Saturday, 31 December 2011

ಮಲೆಗಳಲ್ಲಿನ ಮದುಮಗಳೊಂದಿಗೆ ಹರಟೆ

ಈಗ್ಗೆ ಸ್ವಲ್ಪ ದಿನಗಳಿಂದ ಮಲೆಗಳಲ್ಲಿನ ಮದುಮಗಳೊಂದಿಗೆ ಮಾತನಾಡುತ್ತಾ ಕುಳಿತಿದ್ದೆ. ಇಲ್ಲಿಗೆ ಬರೆಯಲು ಪುರುಸೊತ್ತೇ ಕೊಡದಂತೆ ನನ್ನನ್ನು ಆವರಿಸಿಕೊಂಡು ಬಿಟ್ಟಿದ್ದಳವಳು. ರಸಋಷಿಯೊಬ್ಬರ ಕೈಗಳಲ್ಲಿ ತಾನು ಅರಳಿಕೊಂಡ ಬಗೆಯನ್ನು ಅವಳೇ ವಿವರಿಸುತ್ತಿದ್ದಂತಿತ್ತು. ಅವಳ ಮಾತು, ನಡೆ, ಕಾಡು ಇವುಗಳಲ್ಲಿ ಎಷ್ಟು ಕಳೆದು ಹೋಗಿದ್ದೆನೆಂದರೆ ಕಾಲ ಸರಿದದ್ದೇ ತಿಳಿಯುತ್ತಿರಲಿಲ್ಲ.


"ಮಲೆಗಳಲ್ಲಿ ಮದುಮಗಳು" ಈ ಕೃತಿಯ ಬಗ್ಗೆ ಬಹಳಷ್ಟು ಕೇಳಿದ್ದೆನಾದರೂ, ಇಷ್ಟು ಬೇಗ ಇದನ್ನು ಓದುವ ಅವಕಾಶ ಸಿಗಬಹುದೆಂದು ನಾನು ಕನಸಿರಲಿಲ್ಲ. ಇದನ್ನು ಹಿಡಿಯುವ ಮೊದಲು ಮನದಲ್ಲಿದ್ದುದು ಎರಡೇ ಭಾವಗಳು. ಒಂದುಶತಮಾನದ ಶ್ರೇಷ್ಠ ಕವಿಯೊಬ್ಬರ ಉತ್ಕೃಷ್ಟವಾದ ಕೃತಿಯೊಂದನ್ನು ಓದುತ್ತಿದ್ದೇನೆ೦ಬುದು ಒಂದಾದರೆ, ಮತ್ತೊಂದು ಈ ಕೃತಿ ಚಂದನ ವಾಹಿನಿಯಲ್ಲಿ ಧಾರಾವಾಹಿಯಾಗಿ ಮೂಡಿಬಂದಾಗ ಅದನ್ನು ನೋಡ ಹೋಗಿ ಎರಡು ಮೂರು ಕಂತನ್ನು ನೋಡುವಷ್ಟರಲ್ಲಿ, "ಬರೀ ಕಾಡು, ಅಲ್ಲಿಂದ ಇಲ್ಲಿಗ್ ಬರದು ಇಲ್ಲಿಂದ ಅಲ್ಲಿಗ್ ಹೋಗದು, ಇದ್ರಲ್ಲೆನಿದೆ" ಅಂದುಕೊಂಡು, ಬೇಸರಿಸಿ ಅದರ ವೀಕ್ಷಣೆಯನ್ನು ಅಲ್ಲಿಗೇ ನಿಲ್ಲಿಸಿಬಿಟ್ಟ ನೆನಪು. ಆ ನೆನಪೇ ನನ್ನನ್ನು ಈ ಹೊತ್ತಿಗೆಯನ್ನು ಹಿಡಿದು ಕೂರುವ ಮೊದಲು ಇನ್ನೊಮ್ಮೆ ಯೋಚಿಸುವಂತೆ ಮಾಡಿತ್ತು. ಎಲ್ಲಿ ಬೇಸರಿಕೆಯುಂಟಾಗಿ ಓದನ್ನು ಅರ್ಧಕ್ಕೆ ನಿಲ್ಲಿಸಿ ಬಿಡುತ್ತೇನೋ ಎಂಬ ಭಾವ ಕಾಡುತ್ತಿತ್ತು. ಸಕಾರಣವಾಗಿಯೇ ಇತ್ತೆನ್ನಿ. ಏಕೆಂದರೆ ಇಲ್ಲಿ ನಾನು ಸಾಮಾನ್ಯವಾಗಿ ನಿರೀಕ್ಷಿಸುವ ಒಂದು ಗಟ್ಟಿ ಕಥಾ ಹಂದರದ ಮೇಲೆ ಮಿಕ್ಕೆಲ್ಲ ಪಾತ್ರಗಳೂ ಸುತ್ತುವಂತಹ ವಸ್ತು ಇರುವ ಬಗೆಗೆ ನನಗೆ ಮೊದಲಿನಿಂದಲೂ ಅನುಮಾನವಿತ್ತು. ನಂತರ ಆದದ್ದಾಗಲಿ ಒಮ್ಮೆ ಓದಿಯೇ ಬಿಡೋಣವೆಂದು ಹಠ ಹಿಡಿದು ಕುಳಿತೆ.

ಈಗ ಯೋಚಿಸಿದರೆ ಅನಿಸುತ್ತದೆ, ಓದದೇ ಹೋಗಿದ್ದರೆ ಎಷ್ಟು ಪಶ್ಚಾತ್ತಾಪ ಪಡುತ್ತಿದ್ದೆನೆಂದು, ಅಥವಾ ಓದಿಲ್ಲವೆಂದು ಪರಿತಪಿಸಲೂ ನನಗೆ ತಿಳಿಯುತ್ತಿರಲಿಲ್ಲವೇನೋ, ಅಂತಹ ಅದ್ಭುತ ಅನುಭವವೊಂದನ್ನು ಕಳೆದುಕೊಳ್ಳುತ್ತಿದ್ದೆ. ಇದನ್ನು ಹಿಡಿದು ಕುಳಿತಾಗ ಮಲೆಗಳಲ್ಲಿನ ಆ ಮದುಮಗಳು ಈ ಪರಿ ಕಾಡಬಹುದೆಂದು ನಾನು ಭಾವಿಸಿರಲಿಲ್ಲ. ಯಾವುದೋ ದಿವ್ಯ ಮಹತ್ತರ ಲೋಕದ ಸಂಚಾರಗೈದು ಮತ್ತೆ ಇಹಕ್ಕೆ ಬಿದ್ದಂತಿದೆ ಅನುಭವ. ಆ ಶಬ್ಧಭಂಡಾರ, ಕವಿವರ್ಣನೆ, ಪ್ರಕೃತಿ, ಹೊರಪ್ರಪಂಚದ ಜ್ಞಾನವೇ ಇಲ್ಲದೆ ತಮ್ಮದೇ ಸೀಮಿತ ಪ್ರದೇಶವನ್ನೇ ಪ್ರಪಂಚವೆಂದು ನಂಬಿ ಬದುಕುವ ಮುಗ್ಧಜೀವಗಳು, ಇವುಗಳಿಗೆಲ್ಲ ಕಳಶವಿಟ್ಟಂತೆ ಕಾಡು. ಆಹ್! ಆ ಅನುಭವವೇ ಅದ್ಭುತ, ಅದನ್ನು ಪದಗಳಲ್ಲಿ ಹಿಡಿದಲಾಗದು. ಓದಿಯೇ ಅನುಭವಿಸಬೇಕು.

