Saturday 13 September 2014

ಏನ ಮಾಡಲಿ?

ಕೆಟ್ಟು ಪಟ್ಟಣ ಸೇರು ಅಂತಾರೆ, ಅದೇನು ಸ್ವಭಾವ  ಕೆಟ್ಟಮೇಲೆ ಪಟ್ಟಣ ಸೇರು, ಅಂತಲೋ ಅಥವಾ ಹಣೆಬರಹ ಕೆಟ್ಟು ಪಟ್ಟಣ ಸೇರು ಅಂತಲೋ ಎಂದು ಯಾವಾಗಲೂ ಯೋಚಿಸುತ್ತಿರುತ್ತೇನೆ, ಉತ್ತರ ಮಾತ್ರ ಸಿಕ್ಕಿಲ್ಲ. ನೀವ್ ಏನೇ ಹೇಳಿ, ಬೆಂಗಳೂರಿನ ಈ ಫಾಸ್ಟ್ ಲೈಫ್ ನನ್ನಂಥವರಿಗಲ್ಲ ಕಣ್ರೀ. ದಿನಾ ಬೆಳಿಗ್ಗೆ ಏಳು, ಸಿಕ್ಕಿದ್ದನ್ನ ಬಾಯಿಗೆ ಹಾಕ್ಕೋ, ಆಫೀಸಿಗೆ ಓಡು. ಎಲ್ಲಿ ಯಾವ್ ಬಸ್ ಕ್ಯಾಚ್ ಮಾಡಿದ್ರೆ ಎರಡನೇ ಬಸ್ ತಪ್ಪೋದಿಲ್ಲ, ಎಲ್ಲಿ ಎಷ್ಟು ಜ್ಯಾಮ್ ಇರಬಹುದು? ತಲೆ ತುಂಬಾ ಇವೇ ಯೋಚನೆಗಳು, ಒಮ್ಮೆ ಕಚೇರಿ ತಲುಪಿ ಪಂಚ್ ಮಾಡಿದ್ರೆ ಏನೋ ಸಮಾಧಾನ, ಆದರೆ ಮತ್ತಲ್ಲಿ ಕೆಲಸದ ಒತ್ತಡ, ಜವಾಬ್ದಾರಿಗಳ ಮಧ್ಯೆ ಮತ್ತೆ ಮನೆ ಯಾವಗಪ್ಪ ಸೇರೋದು ಅನ್ನೋ ಚಿಂತೆ. ಬೆಂಗಳೂರಿನ ಸುಂದರ ಸಂಜೆಯ ಟ್ರಾಫಿಕ್ಕನ್ನು ದಾಟಿ ಮನೆ ಸೇರೋಷ್ಟ್ರಲ್ಲಿ, ಮೈಕೈ ಎಲ್ಲ ಹಣ್ಣಾಗಿ, ಹೊಟ್ಟೆಗೆ ಏನಾದ್ರೂ ದಾರಿ ಮಾಡಿ, ಹಾಸಿಗೆ ಕಂಡ್ರೆ ಸಾಕಪ್ಪಾ ಅನಿಸಿರುತ್ತೆ. ಇದರ ಮಧ್ಯೆ ಓದು, ಬರಹಕ್ಕೆಲ್ಲಿ ಪುರುಸೊತ್ತು? ಹಾಗೂ ಮನಸ್ಸು ಚಡಪಡಿಸುತ್ತೆ, ಏನಾದರೂ ಬರೆಯಲು, ಹೊಸದನ್ನು ಕಲಿಯಲು, ಸಮಯ ಮಾತ್ರ ಸಾಲದು.

ಇದು ನನ್ನೊಬ್ಬಳ ಕಥೆಯಲ್ಲ, ಇಲ್ಲಿರುವ ಎಲ್ಲರೂ ಇದಕ್ಕೆ ಹೊಂದಿಕೊಂಡು ಬಿಟ್ಟಿದ್ದಾರೆ. ಯಾರನ್ನು ನೋಡಿದರೂ ಧಾವಂತ. ನಿಂತುಕೊಂಡು ಮಾತನಾಡಲೂ ಪುರುಸೊತ್ತಿಲ್ಲ. ಎಷ್ಟೋ ಸಲ ಊರಿಗೆ ಹೋಗುವಾಗ, ಬೆಂಗಳೂರನ್ನು ದಾಟಿದ ಕೂಡಲೇ ಸ್ವಚ್ಛ ಗಾಳಿ, ಸುತ್ತ ನೆಮ್ಮದಿಯ ವಾತಾವರಣ, ಏನೋ ಒಂದು ತರಹ ಸ್ವಾತಂತ್ರ್ಯದ ಅನುಭವವಾಗುತ್ತದೆ. ತಿರುಗಿ ಬರುವಾಗ ಈ ಊರನ್ನು ಹೊಕ್ಕ ಕೂಡಲೇ, ದೊಡ್ಡ ದೊಡ್ಡ ಕಾಂಕ್ರೀಟ್ ಕಟ್ಟಡಗಳಿಂದ ಕೂಡಿದ ಯಾವುದೋ ಜೈಲನ್ನು ಹೊಕ್ಕಂತೆ ಅನಿಸುತ್ತಿರುತ್ತದೆ.

