ಕೆಲವೊಮ್ಮೆ ನಮ್ಮ ಮನಸ್ಸೇಕೆ ಹೀಗೆ ರಚ್ಚೆ ಹಿಡಿದು ಕುಳಿತು ಬಿಡುತ್ತದೆ? ಏನು ಮಾಡಲೂ ಒಲ್ಲೆನೆಂದು ಹಠ ಮಾಡುತ್ತಾ, ಸುಮ್ಮನೇ ಒಂದು ಮೂಲೆಯಲ್ಲಿ ಯೋಚಿಸುತ್ತಾ ಕೂಡುವ ಭಾವವೇಕೆ ಮನವನ್ನಾವರಿಸಿಬಿಡುತ್ತದೆ? ಏನಾದರೂ ಸಮಸ್ಯೆಯೋ? ಇಲ್ಲ. ಆರ್ಥಿಕ ತೊಂದರೆ, ಕಷ್ಟ, ಪ್ರೇಮವೈಫಲ್ಯ, ಓದಿನಲ್ಲಿ ನಪಾಸು, ಕಛೇರಿಯಲ್ಲಿ ಕಿರುಕುಳ, ಉಹ್ಞುಂ, ಯಾವುದೂ ಇಲ್ಲ. ಹುಟ್ಟಾಸೋಮಾರಿಯೋ? ಅದಂತೂ ಖಂಡಿತಾ ಅಲ್ಲ. ಕೆಲಸಕ್ಕೆ ಹೋಗುವಾಗ, ತನ್ನ ಕಾರ್ಯದಕ್ಷತೆಗೆ ಹೆಸರಾಗಿ, ಅದಕ್ಕಾಗೇ ಗುರುತಿಸಲ್ಪಟ್ಟು ಪ್ರಶಸ್ತಿಯನ್ನೂ ಪಡೆದಿದ್ದ ಹುಡುಗಿ. ಕೆಲಸ ಶುರುವಿಟ್ಟುಕೊಂಡರೆ ಊಟ, ತಿಂಡಿಯ ಪರಿವೆಯಿಲ್ಲದಂತೆ ಕಛೇರಿಯಲ್ಲಿದ್ದ ಒಂಭತ್ತು ತಾಸೂ ಕೆಲಸದ ಕಡೆಗೇ ಗಮನವಿಟ್ಟು ಕೂಡುತ್ತಿದ್ದವಳು, ಈಗ ಅನಿವಾರ್ಯ ಕಾರಣಗಳಿಂದ ಕೆಲಸ ಬಿಟ್ಟು ಮನೆಯಲ್ಲಿ ಕೂತರೆ, ಮನೆಕೆಲಸ ಮಾಡುವುದಕ್ಕೂ ಮನಸು ಬಾರದು.
ಅಮ್ಮನೇನೋ ತುಟಿಪಿಟಕ್ ಎನ್ನದೆ ತಮ್ಮ ಕೆಲಸವಿದೆಂದು ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಾರೆ. ಆದರೆ ಅವರು ಕೆಲಸ ಮಾಡುವುದನ್ನೂ ನಮ್ಮ ಹುಡುಗಿಗೆ ನೋಡಲಾಗದು. ಏನೋ ಕಸಿವಿಸಿ, ಸಂಕಟ ಒಳಗಿನಿಂದ ಒದ್ದುಕೊಂಡು ಬರುತ್ತದೆ. ತಾಯಿಯ ಮೇಲೆ ಎಲ್ಲಾ ಭಾರವನ್ನೂ ಹಾಕಿ ತಾನು ಆರಾಮಾಗಿ ಕುಳಿತಿರುವೆನೆಂಬ ಯೋಚನೆ ಮನಸ್ಸನ್ನು ಮುತ್ತಿ ನೋಯಿಸುತ್ತದೆ. ಆದರೆ, ಕೆಲಸ ಮಾಡಲು ಮಾತ್ರ ಏಳಲಾರಳು. ಕೈ ಕಾಲುಗಳು ಕುಳಿತಿರುವ ಜಾಗಕ್ಕೆ ಅಂಟಿ ಹೋಗಿವೆಯೇನೋ ಎಂಬಂತೆ, ಕುಳಿತಲ್ಲಿಂದ ಎದ್ದು ಹೋಗುವ ಮನಸ್ಸಾಗುವುದಿಲ್ಲ.
