Wednesday, 30 October 2013

ಹಬ್ಬಗಳ ರಾಜ ದೀಪಾವಳಿ

ಹಬ್ಬಗಳ ರಾಜ ದೀಪಾವಳಿ ಬಂದಿತೆಂದರೆ ಎಲ್ಲೆಲ್ಲೂ ಸಂಭ್ರಮ ಸಡಗರದ ವಾತಾವರಣ ಮನೆ ಮಾಡಿರುತ್ತದೆ. ಮೂರು ದಿನ ಮನೆಮಂದಿಯೆಲ್ಲ ಸೇರಿ ಸಿಹಿ ಮಾಡಿ, ಹೊಸ ಬಟ್ಟೆ ತೊಟ್ಟು, ಪಟಾಕಿ ಹೊಡೆಯುವ ಖುಷಿ ಎಲ್ಲರ ಮನದಲ್ಲೂ. ಭಾರತೀಯ ಹಬ್ಬಗಳು ಸಾಮಾನ್ಯವಾಗಿ ಧಾರ್ಮಿಕ ಹಾಗೂ ಪಾರಮಾರ್ಥಿಕ ರೀತಿಯಲ್ಲಿ ಆಸ್ತಿಕ ಮಂದಿಯ ಕಣ್ಣು ತೆರೆಯಿಸುವುದಲ್ಲದೆ, ಭಾರತೀಯ ಸಂಸ್ಕೃತಿಯ ಪ್ರತೀಕವೂ ಆಗಿದೆ. ಅದರಲ್ಲೂ ದೀಪಾವಳಿಯ೦ದು ಧರ್ಮದ ಹಂಗು ತೊರೆದು ಎಲ್ಲರೂ ಒಟ್ಟುಗೂಡುವ ಸಂದರ್ಭಗಳೇ ಹೆಚ್ಚು, ಹಾಗಾಗಿ ಈ ಹಬ್ಬ ರಾಷ್ಟ್ರೈಕತೆಯನ್ನು ತುಂಬುವುದೆಂದರೆ ಅತಿಶಯೋಕ್ತಿ ಎನಿಸುವುದಿಲ್ಲ, ಅಲ್ಲವೇ? ಅಲ್ಲದೆ ಈ ಹಬ್ಬಕ್ಕೊಂದು ವೈಜ್ಞಾನಿಕ ಹಿನ್ನೆಲೆಯೂ ಇದೆ, ಇದು ಬರುವ ಕಾರ್ತಿಕ ಮಾಸದಲ್ಲಿ ಸಂಜೆಯ ವೇಳೆ ಕತ್ತಲೆಯು ಹೆಚ್ಚು. ಆದ್ದರಿಂದ ಮಾಸವಿಡೀ ಮನೆಯ ಮುಂದೆ ದೀಪ ಹಚ್ಚಿಡಬೇಕೆಂಬ ಕಟ್ಟಳೆ ಮಾಡಿದ ನಮ್ಮ ಪೂರ್ವಿಕರು, ದಾರಿಹೋಕರಿಗೆ ನೆರವಾಗಲೆಂಬ ದೃಷ್ಟಿಯಿಂದಲೇ ಇದನ್ನು ಮಾಡಿದರೆನೋ? 

ಮೊದಲೇ ಹೇಳಿದಂತೆ ಈ ಹಬ್ಬ ನಮ್ಮ ನಾಡಿನಲ್ಲಿ ಮೂರು ದಿನ ಮುಖ್ಯವಾಗಿ ಆಚರಿಸಲ್ಪಟ್ಟರೆ, ದೇಶದ ಕೆಲವು ಕಡೆ ಐದು ದಿನದವರೆಗೂ ಹಬ್ಬದ ಸಂಭ್ರಮ ತುಂಬಿರುತ್ತದೆ. ಶ್ರೀಕೃಷ್ಣ, ಮಡದಿ ಸತ್ಯಭಾಮೆಯೊಡಗೂಡಿ ನರಕಾಸುರನ ಸಂಹಾರ ಮಾಡಿದ ದಿನದ ಪ್ರತೀಕವಾಗಿ ದೀಪಾವಳಿಯ ಮೊದಲ ದಿನ ನರಕ ಚತುರ್ದಶಿ ಆಚರಿಸಲ್ಪಡುತ್ತದೆ. ಇದರ ಮುನ್ನಾ ದಿನ ಹೆಣ್ಣುಮಕ್ಕಳು ಮನೆಯ ಸ್ನಾನದ ಹಂಡೆಯನ್ನು ತೊಳೆದು, ಹೊಸನೀರು ತುಂಬಿ ಅದರ ಮೇಲೆ ವಿಘ್ನ ವಿನಾಶಕನ ಪೂಜೆ ಮಾಡಿ ತಯಾರಿ ನಡೆಸಿರುತ್ತಾರೆ. ಚತುರ್ದಶಿಯ ದಿನ ಮುಂಜಾನೆ ಬೇಗನೆ ಎದ್ದು ಎಲ್ಲರೂ ಎಣ್ಣೆ ನೀರು ಹಾಕಿಕೊಂಡು, ಸಿಹಿ ಹಂಚಿ, ಪಟಾಕಿ ಹೊಡೆದು ಮಧುಸೂದನನ ವಿಜಯವನ್ನು ಆಚರಿಸುತ್ತಾರೆ. ಉತ್ತರ ಭಾರತದ ಕೆಲವೆಡೆ ಶ್ರೀರಾಮ ರಾವಣನ ಮೇಲೆ ವಿಜಯ ಸಾಧಿಸಿ, ಸೀತೆಯೊಂದಿಗೆ ಅಯೋಧ್ಯೆಯನ್ನು ಮರುಪ್ರವೇಶಿಸಿದ ದಿನವಾಗಿ ಈ ದಿನ ಆಚರಿಸಲ್ಪಡುತ್ತದೆ. ಆ ದಿನ ಮನೆಯೆಲ್ಲ ದೀಪದಿಂದ ಅಲಂಕರಿಸಿ ವಿಜಯೀ ರಾಮನನ್ನು ಸ್ವಾಗತಿಸಲಾಗುತ್ತದೆ.