ಇರಲಿ ಇದು ನನ್ನ ಅನಿಸಿಕೆ. ಬೆಂಗಳೂರಿನ ಪ್ರಿಯರು ಬೇಸರಿಸುವುದು ಬೇಡ, ಆದರೂ ಇದನ್ನೆಲ್ಲಾ ನೆನೆಸಿದರೆ ನಮ್ಮೂರಿನ ಜೀವನ ಎಷ್ಟು ನೆಮ್ಮದಿಯದ್ದು ಎನಿಸುತ್ತೆ. ಆದರೆ ಏನೂ ಮಾಡಲಾಗದು. ಪಟ್ಟಣ ಸೇರಿದ್ದಾಗಿದೆ. ಓಡಲೇ ಬೇಕು.

                                                                                                                         -  ವಸು
                                         

Sunday 2 March 2014

ವೇದಗಳ ಪ್ರಸ್ತುತತೆ

ಸ್ವಂತ ಬಲದಿಂದ ಒಂದು ನಾಲ್ಕು ಅಕ್ಷರ ಬರೆಯುವಂತೆಯೋ, ಅಥವಾ ಯಾವುದಾದರೂ ಕ್ಷೇತ್ರದಲ್ಲಿ ಸ್ವಲ್ಪ ಗುರುತಿಸಿಕೊಳ್ಳುವಂತಹ ಕೆಲಸವನ್ನು ಮಾಡಿದರೆ ಸಾಕು, ತನ್ನ ಬಗ್ಗೆ ತಾನೇ ಡಂಗುರ ಸಾರಿಕೊಂಡು, ತನ್ನನ್ನೂ ಸಾಧಕ, ಜ್ಞಾನಿ ಎಂದು ಸಾರಿಕೊಳ್ಳುವ ಜನರೇ ತುಂಬಿದ್ದಾರೆ, ಇಂದಿನ ವ್ಯಾವಹಾರಿಕ ಜಗತ್ತಿನಲ್ಲಿ.

ಅಂತಹುದರಲ್ಲಿ, ತಾವು ಅಗಾಧ ಜ್ಞಾನದ ಭಂಡಾರವನ್ನೇ ಜಗತ್ತಿಗೆ ನೀಡಿದ್ದರೂ, ಸಮಗ್ರ ವಿಶ್ವ ಸೃಷ್ಟಿಯ ಬಗೆಗೆ ಅಧ್ಯಯನ ನಡೆಸಿ, ಅದರ ಅತ್ಯಂತ ಸೂಕ್ಷ್ಮ ವಿಚಾರಗಳನ್ನು ಸಾದರ ಪಡಿಸಿದರೂ, ಎಲ್ಲಿಯೂ ತಮ್ಮ ಹೆಸರನ್ನು ಹಾಕಿಕೊಳ್ಳದ ಮಟ್ಟಿಗೆ ತಮ್ಮ ಅಹಂಕಾರವನ್ನು ಅಳಿಸಿಕೊಂಡಿದ್ದವರು ನಮ್ಮ ಉಪನಿಷತ್ ಋಷಿಗಳು.

ಉಪಲಬ್ಧವಿರುವ, ಶ್ರೀ ಶಂಕರರು ಭಾಷ್ಯ ಬರೆದಿರುವ ಕೆಲವೇ ಕೆಲವು ಉಪನಿಷತ್ತುಗಳಲ್ಲೇ ಇರುವ ಜ್ಞಾನ ಭಂಡಾರವನ್ನು ನೋಡಿದರೆ ಮನುಷ್ಯ ಮಾತ್ರರಿಗೆ ಆಶ್ಚರ್ಯವಾಗುತ್ತದೆ. ಆತ್ಮ, ಪರಮಾತ್ಮ, ಸಾವು ಬದುಕಿನ ಬಗೆಗೆ ಅವರ ವಿಚಾರಗಳು, ತರ್ಕಗಳು, ಸತ್ಯದರ್ಶನದ ಅತ್ಯಂತ ಸೂಕ್ಷ್ಮ ಸ್ತರವನ್ನು ತಲುಪಿದ್ದವು.