ಯಾವುದೋ ಒಂದು ಕೆಲಸಕ್ಕೆ ಬಾರದ ಹಿಂದಿ ಸೀರಿಯಲ್ಲು. ಅದನ್ನು ನೋಡಿ ಅಂತರ್ಜಾಲದಲ್ಲಿ ಅದರ ಕೊಂಡಿಯನ್ನು ಹುಡುಕುತ್ತಾ ಕೂಡುತ್ತಾಳೆ. ಅದರ ಹುಚ್ಚರಾಗಿರುವ ಕೆಲ ಜನ, ಅದರ ಬಗೆಗೆ ಬರೆಯುವ ಮುನ್ನೋಟಗಳನ್ನು, ಅದರ ಬಗೆಗೆ ಬರುವ ಸುದ್ದಿಗಳನ್ನು ನೋಡುತ್ತಾ ಕಾಲಯಾಪನೆ ಮಾಡುತ್ತಾಳೆ. ಅದನ್ನು ದಿನಕ್ಕೆ ನಾಲ್ಕು ಬಾರಿ ಮೂರ್ಖರ ಪೆಟ್ಟಿಗೆಯಲ್ಲಿ ಹಾಕಿದರೂ ತಪ್ಪದೇ ನೋಡುತ್ತಾಳೆ. ಅದೇ ಜಗವೆಂಬ ಭ್ರಮೆಯಲ್ಲಿದ್ದಾಳೆನೋ ಎಂದನಿಸುತ್ತದೆ, ಒಮ್ಮೊಮ್ಮೆ. ಅದು ತನ್ನ ಸಮಯ ಹಾಳುಮಾಡುತ್ತಿದೆ ಎಂದು ಅವಳೇ ಹೇಳುತ್ತಾಳೆ, ಆದರೆ ಅದನ್ನು ಬಿಡಲಾರಳು. ಹಾಗಿದ್ದರೆ ಮುಂಚಿಂದಲೂ ಟಿ. ವಿ. ದಾಸಿಯೋ, ಸೀರಿಯಲ್ಲುಗಳ ಹಾವಳಿಗೆ ತುತ್ತಾದವಳೋ? ಅಲ್ಲ. ಮನಸ್ಸು ಬಂದರೆ ಅದನ್ನು ಚಾಲೂ ಮಾಡುವ, ಇಲ್ಲದಿದ್ದರೆ ಇಲ್ಲ ಎಂಬಂತಿದ್ದಳು. ದಿನಕ್ಕೆ ಹದಿನೈದು ನಿಮಿಷ ಟಿ. ವಿ. ನೋಡಿದರೆ ಅದೇ ಹೆಚ್ಚು ಎನ್ನುವ ಸ್ವಭಾವ. ತಾನಾಯಿತು, ತನ್ನ ಕೆಲಸ, ಪುಸ್ತಕ, ಓದು ಇಷ್ಟೇ ಪ್ರಪಂಚವೆಂಬಂತಿದ್ದಳು. ಅವಳಲ್ಲಾದ ಬದಲಾವಣೆ ಸ್ವತಃ ಅವಳಿಗೂ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಟಿ. ವಿ. ನೋಡುವುದೇನೂ ಅಪರಾಧವಲ್ಲ ಬಿಡಿ. ಉಪಯುಕ್ತ ಕಾರ್ಯಕ್ರಮಗಳಾದರೆ ಸರಿ. ಆದರೆ ವರ್ಷಾನುಗಟ್ಟಲೆ ಸಾಗುವ ಈ ಧಾರಾವಾಹಿಗಳು ನುಂಗುವ ನಮ್ಮ ಸಮಯ?? ಅದರ ಬೆಲೆ ಕಟ್ಟಲಾದೀತೇ?
ಅವಳಿಗೆ ಇದೆಲ್ಲವೂ ಗೊತ್ತು. ನಿರಂತರ ಕಲಿಯುವ, ಕಲಿಸುವ ಮನಸ್ಸಿರುವ ಹುಡುಗಿ. ಆಕೆಗೆ ತನ್ನ ಸಮಯದ ಬೆಲೆಯೂ ಗೊತ್ತು. ಕಳೆದ ಕ್ಷಣಗಳು ಮರಳಿ ಬಾರವೆಂಬ ಅರಿವೂ ಇದೆ (ಹೇಳಿದೆನಲ್ಲ, ಅದನ್ನು ಅವಳೇ ಒಪ್ಪಿಕೊಳ್ಳುತ್ತಾಳೆಂದು). ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಬಹಳ ಆಳವಾಗಿ ಓದಬೇಕೆಂಬ ಆಸ್ಥೆಯೂ, ಇತರರಿಗೂ ಆ ಕ್ಷೇತ್ರದಲ್ಲಿ ಆಸಕ್ತಿ ಮೂಡಿಸಬೇಕೆಂಬ ಕಾಳಜಿಯೂ ಅವಳಲ್ಲಿ ಜಾಗ್ರತವಾಗಿವೆ. ಅದಕ್ಕೆ ಸಮಯ ಹೊಂದಿಸಲೆಂದೇ ಸಾಧಿಸಿದ್ದ ಕೆಲಸವನ್ನೂ ಬಿಟ್ಟಿದ್ದಾಳೆ. ಕಳೆದೊಂದಷ್ಟು ದಿನಗಳಲ್ಲಿ ತನ್ನ ಇಡೀ ಜೀವನವನ್ನು, ತನ್ನನ್ನು ಕಾಡುತ್ತಿರುವ ಆ ಧ್ಯೇಯಕ್ಕಾಗಿಯೇ ಮುಡಿಪಿಡಬೇಕೆಂಬ ನಿರ್ಧಾರವೂ ಆಗಿದೆ. ಅದಕ್ಕಾಗಿ ಕೆಲವರ ಕೈಯಲ್ಲಿ ಹುಚ್ಚಿಯೆಂದು ಬೈಸಿಕೊಂಡಿದ್ದೂ ಇದೆ. ಆದರೆ ಮನೆಯಲ್ಲಿ ಕೂತಾಗಿನಿಂದ.....