ಮರುದಿನ ಲಕ್ಷ್ಮೀ ಪೂಜೆ, ಲಕ್ಷ್ಮಿ ಕ್ಷೀರ ಸಾಗರದಿಂದ ಉದಯಿಸಿದ ದಿನವಿದೆಂಬ ನಂಬಿಕೆ ಹಲವು ಕಡೆ ಇದೆ. ವ್ಯಾಪಾರ, ವಹಿವಾಟುದಾರರಿಗೆ ಅತ್ಯಂತ ಪ್ರೀತಿಯ ದಿನವಿದು. ಲಕ್ಷ್ಮಿಯನ್ನು ಪೂಜಿಸಿ, ಅವಳ ಅನುಗ್ರಹವಿರಲೆಂದು ಪ್ರಾರ್ಥಿಸುತ್ತಾರೆ.

ಮೂರನೆಯ ದಿನ ಬಲಿಪಾಡ್ಯಮಿ, ವಿಷ್ಣು ವಾಮನ ರೂಪಿಯಾಗಿ ಬಲಿ ಮಹಾರಾಜನನ್ನು ನರಕಕ್ಕೆ ತಳ್ಳಿದ ದಿನ, ಇದೇ ದಿನ ಉತ್ತರ ಭಾರತದಲ್ಲಿ, ಗೋವರ್ಧನ ಪೂಜೆಯಾಗಿ ನಡೆಸಲ್ಪಡುತ್ತದೆ. ಬಾಲಕ ಕೃಷ್ಣ ಇಂದ್ರನ ಬದಲಾಗಿ ಗೋವರ್ಧನ ಪೂಜೆಯನ್ನು ಸಾರಿ ಇಂದ್ರನ ಕೋಪದಿಂದ ತನ್ನವರನ್ನು ಕಾಪಾಡಲು ಗೋವರ್ಧನ ಗಿರಿಯನ್ನು ಎತ್ತಿದ ದಿನವದು. ಅಂದು ಅನ್ನಕೂಟವನ್ನು ಬೆಟ್ಟದ ಮಾದರಿಯಲ್ಲಿ ಮಾಡಿ ಸಿಂಗರಿಸಿ ಕೃಷ್ಣ ವಿಜಯವನ್ನು ಸಾರುತ್ತಾರೆ. ಅಂತೆಯೇ ಮರುದಿನವನ್ನು ಯಮ ದ್ವಿತೀಯ ಎಂದು ಅಲ್ಲಿನವರು ಆಚರಿಸುತ್ತಾರೆ. ಒಟ್ಟಿನಲ್ಲಿ ಕೆಡುಕಿನ ಮೇಲೆ ಒಳಿತಿನ ದಿಗ್ವಿಜಯವನ್ನು ಸಾರುವ ಹಬ್ಬ ದೀಪಾವಳಿ.

ಆದರೆ ಇಂದು, ಹಬ್ಬದ ಹಿನ್ನೆಲೆ ಆಚರಣೆಗಳಿಗಿಂತ ಪಟಾಕಿಯ ಹುಚ್ಚೇ ಹೆಚ್ಚಾಗಿದೆ. ಒಂದು ಅಧ್ಯಯನದ ಪ್ರಕಾರ ದೀಪಾವಳಿಯ ಒಂದೇ ದಿನ ಸುಮಾರು ೬೦,೩೪೦ ಟನ್ ಗಳಷ್ಟು ಇಂಗಾಲಾಮ್ಲ ನಮ್ಮ ವಾತಾವರಣವನ್ನು ಸೇರುತ್ತದೆ. ಇದು ಸರಿ ಸುಮಾರು ೧೨,೦೦೦ ಕಾರುಗಳು ಒಂದುವರ್ಷದ ಅವಧಿಯಲ್ಲಿ ಬಿಡುವ ಇಂಗಾಲಾಮ್ಲಕ್ಕೆ ಸಮ. ಮೊದಲೇ ಹದಗೆಟ್ಟಿರುವ ವಾತಾವರಣಕ್ಕೆ ನಾವು ಇಷ್ಟೆಲ್ಲಾ ಕೊಡುಗೆ ನೀಡಬೇಕೆ? ಇನ್ನು ಕಳೆದ ವರ್ಷ ನಡೆದ ದೀಪಾವಳಿಯ ಅಪಘಾತಗಳೋ ದೇವರಿಗೇ ಪ್ರೀತಿ.

ಪಟಾಕಿ ತಯಾರು ಮಾಡುವ ಶಿವಕಾಶಿಯಲ್ಲೇ, ಕಾರ್ಖಾನೆಯಲ್ಲಿ ನಡೆದ ಅಪಘಾತದಲ್ಲಿ ೩೦ ಜನ ಸತ್ತರು. ಬರೋಡ, ಅರಿಯಲೂರು, ಔರಿಯ ಇತರೆಡೆ ಇದೇ ರೀತಿ ಪಟಾಕಿ ಮಾರುಕಟ್ಟೆಯಲ್ಲಿ ನಡೆದ ಅಪಘಾತಗಳೆಷ್ಟೋ? ಸಾಲದ್ದಕ್ಕೆ ನಮ್ಮ ಜನ ಚಿಕ್ಕ ಮಕ್ಕಳ ಕೈಯಲ್ಲೆಲ್ಲ ಪಟಾಕಿಯನ್ನಿತ್ತು ಅವೆಷ್ಟೋ ಕಂದಮ್ಮಗಳು ಕಣ್ಣು ಕಳೆದು ಕೊಂಡಿವೆ, ಮೈಯೆಲ್ಲಾ ಸುಟ್ಟ ಗಾಯ ಮಾಡಿಕೊಂಡಿವೆ. ದೊಡ್ಡವರ ಪಾಡೂ ಅಷ್ಟೇ, ಬಹುಶಃ ತನ್ನ ಭಕ್ತರು ಈ ರೀತಿ ತನ್ನ ವಿಜಯವನ್ನು ಆಚರಿಸುತ್ತಾರೆಂದು ಕೃಷ್ಣ ಪರಮಾತ್ಮನೂ ಊಹಿಸಿರಲಾರನೇನೊ?

