Saturday 31 December 2011

ಮಲೆಗಳಲ್ಲಿನ ಮದುಮಗಳೊಂದಿಗೆ ಹರಟೆ

ಈಗ್ಗೆ ಸ್ವಲ್ಪ ದಿನಗಳಿಂದ ಮಲೆಗಳಲ್ಲಿನ ಮದುಮಗಳೊಂದಿಗೆ ಮಾತನಾಡುತ್ತಾ ಕುಳಿತಿದ್ದೆ. ಇಲ್ಲಿಗೆ ಬರೆಯಲು ಪುರುಸೊತ್ತೇ ಕೊಡದಂತೆ ನನ್ನನ್ನು ಆವರಿಸಿಕೊಂಡು ಬಿಟ್ಟಿದ್ದಳವಳು. ರಸಋಷಿಯೊಬ್ಬರ ಕೈಗಳಲ್ಲಿ ತಾನು ಅರಳಿಕೊಂಡ ಬಗೆಯನ್ನು ಅವಳೇ ವಿವರಿಸುತ್ತಿದ್ದಂತಿತ್ತು. ಅವಳ ಮಾತು, ನಡೆ, ಕಾಡು ಇವುಗಳಲ್ಲಿ ಎಷ್ಟು ಕಳೆದು ಹೋಗಿದ್ದೆನೆಂದರೆ ಕಾಲ ಸರಿದದ್ದೇ ತಿಳಿಯುತ್ತಿರಲಿಲ್ಲ.


"ಮಲೆಗಳಲ್ಲಿ ಮದುಮಗಳು" ಈ ಕೃತಿಯ ಬಗ್ಗೆ ಬಹಳಷ್ಟು ಕೇಳಿದ್ದೆನಾದರೂ, ಇಷ್ಟು ಬೇಗ ಇದನ್ನು ಓದುವ ಅವಕಾಶ ಸಿಗಬಹುದೆಂದು ನಾನು ಕನಸಿರಲಿಲ್ಲ. ಇದನ್ನು ಹಿಡಿಯುವ ಮೊದಲು ಮನದಲ್ಲಿದ್ದುದು ಎರಡೇ ಭಾವಗಳು. ಒಂದುಶತಮಾನದ ಶ್ರೇಷ್ಠ ಕವಿಯೊಬ್ಬರ ಉತ್ಕೃಷ್ಟವಾದ ಕೃತಿಯೊಂದನ್ನು ಓದುತ್ತಿದ್ದೇನೆ೦ಬುದು ಒಂದಾದರೆ, ಮತ್ತೊಂದು ಈ ಕೃತಿ ಚಂದನ ವಾಹಿನಿಯಲ್ಲಿ ಧಾರಾವಾಹಿಯಾಗಿ ಮೂಡಿಬಂದಾಗ ಅದನ್ನು ನೋಡ ಹೋಗಿ ಎರಡು ಮೂರು ಕಂತನ್ನು ನೋಡುವಷ್ಟರಲ್ಲಿ, "ಬರೀ ಕಾಡು, ಅಲ್ಲಿಂದ ಇಲ್ಲಿಗ್ ಬರದು ಇಲ್ಲಿಂದ ಅಲ್ಲಿಗ್ ಹೋಗದು, ಇದ್ರಲ್ಲೆನಿದೆ" ಅಂದುಕೊಂಡು, ಬೇಸರಿಸಿ ಅದರ ವೀಕ್ಷಣೆಯನ್ನು ಅಲ್ಲಿಗೇ ನಿಲ್ಲಿಸಿಬಿಟ್ಟ ನೆನಪು. ಆ ನೆನಪೇ ನನ್ನನ್ನು ಈ ಹೊತ್ತಿಗೆಯನ್ನು ಹಿಡಿದು ಕೂರುವ ಮೊದಲು ಇನ್ನೊಮ್ಮೆ ಯೋಚಿಸುವಂತೆ ಮಾಡಿತ್ತು. ಎಲ್ಲಿ ಬೇಸರಿಕೆಯುಂಟಾಗಿ ಓದನ್ನು ಅರ್ಧಕ್ಕೆ ನಿಲ್ಲಿಸಿ ಬಿಡುತ್ತೇನೋ ಎಂಬ ಭಾವ ಕಾಡುತ್ತಿತ್ತು. ಸಕಾರಣವಾಗಿಯೇ ಇತ್ತೆನ್ನಿ. ಏಕೆಂದರೆ ಇಲ್ಲಿ ನಾನು ಸಾಮಾನ್ಯವಾಗಿ ನಿರೀಕ್ಷಿಸುವ ಒಂದು ಗಟ್ಟಿ ಕಥಾ ಹಂದರದ ಮೇಲೆ ಮಿಕ್ಕೆಲ್ಲ ಪಾತ್ರಗಳೂ ಸುತ್ತುವಂತಹ ವಸ್ತು ಇರುವ ಬಗೆಗೆ ನನಗೆ ಮೊದಲಿನಿಂದಲೂ ಅನುಮಾನವಿತ್ತು. ನಂತರ ಆದದ್ದಾಗಲಿ ಒಮ್ಮೆ ಓದಿಯೇ ಬಿಡೋಣವೆಂದು ಹಠ ಹಿಡಿದು ಕುಳಿತೆ.

