Monday, 1 April 2013

ಏಕೆ ಓದಬೇಕು?

ಯಾವುದೋ ಒಂದು ಲಹರಿ ಮೂಡಬೇಕು, ಆ ಮೂಡಿನಲ್ಲಿದ್ದಾಗ ಮನದ ಸಂತಸವನ್ನೆಲ್ಲ ಅಕ್ಷರ ರೂಪದಲ್ಲಿ ಮೂಡಿಸಬೇಕು, ಲಹರಿ ಚೂರು ಅತ್ತಿತ್ತ ವಾಲಿತು ಅಂದರೆ ಮುಗಿಯಿತು, ಮನದ ಕ್ಯಾನ್ವಾಸಿನಲ್ಲಿ ಮತ್ತೇನೂ ಮೂಡಲಾರದು, ಹೀಗೆಲ್ಲ ಅಂದುಕೊಂಡೇ ನನ್ನ ಬರವಣಿಗೆ ಕುಂಟುತ್ತಾ ಸಾಗುತ್ತಿದೆ. ನೆನ್ನೆ ಸುಮ್ಮನೆ ಒಂದು ಯೋಚನೆ ಬಂತು, ಅಷ್ಟಕ್ಕೂ ಈ ಲಹರಿ ಅಂದರೇನು? ಅದಕ್ಕೇಕೆ ಕಾಯುತ್ತಾ ಕುಳಿತಿರುತ್ತೇನೆ ನಾನು? ಬರೆಯುವ ಹಂಬಲವಿರುವವರೆಲ್ಲರೂ ನನ್ನ ಹಾಗೆಯೇ ಕಾಯುತ್ತಾರ? ಅಥವಾ ಸುಮ್ಮನೆ ಅಕ್ಷರಗಳ ಗೊಂಚಲು ಪೋಣಿಸುತ್ತಾರ? ಎದುರಾಗುವ ಪ್ರತಿ ಸಂದರ್ಭವನ್ನೂ ಅನುಭವಿಸುವ, ಅದರಲ್ಲಿ ಸಂತಸವನ್ನು ಕಾಣುವ ಕಲೆ ಸಿದ್ಧಿಸಿದರೆ ಪ್ರತಿಕ್ಷಣವೂ ಒಳ್ಳೆ ಜೀವನಪಾಠವೇ ತಾನೇ? ಹಾಗಿದ್ದರೆ ಎಲ್ಲವನ್ನೂ ಅಕ್ಷರಗಳಲ್ಲಿ ಮೂಡಿಸಲು ಏಕೆ ಸಾಧ್ಯವಾಗುವುದಿಲ್ಲ? ಅಥವಾ ಸಾಧ್ಯವಿದೆಯೋ?

ಪ್ರತಿಯೊಂದು ಘಟನೆಗೂ ಎರಡು ಆಯಾಮಗಳಿರುತ್ತವೆ, ಇಬ್ಬರು ವ್ಯಕ್ತಿಗಳಿಗೆ ಒಂದೇ ಘಟನೆ ಬೇರೆ ಬೇರೆ ತೆರನಾಗಿ ಕಾಣಬಹುದು, ನಮ್ಮ ದೃಷ್ಟಿಕೋನವನ್ನು ತರ್ಕದ ಸಹಾಯದಿಂದ ಜಾಲಿಸುತ್ತಾ ಅಕ್ಷರಗಳಲ್ಲಿ ಹರವಿಡುತ್ತಾ ಹೋದರೆ ಅದನ್ನೇ ತಾನೆ ಸಾಹಿತ್ಯ ಎನ್ನುವುದು? ಕೆಲವರು ತಮ್ಮ ಅನುಭವಕ್ಕೆ, ಮನದ ಭಾವಕ್ಕೆ ಪ್ರಾಸದ ರೂಪ ನೀಡಿ ಪದ್ಯ ಬರೆಯುತ್ತಾರೆ, ಕೆಲವರು ಗಂಭೀರವಾದ ಚಿಂತನೆಗಳನ್ನು ಅಷ್ಟೇ ಗಂಭೀರವಾದ ಶೈಲಿಯಲ್ಲಿ  ವಾಕ್ಯರೂಪೇನ ಹರವಿಡುತ್ತಾರೆ. ಏನೇ ಆದರೂ ಎಲ್ಲದರ ಕೊನೆಯಲ್ಲಿ ಸಿಗುವುದು ಒಂದೇ, ಅಪಾರವಾದ ಜೀವನಾನುಭವ. ಹಾಗಿದ್ದರೆ ಮತ್ತೊಂದು ಪ್ರಶ್ನೆ ಮೂಡುತ್ತದೆ, ಸಾಹಿತ್ಯ  ರಚನೆಗೆ ಸ್ವಾನುಭವವೇ ಆಗಬೇಕೋ? ಅದಿಲ್ಲದಿದ್ದರೆ ಕಂಡ, ಕೇಳಿದ ಅನುಭವಗಳನ್ನು ನಾವು ಬರೆದರೂ ಆದೀತು ಎನ್ನುವುದಾದರೆ, ಅದು ನಮ್ಮ ಸ್ವಂತ ಎನಿಸಿಕೊಳ್ಳುವುದು ಹೇಗೆ?

