Saturday 22 December 2018

ಕಾಡುವ ಕಶೀರ...

ಅಬ್ಬಾ! ಇದು ಆ ಪುಸ್ತಕವನ್ನೋದಿದ ನಂತರ ಬರುತ್ತಿರುವ ಎಷ್ಟನೇ ಉದ್ಗಾರವೋ, ಎಷ್ಟನೇ ನಿಟ್ಟುಸಿರೊ ಕಾಣೆ. ಇಡೀ ದೇಶವನ್ನೇ ದಹಿಸುತ್ತಿರುವ ಜ್ವಲಂತ ಸಮಸ್ಯೆಯೊಂದರ ಕುರಿತು ಹೀಗೂ ಬರೆಯಬಹುದೇ ಎಂಬ ಸಾಧ್ಯತೆಯನ್ನು ಅರಿಯಬೇಕಾದರೆ ಈ ಪುಸ್ತಕವನ್ನೊದಲೇ  ಬೇಕು.  ಸಾಮಾನ್ಯ ಭಾರತೀಯರಾದ ನಾವು ಕಾಶ್ಮೀರ ಭಾರತದ ಮುಕುಟ ಮಣಿ, ತಾಯಿ ಶಾರದೆ ಕಾಶ್ಮೀರ ಪುರವಾಸಿನಿ ಅಂತ ಮಕ್ಕಳಿಗೆ ಉರು ಹೊಡೆಸಿದ್ದಷ್ಟೇ ಲಾಭ, ಈಗಂತೂ ಮಕ್ಕಳಿಗೆ ಸಿ.ಬಿ. ಎಸ್ ಸಿ ಓದಿಸಬೇಕೋ ಅಥವಾ ಐ ಸಿ ಎಸ್ ಸಿ ಓದಿಸಬೇಕೋ ಎಂಬ ಜಿಜ್ಞಾಸೆಯಲ್ಲೇ ಭಾರತೀಯ ಮಾತಾ ಪಿತರ ಚಿಂತೆಯೆಲ್ಲಾ ಕಳೆದು ಹೋಗಿರುತ್ತೆ. ಇನ್ನು ಎಲ್ಲೋ ದೂರದಲ್ಲಿರುವ ಕಶ್ಮೀರದ ಜನ ಅನುಭವಿಸುತ್ತಿರುವ ನೋವು ಯಾತನೆಯ ಕಥೆ ಅರಿತು ನಮಗೇನಾಗಬೇಕಾಗಿದೆ ಎಂಬ ಉದಾಸೀನ ನಮ್ಮಲ್ಲಿ. ಇಂದು ಅವರಿಗೆ ಒದಗಿರುವ ಸ್ಥಿತಿ, ನಮ್ಮ ಆಲಸ್ಯ ಹೀಗೆ ಇದ್ದರೆ ಕೆಲವೇ ದಿನಗಳಲ್ಲಿ ನಮಗೂ ಆವರಿಸಿಕೊಳ್ಳುತ್ತದೆಂಬ ಸಣ್ಣ ತಿಳುವಳಿಕೆ, ನಮ್ಮ ಮಕ್ಕಳಿಗೂ ದೇಶದ ಆಗು ಹೋಗುಗಳ ಕುರಿತು ಅರಿವು ಮೂಡಿಸಬೇಕೆಂಬ ಎಚ್ಚರ ನಮ್ಮಲ್ಲಿ ಮೂಡಲು ಇನ್ನೂ ಎಷ್ಟು ಕಾಲ ಸವೆಯಬೇಕೋ ?

