Sunday, 3 June 2012

ಮರೆವಿಗೆ ಸಂದಿವೆ ಇಲ್ಲಿ ಹರುಷದ ಬಣ್ಣಗಳು

ಈ ಸಾಲುಗಳು ನಿಮಗೆ ನೆನಪಿವೆಯ? ಎಂಟ್ಹತ್ತು ವರ್ಷಗಳ ಕೆಳಗೆ ಈ-ಟಿವಿ ಕನ್ನಡ ವಾಹಿನಿಯಲ್ಲಿ ಒಂದು ಧಾರಾವಾಹಿ ಬರುತ್ತಿತ್ತು.. ಮನ್ವಂತರ ಎಂದದರ ಹೆಸರು. ಆ ಧಾರಾವಾಹಿಯ ಟೈಟಲ್ ಸಾಂಗ್ (ಕನ್ನಡದಲ್ಲಿ ಹೆಸರಿನ ಗೀತೆಯಗುವುದೋ?) ಆದ "ಮರಳಿ ಬಾ ಮನ್ವಂತರವೇ ಕಂಬನಿಗಳ ಬಳಿಗೆ" ಅನ್ನೋ ಹಾಡಿನ ಚರಣದಲ್ಲಿ ಬರುವ ಒಂದು ಸಾಲಿದು. ಹಾ ಹಾ, ಅಂದ ಮಾತ್ರಕ್ಕೆ ಆ ಧಾರಾವಾಹಿಯ ಬಗ್ಗೆ ಬರೆಯ ಹೊರಟೆನೆಂದುಕೊಳ್ಳಬೇಡಿ. ಅದು ಬರುತ್ತಿದ್ದ ಕಾಲಕ್ಕೆ ನಾನಿನ್ನೂ ಕೇವಲ ದೂರದರ್ಶನದ ವೀಕ್ಷಕಿ, ಅದರ ಕಥೆಯ ಬಗೆಗೆ ನನಗೇನೂ ತಿಳಿಯದು.

ಆದರೆ ಇತ್ತೀಚಿಗೆ ಒಮ್ಮೆ ಆ ಹಾಡು ಕೇಳಲಿಕ್ಕೆ ಸಿಕ್ಕಿತು. ಎಷ್ಟು ಅರ್ಥಪೂರ್ಣವಾಗಿವೆ ಸಾಲುಗಳು.. ನಿಜಕ್ಕೂ ಅದನ್ನೂ ಭಾವಗೀತೆಗಳ ಸಾಲಿನಲ್ಲೇ ಸೇರಿಸಬಹುದು, ಅಷ್ಟೊಂದು ಅರ್ಥ ಧ್ವನಿಸುತ್ತದೆ ಅದರಲ್ಲಿ. ಅದರಲ್ಲಿನ ಒಂದು ಸಾಲು, ಈ "ಮರೆವಿಗೆ ಸಂದಿವೆ ಇಲ್ಲಿ ಹರುಷದ ಬಣ್ಣಗಳು". ಆಫೀಸಿನಲ್ಲಿ, ಈ ಹಾಡನ್ನು ನನಗೆ ಕೊಟ್ಟು, ಕೇಳು ಎಂದು ಒತ್ತಾಯ ಮಾಡಿದ ಗೆಳತಿ, ಇಡೀ ಗೀತೆಯ ಧ್ವನಿಯನ್ನು ಅರ್ಥ ಮಾಡಿಕೊಳ್ಳುವ ಆಸೆಯಲ್ಲಿದ್ದಳು. ನನಗೆ ಈ ಸಾಲಿನ ಅರ್ಥ ಕೇಳಿದಳು. ನಾನೋ ಮೊದಲೇ ಟ್ಯೂಬ್ ಲೈಟು. ಅದರ ಅರ್ಥ ಪೂರ್ತಿ ತಿಳಿಯದೆ ಸುಮ್ಮನೆ ಮರೆವೆಯಿಂದ ಸಂತೋಷ ಸಿಗುತ್ತೆ ಅಂದಿದ್ದೆ. ಹಾಗಿದ್ದರೆ ನೆನಪುಗಳೇ ಬೇಡವಾ? ಅವಳ ಪ್ರಶ್ನೆಗೆ ಉತ್ತರಿಸಲಾಗದೆ, ಕೆಲವೊಂದು ನೆನಪುಗಳು ಹಾಗೆ ಅಲ್ಲವಾ, ಮರೆತರೇ ಸುಖ. ಎಂದು ಹಾರಿಕೆಯ ಉತ್ತರನೀಡಿ ಪಾರಾಗಿದ್ದೆ.