ಹೀಗೆ ನನ್ನ ತರ್ಕ ತಲೆಬುಡವಿಲ್ಲದೆ ಎಲ್ಲಿಂದೆಲ್ಲಿಗೋ ಸಾಗುತ್ತಿತ್ತು. ಆದರೆ ಈ ಯೋಚನೆ ಮೂಡಲು ಕಾರಣವಾದ ಘಟನೆ ನಾನು ಮತ್ತೆ ಮತ್ತೆ ಯೋಚಿಸುವಂತೆ ಮಾಡುತ್ತಿತ್ತು. ಈಗ್ಗೆ ಸರಿಸುಮಾರು ತಿಂಗಳ ಕೆಳಗೆ ನಾನು ನನ್ನ ಗೆಳತಿ ಒಂದು ಪುಸ್ತಕದ ಮಳಿಗೆಗೆ ಹೋಗಿದ್ದೆವು, ಅವರು ಯಾವುದೋ ಪುಸ್ತಕ ಹುಡುಕುತ್ತಿದ್ದರು, ನಾನು ಭೈರಪ್ಪನವರ section ನೋಡುತ್ತಿದ್ದೆ, ನನ್ನ ಹಿಂದೇ ಸುತ್ತುತ್ತಿದ್ದ ಆ ಅಂಗಡಿಯ sales girl ಒಂದೊಂದೇ ಕಾದಂಬರಿಯ ಹೆಸರು ಓದಿ "ಇದೆಲ್ಲ ತೊಗೊಂಡ್ ಓದ್ತೀರಾ?" ಎಂದು ಕೇಳಿದಳು. ಅವಳ ಮುಖಭಾವ ನೋಡಿದರೆ ಯಾವುದೋ ಅದ್ಭುತವನ್ನು ಕಾಣುತ್ತಿದ್ದಾಳೇನೋ  ಎನ್ನುವಂತಿತ್ತು. ನಾನು ನಗುತ್ತಾ "ಮತ್ಯಾಕೆ ತೊಗೊಳ್ಳಿ? ಆಗ್ಲೇ ಎಲ್ಲಾ ಓದಾಗಿದೆ" ಎಂದೆ. ತಕ್ಷಣ ಅವಳ ಪ್ರತಿಕ್ರಿಯೆ ನಗುತರಿಸುವಂತಿತ್ತು, ಅಂತೆಯೇ ಯೋಚಿಸುವಂತೆಯೂ... ಬಾಯಿಮೇಲೆ ಕೈಯಿಟ್ಟು "ಯಪ್ಪಾ! ಇಷ್ಟ್ ದಪ್ಪ ದಪ್ಪ ಬುಕ್ಸ್ ಹೆಂಗ್ ಓದ್ತೀರಾ? ನಮ್ಗೆ ನಮ್ syllabus ಓದಿ ಮುಗ್ಸಿದ್ರೆ ಸಾಕಪ್ಪಾ ಅನ್ನಿಸಿಬಿಡುತ್ತೆ" ಅಂದಳು. ಅವಳಿಗೆ ಯಾರೋ ಇದೇ ಪ್ರಶ್ನೆಗೆ "ಇದನ್ನೆಲ್ಲಾ ಓದೋಕ್ಕಾಗುತ್ತ? ಸುಮ್ಮನೆ ಮನೆಗ್ ತೊಗೊಂಡ್ ಹೋಗಿ ಇಟ್ಕೊತೀವಿ, ನೋಡಿದೋರು ನಮ್ಮನ್ನ ಒಂದು standard ಅಂದ್ಕೋತಾರೆ" ಅಂದಿದ್ನಂತೆ, ಆ ಪುಣ್ಯಾತ್ಮ ಯಾರೋ ತಿಳಿದಿಲ್ಲ, ಆದರೆ ಅದನ್ನು ಕೇಳಿದಾಗ ಮಾತ್ರ ಬೇಸರವಾಯಿತು. ಜನ ಹೀಗೂ ಇರುತ್ತಾರ ಎನಿಸಿದ್ದಷ್ಟೇ ಅಲ್ಲ, ಗಂಭೀರ ಸಾಹಿತ್ಯದ ಪ್ರಕಾರವನ್ನು ತರ್ಕಬದ್ಧವಾಗಿ ಅಧ್ಯಯನ ಮಾಡುವ ಜನ ಎಷ್ಟಿದ್ದಾರೆ ಎಂಬ ಯೋಚನೆಯೂ ಬಂದಿತು.

