Sunday, 25 March 2012

ಬದುಕು.. ಮೊಬೈಲು.. ಗುಬ್ಬಕ್ಕ...

ಈಗ್ಗೆ ಹತ್ತನ್ನೊಂದು ವರ್ಷದ ಕೆಳಗೆ, ಆಗಿನ್ನೂ ನಾನು ಹೈಸ್ಕೂಲಿನ ಕೊನೆಯ ವರ್ಷದಲ್ಲಿದ್ದ ಸಮಯ, ಒಂದು ಹಳೆಕಾಲದ ಬಾಕ್ಸ್ ಟೈಪಿನ ಬ್ಲ್ಯಾಕ್ ಅಂಡ್ ವೈಟ್ ಟಿವಿ, ಲ್ಯಾಂಡ್ ಲೈನ್ ಫೋನು, ಅಜ್ಜನ ಸೈಕಲ್ಲು ದೊಡ್ಡ ಆಸ್ತಿಯೆ೦ಬ೦ತಿದ್ದ ಚಿಕ್ಕ ಚೊಕ್ಕ ಮನೆ ನಮ್ಮದು. ನಮ್ಮ ಮನೆಗೂ ಒಂದು ಮೊಬೈಲ್ ಎಂಬ ಮಾಯಯಂತ್ರವನ್ನು ತರೋಣವೆಂದು ಆಗಿನ್ನೂ ಅಪ್ಪ ಯೋಚಿಸುತ್ತಿದ್ದರು. ಮೊದಲಿನಿಂದಲೂ ಅಪ್ಪನಿಗೆ ಒಂದು ಅಭ್ಯಾಸ ಇದೆ, ಮನೆಗೆ ಏನೇ ತರುವ ಮೊದಲು ಮನೆಯವರೆಲ್ಲರನ್ನು ಕೇಳಿ ಎಲ್ಲರ ಅಭಿಪ್ರಾಯದ ನಂತರ ಹೆಜ್ಜೆಯಿಡುವುದು. ಆದರೆ, ಮೊಬೈಲಿನ ವಿಚಾರ ಬಂದಾಗ ಮಾತ್ರ ನಾನು ಬೇಡ ಎಂದಿದ್ದೆ. ಅದರ ಬಗ್ಗೆ ಕೇಳಿ ಮಾತ್ರ ಗೊತ್ತಿದ್ದ, ಕಂಡರಿಯದ ಆ ವಸ್ತುವಿನ ಬಗ್ಗೆ ನನಗಿದ್ದ ಕೋಪಕ್ಕೆ ಕಾರಣ, ಅದನ್ನು ಬಳಸುವಾಗ ಅದರಿಂದ ಹೊರಸೂಸುವ ತರಂಗಗಳು ಗುಬ್ಬಿಗಳ ಜೀವಕ್ಕೆ ಎರವಾಗುತ್ತದೆ ಎಂದು! ನಾವು ಮೊಬೈಲ್ ಬಳಸಿದ್ರೆ ಗುಬ್ಬಿ ಸಾಯ್ತವಂತಪ್ಪಾ ಪಾಪ ಅಲ್ವಾ, ಅದರ ಅಗತ್ಯ ನಮಗೇನು ಇಲ್ಲ ಅಲ್ವಾ ಅಂತ ಅಂದಿದ್ದ ನೆನಪು ಮನದ ಮೂಲೆಯಲ್ಲೆಲ್ಲೋ ಹಾಗೆ ಕುಳಿತಿದೆ. ನನ್ನ ಮಾತನ್ನು ಕೇಳಿ ನಕ್ಕು, ಅಪ್ಪ ಸುಮ್ಮನಾಗಿ ಬಿಟ್ಟಿದ್ದರು.