ಆದರೆ ಮನೆಗೆ ಬಂದು ಅದೇ ಹಾಡಿನ ಗುಂಗಿನಲ್ಲೇ ಯೋಚನೆ ಮಾಡ ಹೊರಟಾಗ, ಬೇರೆಬೇರೆಯದೆ ರೀತಿಯ ಅರ್ಥಗಳು ಹೊಳೆಯತೊಡಗಿದವು. ಹಾಡು ಒಂದು ಹೊಸ ಮನ್ವಂತರಕ್ಕೆ ಆಹ್ವಾನ ಕೊಡಲೋಸುಗ ಬರೆದಿರುವಂಥದ್ದು. ಪ್ರಸ್ತುತ ಕಾಲಘಟ್ಟ ಎಷ್ಟು ಹದಗೆಟ್ಟು ಹೋಗಿದೆಯೆ೦ಬುದನ್ನು ನವಿರಾಗಿ ವರ್ಣಿಸುತ್ತಾ, ಹೊಸಕಾಲಘಟ್ಟವನ್ನು ಬಾ ಎಂದು ಕರೆಯುತ್ತಿರುವುದು. ಹಾಗೆ ಪ್ರಸ್ತುತ ಸಮಾಜವನ್ನು ವರ್ಣಿಸುತ್ತಾ, "ಬೆಳಕನು ನುಂಗಿವೆ ಇಲ್ಲಿ ಕತ್ತಲ ಕಣ್ಣುಗಳು, ಮರೆವಿಗೆ ಸಂದಿವೆ ಇಲ್ಲಿ ಹರುಷದ ಬಣ್ಣಗಳು" ಎನ್ನುತ್ತವೆ ಈ ಸಾಲುಗಳು. ಅಂದರೆ ಈ ಕಾಲ ನಿಜವಾದ ಸಂತೋಷವನ್ನು ಮರೆತು ಬಿಟ್ಟಿದೆ, ಅದರ ಮರೆವಿಗೆ ಹರುಷವೆಂಬ ಬಣ್ಣದ ಹೆಸರು ಕೊಟ್ಟು, ಇಲ್ಲದ ಸಂತಸವನ್ನು ಇದೆಯೆಂದು ಭ್ರಮಿಸುತ್ತ ಕುರುಡಾಗಿ ನಡೆಯುತ್ತಿದೆ ಎಂದಲ್ಲವೇ? ಹಾಗಿದ್ದರೆ ನಿಜವಾದ ಸಂತಸ ಯಾವುದು, ನಾವು ಯಾವುದನ್ನು ಮರೆತಿದ್ದೇವೆ?

