದ ವಿಕ್ರಮಾಂಕನಂತೆ ಶುರು ನಮ್ಮ ಪ್ರಯತ್ನ.

ನಕ್ಷತ್ರ ಬೀಳೋದನ್ನ ನೋಡಬಾರದಂತೆ. ದೇವರಿಗೆ ಕೋಪ, ನಮಗೆ ಪಾಪ ಬರುತ್ತದಂತೆ. ಇದು ನಮ್ಮಜ್ಜಿಯ ನಂಬಿಕೆ. ಹೀಗಾಗಿ ಯಾವಾಗ್ಲಾದ್ರೂ ಸರಿ, ತಾರೆ ಜಾರೋದನ್ನ ನೋಡಿದೆ ಅಂತ ಹೇಳಿದರೆ ಸಾಕು, ತಕ್ಷಣ "ರಾಮ ರಾಮ, ಕೃಷ್ಣ ಕೃಷ್ಣ" ಅಂತ ಹೇಳಿಸುತ್ತಿದ್ದಳು. ಯಾಕಜ್ಜಿ ಅಂದರೆ ಅವಳು ನಕ್ಷತ್ರ ಲೋಕದ ಒಳಗುಟ್ಟನ್ನು ಬಲ್ಲವಳಂತೆ,"ದೊಡ್ಡ ದೊಡ್ಡ ಮನುಷ್ಯರು, ಹಿರಿಯರು ತೀರ್ಕೊಂಡಿರ್ತಾರಲ್ಲ, ಅವರೇ ಮೇಲೆ ನಕ್ಷತ್ರಗಳಾಗೋದು, ಅವರ ಪುಣ್ಯ ಅಲ್ಲಿ ಮುಗಿದ ತಕ್ಷಣ ದೇವರು ಮತ್ತೆ ಹುಟ್ಟು ಹೋಗು ಅಂತ ಅವರನ್ನು ಭೂಮಿಗೆ ತಳ್ತಾನೆ. ಅದಕ್ಕೆ ಅವನ್ನೆಲ್ಲ ನೋಡಿದ್ರೆ ದೇವರಿಗೆ ಕೋಪ ಬರುತ್ತೆ" ಅಂತ ಹೇಳ್ತಿದ್ಲು. ಅವಳ ಮಾತು ಮುಗಿಯಲಿಕ್ಕಿಲ್ಲ ನಮ್ಮದಿನ್ನೊಂದು ಪ್ರಶ್ನೆ "ಅಜ್ಜಿ, ಹಾಗಾದ್ರೆ ಹಂಗ್ ಬೀಳೋ ನಕ್ಷತ್ರ ಎಲ್ಲಾ ಭೂಮೀಲಿ ಎಲ್ ಬೀಳ್ತಾವೆ? ನಮ್ಮ ಕಣ್ಣಿಗೆ ಕಾಣೋದೆ ಇಲ್ಲ?" ಅದಕ್ಕೂ ಅವಳ ಬಳಿ ಉತ್ತರ ಸಿದ್ಧ, "ಬೀಳೋ ನಕ್ಷತ್ರಗಳೆಲ್ಲ ಮೊದಲು ಸಮುದ್ರಕ್ಕೆ ಬೀಳ್ತಾವೆ, ಆಮೇಲೆ ಅವರೆಲ್ಲ ಮತ್ತೆ ಹುಟ್ತಾರೆ. ಬರೀ ಪ್ರಶ್ನೆ ಹಾಕ್ತಾವೆ, ಮೊದ್ಲು ದೇವ್ರ ಹೆಸರು ಹೇಳ್ರೋ" ಅಂತ ಅವಳು ಗದರಿದ ತಕ್ಷಣ ರಾಮ ರಾಮ, ಕೃಷ್ಣ ಕೃಷ್ಣ ಅಂದುಬಿಡುತ್ತಿದ್ದೆವು. ಆಮೇಲೆ ಉಳಿದಿರುವ ತಾರೆಗಳಿಗೆ ಒಬ್ಬೊಬ್ಬ ಮಹಾತ್ಮರ ಹೆಸರು ಸೂಚಿಸುತ್ತಾ, ಅದು ಗಾಂಧಿ ಇರಬಹುದು, ಇದು ನೆಹರು ಎಂದೆಲ್ಲ ಹೆಸರು ಕೊಡುತ್ತಿದ್ದೆವು.

ಹೈಸ್ಕೂಲಿಗೆ ಬಂದಾಗ ಬಾಹ್ಯಾಕಾಶದ ಪಾಠಗಳನ್ನೋದುತ್ತಾ, ತಾರೆಗಳ ಬೀಳುವಿಕೆಯ ಸತ್ಯ ತಿಳಿದಾಕ್ಷಣ, ಅವಳ ಬಳಿ ಹೋಗಿ "ಅಜ್ಜಿ, ನೀನ್ ಹೇಳಿದ್ದೆಲ್ಲ ಸುಳ್ಳು, ನೋಡಿಲ್ಲಿ, ನಕ್ಷತ್ರಗಳು ಕೆಳಗೆ ಬೀಳೋದೇ ಇಲ್ಲ, ಎಲ್ಲ ಕಪ್ಪು ರಂಧ್ರವಾಗಿ ಹೋಗ್ತವೆ" ಅಂದು, ಹೋಗ್ರೋ ಮುಂಡೇವಾ, ಏನೇನೋ ಓದ್ಕೊಂಡ್ ಬಂದು ನಂಗೇ ಬುದ್ಧಿ ಹೇಳ್ತಾವೆ, ಅಂತ ಸಹಸ್ರನಾಮಾರ್ಚನೆನೂ ಮಾಡಿಸಿಕೊಂಡಿದ್ದೆವು.

