ವಿಷನ್ ೨೦೨೦! ಭವ್ಯ ಭಾರತದ ಕನಸು! ಸಾಕಾರವಾಗುವುದನ್ನು ಕಾಣಲು ಎಷ್ಟು ಕಾತರ! ಆದರೆ ಆ ಕನಸಿಗೊಂದು ಸ್ಪಷ್ಟ ರೂಪ ಕೊಟ್ಟ ಕನಸುಗಾರ ಮಾತ್ರ, ಅದು ಈಡೇರುವ ಮುನ್ನವೇ ನಮ್ಮನ್ನಗಲಿ ಕಾಣದ ಲೋಕಕ್ಕೆ ಪಯಣಿಸಿದ. ಸಾವು ಅನ್ನುವುದು ಹೀಗೂ ಬರಬಹುದಾ? ಮಕ್ಕಳಲ್ಲಿ, ಯುವಕರಲ್ಲಿ ಕನಸುಗಳನ್ನು ಬಿತ್ತಿ, ಕನಸು ಕಾಣುವುದನ್ನು ಹೇಳಿಕೊಡುತ್ತಾ ಸಾಗುತ್ತಿದ್ದ ಕರ್ಮಯೋಗಿಯೊಬ್ಬ ತನ್ನ ಸಾವಿನಲ್ಲೂ ಸಾರ್ಥಕತೆ ಕಂಡುಕೊಂಡ ಬಗೆಯೋ ಇದು? ಜ್ಞಾನ ಪ್ರಸಾರ ಮಾಡುತ್ತಾ ದೇಶದುಗ್ಗಲಕ್ಕೂ ಓಡಾಡುತ್ತಿದ್ದ ಕಲಾಂ ಮೇಷ್ಟ್ರು, ಪಾಠ ಮಾಡುತ್ತಲೇ ನಮ್ಮನ್ನಗಲಿದರಲ್ಲ? ನಾವು ಪಾಠವನ್ನು ಪೂರ್ತಿ ಅರ್ಥೈಸಿಕೊಳ್ಳುವ ಮೊದಲೇ?
ಮೊನ್ನೆಯಷ್ಟೇ ಕಾರ್ಗಿಲ್ ವಿಜಯ್ ದಿವಸ್ ಸಂಭ್ರಮ ಮನೆಮಾಡಿತ್ತು. ಆ ಸಂಭ್ರಮಾಚರಣೆಗೆ ತಣ್ಣೀರೆರಚುವಂತೆ ನೆನ್ನೆ ಇಡೀ ದೇಶ ಕಣ್ಣೀರಿನಲ್ಲಿ ಮುಳುಗಿಬಿಟ್ಟಿತು. ಕಲ್ಲವಿಲ್ಲವಾಗಿರುವ ಮನಸ್ಸು ತಹಂಬದಿಗೆ ಬರುತ್ತಲೇ ಇಲ್ಲ. ಬೇಡವೆಂದರೂ ಒಂದು ಗೊಂದಲ, ಗೊಂದಲ ಎನ್ನುವುದಕ್ಕಿಂದ ಒಂದು ಪ್ರಶ್ನೆ ಮನಸ್ಸನ್ನು ಬಿಟ್ಟೂ ಬಿಡದಂತೆ ಕಾಡುತ್ತಿದೆ. ಪ್ರತಿಯೊಂದು ಜೀವವೂ ಅಮೂಲ್ಯವೇ, ಒಪ್ಪೋಣ. ಆದರೆ ಈ ಕೆಲವು ಭ್ರಷ್ಟ ರಾಜಕಾರಣಿಗಳು, ಎಷ್ಟೇ ಸ್ಥಿತಿವಂತರಾಗಿದ್ದರೂ ತಮ್ಮ ಅರೋಗ್ಯ ಹದಗೆಟ್ಟಾಗ ಚಿಕಿತ್ಸೆಗೆ ಸರ್ಕಾರದ, ಜನರ ಹಣ ದುರ್ಬಳಕೆ ಮಾಡಿಕೊಳ್ಳುವ ಮಂತ್ರಿಗಳು, ಸಾರ್ವಜನಿಕವಲಯದಲ್ಲಿದ್ದೂ ಬೇಡದ ದುಶ್ಚಟಗಳನ್ನಂಟಿಸಿಕೊಂಡ ಆದರ್ಶ ವ್ಯಕ್ತಿಗಳು ನಮ್ಮ ಸುತ್ತ ಬಹಳ ಇದ್ದಾರೆ, ಪದೇ ಪದೇ ಅರೋಗ್ಯ ತಪ್ಪುತ್ತಾರೆ ಕೂಡ. ಇನ್ನೇನು ಸಾವಿನ ಮನೆ ಕದ ತಟ್ಟಿದರು ಎನ್ನುತ್ತಿರುವಾಗಲೇ, ಜನರ ಖರ್ಚಿನಲ್ಲಿ ಬಿಟ್ಟಿ ಚಿಕಿತ್ಸೆ ತೆಗೆದುಕೊಂಡು, ಹುಷಾರಾಗಿ ಹಿಂದಿರುಗುತ್ತಾರೆ. ಆದರೆ ನಮ್ಮ ಕಲಾಂ ಸರ್ ಗೆ ಯಾಕೆ ಒಂದೇ ಒಂದು ಅವಕಾಶ ಸಿಗಲಿಲ್ಲ?