ಒಳಿತಿನ ಮೇಲೆ ಕೆಡುಕಿನ ವಿಜಯವನ್ನಾಚರಿಸ ಹೋಗಿ ನಾವು ನಮ್ಮ ವಾತಾವರಣಕ್ಕೇ ಕೆಡುಕನ್ನುಂಟು ಮಾಡುತ್ತಿದ್ದೇವೆ. ಇಂತಹ ಆಚರಣೆ ಬೇಕೆ? ಈ ಬಾರಿಯಾದರೂ, ನಾವೊಬ್ಬರು ಮಾಡಿದರೆ ಏನಾಗುತ್ತದೆ ಎಂಬ ಸಿನಿಕತೆಯನ್ನು ಬಿಟ್ಟು, ಕೇವಲ ದೀಪಗಳೊಂದಿಗೆ ದೀಪಾವಳಿಯನ್ನಾಚರಿಸೋಣ. ಈ ಬಾರಿಯಾದರೂ ದೀಪಾವಳಿಯ ಅಪಘಾತದ ಸುದ್ದಿಗಳು ಬಂದು ಹಬ್ಬದ ಸಂಭ್ರಮಕ್ಕೆ ಸೂತಕ ತರದಿರಲಿ. ಎಲ್ಲರಿಗೂ ಹಬ್ಬದ ಶುಭಾಶಯಗಳು. 

Thursday, 24 October 2013

ಲಹರಿ

ಸುಮ್ಮನೇ ಬಯಸಿದಾಕ್ಷಣ ದೊರೆಯಲು,
ಕವಿತ್ವವೇನು ಹಾದಿಬದಿಯ ತಿಂಡಿಯೇನು?

ಮನದ ದೆಣಪೆಯಲಿ ಚಿಮ್ಮಬೇಕು ಮೊದಲು,
ಭಾವಗಳ ಒರತೆ.
ಒತ್ತಿ ಬಂದ ಭಾವಬೀಜಗಳ,
ಮನದಂಗಳದಲಿ ಬಿತ್ತಿ,
ಅರಿವಿನ ಮಳೆಗರೆದು,
ಪದಗೊಂಚಲ ಗೊಬ್ಬರ ಹೂಡಿ,
ಬೆಳೆಸಬೇಕೊಂದು ಕವಿತೆಯ, ಅರೆರೆ!
ಇನ್ನೂ ಮುಗಿಯದಿದರ ಬೇಡಿಕೆ!
ಪ್ರಾಸಾನುಪ್ರಾಸಗಳ ಅಲಂಕಾರದ ಚಪ್ಪರ
ಆಸರೆಗಾಗಿ ಬೇಕಂತೆ, ಬಳುಕುವ ಬಳ್ಳಿ ಕವನಕ್ಕೆ!

ಇಷ್ಟೆಲ್ಲಾ ಬೆವರು ಸುರಿಸಿ, ಅಲ್ಲಲ್ಲ
ಪ್ರೀತಿ ಹರಿಸಿ, ಮನದಂಗಳದೊಳು ಜಾಗವಿತ್ತರೂ,
ಕವಿಗಳ ಕಷ್ಟ ತಪ್ಪದು.
ಬೆಳೆದ ಕವನ ಓದುವವನದಂತೆ!
ಹರಿಸಿದ ಪ್ರೀತಿ ಪಡೆದವನದಂತೆ!
ಕವಿಯೆನಿಸಿಕೊಂಡವ, ಭಾವಝರಿಯ ಹುಡುಕುತ್ತಾ,
ಮತ್ತೆ ಸುರಿಸಬೇಕು ಹನಿ ಹನಿ ಪ್ರೀತಿಯ,
ಬೆಳೆಸಬೇಕು ಮತ್ತೊಂದು ಕಾವ್ಯ ಹಂದರ.

ಸುಮ್ಮನೇ ಬರುವುದಿಲ್ಲ ಕವಿತ್ವ!
ಅದಕ್ಕೂ ಸಿದ್ಧಿಸಬೇಕು ಲೋಕಪ್ರೀತಿಯ ಋಷಿತ್ವ!

Wednesday, 23 October 2013

ಅನ್ಯರೊರೆದುದನೆ

ಅನ್ಯರೊರೆದುದನೆ ಬರೆದುದನೆ ನಾ ಬರೆಬರೆದು
ಬಿನ್ನಗಾಗಿದೆ ಮನವು ಬಗೆಯೊಳಗನೇ ತೆರೆದು
ನನ್ನ ನುಡಿಯನೆ ಬಣ್ಣ ಬಣ್ಣದಲಿ ಬಣ್ಣಿಸುವ
ಪನ್ನತಿಕೆ ಬರುವನಕ, ನನ್ನ ಬಾಳಿದು ನರಕ.

ಹೀಗೆನ್ನುತ್ತಾರೆ ಅಡಿಗರು. ತಮ್ಮ ಭಾವಸಂಗಮದ ಕವನವೊಂದರಲ್ಲಿ. ಹೆಚ್ಚೂ ಕಡಿಮೆ ಬರೆಯಲು ಕೂಡುವ ಎಲ್ಲ ಹೊಸಬರ ಮನಃಸ್ಥಿತಿಗೆ ಹಿಡಿದ ಕೈಗನ್ನಡಿಯಂತಿವೆ ಸಾಲುಗಳಿವು. ನನಗೂ ಅಷ್ಟೇ, ಬರೆಯಲು ಕೂತರೆ ಪದಗಳೇ ಹುಟ್ಟುವುದಿಲ್ಲ. ಹಾಗೆಂದು ಬರೆಯದೆ ಸುಮ್ಮನೆ ಇರಲೂ ಆಗುವುದಿಲ್ಲ, ಏನೋ ಒಂದು ವಿಚಿತ್ರ ಚಡಪಡಿಕೆ. ಹಾಗೂ ಹೀಗೂ ಮಾಡಿ ಏನೇ ಬರೆದರೂ, ಬರೆದಿದ್ದೆಲ್ಲ ಬಾಲಿಶ ಎನಿಸಿ ಮತ್ತೊಬ್ಬರಿಗೆ ತೋರಿಸಲು ಹೋಗುವುದಿಲ್ಲ, ಬರೆದ ಅವೆಷ್ಟೋ ಸಾಲುಗಳು ಹೀಗೆ ನನ್ನೊಳಗೇ ಹುದುಗಿ ಹೋಗಿವೆ. ಇದರ ಮಧ್ಯೆ ಓದು ಬರಹಕ್ಕೆ ಬಿಡುವು ಕೊಡದ ವೈಯಕ್ತಿಕ ಕೆಲಸಗಳು, ಎಲ್ಲ ಸೇರಿ ನನ್ನ ಸಾಹಿತ್ಯ ಕೃಷಿ ಕುಂಟುತ್ತಾ ಸಾಗುತ್ತಿದೆ.