ರೆಪ್ಪೆಯಾಡಿಸುವಷ್ಟು ವೇಗದಲ್ಲಿ ದಿನಗಳು ಓಡುತ್ತಿವೆ. ಆದರೆ ಓದು??? ಒಂದಿಂಚೂ ಸಾಗಿಲ್ಲ. ಅತ್ತ ಓದಲು ಮನಸ್ಸಿದ್ದರೂ ಮನಸ್ಸು ಬರುತ್ತಿಲ್ಲ, ಇತ್ತ ಮನೆಕೆಲಸವನ್ನೂ ಮಾಡದ ಮೈಗಳ್ಳತನ ಆವರಿಸಿಕೊಳ್ಳುತ್ತಿದೆ. ಸಾಲದೆಂಬಂತೆ ಜತೆಗೆ ಮೂರ್ಖರ ಪೆಟ್ಟಿಗೆ!!! ತನ್ನ ನಡೆ ತಪ್ಪೆಂದು ತಿಳಿದಿದ್ದರೂ, ಏನು ಮಾಡಲೂ ತೋಚದೆ ಕುಳಿತಿರುವ ಅವಳಿಗೆ, ತಿದ್ದಿಕೊಳ್ಳಲು ಮಾರ್ಗ ತೋರಿಸುವ, ಅವಳ ಮನವನ್ನು ಅರ್ಥೈಸಿಕೊಂಡು, ಅವಳಿಗೆ ಕಿವಿಯಾಗಿ, ಅವಳ ಭಾವಕ್ಕೆ ಸ್ಪಂದಿಸುವ ಸ್ನೇಹಿತರೂ, ಹಿತೈಷಿಗಳೂ ಯಾರಿಲ್ಲ. ಸ್ನೇಹಿತರಿದ್ದರೂ, ಅವರಿಗೆ ಅವಳ ಮಾತನ್ನು ಆಲಿಸುವಷ್ಟು ತಾಳ್ಮೆಯಿಲ್ಲ.
ಕೆಲವೊಮ್ಮೆ ಮಾಯೆ ಯಾವುಯಾವುದೋ ರೂಪದಲ್ಲಿ ಬಂದು ಆವರಿಸಿಕೊಳ್ಳುತ್ತದೆ ಎಂದು ಕೇಳಿದ್ದೇನೆ. ಆದರೆ ಎಲ್ಲವೂ ತಿಳಿದಿದ್ದೂ ಅದರಿಂದ ಬಿಡಿಸಿಕೊಳ್ಳಲಾರದಷ್ಟು ನಮ್ಮ ಮನ ಅಸಹಾಯಕವಾಗುತ್ತದಲ್ಲ, ಏಕೆ ಹೀಗೆ???
ಈ ಅಸಹಾಯಕತೆಗೆ ಉತ್ತರ ಸಿಕ್ಕಿದ ದಿನ ದಯವಿಟ್ಟು ನಂಗೂ ಹೇಳಿ. Life is really strange. On a weekday, i go cycling, exercise, office, write poems, read books on the way but when it comes to weekend, i become too helpless.
ReplyDeleteHope i will get an answer as soon as yo get your answer.
ಹುಡುಕುವ ಪ್ರಯತ್ನ ಮಾಡುತ್ತಲೇ ಇದ್ದೇನೆ ಪುಷ್ಕರ್. ಉತ್ತರ ದೊರೆಯುವ ಲಕ್ಷಣಗಳು ಮಾತ್ರ ಗೋಚರಿಸುತ್ತಿಲ್ಲ.
DeleteIde bahalashtu janara talamala, yellavu gottiddu parihara hudukade hogtiveno ansatte!!
ReplyDelete