ಇಡೀ ಕಾದಂಬರಿಯುದ್ದಕ್ಕೂ ಬೇರೆ ಮಾನವ ಪಾತ್ರಗಳೆಲ್ಲ ಒಂದು ತೂಕವಾದರೆ, ಕಾಡೇ ಮತ್ತೊಂದು ತೂಕ. ಇಲ್ಲಿ ಕಾಡು ವಹಿಸಿರುವ ಪಾತ್ರ ಅದರ ಪಾತ್ರಕ್ಕಿರುವ ಪ್ರಾಮುಖ್ಯತೆ ಮತ್ತಿನ್ನಾವ ಪಾತ್ರಕ್ಕೂ ಇಲ್ಲ. ಇಲ್ಲಿ ಕಥೆಯನ್ನು ಹುಡುಕುವವರೇ ಮೂರ್ಖರು (ನನ್ನನ್ನೂ ಸೇರಿಸಿ) ಅಷ್ಟೇ. ಕಾದಂಬರಿಯ ಉಪಾದಿಯಲ್ಲೇ ಕವಿ ಹೇಳಿಬಿಡುತ್ತಾರೆ -

ಇಲ್ಲಿ -
             ಯಾರೂ ಮುಖ್ಯರಲ್ಲ;
                    ಯಾರೂ ಅಮುಖ್ಯರಲ್ಲ;
                           ಯಾವುದೂ ಯಃಕಶ್ಚಿತವಲ್ಲ!

ಇಲ್ಲಿ -
              ಯಾವುದಕ್ಕೂ ಮೊದಲಿಲ್ಲ;
                     ಯಾವುದಕ್ಕೂ ತುದಿಯಿಲ್ಲ;
                            ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ;
                                   ಕೊನೆಮುಟ್ಟುವುದೂ ಇಲ್ಲ!

ಇಲ್ಲಿ -
               ಅವಸರವೂ ಸಾವಧಾನದ ಬೆನ್ನೇರಿದೆ!

ಇಲ್ಲಿ -
               ಎಲ್ಲಕ್ಕೂ ಇದೆ ಅರ್ಥ;
                   ಯಾವುದೂ ಅಲ್ಲ ವ್ಯರ್ಥ;
                          ನೀರೆಲ್ಲ ಊ ತೀರ್ಥ!


ಅಲ್ಲಿಗೇ ಓದುಗನಾದವನು ಅರ್ಥೈಸಿಕೊಂಡು ಬಿಡಬೇಕು. ಯಾವುದೋ ಒಂದು ಪಾತ್ರದ ಬಗ್ಗೆಯಾಗಲೀ, ವಸ್ತುವಿನ ಬಗ್ಗೆಯಾಗಲೀ ಕಥೆ ಹೆಣೆದು, ಅದನ್ನು ಸುಖಾಂತವೋ, ದುರಂತವೋ ಅಂತೂ ಏನೋ ಒಂದು ಕೊನೆಗಾಣಿಸಿ ಮುಗಿಸುವ ವಸ್ತುವಲ್ಲ ಇಲ್ಲಿರುವುದು ಎಂದು. ಇಡೀ ಪುಸ್ತಕದುದ್ದಕ್ಕೂ ನಮಗೆ ಆ ಅನುಭೂತಿಯುಂಟಾಗುತ್ತದೆ. ಇಲ್ಲಿ ಎಲ್ಲ ಪಾತ್ರಗಳೂ ಮುಖ್ಯವೇ, ಅವರವರ ಪಾತ್ರಗಳನ್ನು ಅವರವರೇ ವಹಿಸಬೇಕು.ಅವರವರ ಜೀವನಕ್ಕೆ ಅವರವರೇ ನಾಯಕರು ಎಂಬಂತೆ, ಇಲ್ಲಿ ಎಲ್ಲರೂ ನಾಯಕರೇ, ಅಂತೆಯೇ ಎಲ್ಲರೂ ಸೇವಕರೇ.

ಒಂದು ಶತಮಾನದ ಹಿಂದಿನ ನಮ್ಮ ಪೂರ್ವಜರ ಜೀವನ ಅಕ್ಷರಗಳಲ್ಲಿ, ಕವಿವರ್ಣನೆಯೊಂದಿಗೆ ಬಿಚ್ಚಿಕೊಳ್ಳುತ್ತಾ ಹೋದರೆ, ಮೊದಮೊದಲು ಕಾಡಿನ ಏಕತಾನತೆ, ನಂತರ ಅಲ್ಲಿನ ಆಗಿನ ಬದುಕಿನ ಬಗೆಗೆ, ಅವರ ಸಂಚಾರ ವೇಗದ ಬಗೆಗೆ ಕೌತುಕ, ನಿಧಾನವಾಗಿ ನಾವು ಬಯಸುವ ಕಥಾವಸ್ತುವೊಂದು ಅಲ್ಲೆಲ್ಲೋ ಕೈಹಿಡಿದ ಅನುಭವ, ಆ ಕಥಾ ವಸ್ತುವಿನೊಂದಿಗೆ, ಮೊದಲಿನ ನುಡಿಗಳನ್ನು ಮರೆಸಿ ಮತ್ತೆ ಸುಖಾಂತವೊಂದನ್ನು ಧೇನಿಸುವ ಹುಚ್ಚು ಮನಸ್ಸು, ಕೊನೆಗೆ ಕವಿ ತಮ್ಮ ಮಾತಿನಂತೆ ನಡೆದು, ಅವಸರವನ್ನೂ ಸಾವಧಾನದ ಬೆನ್ನೇರಿಸಿ, ಮೊದಲು ತುದಿಯಿಲ್ಲದ ಕಥೆಯನ್ನು ಕೊನೆಮುಟ್ಟಿಸದೇ ಕೈಬಿಟ್ಟಾಗ, ಮುನ್ನುಡಿ ನೆನಪಾಗಿ ಉಂಟಾಗುವ ಗೊಂದಲದಿಂದೊಡಗೂಡಿದ ವಿಸ್ಮಯ, ಹೀಗೇ, ಅನೇಕ ಭಾವಗಳು ಮನಃಪಟಲದಲ್ಲಿ ಹೆಣೆದುಕೊಳ್ಳುತ್ತವೆ.