ನಮ್ಮ ಸಮಾಜ ಎತ್ತ ಸಾಗುತ್ತಿದೆ, ಎಂದು ಯೋಚಿಸ ಹೊರಟರೆ ನಮಗೆ ಇದರ ಉತ್ತರ ಸಿಗಬಹುದೇನೋ. ಇಂದು ಯಾವ ತಂದೆಗೆ ತನ್ನ ಕಂದನ ಓದಿನ ಬಗೆಗೆ ಸ್ವತಃ ಕುಳಿತು ಪರೀಕ್ಷಿಸುವ, ಮಗುವಿಗೆ ಓದಿಸುವ ತಾಳ್ಮೆಯಿದೆ? ಮಗುವನ್ನು ಆಯಾ ಅಥವಾ ಆಧುನಿಕ ಮಕ್ಕಳ ಕೇಂದ್ರಗಳ (ಅದೇನಪ್ಪಾ ಬೇಬಿ ಸಿಟ್ಟಿಂಗು) ಬಳಿ ಬಿಟ್ಟು ಕಚೇರಿಗೆ ಓಡುವ ಧಾವಂತದಲ್ಲಿರುವಾಗ ಮಗುವಿನ ನಿಜವಾದ ಮನವನ್ನು ಅದರಾಸೆಯನ್ನು ಅರಿಯುವಷ್ಟು ಪುರುಸೊತ್ತು ಇಂದಿನ ಯಾವ ಪೋಷಕರಿಗಿದೆ? ಅದರ ತೊದಲು ಮಾತುಗಳನ್ನು, ತುಂಟಾಟವನ್ನು, ಮಾತು, ನಡಿಗೆಯ ಕಲಿಕೆಯ ಆರಂಭದ ದಿನಗಳನ್ನು ಸೂಕ್ಷ್ಮವಾಗಿ ಗಮನಿಸಿ ಅದರಲ್ಲಿರುವ ಆನಂದವನ್ನು ಸವಿಯುವ ಮನಸ್ಸು ಆ ತಾಳ್ಮೆಯನ್ನು ಇಂದಿನ ಪೀಳಿಗೆ ಉಳಿಸಿಕೊಂಡಿದೆಯೇ? ನಮ್ಮನ್ನು ಸಾಕಿ ಬೆಳೆಸಿದ ಹಿರಿಯರ ಬೇಕು ಬೇಡಗಳನ್ನು ಗಮನಿಸಿಕೊಂಡು, ಅವರ ಹಿತನುಡಿಗಳನ್ನು ಕೇಳುವ ಕೆಲಸ ಈಗೆಷ್ಟು ಜನ ಮಾಡುತ್ತಾರೆ? ಖಂಡಿತಾ ಇವೆಲ್ಲಕ್ಕೂ ಅಪವಾದವೆನಿಸುವ ಮಂದಿ, ಈ ಎಲ್ಲ ಘಳಿಗೆಗಳ ಸವಿಯನ್ನು ಸವಿಯುವ ಜನ ನಮ್ಮ ನಡುವೆ ಇರಬಹುದು. ಜೀವನದ ಎಲ್ಲ ಸಣ್ಣಪುಟ್ಟ ಸಂತಸಗಳನ್ನು ಅನುಭವಿಸುವವರು ಈಗಲೂ ಇದ್ದಾರೆ, ಆದರೆ ಅಂಥವರ ಸಂಖ್ಯೆಯೆಷ್ಟು?

ಸುಮ್ಮನೆ ಹಾಗೆ ಕಣ್ಣು ಹಾಯಿಸಿದರೆ ಸಾಕು, ಇಂಥವರು ಬಹಳ ಕಡಿಮೆಯೆಂದು ತಿಳಿದು ಹೋಗುತ್ತದೆ. ಎಲ್ಲವೂ ದುಡ್ಡಿನ ಮೇಲೆ ನಿಂತಿದೆ, ಹಣವೊಂದಿದ್ದರೆ ಜಗತ್ತನ್ನೇ ಕೊಳ್ಳಬಹುದೆಂಬ ಭ್ರಮೆಯಲ್ಲಿ ಇಡೀ ಜಗ ತೇಲುತ್ತಿದೆ! ತನ್ನ ನಿಜವಾದ ಸಂತಸಗಳನ್ನು ಮರೆತು, ಹಣವೆಂಬ ಮಾಯಾಜಿಂಕೆಯ ಬೆನ್ನು ಬಿದ್ದು, ತನ್ನ ಮರೆವೆಯನ್ನೇ ಸಂತಸವೆಂದು ತಿಳಿದು, ಆ ಮರೆವೆಗೆ ಹರುಷದ ಬಣ್ಣ ಕೊಟ್ಟಿದೆ. ಹೌದಲ್ಲ, ಇದೇ ಅರ್ಥ ಧ್ವನಿಸುವುದು ಆ ಹಾಡಿನಲ್ಲಿ.