ಈಗ ಯೋಚಿಸಿದರೆ ಅನಿಸುತ್ತದೆ, ಓದದೇ ಹೋಗಿದ್ದರೆ ಎಷ್ಟು ಪಶ್ಚಾತ್ತಾಪ ಪಡುತ್ತಿದ್ದೆನೆಂದು, ಅಥವಾ ಓದಿಲ್ಲವೆಂದು ಪರಿತಪಿಸಲೂ ನನಗೆ ತಿಳಿಯುತ್ತಿರಲಿಲ್ಲವೇನೋ, ಅಂತಹ ಅದ್ಭುತ ಅನುಭವವೊಂದನ್ನು ಕಳೆದುಕೊಳ್ಳುತ್ತಿದ್ದೆ. ಇದನ್ನು ಹಿಡಿದು ಕುಳಿತಾಗ ಮಲೆಗಳಲ್ಲಿನ ಆ ಮದುಮಗಳು ಈ ಪರಿ ಕಾಡಬಹುದೆಂದು ನಾನು ಭಾವಿಸಿರಲಿಲ್ಲ. ಯಾವುದೋ ದಿವ್ಯ ಮಹತ್ತರ ಲೋಕದ ಸಂಚಾರಗೈದು ಮತ್ತೆ ಇಹಕ್ಕೆ ಬಿದ್ದಂತಿದೆ ಅನುಭವ. ಆ ಶಬ್ಧಭಂಡಾರ, ಕವಿವರ್ಣನೆ, ಪ್ರಕೃತಿ, ಹೊರಪ್ರಪಂಚದ ಜ್ಞಾನವೇ ಇಲ್ಲದೆ ತಮ್ಮದೇ ಸೀಮಿತ ಪ್ರದೇಶವನ್ನೇ ಪ್ರಪಂಚವೆಂದು ನಂಬಿ ಬದುಕುವ ಮುಗ್ಧಜೀವಗಳು, ಇವುಗಳಿಗೆಲ್ಲ ಕಳಶವಿಟ್ಟಂತೆ ಕಾಡು. ಆಹ್! ಆ ಅನುಭವವೇ ಅದ್ಭುತ, ಅದನ್ನು ಪದಗಳಲ್ಲಿ ಹಿಡಿದಲಾಗದು. ಓದಿಯೇ ಅನುಭವಿಸಬೇಕು.

ಇಡೀ ಕಾದಂಬರಿಯುದ್ದಕ್ಕೂ ಬೇರೆ ಮಾನವ ಪಾತ್ರಗಳೆಲ್ಲ ಒಂದು ತೂಕವಾದರೆ, ಕಾಡೇ ಮತ್ತೊಂದು ತೂಕ. ಇಲ್ಲಿ ಕಾಡು ವಹಿಸಿರುವ ಪಾತ್ರ ಅದರ ಪಾತ್ರಕ್ಕಿರುವ ಪ್ರಾಮುಖ್ಯತೆ ಮತ್ತಿನ್ನಾವ ಪಾತ್ರಕ್ಕೂ ಇಲ್ಲ. ಇಲ್ಲಿ ಕಥೆಯನ್ನು ಹುಡುಕುವವರೇ ಮೂರ್ಖರು (ನನ್ನನ್ನೂ ಸೇರಿಸಿ) ಅಷ್ಟೇ. ಕಾದಂಬರಿಯ ಉಪಾದಿಯಲ್ಲೇ ಕವಿ ಹೇಳಿಬಿಡುತ್ತಾರೆ -

ಇಲ್ಲಿ -
             ಯಾರೂ ಮುಖ್ಯರಲ್ಲ;
                    ಯಾರೂ ಅಮುಖ್ಯರಲ್ಲ;
                           ಯಾವುದೂ ಯಃಕಶ್ಚಿತವಲ್ಲ!

ಇಲ್ಲಿ -
              ಯಾವುದಕ್ಕೂ ಮೊದಲಿಲ್ಲ;
                     ಯಾವುದಕ್ಕೂ ತುದಿಯಿಲ್ಲ;
                            ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ;
                                   ಕೊನೆಮುಟ್ಟುವುದೂ ಇಲ್ಲ!

ಇಲ್ಲಿ -
               ಅವಸರವೂ ಸಾವಧಾನದ ಬೆನ್ನೇರಿದೆ!