ಮಲೆನಾಡಿನ ಕಾಡನ್ನು ಪ್ರೀತಿಸುವವರೆಲ್ಲ ಅದರ ಗತ ವೈಭವವನ್ನೊಮ್ಮೆ ಅರಿಯಬೇಕಾದರೆ, ಮಲೆಗಳಲ್ಲಿನ ಈ ಮದುಮಗಳನ್ನು ಮಾತನಾಡಿಸಲೇ ಬೇಕು.

Sunday, 2 October 2011

ಕಾರಿರುಳಿನಾಗಸದಿ...

ಪ್ರತಿದಿನವೂ ಕಾರ್ಯನಿಮಿತ್ತ ಊರಿ೦ದೂರಿಗೆ ಓಡಾಡುವ ಅನಿವಾರ್ಯತೆ ನನ್ನದು. ಕೆಲವೊಮ್ಮೆ ಪ್ರಯಾಣ ಪ್ರಯಾಸಕರವೆನ್ನಿಸಿದರೂ, ಬಹಳಷ್ಟು ಸಲ ಮರೆಯಲಾರದ ಸಂತಸದ ಘಳಿಗೆಗಳನ್ನು ಕಟ್ಟಿಕೊಡುತ್ತದೆ. ಇಂದೂ ಅಷ್ಟೇ, ಇಂದಿನ ಪ್ರಯಾಣ, ಆಹ್! ಅದರ ಆಹ್ಲಾದತೆಯನ್ನು ಯಾವ ಪದಗಳಲ್ಲಿ ನಿರುಕಿಸಲಿ, ತಿಳಿಯುತ್ತಿಲ್ಲ. ಪ್ರಯಾಣದಲ್ಲಿ ಕಿಟಕಿಯ ಬದಿಯ ಜಾಗ ಸಿಕ್ಕಿಬಿಟ್ಟರೆ ಸಾಕು ಜಗವೇ ದಕ್ಕಿದಷ್ಟು ಸಂತಸ ನನಗೆ. ಅದರಲ್ಲೂ ಬರುವಾಗ ಕತ್ತಲೆಯಾಗಿದ್ದರಂತೂ ಸೈ, ಕಿಟಕಿಯಿಂದಾಚೆ ಇಣುಕಿದರೆ ಆಗಸದ ತುಂಬೆಲ್ಲ ಎಳೆಗಳ ಹಂಗಿಲ್ಲದ ಚುಕ್ಕಿಗಳ ರಂಗವಲ್ಲಿ. ಸಾಲದ್ದಕ್ಕೆ, ರೋಗಿ ಕೇಳಿದ್ದೂ ವೈದ್ಯ ಹೇಳಿದ್ದೂ ಎಂಬಂತೆ ನಮ್ಮ ಘನ ಸರ್ಕಾರ ಲೋಡ್ ಶೆಡ್ಡಿಂಗ್ ಬೇರೆ ಶುರುಮಾಡಿದೆ ಇಂದಿನಿಂದ. ಯಾವುದೇ ಕೃತಕತೆಯ ಸೊಂಕಿಲ್ಲದೆ ಸಹಜವಾಗಿ ಮಿನುಗುತ್ತಿರುವ ಕೋಟಿದೀಪಗಳ ಸೌಂದರ್ಯ ಇಮ್ಮಡಿಯಾಗಿ ಕಂಗೊಳಿಸುವುದು ಈ ಸಮಯದಲ್ಲೇ.

ಕಪ್ಪನೆ ದಪ್ಪ ಕಂಬಳಿಯ ನಡುನಡುವೆ ಚಿಕ್ಕ ಚಿಕ್ಕ ತೂತುಗಳಾಗಿ, ಅಲ್ಲಿಂದ ಬೆಳಕು ಹಣುಕಿದಂತೆ, ಮೇಲೆ ಭೂಮಿಯನ್ನೆಲ್ಲ ಹೊಚ್ಚಿರುವ ಕಾರಿರುಳಿನಾಗಸದ ತುಂಬೆಲ್ಲ ಝಗಮಗಿಸುವ ತಾರೆಗಳು, ನಮಗಿಂತಲೂ ದೀಪ ಬೇಕೇ ನಿಮಗೆ ಎಂದು ಕೊಪಿಸಿಕೊಂಡಂತಿದ್ದವು. ಒಂದಕ್ಕೊಂದು ಸ್ಪರ್ಧೆಯನ್ನಿತ್ತು ಮಿನುಗುತ್ತಿದ್ದವು. ಅಮಾವಾಸ್ಯೆ ಹತ್ತಿರವಿದೆ. ಚಂದ್ರನಿಲ್ಲದ ರಾತ್ರಿಯೂ ಎಷ್ಟೊಂದು ಸೊಬಗು, ಕಾಣಬಲ್ಲವರಿಗಷ್ಟೇ ತಿಳಿಯುವುದು ಅದರ ಸೌಂದರ್ಯ. ತಾರೆಗಳ ರೂಪವನ್ನು ತನ್ನನ್ನು ಬಿಟ್ಟು ಬೇರೆ ಯಾರೂ ಸವಿಯಬಾರದೆಂದೇ ಚಂದ್ರ ತನ್ನ ಬೆಳಕಿನಿಂದ ಅವುಗಳನ್ನು ಮರೆಮಾಚುತ್ತಾನೋ ಏನೋ? ಅಥವಾ ತಾರೆಗಳ ಮುಂದೆ ತನ್ನ ಸೌಂದರ್ಯವನ್ನು ಯಾರೂ ಹೊಗಳಲಾರರೆಂದೇ ಅತಿಯಾಗಿ ಬೆಳಗುತ್ತಾನೆಂದೆನಿಸುತ್ತೆ.

