Saturday, 13 September 2014

ಏನ ಮಾಡಲಿ?

ಕೆಟ್ಟು ಪಟ್ಟಣ ಸೇರು ಅಂತಾರೆ, ಅದೇನು ಸ್ವಭಾವ  ಕೆಟ್ಟಮೇಲೆ ಪಟ್ಟಣ ಸೇರು, ಅಂತಲೋ ಅಥವಾ ಹಣೆಬರಹ ಕೆಟ್ಟು ಪಟ್ಟಣ ಸೇರು ಅಂತಲೋ ಎಂದು ಯಾವಾಗಲೂ ಯೋಚಿಸುತ್ತಿರುತ್ತೇನೆ, ಉತ್ತರ ಮಾತ್ರ ಸಿಕ್ಕಿಲ್ಲ. ನೀವ್ ಏನೇ ಹೇಳಿ, ಬೆಂಗಳೂರಿನ ಈ ಫಾಸ್ಟ್ ಲೈಫ್ ನನ್ನಂಥವರಿಗಲ್ಲ ಕಣ್ರೀ. ದಿನಾ ಬೆಳಿಗ್ಗೆ ಏಳು, ಸಿಕ್ಕಿದ್ದನ್ನ ಬಾಯಿಗೆ ಹಾಕ್ಕೋ, ಆಫೀಸಿಗೆ ಓಡು. ಎಲ್ಲಿ ಯಾವ್ ಬಸ್ ಕ್ಯಾಚ್ ಮಾಡಿದ್ರೆ ಎರಡನೇ ಬಸ್ ತಪ್ಪೋದಿಲ್ಲ, ಎಲ್ಲಿ ಎಷ್ಟು ಜ್ಯಾಮ್ ಇರಬಹುದು? ತಲೆ ತುಂಬಾ ಇವೇ ಯೋಚನೆಗಳು, ಒಮ್ಮೆ ಕಚೇರಿ ತಲುಪಿ ಪಂಚ್ ಮಾಡಿದ್ರೆ ಏನೋ ಸಮಾಧಾನ, ಆದರೆ ಮತ್ತಲ್ಲಿ ಕೆಲಸದ ಒತ್ತಡ, ಜವಾಬ್ದಾರಿಗಳ ಮಧ್ಯೆ ಮತ್ತೆ ಮನೆ ಯಾವಗಪ್ಪ ಸೇರೋದು ಅನ್ನೋ ಚಿಂತೆ. ಬೆಂಗಳೂರಿನ ಸುಂದರ ಸಂಜೆಯ ಟ್ರಾಫಿಕ್ಕನ್ನು ದಾಟಿ ಮನೆ ಸೇರೋಷ್ಟ್ರಲ್ಲಿ, ಮೈಕೈ ಎಲ್ಲ ಹಣ್ಣಾಗಿ, ಹೊಟ್ಟೆಗೆ ಏನಾದ್ರೂ ದಾರಿ ಮಾಡಿ, ಹಾಸಿಗೆ ಕಂಡ್ರೆ ಸಾಕಪ್ಪಾ ಅನಿಸಿರುತ್ತೆ. ಇದರ ಮಧ್ಯೆ ಓದು, ಬರಹಕ್ಕೆಲ್ಲಿ ಪುರುಸೊತ್ತು? ಹಾಗೂ ಮನಸ್ಸು ಚಡಪಡಿಸುತ್ತೆ, ಏನಾದರೂ ಬರೆಯಲು, ಹೊಸದನ್ನು ಕಲಿಯಲು, ಸಮಯ ಮಾತ್ರ ಸಾಲದು.

ಇದು ನನ್ನೊಬ್ಬಳ ಕಥೆಯಲ್ಲ, ಇಲ್ಲಿರುವ ಎಲ್ಲರೂ ಇದಕ್ಕೆ ಹೊಂದಿಕೊಂಡು ಬಿಟ್ಟಿದ್ದಾರೆ. ಯಾರನ್ನು ನೋಡಿದರೂ ಧಾವಂತ. ನಿಂತುಕೊಂಡು ಮಾತನಾಡಲೂ ಪುರುಸೊತ್ತಿಲ್ಲ. ಎಷ್ಟೋ ಸಲ ಊರಿಗೆ ಹೋಗುವಾಗ, ಬೆಂಗಳೂರನ್ನು ದಾಟಿದ ಕೂಡಲೇ ಸ್ವಚ್ಛ ಗಾಳಿ, ಸುತ್ತ ನೆಮ್ಮದಿಯ ವಾತಾವರಣ, ಏನೋ ಒಂದು ತರಹ ಸ್ವಾತಂತ್ರ್ಯದ ಅನುಭವವಾಗುತ್ತದೆ. ತಿರುಗಿ ಬರುವಾಗ ಈ ಊರನ್ನು ಹೊಕ್ಕ ಕೂಡಲೇ, ದೊಡ್ಡ ದೊಡ್ಡ ಕಾಂಕ್ರೀಟ್ ಕಟ್ಟಡಗಳಿಂದ ಕೂಡಿದ ಯಾವುದೋ ಜೈಲನ್ನು ಹೊಕ್ಕಂತೆ ಅನಿಸುತ್ತಿರುತ್ತದೆ.

ಇರಲಿ ಇದು ನನ್ನ ಅನಿಸಿಕೆ. ಬೆಂಗಳೂರಿನ ಪ್ರಿಯರು ಬೇಸರಿಸುವುದು ಬೇಡ, ಆದರೂ ಇದನ್ನೆಲ್ಲಾ ನೆನೆಸಿದರೆ ನಮ್ಮೂರಿನ ಜೀವನ ಎಷ್ಟು ನೆಮ್ಮದಿಯದ್ದು ಎನಿಸುತ್ತೆ. ಆದರೆ ಏನೂ ಮಾಡಲಾಗದು. ಪಟ್ಟಣ ಸೇರಿದ್ದಾಗಿದೆ. ಓಡಲೇ ಬೇಕು.

                                                                                                                         -  ವಸು