ಈಗ ನಾವು, ಆಧುನಿಕ ಜಗತ್ತು, ಮಾನವರು ಕಾಣುತ್ತಿರುವ, ಅಧ್ಯಯನ ನಡೆಸಿ ತಿಳಿದುಕೊಳ್ಳುತ್ತಿರುವ, ವಿಶ್ವ ಸೃಷ್ಟಿ, ರಚನೆಯ ಬಗೆಗಿನ ವಿಚಾರಗಳನ್ನು, ನಮ್ಮ ಋಷಿಗಳು, ಸಾವಿರಾರು ವರ್ಷಗಳ ಹಿಂದೆಯೇ ಸಾರಿದ್ದರು. ಅದನ್ನು ಅರ್ಥೈಸುವಲ್ಲಿ, ಭಾಷೆಯ ತೊಡಕಿನಿಂದ ನಾವು ಹಿಂದೆ ಬಿದ್ದಿರಬಹುದು. ಆದ ಮಾತ್ರಕ್ಕೆ, ಅದರಲ್ಲಿರುವುದೆಲ್ಲಾ ಸುಳ್ಳಿನ ಕಂತೆ ಎಂದು ಬಿಡುವುದು ಎಷ್ಟು ಸರಿ? ಎಟುಕಲಾರದ ದ್ರಾಕ್ಷಿ ಹುಳಿ ಎಂದ ನರಿಯಂತೆ ಕುಳಿತಿದ್ದೇವೆ ನಾವಿಂದು. ಜ್ಞಾನ ವೈಚಾರಿಕತೆಯ ಅತ್ಯುನ್ನತ ಮಟ್ಟ ತಲುಪಿದ್ದ ಪೂರ್ವಜರ ಹಿನ್ನೆಲೆಯಿದ್ದೂ ಜ್ಞಾನಕ್ಕಾಗಿ ಬೇರೆಡೆ ನೋಡುತ್ತಿದ್ದೇವೆ. ಸ್ಥೂಲವಾಗಿ ಹೇಳುವುದಾದರೆ, ವಿಶ್ವವಿದ್ಯಾಲಯದ ಮಟ್ಟದಲ್ಲಿದ್ದವರು, ಹಿನ್ನಡೆಯುತ್ತಾ ಪ್ರಾಥಮಿಕ ಶಾಲಾ ಸ್ಥರಕ್ಕಿಂತಲೂ ಕೆಳಕ್ಕಿಳಿದಿದ್ದೇವೆ.

ಸಂಸ್ಕೃತ ಸಾಹಿತ್ಯ ಲೋಕ ವೇದಗಳನ್ನು ಅಪೌರುಷೇಯ, ಹಿಂದಿನಿಂದಲೂ ಅಂದರೆ ಮಾನವನ ಜನ್ಮಕ್ಕೂ ಮೊದಲಿನಿಂದಲೂ ಅವುಗಳಿದ್ದವು, ಮಾನವನ ಅಳಿವಿನ ನಂತರವೂ ಅವು ಇರುತ್ತವೆ ಎಂದು ಸಾರುತ್ತದೆ. ಇದನ್ನು ಪ್ರಶ್ನಿಸುತ್ತಾ ಕೆಲವರು, ಅದು ಹೇಗೆ ಮನುಷ್ಯ ಹುಟ್ಟುವುದಕ್ಕೂ ಮೊದಲು ವೇದಗಳಿರಲು ಸಾಧ್ಯ, ಏನು ತಾನೇ ತಾನಾಗಿ ಶೂನ್ಯದಿಂದ ಉಧ್ಭವಿಸಿದವೊ? ಎಂದೆಲ್ಲ ತಮ್ಮ ಅಭಿಪ್ರಾಯ ಮಂಡಿಸಿ, ಭಾರತೀಯ ತತ್ವಗಳೆಲ್ಲ ಮಿಥ್ಯೆ ಎಂದು ಏಕಪಕ್ಷೀಯವಾಗಿ ತೀರ್ಮಾನಿಸಿ ಬಿಡುತ್ತಾರೆ. ಇನ್ನು ಈ ವೈದಿಕ ವಿದ್ಯೆಯನ್ನು ಮುಂಚಿನಿಂದಲೂ ಕಾಪಿಟ್ಟುಕೊಂಡು, ಅಕ್ಷರಶಃ ಅದನ್ನು ಅಭ್ಯಸಿಸಿರುವ ಜನಾಂಗ, ಅರ್ಥೈಸಿಕೊಳ್ಳುವ ಗೋಜಿಗೆ ಹೋಗದೇ, ಇದೊಂದು ದೈವಿಕ ವಾಣಿ ಎಂದು ಪೂಜಿಸುತ್ತಾ, ಒಂದರ್ಥದಲ್ಲಿ ಮೂಲೆಗುಂಪು ಮಾಡಿದೆ. ಹೆಣ್ಣುಮಕ್ಕಳಿಗೆ, ಶೂದ್ರರಿಗೆ ವೇದಾಧ್ಯಯನವಿಲ್ಲ ಎಂಬ ಮೂಢ ನಂಬಿಕೆ ಇಂದಿಗೂ ನಮ್ಮ ಸಮಾಜದಲ್ಲಿದೆ. ಆಹ್! ವಿಷಯಾಂತರವಾಯಿತು, ವೇದಗಳ ಪ್ರಸ್ತುತತೆಯ ಬಗ್ಗೆ ಹೇಳುತ್ತಿದ್ದೆ.