ಹುಣ್ಣಿಮೆಯ ಸೊಬಗನ್ನು ಅಷ್ಟೆಲ್ಲಾ ಹೊಗಳುವ ಕವಿಗಳು, ಈ ತಾರೆಗಳನ್ನೇಕೆ ಕಡೆಗಣಿಸುವುದು? ನನ್ನ ಕಂಗಳಿಗಂತೂ ಸಗ್ಗದ ಸಿರಿ ಎದುರು ಬಂದು ನಿಂತಿದೆಯೇನೋ ಎಂಬಷ್ಟು ಸಂತಸ. ದಾರಿಯುದ್ದಕ್ಕೂ ಕಣ್ಣು ಕೈಗಳು ಕಿಟಕಿಯಿಂದಾಚೆಯೇ ಹೊಲಿದುಕೊಂಡಿದ್ದವು. ಆದರೆ ಡ್ರೈವರ್ ಮಾತ್ರ ಹೆದರಿದಂತಿದ್ದ. ಎಲ್ಲಿ ನಾನು ಕತ್ತು ಪೂರ್ತಿ ಹೊರಗೆ ತೂರಿಸುತ್ತೇನೋ ಎಂದು ಹೆದರಿ "ಮೇಡಮ್,ಸ್ವಲ್ಪ ಒಳಗೆ" ಎಂದು ಪದೇ ಪದೇ ಹೇಳುತ್ತಿದ್ದ. ಅವನದೂ ತಪ್ಪಿಲ್ಲ, ನನ್ನ ಮನದೊಳಗಣ ಭಾವೋತ್ಕರ್ಷ ಅವನಿಗೆ ತಿಳಿಯುವ ಬಗೆಯಾದರೂ ಹೇಗೆ? ಈ ಕೋಟಿ ತಾರೆಗಳೊಡನೆ ನನ್ನ ಬಾಲ್ಯದ ಕೋಟಿ ನೆನಪುಗಳೂ ತೆಕ್ಕೆ ಹಾಕಿಕೊಂಡಿವೆ. ಇವನ್ನು ನಿಟ್ಟಿಸಿದಾಗೆಲ್ಲ ಬಾಲ್ಯದ ಆ ದಿನಗಳು ಕಣ್ಣೆದುರು ನಿಂದು, ಮನಸ್ಸಿಗೆ ಮುದವೀಯುತ್ತವೆ.

ಒಂದೊಂದೇ ಚುಕ್ಕಿ ಸೇರಿಸಿ ಅವಕ್ಕೆ ಆಕಾರ ಕೊಡುವುದಿದೆಯಲ್ಲ, ಅದರಷ್ಟು ಸಂತಸವನ್ನೀಯುವ ಘಳಿಗೆಗಳು, ನನ್ನ ಮಟ್ಟಿಗೆ ಬೇರಾವುದೂ ಇಲ್ಲ. ಚುಕ್ಕಿಗಳೊಡನೆ ಒಮ್ಮೆ ಗೆಳೆತನವಾದರೆ ಮುಗಿದೇ ಹೋಯಿತು, ನಮ್ಮ  ಸುತ್ತಣ ಪ್ರಪಂಚವನ್ನೆಲ್ಲ ಮರೆಸಿ ನಮ್ಮನ್ನು ತಮ್ಮೊಳಗೆ ಲೀನವಾಗಿಸಿಕೊಂಡು ಬಿಡುತ್ತವೆ ಅವು. ಚಿಕ್ಕಂದಿನಲ್ಲಿ ಹೀಗೆ ಕರೆಂಟು ಕೈ ಕೊಟ್ಟಾಗೆಲ್ಲ, ನಾವು ಒಂದೋ ಎಲ್ಲಾ ಸೇರಿ ಕಣ್ಣಾಮುಚ್ಚಾಲೆ ಆಡುತ್ತಿದ್ದೆವು, ಇಲ್ಲವೇ, ಹೀಗೆ ತಾರೆಗಳನ್ನು ಸೇರಿಸಿ ರಾಶಿಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೆವು. ಒಂದಷ್ಟನ್ನು ಜೋಡಿಸಿ, ಇನ್ನೇನು ಒಂದು ರಾಶಿ ಮಾಡಿದೆವು ಅನ್ನೋಷ್ಟರಲ್ಲಿ, ಯಾವುದಾದರೂ ನಕ್ಷತ್ರ ಬಿದ್ದೋ ಅಥವಾ ನಮ್ಮ ಕಣ್ತಪ್ಪಿಯೋ ಮತ್ತೆ ಜೋಡಣೆ  ಕೈ ಕೊಡುತ್ತಿತ್ತು. ಮತ್ತೆ ಛಲಬಿಡದ ವಿಕ್ರಮಾಂಕನಂತೆ ಶುರು ನಮ್ಮ ಪ್ರಯತ್ನ.

ನಕ್ಷತ್ರ ಬೀಳೋದನ್ನ ನೋಡಬಾರದಂತೆ. ದೇವರಿಗೆ ಕೋಪ, ನಮಗೆ ಪಾಪ ಬರುತ್ತದಂತೆ. ಇದು ನಮ್ಮಜ್ಜಿಯ ನಂಬಿಕೆ. ಹೀಗಾಗಿ ಯಾವಾಗ್ಲಾದ್ರೂ ಸರಿ, ತಾರೆ ಜಾರೋದನ್ನ ನೋಡಿದೆ ಅಂತ ಹೇಳಿದರೆ ಸಾಕು, ತಕ್ಷಣ "ರಾಮ ರಾಮ, ಕೃಷ್ಣ ಕೃಷ್ಣ" ಅಂತ ಹೇಳಿಸುತ್ತಿದ್ದಳು. ಯಾಕಜ್ಜಿ ಅಂದರೆ ಅವಳು ನಕ್ಷತ್ರ ಲೋಕದ ಒಳಗುಟ್ಟನ್ನು ಬಲ್ಲವಳಂತೆ,"ದೊಡ್ಡ ದೊಡ್ಡ ಮನುಷ್ಯರು, ಹಿರಿಯರು ತೀರ್ಕೊಂಡಿರ್ತಾರಲ್ಲ, ಅವರೇ ಮೇಲೆ ನಕ್ಷತ್ರಗಳಾಗೋದು, ಅವರ ಪುಣ್ಯ ಅಲ್ಲಿ ಮುಗಿದ ತಕ್ಷಣ ದೇವರು ಮತ್ತೆ ಹುಟ್ಟು ಹೋಗು ಅಂತ ಅವರನ್ನು ಭೂಮಿಗೆ ತಳ್ತಾನೆ. ಅದಕ್ಕೆ ಅವನ್ನೆಲ್ಲ ನೋಡಿದ್ರೆ ದೇವರಿಗೆ ಕೋಪ ಬರುತ್ತೆ" ಅಂತ ಹೇಳ್ತಿದ್ಲು. ಅವಳ ಮಾತು ಮುಗಿಯಲಿಕ್ಕಿಲ್ಲ ನಮ್ಮದಿನ್ನೊಂದು ಪ್ರಶ್ನೆ "ಅಜ್ಜಿ, ಹಾಗಾದ್ರೆ ಹಂಗ್ ಬೀಳೋ ನಕ್ಷತ್ರ ಎಲ್ಲಾ ಭೂಮೀಲಿ ಎಲ್ ಬೀಳ್ತಾವೆ? ನಮ್ಮ ಕಣ್ಣಿಗೆ ಕಾಣೋದೆ ಇಲ್ಲ?" ಅದಕ್ಕೂ ಅವಳ ಬಳಿ ಉತ್ತರ ಸಿದ್ಧ, "ಬೀಳೋ ನಕ್ಷತ್ರಗಳೆಲ್ಲ ಮೊದಲು ಸಮುದ್ರಕ್ಕೆ ಬೀಳ್ತಾವೆ, ಆಮೇಲೆ ಅವರೆಲ್ಲ ಮತ್ತೆ ಹುಟ್ತಾರೆ. ಬರೀ ಪ್ರಶ್ನೆ ಹಾಕ್ತಾವೆ, ಮೊದ್ಲು ದೇವ್ರ ಹೆಸರು ಹೇಳ್ರೋ" ಅಂತ ಅವಳು ಗದರಿದ ತಕ್ಷಣ ರಾಮ ರಾಮ, ಕೃಷ್ಣ ಕೃಷ್ಣ ಅಂದುಬಿಡುತ್ತಿದ್ದೆವು. ಆಮೇಲೆ ಉಳಿದಿರುವ ತಾರೆಗಳಿಗೆ ಒಬ್ಬೊಬ್ಬ ಮಹಾತ್ಮರ ಹೆಸರು ಸೂಚಿಸುತ್ತಾ, ಅದು ಗಾಂಧಿ ಇರಬಹುದು, ಇದು ನೆಹರು ಎಂದೆಲ್ಲ ಹೆಸರು ಕೊಡುತ್ತಿದ್ದೆವು.

