Wednesday 23 October 2013

ಅನ್ಯರೊರೆದುದನೆ

ಅನ್ಯರೊರೆದುದನೆ ಬರೆದುದನೆ ನಾ ಬರೆಬರೆದು
ಬಿನ್ನಗಾಗಿದೆ ಮನವು ಬಗೆಯೊಳಗನೇ ತೆರೆದು
ನನ್ನ ನುಡಿಯನೆ ಬಣ್ಣ ಬಣ್ಣದಲಿ ಬಣ್ಣಿಸುವ
ಪನ್ನತಿಕೆ ಬರುವನಕ, ನನ್ನ ಬಾಳಿದು ನರಕ.

ಹೀಗೆನ್ನುತ್ತಾರೆ ಅಡಿಗರು. ತಮ್ಮ ಭಾವಸಂಗಮದ ಕವನವೊಂದರಲ್ಲಿ. ಹೆಚ್ಚೂ ಕಡಿಮೆ ಬರೆಯಲು ಕೂಡುವ ಎಲ್ಲ ಹೊಸಬರ ಮನಃಸ್ಥಿತಿಗೆ ಹಿಡಿದ ಕೈಗನ್ನಡಿಯಂತಿವೆ ಸಾಲುಗಳಿವು. ನನಗೂ ಅಷ್ಟೇ, ಬರೆಯಲು ಕೂತರೆ ಪದಗಳೇ ಹುಟ್ಟುವುದಿಲ್ಲ. ಹಾಗೆಂದು ಬರೆಯದೆ ಸುಮ್ಮನೆ ಇರಲೂ ಆಗುವುದಿಲ್ಲ, ಏನೋ ಒಂದು ವಿಚಿತ್ರ ಚಡಪಡಿಕೆ. ಹಾಗೂ ಹೀಗೂ ಮಾಡಿ ಏನೇ ಬರೆದರೂ, ಬರೆದಿದ್ದೆಲ್ಲ ಬಾಲಿಶ ಎನಿಸಿ ಮತ್ತೊಬ್ಬರಿಗೆ ತೋರಿಸಲು ಹೋಗುವುದಿಲ್ಲ, ಬರೆದ ಅವೆಷ್ಟೋ ಸಾಲುಗಳು ಹೀಗೆ ನನ್ನೊಳಗೇ ಹುದುಗಿ ಹೋಗಿವೆ. ಇದರ ಮಧ್ಯೆ ಓದು ಬರಹಕ್ಕೆ ಬಿಡುವು ಕೊಡದ ವೈಯಕ್ತಿಕ ಕೆಲಸಗಳು, ಎಲ್ಲ ಸೇರಿ ನನ್ನ ಸಾಹಿತ್ಯ ಕೃಷಿ ಕುಂಟುತ್ತಾ ಸಾಗುತ್ತಿದೆ.


ಏನೇ ಬರೆದರೂ ಈ ರೀತಿ ಬರೆಯುವವರು ಸಾವಿರ ಮಂದಿ, ಎಲ್ಲಿ ನಾನು ಅವರನ್ನು ಅನುಕರಿಸಿದಂತಾಗುವುದೋ? ಎನಿಸಿ ನಿಲ್ಲಿಸಿದ್ದೇನೆ. ಅನುಕರಣೆಗಿಂತ ಅನುಸರಣೆ ಉತ್ತಮ ಎಂಬ ಅರಿವೇನೋ ಇದೆ. ಆದರೆ ಎರಡರ ಮಧ್ಯೆ ಇರುವ ಕೂದಲೆಳೆಯ ಅಂತರವನ್ನು ಅರ್ಥೈಸಿ, ಅದರಂತೆ ನಡೆಯುವುದೇ ಕಷ್ಟ. ಎಷ್ಟೋ ಸಲ ಕುಳಿತು ಬರೆದಾಗ, ಈ ಶೈಲಿಯ ಲೇಖನ ಯಾವುದೋ ಬ್ಲಾಗ್ ನಲ್ಲಿ ಓದಿದಂತಿದೆಯಲ್ಲ? ಆ ಶೈಲಿಯನ್ನೇ ನಾನು ನಕಲು ಮಾಡುತ್ತಿದ್ದೇನೆ, ಕೊನೆಪಕ್ಷ ನನ್ನದೇ ಆದ ಶೈಲಿಯೊಂದನ್ನಾದರೂ ರೂಪಿಸಿಕೊಳ್ಳಬೇಕು ಎನಿಸುತ್ತಿರುತ್ತದೆ. ಈ ಗೊಂದಲಕ್ಕೆಲ್ಲ ಕೊನೆಯೆಂದೋ?? ಇನ್ನೂ ಕಂಡಿಲ್ಲ.