ಏನೇ ಬರೆದರೂ ಈ ರೀತಿ ಬರೆಯುವವರು ಸಾವಿರ ಮಂದಿ, ಎಲ್ಲಿ ನಾನು ಅವರನ್ನು ಅನುಕರಿಸಿದಂತಾಗುವುದೋ? ಎನಿಸಿ ನಿಲ್ಲಿಸಿದ್ದೇನೆ. ಅನುಕರಣೆಗಿಂತ ಅನುಸರಣೆ ಉತ್ತಮ ಎಂಬ ಅರಿವೇನೋ ಇದೆ. ಆದರೆ ಎರಡರ ಮಧ್ಯೆ ಇರುವ ಕೂದಲೆಳೆಯ ಅಂತರವನ್ನು ಅರ್ಥೈಸಿ, ಅದರಂತೆ ನಡೆಯುವುದೇ ಕಷ್ಟ. ಎಷ್ಟೋ ಸಲ ಕುಳಿತು ಬರೆದಾಗ, ಈ ಶೈಲಿಯ ಲೇಖನ ಯಾವುದೋ ಬ್ಲಾಗ್ ನಲ್ಲಿ ಓದಿದಂತಿದೆಯಲ್ಲ? ಆ ಶೈಲಿಯನ್ನೇ ನಾನು ನಕಲು ಮಾಡುತ್ತಿದ್ದೇನೆ, ಕೊನೆಪಕ್ಷ ನನ್ನದೇ ಆದ ಶೈಲಿಯೊಂದನ್ನಾದರೂ ರೂಪಿಸಿಕೊಳ್ಳಬೇಕು ಎನಿಸುತ್ತಿರುತ್ತದೆ. ಈ ಗೊಂದಲಕ್ಕೆಲ್ಲ ಕೊನೆಯೆಂದೋ?? ಇನ್ನೂ ಕಂಡಿಲ್ಲ.

ಯಾವುದೇ ನಿರ್ದಿಷ್ಟ ಉದ್ದೇಶ, ಸಿದ್ಧಾಂತ, ಗುರಿ ಇಟ್ಟುಕೊಂಡು ಬರೆಯುವವಳಲ್ಲ ನಾನು. ಮನಸ್ಸಿಗೆ ಬಂದಾಗ ಮೂಡಿದ್ದನ್ನೆಲ್ಲ ಗೀಚುವವಳು. ನನ್ನ ಗೊಂದಲ ತೀರಿ ಮನ ತಿಳಿಯಾಗುವವರೆಗೂ ಬಹುಶಃ ಇದೇ ಧಾಟಿಯ ಬರಹಗಳೇ ನನ್ನ ಬ್ಲಾಗ್ ಗೋಡೆ ತುಂಬಾ ಅಂಟಿಕೊಳ್ಳುತ್ತವೇನೋ??

Monday, 1 April 2013

ಏಕೆ ಓದಬೇಕು?

ಯಾವುದೋ ಒಂದು ಲಹರಿ ಮೂಡಬೇಕು, ಆ ಮೂಡಿನಲ್ಲಿದ್ದಾಗ ಮನದ ಸಂತಸವನ್ನೆಲ್ಲ ಅಕ್ಷರ ರೂಪದಲ್ಲಿ ಮೂಡಿಸಬೇಕು, ಲಹರಿ ಚೂರು ಅತ್ತಿತ್ತ ವಾಲಿತು ಅಂದರೆ ಮುಗಿಯಿತು, ಮನದ ಕ್ಯಾನ್ವಾಸಿನಲ್ಲಿ ಮತ್ತೇನೂ ಮೂಡಲಾರದು, ಹೀಗೆಲ್ಲ ಅಂದುಕೊಂಡೇ ನನ್ನ ಬರವಣಿಗೆ ಕುಂಟುತ್ತಾ ಸಾಗುತ್ತಿದೆ. ನೆನ್ನೆ ಸುಮ್ಮನೆ ಒಂದು ಯೋಚನೆ ಬಂತು, ಅಷ್ಟಕ್ಕೂ ಈ ಲಹರಿ ಅಂದರೇನು? ಅದಕ್ಕೇಕೆ ಕಾಯುತ್ತಾ ಕುಳಿತಿರುತ್ತೇನೆ ನಾನು? ಬರೆಯುವ ಹಂಬಲವಿರುವವರೆಲ್ಲರೂ ನನ್ನ ಹಾಗೆಯೇ ಕಾಯುತ್ತಾರ? ಅಥವಾ ಸುಮ್ಮನೆ ಅಕ್ಷರಗಳ ಗೊಂಚಲು ಪೋಣಿಸುತ್ತಾರ? ಎದುರಾಗುವ ಪ್ರತಿ ಸಂದರ್ಭವನ್ನೂ ಅನುಭವಿಸುವ, ಅದರಲ್ಲಿ ಸಂತಸವನ್ನು ಕಾಣುವ ಕಲೆ ಸಿದ್ಧಿಸಿದರೆ ಪ್ರತಿಕ್ಷಣವೂ ಒಳ್ಳೆ ಜೀವನಪಾಠವೇ ತಾನೇ? ಹಾಗಿದ್ದರೆ ಎಲ್ಲವನ್ನೂ ಅಕ್ಷರಗಳಲ್ಲಿ ಮೂಡಿಸಲು ಏಕೆ ಸಾಧ್ಯವಾಗುವುದಿಲ್ಲ? ಅಥವಾ ಸಾಧ್ಯವಿದೆಯೋ?