ಒಂದು ಅಧ್ಯಯನದ ಪ್ರಕಾರ ಅಂತರ್ಜಾಲದ ಪ್ರಭಾವ ಎಷ್ಟೇ ಇದ್ದರೂ ಪ್ರಕಟಿತ ಪುಸ್ತಕಗಳಿಗೆ ಭಾರತ ಅತ್ಯಂತ ದೊಡ್ಡ ಮಾರುಕಟ್ಟೆ. ಪ್ರಕಟಿತ ಪುಸ್ತಕಗಳಿಗೆ ಇಲ್ಲಿ ಬೇಡಿಕೆ ಬಹಳ. ಆದರೆ ಪುಸ್ತಕ ಕೊಂಡವರಲ್ಲಿ ಎಷ್ಟು ಜನ ಅದನ್ನು ಓದುತ್ತಾರೆ ಎಂದು ಸಮೀಕ್ಷೆ ಮಾಡಲು ಸಾಧ್ಯವಿದೆಯ? ಬಹುಶಃ ಆ ಸಮೀಕ್ಷೆಯಾದರೆ ಬಹಳಷ್ಟು ಪುಸ್ತಕಗಳು ಕೇವಲ ಪ್ರದರ್ಶನದ ವಸ್ತುವಾಗುತ್ತಿವೆಯೆಂಬ ಅಂಶ ಬೆಳಕಿಗೆ ಬಂದೀತೇನೋ? ಇರಲಿ, ನನ್ನ ಮೂಲ ಸಮಸ್ಯೆ ಈ ವಿಚಾರದಲ್ಲಲ್ಲ. ಆ ಹುಡುಗಿ ಕೇಳಿದ ಎರಡನೇ ಪ್ರಶ್ನೆ ನನ್ನನ್ನು ಬಹಳ ದಿನದಿಂದ ಕಾಡಿಸುತ್ತಿದೆ. ಒಮ್ಮೊಮ್ಮೆ ಒಂದೊಂದು ಉತ್ತರವನ್ನೀಯುತ್ತಾ...