ಯಾವುದೇ ನಿರ್ದಿಷ್ಟ ಉದ್ದೇಶ, ಸಿದ್ಧಾಂತ, ಗುರಿ ಇಟ್ಟುಕೊಂಡು ಬರೆಯುವವಳಲ್ಲ ನಾನು. ಮನಸ್ಸಿಗೆ ಬಂದಾಗ ಮೂಡಿದ್ದನ್ನೆಲ್ಲ ಗೀಚುವವಳು. ನನ್ನ ಗೊಂದಲ ತೀರಿ ಮನ ತಿಳಿಯಾಗುವವರೆಗೂ ಬಹುಶಃ ಇದೇ ಧಾಟಿಯ ಬರಹಗಳೇ ನನ್ನ ಬ್ಲಾಗ್ ಗೋಡೆ ತುಂಬಾ ಅಂಟಿಕೊಳ್ಳುತ್ತವೇನೋ??

1 comment:

  1. ಬಹುಶಃ ನಾನು ನಿಮ್ಮ 'ಏಕೆ ಓದಬೇಕು' ಎಂಬ ಬರಹಕ್ಕೆ ಹೇಳಿದ ಮಾತು ಇಲ್ಲಿಗೇ ಹೆಚ್ಚು ಅನ್ವಯಿಸುತ್ತದೆ. ಒಟ್ಟಾರೆ ಪ್ರಶ್ನೆ ಸಾಹಿತ್ಯದ ಗುರಿ, ಅನುಭೂತಿ, ಮತ್ತು ಉದ್ದೇಶದ ಬಗ್ಗೆಯೇ. ಈ ಪ್ರಶ್ನೆ ಪ್ರತೀ ಸಾಹಿತಿಯಲ್ಲಿಯೂ ಸಹಿತ್ಯಾಭಿಮಾನಿಯಲ್ಲಿಯೂ ಆಗಾಗ ಎಳುತ್ತಲೇ ಇರಬೇಕು ಮತ್ತು ಹಾಗೆ ಆಗುತ್ತದೆ ಕೂಡ.ಸಾಹಿತ್ಯವೂ ಸೇರಿದಂತೆ ಎಲ್ಲಾ ಕಲೆಗಳೂ ಹೊಸ ಹೊಸ ದಾರಿಗೆ ಇರುವ ಬಾಗಿಲುಗಳು ಅಷ್ಟೆ. ಆ ದಾರಿ ಸಾಗುವುದೆಲ್ಲಿಗೆ? ದಾರಿಯಲ್ಲಿ ಸಿಗುವ ಅನುಭೂತಿ ಎಂತದ್ದು? ನಾನೇಕೆ ಈ ದಾರಿ ಅಥವಾ ಈ ದಾರಿಯನ್ನೇ ಹಿಡಿಯಬೇಕು? ಈ ದಾರಿ ಆ ದಾರಿಯಂತೆಯೇ?ಅಲ್ಲಿಗೇ ಸಾಗುತ್ತದೆಯೇ? ಇದೇ ದಾರಿಯಲ್ಲಿ ಸಾಗಿದವರೆಷ್ಟು ಮಂದಿ ? ಹೀಗೇ ಹುಟ್ಟುತ್ತಾ ಹೋಗುವ ಹಲವು ಪ್ರಶ್ನೆಗಳಿಗೆ ಉತ್ತರ ಸಿಗುವುದೂ ಆ ದಾರಿಯಿಂದಲೇ.. ಉತ್ತರ ಹೊಳೆದಷ್ಟೂ ಇನ್ನಷ್ಟು ಪ್ರಶ್ನೆಗಳೇಳುತ್ತವೆ. ಹೀಗೆ ಸಾಗುತ್ತಲೇ ಇರಬೇಕು ಪಯಣ. ಪಯಣವನ್ನು ಅನುಭವಿಸುತ್ತಲೇ ಸಾಗಬೇಕು ಪಯಣದ ಇನ್ನಷ್ಟು ಅನುಭೂತಿ ಪಡೆಯಲು.ಇನ್ನಷ್ಟು ಮಂದಿಯನ್ನು ಕಟ್ಟಿಕೊಂಡು ಅಥವಾ ಅಲ್ಲೇ ಸಿಗುವ ಇನ್ನಷ್ಟು ಮಂದಿಯನ್ನು ಕೂಡಿಕೊಂಡು ಸಮೂಹ ಸಮಷ್ಟಿಯ ಉತ್ತರ ಹೊಳೆದರೂ ಹೊಳೆಯಬಹುದು. ಅದು ಅವರವರ ಪ್ರಶ್ನೆಗಳಿಗೆ ಅವರವರ ಜೀವನಕ್ಕೆ ಅರ್ಥವನ್ನೂ ಉತ್ತರವನ್ನೂ ಕೊಡಬಹುದು. ಒಟ್ಟಿನಲ್ಲಿ ಯಾವುದಾದರೂ ದಾರಿಹಿ ಡಿಯಬೇಕಷ್ಟೇ...
    --Ravikumar CS
    cs.ravikumar89@gmail.com

    ReplyDelete