ಇದಾದ ಕೆಲದಿನಗಳಲ್ಲೇ, ನನ್ನ ತಮ್ಮ ಅವನ ಸ್ನೇಹಿತನ ಮನೆಯದೆಂದು ಹೇಳಿ ಒಂದು ಮೊಬೈಲನ್ನು ಮನೆಗೆ ತಂದಿದ್ದ, ಕ್ಯಾಮೆರ, ಸಂಗೀತ ಹೀಗೆ ಎಲ್ಲ ಅನುಕೂಲತೆಗಳಿದ್ದ ದುಬಾರಿ ಫೋನದು. ಅದನ್ನು ಹಿಡಿದು ಬಳಸುವ ಬಗೆ ತೋರಿಸಿಕೊಟ್ಟ .. ನೋಡನೋಡುತ್ತಿದ್ದಂತೆ ಎಷ್ಟು ಬೇಗ ಮನಸ್ಸು ಬದಲಾಯಿಸಿ ಬಿಟ್ಟಿತು! ಅದನ್ನು ಹುಚ್ಚಿಯಂತೆ ಹಿಡಿದು ಮನೆಯ ಗೋಡೆಯ ಫೋಟೋಗಳನ್ನೆಲ್ಲ ಕ್ಲಿಕ್ಕಿಸುತ್ತ ನೋಡುತ್ತಿದ್ದೆ. ಮನಸ್ಸನ್ನು ಆ ಯಂತ್ರ ಸೂಜಿಗಲ್ಲಿನಂತೆ ಸೆಳೆದು ಬಿಟ್ಟಿತ್ತು. ಆ ನಂತರ ನಮ್ಮ  ಮನೆಗೆ ಯಾವ ಅಡಚಣೆಯೂ ಇಲ್ಲದೆ ಒಂದು ಬೇಸಿಕ್ ಸೆಟ್ ಬಂದು ಪುನೀತವಾಯ್ತು. ಹಿತ್ತಲಿನ ದಾಸವಾಳದ ಗಿಡಗಳ ಮೇಲೆ ಕುಳಿತಿದ್ದ ಗುಬ್ಬಿಗಳ ಚಿಲಿಪಿಲಿ ಕೇಳಿದಾಗ, ನಾವೊಬ್ಬರು ಬಳಸಲಿಲ್ಲ ಎಂದ ಮಾತ್ರಕ್ಕೆ ಬೇರೆ ಯಾರೂ ಬಳಸೋದೆ ಇಲ್ಲವಾ, ನಾವು ನಿಲ್ಲಿಸಿದರೆ ಇವೇನು ಶಾಶ್ವತವಾಗಿ ಬದುಕುತ್ತವಾ, ನನಗೆ ಹುಚ್ಚು ಅಷ್ಟೇ ಎಂಬ ಭಾವ, ಸಮಜಾಯಿಷಿ ಮನಸ್ಸನ್ನು ತುಂಬಿಕೊಂಡಿತು...ಈಗೀಗಲಂತೂ ಮನೆಗೆ ಈ ಯಂತ್ರ ಎಷ್ಟು ಅನಿವಾರ್ಯವಾಗಿ ಹೋಗಿದೆಯೆಂದರೆ, ಅದನ್ನು ಬಿಟ್ಟು ದಿನಚರಿಯನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯವೆನ್ನುವ ಮಟ್ಟ ತಲುಪಿದೀನಿ, ಮತ್ತು ಈಗ ನಮ್ಮ ಮನೆಯಲ್ಲಿ ಎಲ್ಲರಿಗೂ ಪ್ರತ್ಯೇಕ ಫೋನ್ ಇದೆ!

ಮೊನ್ನೆ ಕಳೆದ ವಾರದ ತರಂಗದಲ್ಲಿ ಪ್ರಕಟವಾಗಿದ್ದ, "ಗುಬ್ಬಕ್ಕಾ... ಗುಬ್ಬಕ್ಕಾ.. ಎಲ್ಲಿಗೆ ಹೊದ್ಯೇ ಗುಬ್ಬಕ್ಕಾ..." ಲೇಖನ ಓದುತ್ತಿದ್ದಾಗ ಮನದಲ್ಲಿ ಈ ಎಲ್ಲ ದೃಶ್ಯಗಳು ಮೂಡಿ ಬಂದವು. ಜೊತೆಗೆ ನಮ್ಮ ಹಿತ್ತಲಿನ ಕೆಂಪು ದಾಸವಾಳದ, ಮರದಂತಿದ್ದ ಗಿಡದಲ್ಲಿ, ಮುಸ್ಸಂಜೆ ಹೊತ್ತಲ್ಲಿ ಒಟ್ಟಿಗೆ ಬಂದು ಕೂತು, ನಾನು ಗಿಡಕ್ಕೆ ನೀರು ಹಾಕಲು ಹೋದಾಗ ಬೆದರಿ ಒಟ್ಟಿಗೆ ಹಾರುತ್ತಿದ್ದ, ಆ ನಲುವತ್ತೈದು-ಐವತ್ತು ಗುಬ್ಬಿಗಳ ಗುಂಪಿನ ಚಿತ್ರವೂ ಮಸುಕು ಮಸುಕಾಗಿ ಗೋಚರಿಸಿತು.

ಜತೆಗೆ ