Friday 26 August 2011

ನನ್ ಬ್ಲಾಗಿಂಗ್ ಹಿಸ್ಟರಿ - ಹಾಗೆ ಸುಮ್ಮನೆ

ಮನಸ್ಸಿಗೆ ಬಂದಿದ್ದನ್ನೆಲ್ಲ ಗೀಚೋಕೆ ಅಂತರ್ಜಾಲದ ಈ ತಾಣ ಬಳಸಬಹುದೇ ಅಥವಾ ಬೇಡವೇ ಅನ್ನೋದೇ ಒಂದು ತೀರದ ಗೊಂದಲ. ಸದಾ ನನ್ನ ಆಲೋಚನೆಗಳು, ನನ್ನ ತುಡಿತಗಳು ನನ್ನ ಮನಸ್ಸಿನಿಂದಾಚೆ ಎಲ್ಲೂ ಹೋಗಿಲ್ಲ ಹೆಚ್ಚೆಂದರೆ ನನ್ನ ಡೈರಿಯಲ್ಲಿ ಇರಬಹುದೇನೋ ಅಷ್ಟೇ. ಆದರೆ ಕೆಲವಷ್ಟು ವಿಷಯಗಳನ್ನ, ವಿಚಾರಗಳನ್ನ ಬೇರೆಯವರೊಡನೆ ಹಂಚಿಕೊಳ್ಳಬೇಕು ಅನ್ನಿಸಿದಾಗ ಸಮಾನ ಮನಸ್ಕರು ಸಿಗದೇ ಒದ್ದಾಟವೆನಿಸಿಬಿಡುತ್ತೆ. ಆಗ ಮೂಡಿದ್ದೇ ಈ ಐಡಿಯಾ. 

ಎಲ್ಲಕ್ಕೂ ಮೊದಲು ನಾನು ಬ್ಲಾಗರ್ ಆಗಿದ್ದು ಹೇಗೆ ಅಂತ ಹೇಳ್ಕೋ ಬೇಕು (ಸುಮ್ನೆ ಬ್ಲಾಗ್ ಅಲ್ಲಿ ಅರ್ಥವಿಲ್ಲದೆ ಗೀಚಿದ್ರೂ ಬ್ಲಾಗರ್ ಅಂತಾರೆ ಅಂದ್ಕೊಂಡಿದೀನಿ, ತಪ್ಪಿದ್ರೆ ತಿದ್ಬಿಡಿ). 

ನನ್ನ ತಮ್ಮ ಮೊದಲು ಬ್ಲಾಗ್ ಬರೆಯೋದು ತೋರಿಸೋ ತನಕ ನನಗೆ ಇದರ ಗಂಧಗಾಳಿನೂ ಇರ್ಲಿಲ್ಲ. ನನಗೆ ಇತಿಹಾಸ, ಸಂಸ್ಕೃತದ ಬಗ್ಗೆ ಒಳ್ಳೆ ನಾಲೆಡ್ಜ್ ಇದೆ. ನಾನು ಅದರ ಬಗ್ಗೆ ಬ್ಲಾಗ್ ಬರೀಬೇಕು ಅನ್ನೋದು ಅವನಾಸೆ. ಪ್ರಾರಂಭದಲ್ಲಿ ನಾನೂ ಅತ್ಯುತ್ಸಾಹದಿಂದ, ಏನೋ ದೊಡ್ಡ ಇತಿಹಾಸಜ್ಞಳಾಗಿ ಹೋಗ್ತಿನೇನೋ ಅನ್ನೋಥರ ಒಂದಲ್ಲ ಅಂತ ಎರಡೆರಡು ಬ್ಲಾಗ್ ಕ್ರಿಯೇಟ್ ಮಾಡ್ಕೊಂಡು ಸಾಹಸಕ್ಕಿಳಿದೆ. ಮೂರು ಪೋಸ್ಟ್ ಮಾಡೋಷ್ಟರಲ್ಲಿ ಉತ್ಸಾಹ ಎಲ್ಲ ಜರ್ರ್ ಅಂತ ಇಳಿದೋಯ್ತು. ಆ ವಿಚಾರಗಳ ಬಗ್ಗೆ ಬರೆಯೋಕೆ ಆಳವಾದ ಅಧ್ಯಯನ ಮಾಡಬೇಕಾಗುತ್ತೆ, ಹೀಗೆ ಮನಸ್ಸಿಗೆ ತೋಚಿದ್ದನ್ನೆಲ್ಲಾ ಅಲ್ಲಿ ಗೀಚೋಕ್ಕಾಗುಲ್ಲ, ಚೆನ್ನಾಗಿ ಓದಿ ವಿಮರ್ಶೆ ಮಾಡಿ ನಾನ್ ಬರೆಯೋಷ್ಟರಲ್ಲಿ ಸುಸ್ತಾಗಿ ಹೋಗಿದ್ದೆ, (ನನ್ನ ಸೋಮಾರಿತನ ನನಗೆ ಅದಕ್ಕಿಂತ ಜಾಸ್ತಿ ಬರೆಯೋಕೆ ಅವಕಾಶಾನೇ ಕೊಡಲಿಲ್ಲ ). ಆ ಬ್ಲಾಗ್ ಗೆ ಸದ್ಯಕ್ಕೆ ಅಲ್ಪವಿರಾಮ ಬಿದ್ದಿದೆ, ಅಲ್ಪವಿರಾಮ ಅಲ್ಪವಾಗೇ ಇರುತ್ತೋ ಅಥವಾ ಪೂರ್ಣವಾಗಿ ಬಿಡುತ್ತೋ ಗೊತ್ತಿಲ್ಲ, ಅದು ಪೂರ್ಣ ಆಗದೆ ಇರೋ ಥರ ಮಾಡ್ತೀನಿ ಅಂತ ಸುಮಾರು ದಿನಗಳಿಂದ ಅಂದುಕೊಳ್ತಿದೀನಿ, ಆದ್ರೆ ಮನಸ್ಸು ಯಾಕೋ ಮುದುರಿ ಕುಳಿತು ಬಿಟ್ಟಿದೆ.