ಹೈಸ್ಕೂಲಿಗೆ ಬಂದಾಗ ಬಾಹ್ಯಾಕಾಶದ ಪಾಠಗಳನ್ನೋದುತ್ತಾ, ತಾರೆಗಳ ಬೀಳುವಿಕೆಯ ಸತ್ಯ ತಿಳಿದಾಕ್ಷಣ, ಅವಳ ಬಳಿ ಹೋಗಿ "ಅಜ್ಜಿ, ನೀನ್ ಹೇಳಿದ್ದೆಲ್ಲ ಸುಳ್ಳು, ನೋಡಿಲ್ಲಿ, ನಕ್ಷತ್ರಗಳು ಕೆಳಗೆ ಬೀಳೋದೇ ಇಲ್ಲ, ಎಲ್ಲ ಕಪ್ಪು ರಂಧ್ರವಾಗಿ ಹೋಗ್ತವೆ" ಅಂದು, ಹೋಗ್ರೋ ಮುಂಡೇವಾ, ಏನೇನೋ ಓದ್ಕೊಂಡ್ ಬಂದು ನಂಗೇ ಬುದ್ಧಿ ಹೇಳ್ತಾವೆ, ಅಂತ ಸಹಸ್ರನಾಮಾರ್ಚನೆನೂ ಮಾಡಿಸಿಕೊಂಡಿದ್ದೆವು.

ಆ ಮುಗ್ಧತೆ, ಕುತೂಹಲ, ಹುಡುಕಾಟ, ಸಂತಸ ಇವುಗಳೆಲ್ಲ ಇಂದು ದೂರಾಗಿದ್ದರೂ, ಈ ಎಲ್ಲ ನೆನಪುಗಳನ್ನು ತಮ್ಮೊಡನೆ ಹೊಸೆದುಕೊಂಡು ನಿಂತಿರುವ ತಾರೆಗಳು ಮಾತ್ರ, ತಾನು ನಿಶ್ಚಲ, ಅವಿನಾಶಿ ಎಂದು ಸಾರುತ್ತಿರುವಂತೆ ಭಾಸವಾಗುತ್ತಿರುತ್ತದೆ. ಅವುಗಳ ಅಗಾಧತೆಯ ಮುಂದೆ ಮಾನವನಿರ್ಮಿತವೆಲ್ಲವೂ ಎಷ್ಟೊಂದು ಕ್ಷುಲ್ಲಕ. ಇವುಗಳ ಜೊತೆಯಿಲ್ಲದಿದ್ದರೆ ಜಗತ್ತಿನ ಗವ್ವೆನ್ನುವ ಮೌನದಲಿ ಮಾನವನೆಷ್ಟು ಒಂಟಿ.

ಜತೆಜತೆಗೆ ಇಂದು ಹೊಸದೊಂದು ಅನುಮಾನ ಶುರುವಾಗುತ್ತಿದೆ. ಮೇಲೆ ಆಗಸದಲ್ಲಿ ಮೀನು, ಮೊಸಳೆ, ಕನ್ಯಾ, ಟಗರು, ಎತ್ತು, ಮಿಥುನ, ಶ್ವಾನ, ಹೀಗೆ ಅನೇಕ ಆಕಾರಗಳೊಂದಿಗೆ ಹರಡಿಕೊಂಡಿರುವ ತಾರೆಗಳನ್ನು ನೋಡುತ್ತಾ ಜೀವಿಗಳನ್ನು ಇದೇ ಆಕಾರದಲ್ಲಿ ಸೃಜಿಸಬಹುದಲ್ಲಾ, ಎಂಬ ಉಪಾಯ ಆ ಶಾರದಾವಲ್ಲಭನಿಗೆ ಹೊಳೆಯಿತೋ? ಅಥವಾ ಜೀವಿಗಳನ್ನೇ ಮೊದಲು ಸೃಷ್ಟಿಸಿ ಅನಂತರ ತಾರೆಗಳನ್ನು ಅದೇ ಆಕಾರಕ್ಕನುಗುಣವಾಗಿ ಜೋಡಿಸಿಟ್ಟನೋ?