ಅವಳು ಕೇಳಿದಳು "ಇದ್ನೆಲ್ಲ ಯಾಕ್ ಓದ್ತೀರಾ? ನಾವ್ ಓದಿದ್ರೆ marks ಸಿಗುತ್ತೆ, ಪಾಸ್ ಆಗ್ತೀವಿ, ಇದ್ನೆಲ್ಲ ಓದಿದ್ರೆ ಏನು use?"
ಪ್ರಶ್ನೆ ಬಂದ ತಕ್ಷಣ ಸುಮ್ಮನಾದೆ, ಹೌದಲ್ಲಾ, ಯಾಕ್ ಓದ್ಬೇಕು ಇದ್ನೆಲ್ಲಾ ಅನ್ನೋದನ್ನೇ ಯೋಚಿಸುತ್ತಿದ್ದೆ. ಅವಳಿಗೆ ಏನೋ ಉತ್ತರ ಹೇಳಿ ನುಣುಚಿಕೊಂಡು ಬಂದಿದ್ದೆ, ಆದರೆ ನೆನ್ನೆ ಯೋಚಿಸುತ್ತಿದ್ದಾಗ ಮೇಲಿನ ಯೋಚನೆ ಬಂದಿತು. ಎಷ್ಟು ಮಹನೀಯರ, ಪ್ರತಿಭಾವಂತರ ಜೀವನಾನುಭವ ಅಡಕವಾಗಿರುತ್ತದೆ ಸಾಹಿತ್ಯದಲ್ಲಿ, ಪ್ರತಿಯೊಂದೂ ಜೀವನದ ಬಗೆಗೆ ಹೊಸದೊಂದು ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು, ಜೀವನದ ಬೆಲೆ ಅರಿಯಲು ಸಹಾಯ ಮಾಡುತ್ತವೆ. ನಮ್ಮ ಸ್ವಂತ ಅನುಭವಕ್ಕೆ ಬಾರದಂತಹ ಘಟನೆ, ನಮ್ಮ ಆಲೋಚನೆಗೆ ನಿಲುಕದ್ದು, ಬೇರೆಯವರ ಅನುಭವಕ್ಕೆ ಬಂದಿರಬಹುದು, ಅವರ ಆಲೋಚನೆಗೆ ನಿಲುಕಿರಬಹುದು, ಪ್ರತಿಯೊಂದು ಅನುಭವವನ್ನೂ ತರ್ಕದ ಮೂಸೆಯಡಿ ತಿಕ್ಕಿ ಸಾಮೂಹಿಕವಾಗಿ ಹಂಚಿಕೊಳ್ಳುವ ಮಾಧ್ಯಮವೇ ಸಾಹಿತ್ಯ, ಅಲ್ಲವೇ? ಅದಕ್ಕಾಗಿಯೆ ತಾನೇ ಓದಬೇಕು? ಬಹುಶಃ ಈ ತರ್ಕ ಬೇರೆ ರೂಪದಲ್ಲಿ ಬೇರೆಯವರ ಮನದಲ್ಲಿ ಮೂಡಿ ಅದೂ ಈಗಾಗಲೇ ಸಾಹಿತ್ಯದ ರೂಪು ಪಡೆದಿದೆಯೇನೋ? ಏನೇ ಆಗಲಿ ಇದನ್ನೆಲ್ಲಾ ಆ ಹುಡುಗಿಗೆ ಹೇಳಬೇಕು ಅನಿಸುತ್ತಿದೆ. ಅದು ಆ ಹುಡುಗಿಯಿಂದ ಅವಳ ಪ್ರಶ್ನೆಗೆ ಮೊದಲು ಉತ್ತರ ಕೊಟ್ಟ ವ್ಯಕ್ತಿಗೂ ಮುಟ್ಟುವಂತಿದ್ದರೆ ಚೆನ್ನಾಗಿರುತ್ತಿತ್ತೇನೋ.


9 comments:

  1. ಕೆಲವೇ ದಿನಗಳ ಬದುಕಿನಲ್ಲಿ ವಿಶಾಲ ವಿಶ್ವದ ಅಪಾರ ಜೀವನಾನುಭವದ ದಿಗ್ದರ್ಶನಕ್ಕೆ ಸಾಹಿತ್ಯದ ಓದುವಿಕೆಗಿಂತಲೂ ಸೂಕ್ತ ಮಾರ್ಗವಿದೆಯೇ? ಆ ವಿಶ್ವರೂಪ ದರ್ಶನದ ಹರ್ಷೋನ್ಮಾದದಲ್ಲಿ ತೇಲಲು ಓದಲೇಬೇಕಲ್ಲವೆ? ಮನಸ್ಸಿಗೆ ಮುದ ನೀಡುವ ಭಾವವಿನಿಮಯಕ್ಕೆ, ಮೆದುಳನ್ನು ಚುರುಕುಗೊಳಿಸುವ ವಿಚಾರ ವಿನಿಮಯಕ್ಕೆ, ಬದುಕನ್ನು ರೂಪಿಸುವ ಆಲೋಚನಾ ಕ್ರಮದ ವಿಕಸನಕ್ಕೆ ಓದಲೇಬೇಕಲ್ಲವೆ? 'ಏಕೆ ಓದಬೇಕು' ಎಂಬ ಮೂಲಭೂತ ಪ್ರಶ್ನೆ ಎತ್ತಿ ಯೋಚನೆಯ ಬೀಜ ಬಿತ್ತಿದ್ದಕ್ಕೆ ವಂದನೆಗಳು.