ಪ್ರತಿಯೊಂದು ಘಟನೆಗೂ ಎರಡು ಆಯಾಮಗಳಿರುತ್ತವೆ, ಇಬ್ಬರು ವ್ಯಕ್ತಿಗಳಿಗೆ ಒಂದೇ ಘಟನೆ ಬೇರೆ ಬೇರೆ ತೆರನಾಗಿ ಕಾಣಬಹುದು, ನಮ್ಮ ದೃಷ್ಟಿಕೋನವನ್ನು ತರ್ಕದ ಸಹಾಯದಿಂದ ಜಾಲಿಸುತ್ತಾ ಅಕ್ಷರಗಳಲ್ಲಿ ಹರವಿಡುತ್ತಾ ಹೋದರೆ ಅದನ್ನೇ ತಾನೆ ಸಾಹಿತ್ಯ ಎನ್ನುವುದು? ಕೆಲವರು ತಮ್ಮ ಅನುಭವಕ್ಕೆ, ಮನದ ಭಾವಕ್ಕೆ ಪ್ರಾಸದ ರೂಪ ನೀಡಿ ಪದ್ಯ ಬರೆಯುತ್ತಾರೆ, ಕೆಲವರು ಗಂಭೀರವಾದ ಚಿಂತನೆಗಳನ್ನು ಅಷ್ಟೇ ಗಂಭೀರವಾದ ಶೈಲಿಯಲ್ಲಿ  ವಾಕ್ಯರೂಪೇನ ಹರವಿಡುತ್ತಾರೆ. ಏನೇ ಆದರೂ ಎಲ್ಲದರ ಕೊನೆಯಲ್ಲಿ ಸಿಗುವುದು ಒಂದೇ, ಅಪಾರವಾದ ಜೀವನಾನುಭವ. ಹಾಗಿದ್ದರೆ ಮತ್ತೊಂದು ಪ್ರಶ್ನೆ ಮೂಡುತ್ತದೆ, ಸಾಹಿತ್ಯ  ರಚನೆಗೆ ಸ್ವಾನುಭವವೇ ಆಗಬೇಕೋ? ಅದಿಲ್ಲದಿದ್ದರೆ ಕಂಡ, ಕೇಳಿದ ಅನುಭವಗಳನ್ನು ನಾವು ಬರೆದರೂ ಆದೀತು ಎನ್ನುವುದಾದರೆ, ಅದು ನಮ್ಮ ಸ್ವಂತ ಎನಿಸಿಕೊಳ್ಳುವುದು ಹೇಗೆ?

ಹೀಗೆ ನನ್ನ ತರ್ಕ ತಲೆಬುಡವಿಲ್ಲದೆ ಎಲ್ಲಿಂದೆಲ್ಲಿಗೋ ಸಾಗುತ್ತಿತ್ತು. ಆದರೆ ಈ ಯೋಚನೆ ಮೂಡಲು ಕಾರಣವಾದ ಘಟನೆ ನಾನು ಮತ್ತೆ ಮತ್ತೆ ಯೋಚಿಸುವಂತೆ ಮಾಡುತ್ತಿತ್ತು. ಈಗ್ಗೆ ಸರಿಸುಮಾರು ತಿಂಗಳ ಕೆಳಗೆ ನಾನು ನನ್ನ ಗೆಳತಿ ಒಂದು ಪುಸ್ತಕದ ಮಳಿಗೆಗೆ ಹೋಗಿದ್ದೆವು, ಅವರು ಯಾವುದೋ ಪುಸ್ತಕ ಹುಡುಕುತ್ತಿದ್ದರು, ನಾನು ಭೈರಪ್ಪನವರ section ನೋಡುತ್ತಿದ್ದೆ, ನನ್ನ ಹಿಂದೇ ಸುತ್ತುತ್ತಿದ್ದ ಆ ಅಂಗಡಿಯ sales girl ಒಂದೊಂದೇ ಕಾದಂಬರಿಯ ಹೆಸರು ಓದಿ "ಇದೆಲ್ಲ ತೊಗೊಂಡ್ ಓದ್ತೀರಾ?" ಎಂದು ಕೇಳಿದಳು. ಅವಳ ಮುಖಭಾವ ನೋಡಿದರೆ ಯಾವುದೋ ಅದ್ಭುತವನ್ನು ಕಾಣುತ್ತಿದ್ದಾಳೇನೋ  ಎನ್ನುವಂತಿತ್ತು. ನಾನು ನಗುತ್ತಾ "ಮತ್ಯಾಕೆ ತೊಗೊಳ್ಳಿ? ಆಗ್ಲೇ ಎಲ್ಲಾ ಓದಾಗಿದೆ" ಎಂದೆ. ತಕ್ಷಣ ಅವಳ ಪ್ರತಿಕ್ರಿಯೆ ನಗುತರಿಸುವಂತಿತ್ತು, ಅಂತೆಯೇ ಯೋಚಿಸುವಂತೆಯೂ... ಬಾಯಿಮೇಲೆ ಕೈಯಿಟ್ಟು "ಯಪ್ಪಾ! ಇಷ್ಟ್ ದಪ್ಪ ದಪ್ಪ ಬುಕ್ಸ್ ಹೆಂಗ್ ಓದ್ತೀರಾ? ನಮ್ಗೆ ನಮ್ syllabus ಓದಿ ಮುಗ್ಸಿದ್ರೆ ಸಾಕಪ್ಪಾ ಅನ್ನಿಸಿಬಿಡುತ್ತೆ" ಅಂದಳು. ಅವಳಿಗೆ ಯಾರೋ ಇದೇ ಪ್ರಶ್ನೆಗೆ "ಇದನ್ನೆಲ್ಲಾ ಓದೋಕ್ಕಾಗುತ್ತ? ಸುಮ್ಮನೆ ಮನೆಗ್ ತೊಗೊಂಡ್ ಹೋಗಿ ಇಟ್ಕೊತೀವಿ, ನೋಡಿದೋರು ನಮ್ಮನ್ನ ಒಂದು standard ಅಂದ್ಕೋತಾರೆ" ಅಂದಿದ್ನಂತೆ, ಆ ಪುಣ್ಯಾತ್ಮ ಯಾರೋ ತಿಳಿದಿಲ್ಲ, ಆದರೆ ಅದನ್ನು ಕೇಳಿದಾಗ ಮಾತ್ರ ಬೇಸರವಾಯಿತು. ಜನ ಹೀಗೂ ಇರುತ್ತಾರ ಎನಿಸಿದ್ದಷ್ಟೇ ಅಲ್ಲ, ಗಂಭೀರ ಸಾಹಿತ್ಯದ ಪ್ರಕಾರವನ್ನು ತರ್ಕಬದ್ಧವಾಗಿ ಅಧ್ಯಯನ ಮಾಡುವ ಜನ ಎಷ್ಟಿದ್ದಾರೆ ಎಂಬ ಯೋಚನೆಯೂ ಬಂದಿತು.