ನನ್ನಲ್ಲಿ ಇಷ್ಟೆಲ್ಲಾ ಆಲೋಚನೆಗಳು, ನೆನಪುಗಳ ತಾಕಲಾಟ ಮುಗಿಯುವ ಹೊತ್ತಿಗೆ, ತಾರೆಗಳಿಗೆ ಸಡ್ಡು ಹೊಡೆಯುವಂತೆ, ದಾರಿದೀಪಗಳು ಕಣ್ಣಿಗೆ ರಾಚಿದವು. ಊರ ಸೇರಿ, ತಾರೆಗಳೆಲ್ಲ ಮರೆಯಾಗಿ ದೂರ ಹೋದಂತೆ, ನನ್ನ ಬಾಲ್ಯವನು ಯಾರೋ ಕಿತ್ತುಕೊಂಡಂತೆ ಅನಿಸಲು ಶುರುವಾಯಿತು. ಆದರೆ ಊರ ಒಂದು ಬದಿಯನ್ನು ದಾಟಿ ಈಚೆ ಬರುತ್ತಿದ್ದಂತೆ, ಮತ್ತದೇ ಝಗಮಗಿಸುವ ನಕ್ಷತ್ರಲೋಕ, ನಮ್ಮನ್ನು ಯಾರು ದೂರ ತಳ್ಳೋಕೆ ಸಾಧ್ಯ? ನಾವಿಲ್ಲೇ ಇದ್ದೇವೆ ಎಂದು ಆಶ್ವಾಸನೆ ಕೊಟ್ಟವು. ಮನೆಗೆ ಬಂದವಳೇ, ಮಹಡಿಯ ಮೇಲೆ ಹೋಗಿ ಚುಕ್ಕಿಗಳನ್ನು ದಿಟ್ಟಿಸುತ್ತಾ ನಿಂದೆ.

ಮತ್ತೆ ಅಜ್ಜಿ ನೆನಪಾದಳು. ಕೋಟಿ ತಾರೆಗಳ ನಡುವೆ, ಅವಳನ್ನೇ ಅರಸಲು ಪ್ರಾರಂಭಿಸಿದೆ. ಮೇಲೆ ಯಾವುದೋ ಮೂಲೆಯಲಿ, ಚುಕ್ಕಿಯೊಂದು ನನ್ನನ್ನೇ ನೋಡಿ ನಕ್ಕಂತೆನಿಸಿತು. ಯಾರಿರಬಹುದು? ನನ್ನ ಹುಡುಕಾಟದ ಗಮ್ಯ ಇರಬಹುದಾ? ತಿಳಿಯದು. ಆದರೆ ಆ ತಾರೆ ಜಾರೋದನ್ನು ಮಾತ್ರ ನಾನು ಯಾವಾಗ್ಲೂ ಕಾಯುತ್ತಿರ್ತೀನಿ.

Saturday, 27 August 2011

ಸ್ವಾನುಭವ - ನನ್ನ ಚುಟುಕ

ಛೆ! ನಾನು ಓದಿರುವುದು ಏನೂ ಸಾಲದು !
ನನ್ನ ಶಬ್ದ ಭಂಡಾರವೆಷ್ಟು ಚಿಕ್ಕದು !
ಹುಡುಕಿ ಹಿಡಿಯ ಹೋದಷ್ಟೂ ಪದವೇಕೆ ಕೈಗೆ ಸಿಕ್ಕದು?
ಕವಿತೆ ಬರೆಯ ಹೊರಟೊಡೆ ಎಲ್ಲರ ಕಾಡುವ ಭಾವವಿದು !!!??!!

(ಯಾರನ್ನ ಕಾಡುತ್ತೋ ಬಿಡುತ್ತೋ ನನ್ನನಂತೂ ಯಾವಾಗ್ಲೂ ಕಾಡ್ತಾ ಇರುತ್ತೆ, ಬರೆಯೋಕೆ ಕೂತ್ರೆ ಓದಿದ್ದೆಲ್ಲ ಮರತೇ ಹೋಗುತ್ತೆ, ಪದಗಳೇ ಸಿಗುಲ್ಲ).

ಪ್ರಾರಂಭದ ಕಷ್ಟ

ನಾವು ಯಾವುದೋ ಒಂದು ಒಳ್ಳೆ ಗುಂಗಲ್ಲಿ ಒಂದೊಳ್ಳೆ ಹಾಡನ್ನ ಕೇಳ್ತಾ ಮನಸ್ಸಲ್ಲಿ ಯಾವುದಾದರೊಂದು ಕಲ್ಪನೆ ಮಾಡಿಕೊಳ್ಳುತ್ತಿರುವಾಗ, ನಮ್ಮ ಕಲ್ಪನೆ ಸಾಕಾರವಾದಂತೆ ನಾವು ಗುನುಗುತ್ತಿದ್ದ ಹಾಡು ಕಣ್ಣೆದುರೇ ಬಂದು ನಿಂತಂತೆ ಆದರೆ ಮನಸ್ಸು ಎಷ್ಟು ಪ್ರಫುಲ್ಲವಾಗುತ್ತೆ ಅಲ್ವಾ? ನಿಮಗೆ ಎಂದಾದರೂ ಅಂಥ ಅನುಭವ ಆಗಿದ್ಯಾ? 

ನಿಮಗ್ ಆಗಿದ್ಯೋ ಬಿಟ್ಟಿದ್ಯೋ, ನನಗಂತೂ ಇವತ್ತು ಬೆಳಗ್ಗೆ ಆ ಥರ ಫೀಲ್ ಆಯ್ತು, ಬೆಳ್ ಬೆಳಗ್ಗೆನೆ ' ಒಂದು ಮುಂಜಾವಿನಲಿ' ಕೇಳ್ತಾ ಒಬ್ಳೇ ಹಾಯಾಗಿ ಕೂತ್ಕೊಂಡು ಅಂತರ್ಜಾಲದಲ್ಲಿ ಅಲೆಯೋಕೆ ಶುರು ಮಾಡಿದ್ದೆ, ಆಗಲೇ ಹೊರಗೆ ಸೋ..... ಅಂತ ಮಳೇನೂ ಶುರುವಾಗ್ಬೇಕೆ, ಆ ಹಾಡನ್ನ ಮತ್ತೆ ಮೊದಲಿಂದ ಪ್ಲೇ ಮಾಡ್ಕೊಂಡು ೧೦ ನಿಮಿಷ ಮಳೆನೇ ನೋಡ್ಕೊಂಡು ಹಾಯಾಗಿ ಕುಳಿತಿದ್ದೆ (ನನ್ನ ಸೋಮಾರಿತನದ ದಿವ್ಯ ಹವ್ಯಾಸಗಳಲ್ಲಿ ಇದೂ ಒಂದು). ಆಮೇಲೆ ಅದೇ ಗುಂಗಲ್ಲೇ ಹುಡುಕಾಟ ಶುರು ಮಾಡಿದಾಗ ಇಲ್ಲಿ ಒಂದೊಳ್ಳೆ ಬ್ಲಾಗ್ ಓದೋಕೆ ಸಿಗ್ತು, ಅರೆರೆ! ನನ್ ಮನಸ್ಸಿನ ಭಾವಗಳನ್ನ ಇಲ್ಲಿ ಯಾರೋ ಕಟ್ಟಿ ಕೊಡ್ತಿದಾರಲ್ಲ!  ಅನ್ನೋ ಫೀಲ್, ಮನಸ್ಸು ಫುಲ್ ಖುಷ್ ಆಗೋಯ್ತು. 