    ReplyDelete
  2. Namste Vasu. This is sahyadri nagaraj from from Shivamogga. I am working in Vijaya karnataka daily, bangalore. U have a good writing tallent. Can talk to u....
    sahyadri nagaral@gmail.com
    (8722631300)

    ReplyDelete
  3. ಪುಸ್ತಕ ಓದುವ ಗೀಳು ಅಂಟಿಸಿಕೊಳ್ಳಬಾರದು. ಏಕೆ?(ನನ್ನ ಗ್ರಹಿಕೆಗಳು)

    ೧. ಚಲನಚಿತ್ರಗಳು ಬೋರೆನಿಸುತ್ತವೆ.
    ೨.ಗಾಸಿಪ್ಪುಗಳು ಇಷ್ಟವಾಗೋಲ್ಲ.
    ೩.ಕ್ರೀಡಾಪಟುಗಳ ಹೋರಾಟವನ್ನು ಓದಿ ಅನುಭವಿಸಿದ ಮೇಲೆ ಕ್ರೀಡೆಯ ಹುಚ್ಚು ಸಂಭ್ರಮವನ್ನು ಆನಂದಿಸಲಿಕ್ಕಾಗುವದಿಲ್ಲ.
    ೪.ತನ್ನಂತೆಯೇ ಚಿತ್ರಿತವಾದ ಯಾವುದೋ ಕಥೆಯ,ಕಾದಂಬರಿಯ ಪಾತ್ರ ನಿದ್ರಿಸಲು ಬಿಡುವದಿಲ್ಲ,
    ೫.ಎಂ.ಜಿ.ರಸ್ತೆಯಲ್ಲಿ, ಮೆಜೆಸ್ಟಿಕ್ ನ ಸಂದುಗೊಂದುಗಳಲ್ಲಿ ಕಾಣುವ ವೇಶ್ಯೆಯರ ಮುಖದಲ್ಲಿ ಭೀಕರ ಹಸಿವು ಕಾಣುತ್ತದೆ.
    ೬.ಕೆಲವೊಮ್ಮೆ ಅತಿಭಾವುಕತೆಯೂ, ಕೆಲವೊಮ್ಮೆ ಸಿನಿಕತೆಯೂ ಬೆಳೆಯುತ್ತದೆ.
    ೭.ಅಕ್ಕಪಕ್ಕದ ವ್ಯಕ್ತಿಗಳು ಯಾವುದೋ ಕಥೆಯ ಪಾತ್ರಧಾರಿಗಳಂತೆ ಕಾಣುತ್ತಾರೆ.
    ೮.ಕಥೆಯನ್ನೇ ಹೇಳದ ಟಿ.ವಿ.ಧಾರಾವಾಹಿಗಳು ವರ್ಜ್ಯವೆನಿಸುತ್ತವೆ.