ಇಂತಹ ಎಚ್ಚರಿಕೆಯ ಕರೆಘಂಟೆಯನ್ನು ಸಮರ್ಥವಾಗಿಯೇ ಬಾರಿಸುತ್ತಿದೆ ಈ ಕಾದಂಬರಿ. ಶಂಕರಾಚಾರ್ಯರಿಂದ ಪ್ರಾರಂಭವಾಗಿ, ಮುಫ್ತಿ ಲತೀಫರೊಂದಿಗೆ ಮುಗಿಯುವ ಕಶೀರದ ಇಂಚಿಂಚೂ ಕಶ್ಮೀರದ ನೋವನ್ನು, ಅದರ ಒಡಲಾಳದ ಬೇಗುದಿಯನ್ನು ಕನ್ನಡಿಯಂತೆ ಹಿಡಿದು ತೋರಿಸುತ್ತದೆ. ಕಾಲ್ಪನಿಕ ಪಾತ್ರಗಳ ಕಾದಂಬರಿ ರೂಪದಲ್ಲಿದ್ದರೂ ಮಂಡಿಸಲಾಗಿರುವ ವಿಷಯಗಳೆಲ್ಲ ಅಕ್ಷರಶಃ ವಾಸ್ತವ. ಒಬ್ಬ ಭಾರತೀಯನಾಗಿ ಈ ಕಾದಂಬರಿಯನ್ನೋದಿದರೆ ನಾವೇಕೆ ಹೀಗೇ ನಿರ್ವೀರ್ಯರಂತೆ ನಡೆದುಕೊಳ್ಳುತ್ತಿದ್ದೇವೆ ಎಂಬ ಭಾವ ಆವರಿಸಿ, ಮನಸ್ಸೆಲ್ಲ ತಲ್ಲಣಗೊಳ್ಳುತ್ತದೆ. ಕಾದಂಬರಿ ಎಷ್ಟು ಪರಿಣಾಮಕಾರಿಯಾಗಿದೆಯೆಂದರೆ ಓದಿ ಮುಗಿಸಿದ ಮೇಲೆ , ವೈಯಕ್ತಿಕವಾಗಿ ನನಗೆ ದೇಶಕ್ಕೆ ಸ್ವಾತಂತ್ರ್ಯ ಬಂದಿರುವುದೇ ಸುಳ್ಳೇನೋ ಈಗಲೂ ನಾವೆಲ್ಲಾ ಭಯದ ಕರಿ ನೆರಳಲ್ಲೇ ಜೀವಿಸುತ್ತಿದ್ದೇವೇನೋ, ಇಂದು ಕಾಶ್ಮೀರಕ್ಕೆ ಒದಗಿರುವ ಸ್ಥಿತಿ ಇನ್ನು ಕೆಲವೇ ದಿನಗಳಲ್ಲಿ ನಮ್ಮ ರಾಜ್ಯಗಳಿಗೂ ವಿಸ್ತರಿಸಿ, ನಾವೆಲ್ಲಾ ಚದುರಿ ಬದುಕೋಕೆ ಸ್ಥಳವಿಲ್ಲದೇ ಪರದಾಡಬೇಕಾದ ಸ್ಥಿತಿ ಬರುತ್ತದೇನೋ ಎಂಬಂತೆ ಭಾಸವಾಗುತ್ತಿದೆ. ನನ್ನ ಭೀತಿಗೆ ಪೂರಕವಾಗಿ ನಿತ್ಯವೂ ಪತ್ರಿಕೆಗಳಲ್ಲಿ ಓದುತ್ತಿರುವ ಶಬರಿಮಲೆಯ ಗಲಭೆ, ಮಲಬಾರ್ ನಲ್ಲಿ ಧರ್ಮಾಧಾರಿತ ಪ್ರತ್ಯೇಕ ರಾಜ್ಯದ ಬೇಡಿಕೆ, ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಅನಾಚಾರದ ಸುದ್ದಿಗಳು, ಅಸ್ಸಾಮ್ ಆಕ್ರಮಿಸಿಕೊಂಡಿರುವ ರೋಹಿಂಗ್ಯಾ, ತೆಲಂಗಾಣದ ಧರ್ಮಾಧಾರಿತ ಓಲೈಕೆ ಎಲ್ಲವೂ ತಲೆಯಲ್ಲಿ ಕಲಸುಮೇಲೋಗರವಾಗಿ, ನಮ್ಮ ಜನರಿಗೆ ಇನ್ನೂ ಯಾವ ಕಾಲಕ್ಕೆ ಬುದ್ಧಿ ಬರೋದು ಎಂಬ  ತೊಳಲಾಟ ಮೂಡುತ್ತಿದೆ. ಇದುವರೆಗೂ ನಾವು ಭಾರತ ದೇಶವಾಸಿಗಳು ಕಳೆದಿರುವ ನಲಿವಿನ ಸ್ವಾತಂತ್ರ್ಯದ ದಿನಗಳು, ನಮ್ಮ ಅಭಿವೃದ್ಧಿ, ಒಂದು ದೇಶವಾಗಿ ನಾವು ಸಂಘಟಿತರಾಗಿ ಪ್ರಪಂಚದೆದುರು ಬೆಳೆದು ನಿಂತಿರುವ ಪರಿ ಎಲ್ಲ ಎಲ್ಲವೂ ಮಿಥ್ಯ. ಕಶೀರದ ಜನ ಅನುಭವಿಸಿದ ನೋವು ಸಂಕಟ ನಮ್ಮನ್ನೂ ಹೊರತುಪಡಿಸಿಲ್ಲ, ಅಪಾಯದ ತೂಗುಕತ್ತಿ ನಮ್ಮೆಲ್ಲರ ತಲೆಯ ಮೇಲೂ ಇದೆ ಎಂಬುದು ಮಾತ್ರ ಶಾಶ್ವತ ಸತ್ಯ. 