ಆ ಖುಷಿಯಲ್ಲೇ ಈ ಬ್ಲಾಗ್ ತನ್ನ ಮೊದಲನೇ ಪೋಸ್ಟ್ ಕಂಡಿದ್ದು. ಮನಸ್ಸಿಗೆ ತೋಚಿದ್ದು ಅಂತ ಬ್ಲಾಗ್ ಕ್ರಿಯೇಟ್ ಮಾಡಿದಷ್ಟು ಸುಲಭ ಅಲ್ಲ ಮನಸ್ಸನ್ನ ತೆರೆದಿಡೋದು. ಬ್ಲಾಗ್ ಕ್ರಿಯೇಟ್ ಮಾಡಿ ಹತ್ ಹತ್ರ ಒಂದು ವಾರ ಆಗ್ತಾ ಬಂದ್ರೂ ಏನ್ ಬರೀಲಿ ಅಂತಾನೆ ತೋಚಿರ್ಲಿಲ್ಲ. ಈ ಬಜಾಜ್ ಸ್ಕೂಟರ್ ಗೊತ್ತಲ್ಲ ನಾನೂ ಒಂಥರಾ ಹಾಗೆ, ಯಾವಾಗ್ಲೂ ಸ್ಟಾರ್ಟಿಂಗ್ ಪ್ರಾಬ್ಲಂ. ಆದ್ರೆ ಒಂದ್ಸಲ ಸ್ಟಾರ್ಟ್ ಆದ್ರೆ ಆಮೇಲೆ ಏನೂ ಟ್ರಬಲ್ ಇರುಲ್ಲ. ನನ್ನ ಮನಸ್ಸಿನ ಇಂಜಿನ್ ಸ್ಟಾರ್ಟ್ ಆಗೋಕೆ ಒಂದೊಳ್ಳೆ ಫುಯೆಲ್ ಬೇಕಿತ್ತು ಅನ್ಸುತ್ತೆ. ಅದು ಇಂದು ಮುಂಜಾನೆ ಸಿಕ್ತು. ಯಾವ ವಿಷಯದಿಂದ ಶುರು ಮಾಡ್ಲಿ ಅಂತ ಯೋಚನೆ ಮಾಡ್ತಾ ಮಾಡ್ತಾ ದಿನ ದೂಡ್ತಿದ್ದೆ. ಇವತ್ತು ಮಿಂಚು ಹೊಡೆಯೋ ಥರ ಫಟ್ ಅಂತ ನಾನ್ ಬ್ಲಾಗರ್ ಆಗಿದ್ ವಿಷ್ಯಾನೆ ಹಂಚಿಕೋಬಹುದಲ್ವಾ ಅಂತ ಅನ್ನಿಸಿತು. ಆಗ ಮೂಡಿದ್ದೇ ನನ್ನ ಬ್ಲಾಗಿಂಗ್ ಹಿಷ್ಟರಿ.

(ನಾನ್ ಕನ್ನಡದಲ್ಲಿ ಬರಿತಿರೋ History ಪದ ಸರಿಯಿದೆಯಾ, ನನಗ್ಯಾಕೋ ಅನುಮಾನ. ಆದರೆ ಹಾಗಂತ ಪ್ರತಿಸಲ ಇತಿಹಾಸ ಅಂತ ಅಷ್ಟುದ್ದ ಟೈಪ್ ಮಾಡೋಕೂ ಬೇಜಾರು).

Friday, 26 August 2011

ನನ್ ಬ್ಲಾಗಿಂಗ್ ಹಿಸ್ಟರಿ - ಹಾಗೆ ಸುಮ್ಮನೆ

ಮನಸ್ಸಿಗೆ ಬಂದಿದ್ದನ್ನೆಲ್ಲ ಗೀಚೋಕೆ ಅಂತರ್ಜಾಲದ ಈ ತಾಣ ಬಳಸಬಹುದೇ ಅಥವಾ ಬೇಡವೇ ಅನ್ನೋದೇ ಒಂದು ತೀರದ ಗೊಂದಲ. ಸದಾ ನನ್ನ ಆಲೋಚನೆಗಳು, ನನ್ನ ತುಡಿತಗಳು ನನ್ನ ಮನಸ್ಸಿನಿಂದಾಚೆ ಎಲ್ಲೂ ಹೋಗಿಲ್ಲ ಹೆಚ್ಚೆಂದರೆ ನನ್ನ ಡೈರಿಯಲ್ಲಿ ಇರಬಹುದೇನೋ ಅಷ್ಟೇ. ಆದರೆ ಕೆಲವಷ್ಟು ವಿಷಯಗಳನ್ನ, ವಿಚಾರಗಳನ್ನ ಬೇರೆಯವರೊಡನೆ ಹಂಚಿಕೊಳ್ಳಬೇಕು ಅನ್ನಿಸಿದಾಗ ಸಮಾನ ಮನಸ್ಕರು ಸಿಗದೇ ಒದ್ದಾಟವೆನಿಸಿಬಿಡುತ್ತೆ. ಆಗ ಮೂಡಿದ್ದೇ ಈ ಐಡಿಯಾ. 

ಎಲ್ಲಕ್ಕೂ ಮೊದಲು ನಾನು ಬ್ಲಾಗರ್ ಆಗಿದ್ದು ಹೇಗೆ ಅಂತ ಹೇಳ್ಕೋ ಬೇಕು (ಸುಮ್ನೆ ಬ್ಲಾಗ್ ಅಲ್ಲಿ ಅರ್ಥವಿಲ್ಲದೆ ಗೀಚಿದ್ರೂ ಬ್ಲಾಗರ್ ಅಂತಾರೆ ಅಂದ್ಕೊಂಡಿದೀನಿ, ತಪ್ಪಿದ್ರೆ ತಿದ್ಬಿಡಿ). 