    ೯.ದುಂದುವೆಚ್ಚದ ಎಲ್ಲಾ ಮಾರ್ಗಗಳು ಮುಚ್ಚಿ, ಪುಸ್ತಕದ ಅಂಗಡಿಯ ಮಾರ್ಗಗಳು ತೆರೆದುಕೊಳ್ಳುತ್ತವೆ.
    ೧೦.ಗುಂಪಿನಲ್ಲಿಯೂ ಏಕಾಂಗಿಯಾಗುತ್ತೀರಿ.
    ೧೧. ಜೀವನವೆಂಬ ದೊಂಬರಾಟದ ವೈವಿಧ್ಯತೆಗಳು ಕಣ್ಣಿಗೆ ಕಾಣುತ್ತವೆ.
    ೧೨.ಸಮಸ್ಯೆಗಳನ್ನು ಎದುರಿಸುವಲ್ಲಿ ಯಾವುದೋ ಒಂದು ಪಾತ್ರ ನೆರವಾಗಬಹುದು ಅಥವಾ ದ್ವಂದ್ವಕ್ಕೆ ಸಿಲುಕಿಸಬಹುದು.
    ೧೩.ದೈಹಿಕ ಅಲಂಕಾರದೆಡೆಗೆ ಒಂದು ಸಣ್ಣ ಉದಾಸೀನತೆ ಬೆಳೆಯಬಹುದು.
    ೧೪.ಒಂದು ಸುಧೀರ್ಘ ಯಾತ್ರೆಯ ಹಣ,ಸಮಯ,ಮತ್ತು ಬಳಲಿಕೆಯನ್ನು ಪುಸ್ತಕಗಳು ತಪ್ಪಿಸುತ್ತವೆ.
    ೧೫.ವಿದೇಶಗಳ ಪಿಜ್ಜಾ ಬರ್ಗರ್ ಆಚೆಗಿನ ಕೊಳಕು ಕಾಣುತ್ತದೆ.
    ೧೬.ಸರ್ಕಾರಿ ಯೋಜನೆಗಳ ಹಿಂದೆ ನಡೆಯುವ ಪಿತೂರಿಯ ಅರಿವಾಗುತ್ತದೆ.
    ೧೭.ಪೂಜಾರಿಯ ಮಂತ್ರಗಳಲ್ಲಿ ಸಾಹಿತ್ಯವನ್ನೂ, ಅರ್ಥವನ್ನೂ ಹುಡುಕಲೆತ್ನಿಸುತ್ತೀರಿ.
    ೧೮.ಜ್ಯೋತಿಷ್ಯ ಒಮ್ಮೊಮ್ಮೆ ವಿಙ್ಞಾನದಂತೆಯೂ, ಕೆಲವೊಮ್ಮೆ ದುಡ್ಡು ಮಾಡುವ ವಿಧಾನದಂತೆಯೂ ಕಾಣುತ್ತದೆ.
    ೧೯.ರಾಮ, ಶ್ರೀಕೃಷ್ಣ ಮುಂತಾದ ದೇವರುಗಳೆಲ್ಲ ಮನುಷ್ಯರಂತೆ ಕಾಣುತ್ತಾರೆ.
    ೨೦.ಹಣದೆಡೆಗಿನ ಹುಚ್ಚು ವ್ಯಾಮೋಹ ಕಡಿಮೆಯಾಗುತ್ತದೆ.
    ೨೧. ಸ್ವಲ್ಪ ಸೊಕ್ಕೂ ಬರಬಹುದು.
    ಇನ್ನೂ ಕೆಲವು ಅಂಶಗಳನ್ನು ಅವು ನನಗೆ ತೋಚಿದಾಗ ಗೀಚುತ್ತೇನೆ.