ಇಷ್ಟೆಲ್ಲಾ ಆದ್ಮೇಲೆ ಶುರುವಾಯ್ತು ನನ್ನ ಹೊಸ ಹುಚ್ಚು. ಅಂತರ್ಜಾಲದಲ್ಲಿ ಅಂತರ್ಪಿಶಾಚಿಯಂತೆ ಹುಡುಕಿದ್ರೂ ಸಿಗದಿರೋ ಕೆಲ ಕನ್ನಡ ಭಾವಗೀತೆಗಳ ಸಾಹಿತ್ಯ ನಾನೆ ಯಾಕೆ ಇಲ್ಲಿಗೆ ಹಾಕಬಾರದು ಅನ್ನೋ ಯೋಚನೆ ಬಂದಿದ್ದೇ ತಡ ಶುರುವಾಯ್ತು ನನ್ನ ಭಾವಗೀತೆಗಳ ಕೃಷಿ. ಈ ಮೂಲಕವಾದರೂ ಕನ್ನಡಮ್ಮನ ಸೇವೆ ಮಾಡೋ ಹಾಗಾಯ್ತು (ಕನ್ನಡಮ್ಮನ ಸೇವೆ ಅನ್ನೋಕ್ಕಿಂತ ನಮ್ಮ ಸ್ವಂತ ಸಾಹಿತ್ಯ ಬರೆಯೋದಕ್ಕಿಂತ ಬೇರೆಯವರ ಸಾಹಿತ್ಯದ ಸಂಕಲನ ಮಾಡಿ ಕಾಪಿ ಪೇಸ್ಟ್ ಮಾಡೋದು ಸುಲಭದ ಕೆಲಸ ಅನ್ನೋ ನನ್ನ ಸೋಮಾರಿತನ ಇಲ್ಲೂ ಕೆಲಸ ಮಾಡ್ತು). ಜೊತೆಗೆ ಗೆಳತಿಯೂ ಕೈಜೋಡಿಸಿ ಕೆಲಸ ಇನ್ನೂ ಸುಲಭ ಆಗೋಯ್ತು. ಬಹುಶಃ ಅದೊಂದೇ ನಾನು ರೆಗ್ಯುಲರ್ ಆಗಿ ಅಪ್ ಡೇಟ್ ಮಾಡ್ತಿರೋ ಬ್ಲಾಗ್ ಅನ್ಸುತ್ತೆ. ಎಲ್ಲಾ ಬ್ಲಾಗನ್ನೂ ಅಪ್ ಡೇಟ್ ಮಾಡಬೇಕು ಅನ್ನೋ ಆಸೆಯೇನೋ ಇದೆ, ಆದರೆ ಸಮಯಾನೆ ಸಾಲ್ತಿಲ್ಲ.

ಇದು ನನ್ನ ಬ್ಲಾಗಿಂಗ್ ಹಿಸ್ಟರಿ. ಸದ್ಯಕ್ ಇಷ್ಟೇ.