ಇಲ್ಲಿ -
               ಎಲ್ಲಕ್ಕೂ ಇದೆ ಅರ್ಥ;
                   ಯಾವುದೂ ಅಲ್ಲ ವ್ಯರ್ಥ;
                          ನೀರೆಲ್ಲ ಊ ತೀರ್ಥ!


ಅಲ್ಲಿಗೇ ಓದುಗನಾದವನು ಅರ್ಥೈಸಿಕೊಂಡು ಬಿಡಬೇಕು. ಯಾವುದೋ ಒಂದು ಪಾತ್ರದ ಬಗ್ಗೆಯಾಗಲೀ, ವಸ್ತುವಿನ ಬಗ್ಗೆಯಾಗಲೀ ಕಥೆ ಹೆಣೆದು, ಅದನ್ನು ಸುಖಾಂತವೋ, ದುರಂತವೋ ಅಂತೂ ಏನೋ ಒಂದು ಕೊನೆಗಾಣಿಸಿ ಮುಗಿಸುವ ವಸ್ತುವಲ್ಲ ಇಲ್ಲಿರುವುದು ಎಂದು. ಇಡೀ ಪುಸ್ತಕದುದ್ದಕ್ಕೂ ನಮಗೆ ಆ ಅನುಭೂತಿಯುಂಟಾಗುತ್ತದೆ. ಇಲ್ಲಿ ಎಲ್ಲ ಪಾತ್ರಗಳೂ ಮುಖ್ಯವೇ, ಅವರವರ ಪಾತ್ರಗಳನ್ನು ಅವರವರೇ ವಹಿಸಬೇಕು.ಅವರವರ ಜೀವನಕ್ಕೆ ಅವರವರೇ ನಾಯಕರು ಎಂಬಂತೆ, ಇಲ್ಲಿ ಎಲ್ಲರೂ ನಾಯಕರೇ, ಅಂತೆಯೇ ಎಲ್ಲರೂ ಸೇವಕರೇ.

ಒಂದು ಶತಮಾನದ ಹಿಂದಿನ ನಮ್ಮ ಪೂರ್ವಜರ ಜೀವನ ಅಕ್ಷರಗಳಲ್ಲಿ, ಕವಿವರ್ಣನೆಯೊಂದಿಗೆ ಬಿಚ್ಚಿಕೊಳ್ಳುತ್ತಾ ಹೋದರೆ, ಮೊದಮೊದಲು ಕಾಡಿನ ಏಕತಾನತೆ, ನಂತರ ಅಲ್ಲಿನ ಆಗಿನ ಬದುಕಿನ ಬಗೆಗೆ, ಅವರ ಸಂಚಾರ ವೇಗದ ಬಗೆಗೆ ಕೌತುಕ, ನಿಧಾನವಾಗಿ ನಾವು ಬಯಸುವ ಕಥಾವಸ್ತುವೊಂದು ಅಲ್ಲೆಲ್ಲೋ ಕೈಹಿಡಿದ ಅನುಭವ, ಆ ಕಥಾ ವಸ್ತುವಿನೊಂದಿಗೆ, ಮೊದಲಿನ ನುಡಿಗಳನ್ನು ಮರೆಸಿ ಮತ್ತೆ ಸುಖಾಂತವೊಂದನ್ನು ಧೇನಿಸುವ ಹುಚ್ಚು ಮನಸ್ಸು, ಕೊನೆಗೆ ಕವಿ ತಮ್ಮ ಮಾತಿನಂತೆ ನಡೆದು, ಅವಸರವನ್ನೂ ಸಾವಧಾನದ ಬೆನ್ನೇರಿಸಿ, ಮೊದಲು ತುದಿಯಿಲ್ಲದ ಕಥೆಯನ್ನು ಕೊನೆಮುಟ್ಟಿಸದೇ ಕೈಬಿಟ್ಟಾಗ, ಮುನ್ನುಡಿ ನೆನಪಾಗಿ ಉಂಟಾಗುವ ಗೊಂದಲದಿಂದೊಡಗೂಡಿದ ವಿಸ್ಮಯ, ಹೀಗೇ, ಅನೇಕ ಭಾವಗಳು ಮನಃಪಟಲದಲ್ಲಿ ಹೆಣೆದುಕೊಳ್ಳುತ್ತವೆ.

ಮಲೆನಾಡಿನ ಕಾಡನ್ನು ಪ್ರೀತಿಸುವವರೆಲ್ಲ ಅದರ ಗತ ವೈಭವವನ್ನೊಮ್ಮೆ ಅರಿಯಬೇಕಾದರೆ, ಮಲೆಗಳಲ್ಲಿನ ಈ ಮದುಮಗಳನ್ನು ಮಾತನಾಡಿಸಲೇ ಬೇಕು.