ಆದರೆ ಜಾಣಮರವನ್ನು ತಂದುಕೊಂಡಿರುವ ಎಷ್ಟು ಜನ ಇದನ್ನು ಅರ್ಥೈಸಿಯಾರು? ಹಣದಿಂದ ಕಟ್ಟಡವನ್ನು ಕಟ್ಟಬಹುದು, ಮನೆ ಮಾಡಲಾಗುವುದಿಲ್ಲ. ಮಗುವಿಗೆ ಒಳ್ಳೆ ಓದನ್ನು ನೀಡಬಹುದು, ಅದರ ಬೆಳವಣಿಗೆಯ ಕ್ಷಣಗಳನ್ನು, ಆ ತೊದಲು ನುಡಿಗಳ ಇಂಪನ್ನು ಕೊಂಡು ತರಲಾಗುವುದಿಲ್ಲ. ಹಿರಿಯರಿಗೆ ಒಳ್ಳೆ ಸೌಲಭ್ಯಗಳನ್ನು ಕಲ್ಪಿಸಬಹುದು, ಅವರ ಜೀವನಾನುಭವ ನಮಗೆ ಸಿಗುವುದಿಲ್ಲ.

ಎಲ್ಲೋ ಒಮ್ಮೆ ಓದಿದ ಕಥೆಯೊಂದು ಕಾಡುತ್ತಿದೆ. ಹಂಚಿಕೊಳ್ಳಲೇ ಬೇಕೆನಿಸಿತು..

ದೊಡ್ಡ ನಗರವೊಂದರಲ್ಲಿ, ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವ ದಂಪತಿಗಳಿಗೆ ಚೊಚ್ಚಲ ಮಗುವಿನ ಸಂಭ್ರಮ. ಆದರೇನು, ಇಬ್ಬರೂ ಖಾಸಗಿ ಕಂಪನಿಗಳ ಉದ್ಯೋಗಿಗಳು. ಮುಂದೆ ತಮ್ಮ ಮಗುವಿಗೆ ಒಳ್ಳೆ ಭವಿಷ್ಯ ರೂಪಿಸಬೇಕೆಂದು ಕನಸುತ್ತಾ, ಹಗಲೂ ರಾತ್ರಿ ದುಡಿಯುವವರು. ಮನೆಯಲ್ಲಿ ಹೆಚ್ಚೆಂದರೆ ಒಂದೆರಡು ತಾಸು ಸಮಯವಾಗಬಹುದೇನೋ, ಅದರಲ್ಲೂ ನಾಳೆಗೆ ತಯಾರಿ, ಬೇಗ ಮಲಗಿ ಹೊರಡಬೇಕೆಂಬ ಧಾವಂತ. ಮಗುವನ್ನು ನೋಡಿಕೊಳ್ಳಲು ಒಬ್ಬಳು ಆಯಾ. ಹೀಗೆ ಒಂದು ವರ್ಷ ಕಳೆಯಿತು. ಮಗು ಈಗತಾನೇ ನಡೆಯಲು, ತೊದಲಾಡಲು ಶುರು ಮಾಡಿತ್ತು. ಇವರು ಕಚೇರಿಗೆ ಹೋಗುವಾಗ ಅದು ಅಳುವುದನ್ನು ನಿಲ್ಲಿಸಲು ಕೆಲಸದವಳಿಗೆ ಸಾಕು ಬೇಕಾಗುತ್ತಿತ್ತು.