ಕಶ್ಮೀರದ ಮೂಲ ನಿವಾಸಿಗಳಿಗೆ ನ್ಯಾಯ ಒದಗಿಸು ಭಗವಂತ. ಅವರಿಗೆ ಒದಗಿರುವ ಸ್ಥಿತಿ ನಮ್ಮ ದೇಶದ ಅಥವಾ ಪ್ರಪಂಚದ ಇನ್ನ್ಯಾವುದೇ ಭಾಗಕ್ಕಾಗಲೀ ಬಾರದಿರಲಿ. ಎಲ್ಲವನ್ನೂ ಎದುರಿಸುವ ತೇಜಸ್ಸನ್ನು ನಮ್ಮ ಜನತೆ ಪಡೆಯಲಿ. 

ಸಹನಾ ಮ್ಯಾಡಮ್, ನಿಮ್ಮ ಧೈರ್ಯ, ಶ್ರದ್ಧೆ, ಸತ್ಯನಿಷ್ಠೆಗೊಂದು ದೊಡ್ಡ ಸೆಲ್ಯೂಟ್ . ಅದರಲ್ಲೂ ಆರತಿ ಕೌಲ್ ಹಾಗೂ ಕೈಲಾಶ್ ಪಂಡಿತರ ಅಧ್ಯಾಯವಂತೂ ಮನಸ್ಸನ್ನು ಬಹಳ ಕಾಡುತ್ತಿದೆ. ನಿಮ್ಮ ನಿರೂಪಣೆಗೆ ನನ್ನದೊಂದು ವಂದನೆ. 




Friday 21 December 2018

ಯಾವುದು ಸತ್ಯ?

ಯಾವುದು ಸತ್ಯ?
ದಿನವೂ ನೋಡುವ ಅದೇ ನದಿ,
ಆದರೆ ನೆನ್ನೆಯಿದ್ದ ನೀರು ಇಂದಿಲ್ಲ,
ಇಂದಿರುವುದು ನಾಳೆ ಇರುವುದಿಲ್ಲ. 
ಹಾಗಾದರೆ ಹೆಸರಿಡುವುದು ನೀರಿನ ಹರಿವಿಗೋ?
ಅಥವಾ ಹರಿವ ಪಾತ್ರಕ್ಕೋ? ಯಾವುದು ನದಿ?
ಎಂದೋ ಯಾರೋ ಕಟ್ಟಿದ ಕಟ್ಟಡ,
ಕಟ್ಟಿದವನೊಬ್ಬ, ಕೆಡವಿ ಮತ್ತೆ ಕಟ್ಟಿದವನಿನ್ನೊಬ್ಬ,
ಅದು ನಮ್ಮದೆಂದು, ಇಲ್ಲ ನಮ್ಮದಾಗಿತ್ತೆಂದು
ಜನಾಂಗಗಳ ನಡುವೆ, ತಲೆಮಾರುಗಳವರೆಗೆ ಕಾದಾಟ!!
ಯಾರದಾದರೇನು, ನಮ್ಮದೆಂದು ಭಾವಿಸಿ ನಮಿಸಲಾಗದೇ?
ಹಾಗಾದರೆ ಪ್ರೀತಿ ಕಟ್ಟಡದ ಮೇಲೋ?ಅಥವಾ
ನಮ್ಮದನ್ನೇ ಸ್ಥಾಪಿಸಿದೆವೆಂಬ ಅಹಂಕಾರದ ಮೇಲೋ? ಯಾವುದು ಗುಡಿ?
ಪಾತ್ರಕ್ಕಷ್ಟೇ ಹೆಸರು. ಅಂತಃ ಸತ್ವಕ್ಕಲ್ಲ.
ಇಂದು ಶಾಂತಿ ಮಂತ್ರ ಸಾರಿ, ನಾಳೆ
ದೊಂಬಿ ಹಿಂಸೆ ಮಾಡಿದರೂ ಅವನ ಹೆಸರು ಒಂದೇ.
ಹೆಸರಿಡುವುದು ಅವನ ದೇಹಕ್ಕೆ, ಬದಲಾಗುತ್ತಿರುವ
ಅವನೊಳಗಿನ ಮನುಷ್ಯನಿಗಲ್ಲ.
ಕಾಣುವ ಪಾತ್ರ -ನದಿ!
ನೋಡಬಲ್ಲ ಕಟ್ಟಡ - ಗುಡಿ !
ಕಣ್ಣೆದುರಿರುವ ದೇಹವೇ - ಮನುಷ್ಯ!
ಹಾಗಿದ್ದರೆ ಯಾವುದು ಸತ್ಯ?