ಒಂದು ಅಧ್ಯಯನದ ಪ್ರಕಾರ ಅಂತರ್ಜಾಲದ ಪ್ರಭಾವ ಎಷ್ಟೇ ಇದ್ದರೂ ಪ್ರಕಟಿತ ಪುಸ್ತಕಗಳಿಗೆ ಭಾರತ ಅತ್ಯಂತ ದೊಡ್ಡ ಮಾರುಕಟ್ಟೆ. ಪ್ರಕಟಿತ ಪುಸ್ತಕಗಳಿಗೆ ಇಲ್ಲಿ ಬೇಡಿಕೆ ಬಹಳ. ಆದರೆ ಪುಸ್ತಕ ಕೊಂಡವರಲ್ಲಿ ಎಷ್ಟು ಜನ ಅದನ್ನು ಓದುತ್ತಾರೆ ಎಂದು ಸಮೀಕ್ಷೆ ಮಾಡಲು ಸಾಧ್ಯವಿದೆಯ? ಬಹುಶಃ ಆ ಸಮೀಕ್ಷೆಯಾದರೆ ಬಹಳಷ್ಟು ಪುಸ್ತಕಗಳು ಕೇವಲ ಪ್ರದರ್ಶನದ ವಸ್ತುವಾಗುತ್ತಿವೆಯೆಂಬ ಅಂಶ ಬೆಳಕಿಗೆ ಬಂದೀತೇನೋ? ಇರಲಿ, ನನ್ನ ಮೂಲ ಸಮಸ್ಯೆ ಈ ವಿಚಾರದಲ್ಲಲ್ಲ. ಆ ಹುಡುಗಿ ಕೇಳಿದ ಎರಡನೇ ಪ್ರಶ್ನೆ ನನ್ನನ್ನು ಬಹಳ ದಿನದಿಂದ ಕಾಡಿಸುತ್ತಿದೆ. ಒಮ್ಮೊಮ್ಮೆ ಒಂದೊಂದು ಉತ್ತರವನ್ನೀಯುತ್ತಾ...

ಅವಳು ಕೇಳಿದಳು "ಇದ್ನೆಲ್ಲ ಯಾಕ್ ಓದ್ತೀರಾ? ನಾವ್ ಓದಿದ್ರೆ marks ಸಿಗುತ್ತೆ, ಪಾಸ್ ಆಗ್ತೀವಿ, ಇದ್ನೆಲ್ಲ ಓದಿದ್ರೆ ಏನು use?"
ಪ್ರಶ್ನೆ ಬಂದ ತಕ್ಷಣ ಸುಮ್ಮನಾದೆ, ಹೌದಲ್ಲಾ, ಯಾಕ್ ಓದ್ಬೇಕು ಇದ್ನೆಲ್ಲಾ ಅನ್ನೋದನ್ನೇ ಯೋಚಿಸುತ್ತಿದ್ದೆ. ಅವಳಿಗೆ ಏನೋ ಉತ್ತರ ಹೇಳಿ ನುಣುಚಿಕೊಂಡು ಬಂದಿದ್ದೆ, ಆದರೆ ನೆನ್ನೆ ಯೋಚಿಸುತ್ತಿದ್ದಾಗ ಮೇಲಿನ ಯೋಚನೆ ಬಂದಿತು. ಎಷ್ಟು ಮಹನೀಯರ, ಪ್ರತಿಭಾವಂತರ ಜೀವನಾನುಭವ ಅಡಕವಾಗಿರುತ್ತದೆ ಸಾಹಿತ್ಯದಲ್ಲಿ, ಪ್ರತಿಯೊಂದೂ ಜೀವನದ ಬಗೆಗೆ ಹೊಸದೊಂದು ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು, ಜೀವನದ ಬೆಲೆ ಅರಿಯಲು ಸಹಾಯ ಮಾಡುತ್ತವೆ. ನಮ್ಮ ಸ್ವಂತ ಅನುಭವಕ್ಕೆ ಬಾರದಂತಹ ಘಟನೆ, ನಮ್ಮ ಆಲೋಚನೆಗೆ ನಿಲುಕದ್ದು, ಬೇರೆಯವರ ಅನುಭವಕ್ಕೆ ಬಂದಿರಬಹುದು, ಅವರ ಆಲೋಚನೆಗೆ ನಿಲುಕಿರಬಹುದು, ಪ್ರತಿಯೊಂದು ಅನುಭವವನ್ನೂ ತರ್ಕದ ಮೂಸೆಯಡಿ ತಿಕ್ಕಿ ಸಾಮೂಹಿಕವಾಗಿ ಹಂಚಿಕೊಳ್ಳುವ ಮಾಧ್ಯಮವೇ ಸಾಹಿತ್ಯ, ಅಲ್ಲವೇ? ಅದಕ್ಕಾಗಿಯೆ ತಾನೇ ಓದಬೇಕು? ಬಹುಶಃ ಈ ತರ್ಕ ಬೇರೆ ರೂಪದಲ್ಲಿ ಬೇರೆಯವರ ಮನದಲ್ಲಿ ಮೂಡಿ ಅದೂ ಈಗಾಗಲೇ ಸಾಹಿತ್ಯದ ರೂಪು ಪಡೆದಿದೆಯೇನೋ? ಏನೇ ಆಗಲಿ ಇದನ್ನೆಲ್ಲಾ ಆ ಹುಡುಗಿಗೆ ಹೇಳಬೇಕು ಅನಿಸುತ್ತಿದೆ. ಅದು ಆ ಹುಡುಗಿಯಿಂದ ಅವಳ ಪ್ರಶ್ನೆಗೆ ಮೊದಲು ಉತ್ತರ ಕೊಟ್ಟ ವ್ಯಕ್ತಿಗೂ ಮುಟ್ಟುವಂತಿದ್ದರೆ ಚೆನ್ನಾಗಿರುತ್ತಿತ್ತೇನೋ.