(ಇಂಗ್ಲೀಷ್ ಪದಗಳನ್ನ ಕನ್ನಡದಲ್ಲಿ ಬರೆಯೋದು (ಟೈಪ್ ಮಾಡೋದು) ತುಂಬಾ ಕಷ್ಟ ಕಣ್ರೀ, ಸ್ಪೆಲ್ಲಿಂಗ್ ಏನೋ ಟೈಪ್ ಮಾಡಿದ್ರೆ ಅದಿನ್ನೇನೋ ತೊಗೊಳುತ್ತೆ, ಯಾರಾದ್ರೂ ಅನುಭವಸ್ಥರು ಇದ್ದರೆ ಗೈಡ್ ಮಾಡ್ರಿ).

3 comments:

  1. ಕನ್ನಡ ಟೈಪ್ ಮಾಡಲು ಸುಲಭ ಆಗಬೇಕೆಂದರೆ ನುಡಿ ತಂತ್ರಾಂಶವನ್ನ ನಿಮ್ಮ ಕಂಪ್ಯೂಟರ್ ಗೆ ಅಳವಡಿಸಿ.(ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಇದ್ದರೆ) http://kagapa.org/thantra.html ಈ ಕೊಂಡಿ ನೋಡಿ. ಇದರಲ್ಲಿ ಸರಳ ನುಡಿ ಯನ್ನ ಪ್ರಯತ್ನಿಸಿ. ಟೈಪ್ ಮಾಡುವುದನ್ನು ಕಲಿಯಲು ಕೀಲಿಮಣೆ ಬೋಧಕ ೧ & ೨ ಇದೆ.

    ಸರಳ ನುಡಿ ಅಳವಡಿಸಿದ ಮೇಲೆ ಟಾಸ್ಕ್ ಬಾರ್ ಮೇಲೆ ಕನ್ನಡದ ಸಣ್ಣ ನಕ್ಷೆಯ ಐಕಾನ್ ಮೂಡುತ್ತೆ. ರೈಟ್ ಕ್ಲಿಕ್ ಮಾಡಿ ಯುನಿಕೋಡ್ ಆಯ್ಕೆ ಮಾಡಿ. ಅಲ್ಲೂ ಸಹ ಕೀಲಿಮಣೆ ವಿನ್ಯಾಸ ಸಿಗುತ್ತೆ. ಹೆಚ್ಚಿನ ಸಹಾಯ ಬೇಕೆಂದರೆ ತಿಳಿಸಿ.