ಮೂಲ ತಪ್ಪಾಗಿರುವುದು, ವೇದ ಎಂಬ ಶಬ್ಧವನ್ನು ಎಲ್ಲರೂ ಅರ್ಥೈಸಿರುವ ರೀತಿಯಲ್ಲಿ. ವೇದ ಎಂಬುದು ಯಾವುದೋ ಒಂದು ಗ್ರಂಥದ ಹೆಸರಲ್ಲ. ವೇದ ಎಂದರೆ ಜ್ಞಾನ, ತಿಳುವಳಿಕೆ ಎಂದರ್ಥ. ಜ್ಞಾನದ ಅಭಿವ್ಯಕ್ತಿ ಯಾವುದೇ ರೀತಿಯಿಂದ ಆಗಬಹುದು. ನಮ್ಮ ಪೂರ್ವಜರು ಸಾಧನೆಯಿಂದ ಈ ಜ್ಞಾನದ ಅತ್ಯುತ್ತಮ ಸ್ತರವನ್ನು ತಲುಪಿದ್ದರು. ತಾವು ಕಂಡುಕೊಂಡಿದ್ದನ್ನು ಅವರು ತಾವು ಬಳಸುತ್ತಿದ್ದ ಸಂಸ್ಕೃತ ಭಾಷೆಯ ಮೂಲಕ ಜಗತ್ತಿಗೆ ತಿಳಿಸಿದರು. ಕೆಲವನ್ನು ಗದ್ಯ ರೂಪದಲ್ಲಿ ಮತ್ತು ಕೆಲವನ್ನು ಛಂದೋಬದ್ಧವಾಗಿ ಹಿಡಿದಿಟ್ಟರು. ಹೀಗೆ ಜ್ಞಾನ ಹೊರಸೂಸಿದ ರೂಪಕ್ಕನುಗುಣವಾಗಿ ಅವಕ್ಕೆ ಸಂಹಿತೆ, ಬ್ರಾಹ್ಮಣಕ, ಆರಣ್ಯಕ, ಉಪನಿಷತ್ತುಗಳೆಂಬ ಹೆಸರು ಕೊಟ್ಟರು. ಇದರರ್ಥವಿಷ್ಟೇ, ನಾವಿಂದು ಪವಿತ್ರ ಎಂದು ಪೂಜಿಸುತ್ತಾ ಬಂದಿರುವ ಸಾಹಿತ್ಯ ನಮ್ಮ ಪೂರ್ವಜರ ದರ್ಶನವಷ್ಟೇ...

ಇದರಲ್ಲಿ ಸುಳ್ಳುಗಳು, ಮಿಥ್ಯಾ ನಂಬಿಕೆಗಳು ಇರಬಹುದು. ಆದರೆ ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎನ್ನುವುದು ತಪ್ಪು. ಬೆಳೆ ಅಂದಮೇಲೆ  ಜೊಳ್ಳೂ ಇರುತ್ತದೆ, ಗಟ್ಟಿ ಕಾಳೂ ಇರುತ್ತದೆ, ಬೇರೆ ಮಾಡಿ ಪಡೆಯುವ ತಾಳ್ಮೆ, ಜಾಣ್ಮೆ ನಮ್ಮಲ್ಲಿರಬೇಕಷ್ಟೇ.