ಒಮ್ಮೆ  ಇಬ್ಬರೂ ಕೆಲಸ ಮುಗಿಸಿ ರಾತ್ರಿ ಬಂದಾಗ, ಮಗು ಚಂದ್ರನನ್ನು ತೋರಿಸಿ ಅದು ಬೇಕು ಎಂಬಂತೆ ಅಳಲು ಶುರುವಿಟ್ಟುಕೊಂಡಿತು. ತಕ್ಷಣವೇ ಅದರ ತಂದೆ ಖುಷಿಯಿಂದ ಕುಣಿದು, ಹೆಂಡತಿಗೆ " ಡಾರ್ಲಿಂಗ್, ನಮ್ಮ ಮಗ ಚಂದ್ರ ಬೇಕೆಂದು ಕೇಳುತ್ತಿದ್ದಾನೆ. ಅಂದರೆ, he wants to be an astronaut.ನಾವು ಇಂದಿನಿಂದಲೇ ಇನ್ನೂ ಸಂಪಾದಿಸಲು ಶುರು ಮಾಡಬೇಕು. ದಿನಕ್ಕೆ ಹದಿನೈದು ತಾಸು ದುಡಿದರೂ ಪರವಾಗಿಲ್ಲ. ಅವನನ್ನು ಒಳ್ಳೆ residential school ಸೇರಿಸೋಣ...." ಹೀಗೆ ಸಾಗಿತ್ತು ತಂದೆಯ ಕನಸು. ಆದರೆ ಟಿವಿಯಲ್ಲಿ ಬರುತ್ತಿದ್ದ ಹಾಡಿನಲ್ಲಿ ತಾಯಿ ಚಂದ್ರನನ್ನು ತೋರಿಸುತ್ತಾ ಕಂದನಿಗೆ ಊಟ ಮಾಡಿಸುತ್ತಿರುವ ದೃಶ್ಯವನ್ನು ನೋಡಿ ತನಗೂ ಅದು ಬೇಕೆಂದು ಹಠ ಮಾಡುತ್ತಿದ್ದ ಕಂದನ ಮನಸು ಮನೆಕೆಲಸದಾಕೆಗೆ ಮಾತ್ರ ಅರ್ಥವಾಗುತ್ತಿತ್ತು. ಹೀಗೆ ಮುಗಿಯುತ್ತದೆ ಆ ಕಥೆ. ಹೇಳಿ, ಮರೆವಿಗೆ ಸಂದಿರುವ ಹರುಷದ ಬಣ್ಣಗಳೆಂದರೆ ಇವೇ ಅಲ್ಲವೇ?

ಇದನ್ನೇ ಅವಳಿಗೆ ಹೇಳಿದೆ. ಆ ಸಾಲಿನಲ್ಲಿ ಇದೇ ಅರ್ಥ ಧ್ವನಿಸುತ್ತದೆಂದು ಅವಳು ಒಪ್ಪಿದಳು. ಈ ತರ್ಕವೆಲ್ಲ ನಡೆದದ್ದು ನಾಲ್ಕೈದು ತಿಂಗಳ ಕೆಳಗೆ. ಆದರೆ ಆ ಹಾಡೇಕೋ ಇಂದು ಬಿಟ್ಟೂ ಬಿಡದೆ ಕಾಡುತ್ತಿದೆ. ಸಾಹಿತ್ಯ ಇಲ್ಲಿದೆ, ಓದಿಕೊಳ್ಳಿ..

ಮನ್ವಂತರ,

ಮರಳಿ ಬಾ ಮನ್ವಂತರವೇ ಕಂಬನಿಗಳ ಬಳಿಗೆ
ಮರಳಿಸು ಹೊಸಚೇತನವ ಬಳಲಿದ ಮನಗಳಿಗೆ

ಬೆಳಕನು ನುಂಗಿವೆ ಇಲ್ಲಿ ಕತ್ತಲ ಕಣ್ಣುಗಳು
ಮರೆವೆಗೆ ಸಂದಿವೆ ಇಲ್ಲಿ ಹರುಷದ ಬಣ್ಣಗಳು
ತೋರು ಬಾ ಮನ್ವಂತರವೇ ಕನಸಿನೂರ ದಾರಿ
ಸಾರು ಬಾ ಶುಭ ಸಂದೇಶ ಕಾಲರಥವನೇರಿ

ಕಣ್ಣೀರೆ ಕಡಲಾಗಿ ಭಾವಗಳೋ ಬರಡಾಗಿ
ಮನದ ಮರಳ ತುಂಬಾ ನೋವಿನಲೆಯ ಬಿಂಬ
ನೀಡು ಬಾ ಮನ್ವಂತರವೇ ಭಾವಕೆ ಉಸಿರನ್ನು
ಬರಡು ಹೃದಯಗಳಿಗೆ ಜೀವದ ಹಸಿರನ್ನು

ಮನಸಿನ ಪುಟಗಳ ನಡುವೆ ನೆನಪಿನ ನವಿಲುಗರಿ
ಕಾರ್ಮುಗಿಲ ಅಂಚಿನಲ್ಲಿ ಭರವಸೆ ಹೊನ್ನಝರಿ
ಹಾಡು ಬಾ ಮನ್ವಂತರವೇ ಮರೆತ ಗಾನದೆಳೆಯ
ಬೆಳಗು ಬಾ ಬದುಕನ್ನು ತೊಳೆದು ತಮದ ಕೊಳೆಯ