    ReplyDelete
  2. ಮೌನಿಗೆ,
    ಕನ್ನಡದಲ್ಲಿ ಟೈಪ್ ಮಾಡುವುದು ಅಭ್ಯಾಸದ ವಿಚಾರ. ಅದರಲ್ಲಿ ಕಷ್ಟ ಏನೇ ಇದ್ದರೂ ಅದು ನಮ್ಮ-ನಮ್ಮ ತಾಳ್ಮೆಗೆ ಸಂಬಂಧಿಸಿದ್ದು. ನುಡಿ ತಂತ್ರಾಂಶಕ್ಕೂ, ಬರಹ ತಂತ್ರಾಂಶಕ್ಕೂ, ಗೂಗಲ್ ಕನ್ನಡ ಟ್ರಾನ್ಸ್ ಲಿಟರೇಟರ್ ಗೂ ಬಹಳ ವ್ಯತ್ಯಾಸವುಂಟು. ನುಡಿ ಸರ್ಕಾರದಿಂದ ಅಧಿಕೃತವಾಗಿ ಸ್ವೀಕೃತಗೊಂಡ ತಂತ್ರಾಂಶ. ಹಾಗಂತ ಅದನ್ನ ಬಳಸುವುದು ಸುಲಭ ಅಂತಲ್ಲ. ಒಬ್ಬೊಬ್ಬರಿಗೆ ಒಂದೊಂದು ತಂತ್ರಾಂಶ ಸುಲಭವೆನಿಸುತ್ತದೆ. ಮನಸ್ಸು ಮಾಡಿದರೆ ಈ ಮೂರನ್ನೂ ಸುಲಭವಾಗಿ ಬಳಸಿಕೊಳ್ಳಬಹುದು.
    ಈ ಬ್ಲಾಗ್ ಬರೆಯಕ್ಕೆ ಶುರು ಮಾಡಿ ಇನ್ನೇನು ಒಂದು ವರ್ಷ ಆಗ್ತಾ ಬರ್ತಿದೆಯಲ್ಲವೇ? ಆಗ ಟೈಪ್ ಮಾಡುವಾಗ ಆಗುತ್ತಿದ್ದ ಕಷ್ಟ ಈಗ ಆಗುತ್ತಿಲ್ಲ ಅಲ್ಲವೇ? ಅಷ್ಟೇ....
    ಕನ್ನಡದಲ್ಲಿ ಟೈಪ್ ಮಾಡಕ್ಕೆ ಕಷ್ಟ ಅಂತ ಮೂಗು ಮುರಿಯೋ ನನ್ನ ಹಲವಾರು ಸ್ನೇಹಿತರಿಗೂ ನಾನು ಇದೇ ಮಾತು ಹೇಳ್ತಾ ಬಂದಿದ್ದೀನಿ. "ಏನೇನೋ ಕಲೀತೀವಂತೆ, ಕನ್ನಡದಲ್ಲಿ ಟೈಪ್ ಮಾಡಕ್ಕೆ ಕಲಿಯೋದು ಕಷ್ಟವಾ? ಮೊಬೈಲ್ ಬಂದ ಹೊಸದರಲ್ಲಿ ಎಸ್ ಎಂ ಎಸ್ ಮಾಡೋದನ್ನ ಕಲಿಯಕ್ಕೆ ಎಷ್ಟು ಸಮಯ ತೊಗೊಂಡ್ರಿ? ಕಲಿಯಕ್ಕೆ ಇಷ್ಟವಿತ್ತು, ಎಷ್ಟು ಸಮಯಾ ತೊಗೊಂಡ್ರೂ ಬೆರಳುಗಳನ್ನ ನೋಯಿಸಿಕೊಂಡಾದ್ರೂ ಕಲೀಲಿಲ್ವೆ? ಮನಸ್ಸಿದ್ದರೆ ಮಾರ್ಗ. ಇಷ್ಟವಿದ್ದಾಗ ಕಷ್ಟವಿದ್ದರೂ ಕಲೀತೀವಿ ಅಷ್ಟೇ...." ಹೀಗೆ ಹಲವಾರು ಬಾರಿ ನನ್ನ ಮಾತನ್ನ ಕೇಳಿದ ಮೇಲೂ ನನ್ನ ಕೆಲವಾರು ಸ್ನೇಹಿತರ ಮನಸ್ಸುಗಳು ಕರಗಿಲ್ಲ. ಅವರಿಗೆ ಆ ಆಸೆ ಬಂದಿಲ್ಲ. ಇಂಗ್ಲೀಷ್ನಲ್ಲಿ ಏನೇನೋ ಒತ್ತಿದರೂ ಕಡೆಗದು ಕನ್ನಡದ ಅಕ್ಷರಗಳಾಗಿ ಕಂಡಾಗ ಆಗುವ ಖುಷಿಯೇ ಬೇರೆ...... :)
    ಕಷ್ಟವಾದರೂ ಕನ್ನಡದಲ್ಲಿ ಭಾವನೆಗಳನ್ನ ಹರೀಬಿಡ್ತಾ, ಅದನ್ನ ಹಂಚಿಕೊಳ್ತಾ ಇರೋ ನಿಮಗೆ, ನನ್ನ ಶುಭ ಹಾರೈಕೆಗಳು..... :)

    -ನಡೆದಾಡುವ ಭೂತಮ್ಮ

    ReplyDelete
  3. ಈ ಬ್ಲಾಗನ್ನು ಬರೆಯಲು ಪ್ರಾರಂಭಿಸಿದಾಗ ಸ್ವಲ್ಪ ಕಷ್ಟ ಎನಿಸಿದ್ದು ನಿಜ. ಆದರೆ ಮನದ ತುಡಿತಗಳನ್ನು ಹೊರಹಾಕಲು ಮಾತೃಭಾಷೆಯಿಂದ ಮಾತ್ರ ಸಾಧ್ಯ. ವರ್ಷದ ಹಿಂದೆ ಆದ ಕಸಿವಿಸಿ ಈಗ ಖಂಡಿತ ಇಲ್ಲ. ಕನ್ನಡ ಟೈಪಿಂಗ್ ಬಹಳವೇ ಸುಲಭವೆನಿಸುತ್ತಿದೆ. ಆದರೆ ನನ್ನನ್ನು ಕಾಡುವ ಅನೇಕ ವಿಚಾರಗಳ ಬಗೆಗೆ, ಇಲ್ಲಿ ಬರೆದು ನನ್ನ ವಿಚಾರಾಸಕ್ತಿಗಳನ್ನು ಇಲ್ಲಿ ಹರವಿಡಬೇಕೆಂದುಕೊಳ್ಳುತ್ತೇನೆ, ಸಮಯದ ಅಭಾವ ಮತ್ತು ಬರೆಯ ಹೊರಟಾಗ ಆಗುವ ಗೊಂದಲಗಳು, ವಾಕ್ಯ ಬಗೆಗಿನ ಅನುಮಾನ ಅವು ಮಾತ್ರ ತೊಡಕು ಈಗ ಅಷ್ಟೇ.ನಿಮ್ಮ ಹಾರೈಕೆಗೆ ನಾನು ಅಭಾರಿ - ವಸು.

    ReplyDelete