Sunday, 10 February 2013

ರಿಮ್ ಝಿಮ್ ಗಿರೆ ಸಾವನ್ ....

ರಿಮ್ ಝಿಮ್ ಗಿರೆ ಸಾವನ್ 
ಸುಲಘ್ ಸುಲಘ್ ಜಾಯೆ ಮನ್ 
ಭೀಗೇ ಆಜ್ ಇಸ್ ಮೌಸಮ್ ಮೇ 
ಲಗಿ ಕೈಸೆ ಏ ಅಗನ್...

ಸಿಸ್ಟಮ್ ನಲ್ಲಿ ಈ ಹಾಡು ಪ್ಲೇ ಆಗುತ್ತಿದ್ದರೆ, ಹೊರಗೆ ಅಕಾಲಿಕವಾಗಿ ಸುರಿದ ಚುಮು ಚುಮು ಮಳೆ. ಒಂದಕ್ಕೊಂದು ಎಷ್ಟು ಆಪ್ತವಾಗಿ ಹೊಂದುತ್ತವೆ ಅಲ್ವಾ... ಹೊರಗೆ ತಣ್ಣನೆ ಗಾಳಿಗೆ ಮೈ ಒಡ್ಡಿಕೊಂಡು ಆಗಸದತ್ತ ಮೊಗಮಾಡಿ ಕುಳಿತಿದ್ದರೆ, ಇಂತಹ ಹಾಡು ಜತೆಯಾದರೆ ಮನಸ್ಸು ಹಗುರವಾದಂತಹ, ತೇಲಿದಂತಹ ಅನುಭೂತಿ. ಹಾಗೆಯೇ ಮಳೆಯಲ್ಲಿ ಹೋಗಿ ನಿಂತು ಹನಿಗಳನ್ನು ನನ್ನೊಳಗೆ ಎಳೆದುಕೊಳ್ಳಬೇಕು, ಯಾವ ಮೋಡದಿಂದ, ಯಾವ ಹನಿ ಬೀಳುತ್ತಿದೆ ಗಮನವಿಟ್ಟು ನೋಡಬೇಕು,  ಹನಿಗಳ ಕಚಗುಳಿಯನ್ನನುಭವಿಸುತ್ತಾ, ಹನಿ ಬಾಣವಾಗುವುದನ್ನು, ಬಾಣ ಬಿರುಸಾಗಿ ನನ್ನ ಮೇಲೆ ದಾಳಿ ಮಾಡಿದಾಗ ಆ ದಾಳಿಯನ್ನೂ ಎದುರಿಸಿ ಅಲ್ಲೇ ನಿಲ್ಲಬೇಕು.. ಮಳೆ ಬಂದರೆ ಇಂತಹವುವೇ ನನ್ನ ಹುಚ್ಚು ಆಸೆಗಳು ಗರಿಗೆದರುತ್ತವೆ.. ಆಗೆಲ್ಲ ಛೆ! ನಮ್ಮ ಮನೆಯೂ ದಟ್ಟ ಮಲೆನಾಡಿನ ಪುಟ್ಟ ಮೂಲೆಯಲ್ಲೆಲ್ಲಾದರೂ ಇರಬಾರದಿತ್ತೇ? ಅನಿಸಿ ಮಲೆನಾಡಿಗರ ಮೇಲೆ ಅಸೂಯೆಯೂ ಉಂಟಾಗುತ್ತದೆ. ಅಲ್ಲೆಲ್ಲಾ ಅಷ್ಟು ಕರುಣೆ ತೋರುವ ಮಳೆರಾಯ ನಮ್ಮೂರಿಗೆ ಮಾತ್ರ ಯಾಕೆ ಭೇದ ಮಾಡುವುದು, ಅಲ್ಲಿ ಬಂದಂತೆ ಇಲ್ಲಿಗೂ ಬರಲು ಅವನಿಗೇನು ಧಾಡಿ ಎಂದು ಅವನ ಮೇಲೆ ಕೋಪವೂ ಬರುತ್ತದೆ, ಮತ್ತೆ ಪಾಲಿಗೆ ಬಂದಷ್ಟೇ ಪಂಚಾಮೃತ ಎನಿಸಿ ನಮ್ಮೂರಿನ ಈ ಸಣ್ಣ ಮಳೆಯಲ್ಲೇ ತೃಪ್ತಿ ಪಟ್ಟುಕೊಳ್ಳುತ್ತೇನೆ.