ಆ ಮುಗ್ಧತೆ, ಕುತೂಹಲ, ಹುಡುಕಾಟ, ಸಂತಸ ಇವುಗಳೆಲ್ಲ ಇಂದು ದೂರಾಗಿದ್ದರೂ, ಈ ಎಲ್ಲ ನೆನಪುಗಳನ್ನು ತಮ್ಮೊಡನೆ ಹೊಸೆದುಕೊಂಡು ನಿಂತಿರುವ ತಾರೆಗಳು ಮಾತ್ರ, ತಾನು ನಿಶ್ಚಲ, ಅವಿನಾಶಿ ಎಂದು ಸಾರುತ್ತಿರುವಂತೆ ಭಾಸವಾಗುತ್ತಿರುತ್ತದೆ. ಅವುಗಳ ಅಗಾಧತೆಯ ಮುಂದೆ ಮಾನವನಿರ್ಮಿತವೆಲ್ಲವೂ ಎಷ್ಟೊಂದು ಕ್ಷುಲ್ಲಕ. ಇವುಗಳ ಜೊತೆಯಿಲ್ಲದಿದ್ದರೆ ಜಗತ್ತಿನ ಗವ್ವೆನ್ನುವ ಮೌನದಲಿ ಮಾನವನೆಷ್ಟು ಒಂಟಿ.

ಜತೆಜತೆಗೆ ಇಂದು ಹೊಸದೊಂದು ಅನುಮಾನ ಶುರುವಾಗುತ್ತಿದೆ. ಮೇಲೆ ಆಗಸದಲ್ಲಿ ಮೀನು, ಮೊಸಳೆ, ಕನ್ಯಾ, ಟಗರು, ಎತ್ತು, ಮಿಥುನ, ಶ್ವಾನ, ಹೀಗೆ ಅನೇಕ ಆಕಾರಗಳೊಂದಿಗೆ ಹರಡಿಕೊಂಡಿರುವ ತಾರೆಗಳನ್ನು ನೋಡುತ್ತಾ ಜೀವಿಗಳನ್ನು ಇದೇ ಆಕಾರದಲ್ಲಿ ಸೃಜಿಸಬಹುದಲ್ಲಾ, ಎಂಬ ಉಪಾಯ ಆ ಶಾರದಾವಲ್ಲಭನಿಗೆ ಹೊಳೆಯಿತೋ? ಅಥವಾ ಜೀವಿಗಳನ್ನೇ ಮೊದಲು ಸೃಷ್ಟಿಸಿ ಅನಂತರ ತಾರೆಗಳನ್ನು ಅದೇ ಆಕಾರಕ್ಕನುಗುಣವಾಗಿ ಜೋಡಿಸಿಟ್ಟನೋ?

ನನ್ನಲ್ಲಿ ಇಷ್ಟೆಲ್ಲಾ ಆಲೋಚನೆಗಳು, ನೆನಪುಗಳ ತಾಕಲಾಟ ಮುಗಿಯುವ ಹೊತ್ತಿಗೆ, ತಾರೆಗಳಿಗೆ ಸಡ್ಡು ಹೊಡೆಯುವಂತೆ, ದಾರಿದೀಪಗಳು ಕಣ್ಣಿಗೆ ರಾಚಿದವು. ಊರ ಸೇರಿ, ತಾರೆಗಳೆಲ್ಲ ಮರೆಯಾಗಿ ದೂರ ಹೋದಂತೆ, ನನ್ನ ಬಾಲ್ಯವನು ಯಾರೋ ಕಿತ್ತುಕೊಂಡಂತೆ ಅನಿಸಲು ಶುರುವಾಯಿತು. ಆದರೆ ಊರ ಒಂದು ಬದಿಯನ್ನು ದಾಟಿ ಈಚೆ ಬರುತ್ತಿದ್ದಂತೆ, ಮತ್ತದೇ ಝಗಮಗಿಸುವ ನಕ್ಷತ್ರಲೋಕ, ನಮ್ಮನ್ನು ಯಾರು ದೂರ ತಳ್ಳೋಕೆ ಸಾಧ್ಯ? ನಾವಿಲ್ಲೇ ಇದ್ದೇವೆ ಎಂದು ಆಶ್ವಾಸನೆ ಕೊಟ್ಟವು. ಮನೆಗೆ ಬಂದವಳೇ, ಮಹಡಿಯ ಮೇಲೆ ಹೋಗಿ ಚುಕ್ಕಿಗಳನ್ನು ದಿಟ್ಟಿಸುತ್ತಾ ನಿಂದೆ.

ಮತ್ತೆ ಅಜ್ಜಿ ನೆನಪಾದಳು. ಕೋಟಿ ತಾರೆಗಳ ನಡುವೆ, ಅವಳನ್ನೇ ಅರಸಲು ಪ್ರಾರಂಭಿಸಿದೆ. ಮೇಲೆ ಯಾವುದೋ ಮೂಲೆಯಲಿ, ಚುಕ್ಕಿಯೊಂದು ನನ್ನನ್ನೇ ನೋಡಿ ನಕ್ಕಂತೆನಿಸಿತು. ಯಾರಿರಬಹುದು? ನನ್ನ ಹುಡುಕಾಟದ ಗಮ್ಯ ಇರಬಹುದಾ? ತಿಳಿಯದು. ಆದರೆ ಆ ತಾರೆ ಜಾರೋದನ್ನು ಮಾತ್ರ ನಾನು ಯಾವಾಗ್ಲೂ ಕಾಯುತ್ತಿರ್ತೀನಿ.