ನೆನ್ನೆ ಸಾಯಂಕಾಲ ೭.೩೦ ರ ಹೊತ್ತಿಗೆ "Former President Dr.APJ Abdul Kalaam Hospitalized" ಅನ್ನುವ ಸುದ್ದಿ ಬಂತು. ದೇವರೇ ಅವರ ಆರೋಗ್ಯ ಚನ್ನಾಗಿರಲಪ್ಪ ಎಂದುಕೊಳ್ಳುವಷ್ಟರಲ್ಲೇ "Passed Away" ಅನ್ನುವ ಸುದ್ದಿ. ಮಂಕು ಬಡಿದಂತಾಗಿದೆ. ಈ ಕ್ಷಣಕ್ಕೂ ನಂಬಲಾಗುತ್ತಿಲ್ಲ. How can he leave us so early? ವಿಷನ್ ೨೦೨೦ ಎಂಬ ಕನಸನ್ನು ಕಟ್ಟಿಕೊಟ್ಟ ಮೇಲೆ, ಅದನ್ನು ಪೂರ್ತಿಮಾಡಿ ತಾನೇ ಹೋಗಬೇಕು? ಹೀಗೆ ಅರ್ಧಕ್ಕೆ ಕೈಬಿಟ್ಟು ಹೇಗೆ ಹೊರಟರು ಅವರು? ಅಷ್ಟಕ್ಕೂ ಸದಾ ಕ್ರಿಯಾಶೀಲನಾದ ಆ ಮನುಷ್ಯನ ಹೃದಯ ಸ್ಥಂಬಿತವಾಯಿತಾದರೂ ಹೇಗೆ?
ಬಹುಶಃ ನಮ್ಮ ಭಾರತೀಯರ ಹಣೆಬರಹವೇ ಇಷ್ಟೇನೋ, ಜನರಿಗೆ ಒಳಿತು ಬಯಸಿ, ಪ್ರೇರೇಪಿಸುವ ಸಾಧಕರೆಲ್ಲರೂ ನೋಡನೋಡುತ್ತಿದ್ದಂತೆಯೇ ಕಣ್ಮರೆಯಾಗುತ್ತಿದ್ದಾರೆ. ಈಗ್ಗೆ ಒಂದೆರಡು ವರ್ಷಗಳ ಕೆಳಗೆ "ಆಜಾದೀ ಬಚಾವೋ" ಅಂದೋಲನದ ರೂವಾರಿ ರಾಜೀವ ದೀಕ್ಷಿತರು ಹೀಗೆ ವೇದಿಕೆಯಲ್ಲೇ ಕುಸಿದು ಬಿದ್ದು ಹಠಾತ್ತನೆ ಕಾಣದ ಲೋಕಕ್ಕೆ ಹೊರಟಾಗ ಇದೇ ಬಗೆಯ ಖಾಲಿತನ ಕಾಡಿತ್ತು. ಆದರೆ ಆ ಖಾಲಿತನವನ್ನು ತುಂಬಿಕೊಡಲು, ಅವರ ಚಿಂತನೆಗಳನ್ನು ಪಸರಿಸಲು, ಅವರು ಹಾಕಿಕೊಟ್ಟ ಪರಂಪರೆಯನ್ನು ಮುಂದುವರೆಸಲು ಶಕ್ತರಾದ ಅನೇಕ ಮಂದಿ ನಮ್ಮ ಸುತ್ತಲೂ ಇದ್ದಾರೆ. ಆದರೆ ಕಲಾಂ ಸರ್ ಬಿಟ್ಟು ಹೋದ ಜಾಗ? ಅವರಂತಹ ಕನಸುಗಾರನ, ಧೀ ಶಕ್ತಿಯುಳ್ಳ ಕ್ರಿಯಾಶೀಲ ಮನುಷ್ಯನ ಸ್ಥಳವನ್ನು ಯಾರಾದರೂ ತುಂಬಲು ಸಾಧ್ಯವೇ? ಈಗ ಆವರಿಸಿರುವುದು ಶೂನ್ಯ, ಎಂದಿಗೂ ತುಂಬಲಾರದ, ತುಂಬಿಕೊಳ್ಳದ ಶೂನ್ಯ.
ನಿಮ್ಮನ್ನು ಉಳಿಸಿಕೊಳ್ಳಲಾಗದ ನಾವು ನಿಜವಾಗಿಯೂ ನತದೃಷ್ಟರು ಕಲಾಂ ಸರ್. ನೀವು ಬಿಟ್ಟು ಹೋದ ಜಾಗ ಇನ್ನಾರಿಂದಲೂ ತುಂಬಲು ಸಾಧ್ಯವಿಲ್ಲ . ನೀವು ಬಿತ್ತಿದ ಕನಸುಗಳು ಮಾತ್ರ ಭಾರತೀಯ ಯುವಕರ ಹೃದಯದಲ್ಲಿ ಬೆಚ್ಚಗೆ ಮನೆ ಮಾಡಿರುತ್ತವೆ. ಅವು ಹಾಗೇ ಬೆಚ್ಚಗೆ ಕೂರದೇ, ಸಕ್ರಿಯವಾಗಿ ಸಾಕಾರಗೊಳ್ಳಲಿ ಎಂಬುದೊಂದೇ ಉಳಿದಿರುವ ಆಶಯ.
RIP Sir - Return If Possible