ನೆನ್ನೆ ಅಕಾಲಿಕವಾಗಿ ಮಳೆ ಬಂತಲ್ಲಾ, ಬಹಳ ಮಜಾ ಇತ್ತು..  ಇದ್ದಕ್ಕಿದ್ದಂತೆ ಸುರಿದ ಈ ಮಳೆರಾಯನ ಆಟಕ್ಕೆ, ಒಬ್ಬೊಬ್ಬರಲ್ಲಿ ಒಂದೊಂದು ಭಾವ... ಇಲ್ಲಿ ನಾನು ಮನೆಯಲ್ಲಿ ಒಬ್ಬಳೇ ಕುಳಿತು ಹಾಡನ್ನು ಕೇಳುತ್ತಾ ಮಳೆಯನ್ನು ಆಸ್ವಾದಿಸುತ್ತಿದ್ದರೆ, ಇಲ್ಲೇ ಪಕ್ಕದಲ್ಲಿ, ರಸ್ತೆ ರಿಪೇರಿಯಲ್ಲಿ ತೊಡಗಿದ್ದ ಕಾರ್ಮಿಕರು ಮಳೆಗಿಷ್ಟು ಹಿಡಿ ಶಾಪ ಹಾಕುತ್ತಾ ಕೆಲಸ ಬಿಟ್ಟು ಅಲ್ಲಲ್ಲೇ ಆಸರೆ ಹುಡುಕಿಕೊಂಡು ನಿಂತಿದ್ದರು. ಶನಿವಾರದ ಅರ್ಧ ದಿನದ ರಜೆ ಆಡಲಾರದೆ ಹಾಳಾಯಿತಲ್ಲಾ ಎಂದು ಎದುರು ಮನೆ ಮಕ್ಕಳು ಮುನಿಸಿಕೊಂಡು ಕುಳಿತಿದ್ದರೆ, ನಮ್ಮೂರಿನ ಮೂಲೆಯೊಂದರಲ್ಲಿ, ಅಲ್ಲೆಲ್ಲೋ ತಮ್ಮ ಜಾತಿ ಸಂಘದ ಸಮಾವೇಶ ನಡೆಸುತ್ತಿದ್ದ ಜನಗಳಲ್ಲಿ, ಒಬ್ಬ ನಮ್ಮ ಸಮ್ಮೇಳನಕ್ಕೆ ವರುಣ ಪುಷ್ಪವೃಷ್ಟಿ ಮಾಡುತ್ತಿದ್ದಾನೆಂದು ಕೂಗಿ ಹೇಳಿ ಸಂಭ್ರಮಿಸುತ್ತಿದ್ದ. ಇನ್ನಷ್ಟು ಬರಬಾರದಿತ್ತೆ ಎಂಬ ಸಂಕಟ ರೈತನ ಮೊಗದಲ್ಲಿದ್ದರೆ, ಯಾಕಾದರೂ ಬಂದಿತೋ ಹೊತ್ತಲ್ಲದ ಹೊತ್ತಿನಲ್ಲಿ ಎಂಬ ಗೊಣಗಾಟ ಮತ್ತೊಬ್ಬನದ್ದು.

ಈ ಮಳೆ ತನ್ನಲ್ಲಿ ಎಷ್ಟೆಲ್ಲಾ ಭಾವಗಳನ್ನು ಹೊತ್ತು ತರುತ್ತದೆ, ಹಾಗೆಯೇ ಹೊತ್ತೊಯ್ಯುತ್ತದೆ, ಅಲ್ಲವಾ? ಕೆಲವರಿಗೆ ಅನ್ನ ದುಡಿಯುವ ದಾರಿ ಮಾಡಿಕೊಟ್ಟರೆ ಕೆಲವರಿಗೆ ದಿನದ ಕೂಳು ಕಿತ್ತುಕೊಳ್ಳುವ ಕ್ರೂರಿಯಾಗಿ ತೋರುತ್ತದೆ, ಕೆಲವರಿಗೆ ಕೆಟ್ಟ ಘಟನೆಗಳ ಸಂತೆಯನ್ನು ತಂದರೆ, ಕೆಲವರಿಗೆ ಪ್ರೀತಿ ಪಾತ್ರರ ನೆನಪನ್ನು ಹೊತ್ತು ತರುತ್ತದೆ.. ಮಾನವನ ಜಂಜಾಟ ಬಿಡಿ, ಪಶು ಪಕ್ಷಿಗಳೂ ಕೂಡ ಕೆಲವೊಮ್ಮೆ ಗೂಡು ಸೇರಲಾರದೆ ಪರಿತಪಿಸುತ್ತವೆ, ಆದರೂ ಮಳೆಯನ್ನು ಸ್ವಾಗತಿಸಿ ಪ್ರೀತಿಸುತ್ತವೆ. ಇದಾವುದರ ಪರಿವೆಯೂ ಇಲ್ಲದಂತೆ ವರುಣ ತನ್ನ ಪಾಡಿಗೆ ತಾನು ಧೋ ಎಂದು ಸುರಿಯುತ್ತಿರುತ್ತಾನೆ. ಯಾರು ಹೇಗಾದರೆ ತನಗೇನು, ತನ್ನ ಗುರಿ ತಾನು ಮುಟ್ಟಬೇಕು ಎಂದು ಜೀನು ಹಾಕಿದ ಕುದುರೆಯಂತೆ ಲಾಗಾಯ್ತಿನಿಂದ ನುಗ್ಗುತ್ತಿರುತ್ತಾನೆ.

ಭೂಮಿ ಕೊಳೆಯನ್ನು ತೊಳೆದುಕೊಂಡು, ಹೊಸ ಹಸಿರನ್ನು ಹೊದ್ದು ನಿಲ್ಲುತ್ತಾಳೆ, ವರುಣನ ಆಗಮನದ ಹರ್ಷವನ್ನು ಹಂಚುವ ರೀತಿ ಮಂದ ಮಾರುತ ತಂಪಾಗಿ ಬೀಸುತ್ತಿದ್ದರೆ, ಆ ಗಾಳಿಯಲ್ಲಿ ಹಾಗೇ ಒಂದು ಸಣ್ಣ ವಾಕಿಂಗ್ ತೆಗೆದರೆ ಅದರ ಮಜಾನೆ ಬೇರೆ.. 

ಅತೀ ಗ್ರಾಂಥಿಕವಾಯ್ತ?? ಗೊತ್ತಿಲ್ಲ. ಆದರೆ ನೆನ್ನೆ ಸಂಜೆಯ ಮಳೆ ನನ್ನಲ್ಲಿ ಈ ಎಲ್ಲ ಭಾವಗಳನ್ನೂ ಹುಟ್ಟು ಹಾಕಿದ್ದಂತೂ ನಿಜ. ಜತೆಗೆ ಎಪ್ಪತ್ತರ ದಶಕದ ಈ ಆಪ್ತವಾದ ಹಾಡು ಮನವನ್ನು ಬೇರೆಯೇ ಲೋಕಕ್ಕೆ ಕೊಂಡೊಯ್ದಿತ್ತು. ಹಾಗೆಯೇ ಒಂದು ವಾಕ್ ಹೋಗಿ ಬಂದೆ. ಬಹಳ ದಿನಗಳ ನಂತರ ಮತ್ತೆ ಬರೆಯಬೇಕೆನಿಸಿತು!