ನನ್ನ ತಮ್ಮ ಮೊದಲು ಬ್ಲಾಗ್ ಬರೆಯೋದು ತೋರಿಸೋ ತನಕ ನನಗೆ ಇದರ ಗಂಧಗಾಳಿನೂ ಇರ್ಲಿಲ್ಲ. ನನಗೆ ಇತಿಹಾಸ, ಸಂಸ್ಕೃತದ ಬಗ್ಗೆ ಒಳ್ಳೆ ನಾಲೆಡ್ಜ್ ಇದೆ. ನಾನು ಅದರ ಬಗ್ಗೆ ಬ್ಲಾಗ್ ಬರೀಬೇಕು ಅನ್ನೋದು ಅವನಾಸೆ. ಪ್ರಾರಂಭದಲ್ಲಿ ನಾನೂ ಅತ್ಯುತ್ಸಾಹದಿಂದ, ಏನೋ ದೊಡ್ಡ ಇತಿಹಾಸಜ್ಞಳಾಗಿ ಹೋಗ್ತಿನೇನೋ ಅನ್ನೋಥರ ಒಂದಲ್ಲ ಅಂತ ಎರಡೆರಡು ಬ್ಲಾಗ್ ಕ್ರಿಯೇಟ್ ಮಾಡ್ಕೊಂಡು ಸಾಹಸಕ್ಕಿಳಿದೆ. ಮೂರು ಪೋಸ್ಟ್ ಮಾಡೋಷ್ಟರಲ್ಲಿ ಉತ್ಸಾಹ ಎಲ್ಲ ಜರ್ರ್ ಅಂತ ಇಳಿದೋಯ್ತು. ಆ ವಿಚಾರಗಳ ಬಗ್ಗೆ ಬರೆಯೋಕೆ ಆಳವಾದ ಅಧ್ಯಯನ ಮಾಡಬೇಕಾಗುತ್ತೆ, ಹೀಗೆ ಮನಸ್ಸಿಗೆ ತೋಚಿದ್ದನ್ನೆಲ್ಲಾ ಅಲ್ಲಿ ಗೀಚೋಕ್ಕಾಗುಲ್ಲ, ಚೆನ್ನಾಗಿ ಓದಿ ವಿಮರ್ಶೆ ಮಾಡಿ ನಾನ್ ಬರೆಯೋಷ್ಟರಲ್ಲಿ ಸುಸ್ತಾಗಿ ಹೋಗಿದ್ದೆ, (ನನ್ನ ಸೋಮಾರಿತನ ನನಗೆ ಅದಕ್ಕಿಂತ ಜಾಸ್ತಿ ಬರೆಯೋಕೆ ಅವಕಾಶಾನೇ ಕೊಡಲಿಲ್ಲ ). ಆ ಬ್ಲಾಗ್ ಗೆ ಸದ್ಯಕ್ಕೆ ಅಲ್ಪವಿರಾಮ ಬಿದ್ದಿದೆ, ಅಲ್ಪವಿರಾಮ ಅಲ್ಪವಾಗೇ ಇರುತ್ತೋ ಅಥವಾ ಪೂರ್ಣವಾಗಿ ಬಿಡುತ್ತೋ ಗೊತ್ತಿಲ್ಲ, ಅದು ಪೂರ್ಣ ಆಗದೆ ಇರೋ ಥರ ಮಾಡ್ತೀನಿ ಅಂತ ಸುಮಾರು ದಿನಗಳಿಂದ ಅಂದುಕೊಳ್ತಿದೀನಿ, ಆದ್ರೆ ಮನಸ್ಸು ಯಾಕೋ ಮುದುರಿ ಕುಳಿತು ಬಿಟ್ಟಿದೆ.

ಇಷ್ಟೆಲ್ಲಾ ಆದ್ಮೇಲೆ ಶುರುವಾಯ್ತು ನನ್ನ ಹೊಸ ಹುಚ್ಚು. ಅಂತರ್ಜಾಲದಲ್ಲಿ ಅಂತರ್ಪಿಶಾಚಿಯಂತೆ ಹುಡುಕಿದ್ರೂ ಸಿಗದಿರೋ ಕೆಲ ಕನ್ನಡ ಭಾವಗೀತೆಗಳ ಸಾಹಿತ್ಯ ನಾನೆ ಯಾಕೆ ಇಲ್ಲಿಗೆ ಹಾಕಬಾರದು ಅನ್ನೋ ಯೋಚನೆ ಬಂದಿದ್ದೇ ತಡ ಶುರುವಾಯ್ತು ನನ್ನ ಭಾವಗೀತೆಗಳ ಕೃಷಿ. ಈ ಮೂಲಕವಾದರೂ ಕನ್ನಡಮ್ಮನ ಸೇವೆ ಮಾಡೋ ಹಾಗಾಯ್ತು (ಕನ್ನಡಮ್ಮನ ಸೇವೆ ಅನ್ನೋಕ್ಕಿಂತ ನಮ್ಮ ಸ್ವಂತ ಸಾಹಿತ್ಯ ಬರೆಯೋದಕ್ಕಿಂತ ಬೇರೆಯವರ ಸಾಹಿತ್ಯದ ಸಂಕಲನ ಮಾಡಿ ಕಾಪಿ ಪೇಸ್ಟ್ ಮಾಡೋದು ಸುಲಭದ ಕೆಲಸ ಅನ್ನೋ ನನ್ನ ಸೋಮಾರಿತನ ಇಲ್ಲೂ ಕೆಲಸ ಮಾಡ್ತು). ಜೊತೆಗೆ ಗೆಳತಿಯೂ ಕೈಜೋಡಿಸಿ ಕೆಲಸ ಇನ್ನೂ ಸುಲಭ ಆಗೋಯ್ತು. ಬಹುಶಃ ಅದೊಂದೇ ನಾನು ರೆಗ್ಯುಲರ್ ಆಗಿ ಅಪ್ ಡೇಟ್ ಮಾಡ್ತಿರೋ ಬ್ಲಾಗ್ ಅನ್ಸುತ್ತೆ. ಎಲ್ಲಾ ಬ್ಲಾಗನ್ನೂ ಅಪ್ ಡೇಟ್ ಮಾಡಬೇಕು ಅನ್ನೋ ಆಸೆಯೇನೋ ಇದೆ, ಆದರೆ ಸಮಯಾನೆ ಸಾಲ್ತಿಲ್ಲ.

ಇದು ನನ್ನ ಬ್ಲಾಗಿಂಗ್ ಹಿಸ್ಟರಿ. ಸದ್ಯಕ್ ಇಷ್ಟೇ.

(ಇಂಗ್ಲೀಷ್ ಪದಗಳನ್ನ ಕನ್ನಡದಲ್ಲಿ ಬರೆಯೋದು (ಟೈಪ್ ಮಾಡೋದು) ತುಂಬಾ ಕಷ್ಟ ಕಣ್ರೀ, ಸ್ಪೆಲ್ಲಿಂಗ್ ಏನೋ ಟೈಪ್ ಮಾಡಿದ್ರೆ ಅದಿನ್ನೇನೋ ತೊಗೊಳುತ್ತೆ, ಯಾರಾದ್ರೂ ಅನುಭವಸ್ಥರು ಇದ್ದರೆ ಗೈಡ್ ಮಾಡ್ರಿ).