    ReplyDelete
  4. This comment has been removed by the author.

    ReplyDelete
  5. Preethiya Vasu Akka, nanna hesaru Alaka. nimma barahagalu thumbaane chennagive. haage bhaavageethegala sangrahavu adbhuthavaagide. nimmondige kelavondu geethegala haagu lekhakara bagge vivaravaagi maathanaadabekide. nimmanna hege samparkisabahudu. puttu.alaka@gmail.com idu nanna gmail id. nimma uttharada niriksheyondige....

    ReplyDelete
  6. This comment has been removed by the author.

    ReplyDelete
  7. ಇಂತಹವೇ ಹಲವು ಪ್ರಶ್ನೆಗಳು ನಾನು ಓದುವಾಗಲೂ ,ಬೆರೆಯಲು ಶುರುವಿಡುವ ಮೊದಲೂ ನನ್ನಲ್ಲೂ ಎದ್ದಿದ್ದವು .ನಾಲ್ಕು ಪಾತ್ರ ಮಾಡಿ ನೂರು ಭಾವ ತುಂಬಿ ಒಂದಷ್ಟು ಅನುವಭವ ಇನ್ನೊಂದಷ್ಟು ಕಲ್ಪನೆ ಹರಡಿ ಏನೂ ಒಂದು ಸಿದ್ದಾಂತದಂತ(ಯಾವ ಸಿದ್ಧಾಂತಕ್ಕೂ ಸಾರ್ವಕಾಲಿಕ ಜಯವಿಲ್ಲ , ಅದರದೇ ಚೌಕಟ್ಟು ,ಉದ್ದೇಶ ಇದ್ದೇ ಇದೆ , ಹೀಗಿದ್ದಾಗ ಒಂದು ಸಮಸ್ಯೆಗೆ ಉತ್ತರದಂತದ್ದನ್ನು ಹುಡುಕುವುದಷ್ಟೇ ಸಿದ್ಧಾಂತ .ಇದು ಚಿರಂತನವಲ್ಲ. ಚಿರ ನೂತನ ಪ್ರಕ್ರಿಯೆ ಅಷ್ಟೇ ) ಸಂಗತಿ ತುಂಬಿ ಬೀಗಿದರೆ ಅದೇ ಸಾಹಿತ್ಯವೇ ?? ಇಷ್ಟಕ್ಕೂ ಸಾಹಿತ್ಯ ಸೃಷ್ಟಿಗೆ ನಿರ್ದಿಷ್ಟ ಗುರಿಯಿರಬೇಕೆ ಎಂಬುದೇ ಪ್ರಮುಖ ಪ್ರಶ್ನೆ. ಹಕ್ಕಿ ಹಾಡಲು ಗುರಿಯೊಂದು ಇರಬೇಕೆ ಎಂಬ ಸರಳ ಉತ್ತರವೂ ಸರಿಯಾಗಬಹುದು. ಸಮಾಜದ ರೀತಿ ನೀತಿಗೆ ಮಾರ್ಗದರ್ಶಿಯಾಗುವುದರಿಂದ ಹಿಡಿದು ಒಂದು ಸಮಾಜದ ಸಮಷ್ಟಿ ಹಿಡಿದಿಡುವ,ನಿರ್ದೇಶಿಸುವ ಆಯಾಮವೇ/ಆಯುಧವೇ ಸಾಹಿತ್ಯ ಎಂಬುದೂ ಉತ್ತರವಾಗಬಹುದು.ಇಲ್ಲಿ ಒಂದು ಕಲೆಯಾದರೆ ಇನ್ನೊಂದು ಏನೋ ಮಾಡುಲು ಹೊರೆಟ ಕ್ರಿಯೆ.ನನ್ನ ಮಟ್ಟಿಗೆ ಇಷ್ಟೇ ಎಂದು ಹೇಳುವುದಕಿಂತ ,ಸರಿಯಾದ ಪ್ರಶ್ನೆಗಳ ಅಲೆಯೆಬ್ಬಿಸುವುದೇ ಈ ಕ್ರಿಯೆಯ ಗುರಿಯಾಗಬೇಕು. ಇನ್ನು ಕೆಲೆಯಾದ ಸಾಹಿತ್ಯ ಎಲ್ಲ ಅನುಭೂತಿಗಳ ತುದಿ ಮುಟ್ಟಿ ಹೀರಿ ಅಕ್ಷರಕ್ಕಿಳಿಸಿ ಓದುಗನಿಗೆ ಮುದನೀಡ ಬೇಕು. ಪ್ರೀತಿ ತುಂಬಿದ ಇಂತ ಪ್ರಯತ್ನ ಜೀವನ ಮಟ್ಟವನ್ನು ಎತ್ತರಕ್ಕೂ ತಂದು ಶಕ್ತಿ ತುಂಬುವುದಲ್ಲದೆ ಅರ್ಥಪೂರ್ಣವೂ ಮಾಡುತ್ತದೆ.

    ಸುಮ್ಮನೇ ಅನಿಸಿದ್ದನ್ನು ಗೀಚಿದ್ದೇನೆ. ಇದೂ ಸಾಹಿತ್ಯವಾಗಬಹುದೇ?
    --Ravikumar CS
    cs.ravikumar89@gmail.com

    ReplyDelete
  8. eke oodabeku nimma sambhashane artavattaagide, super.

    ReplyDelete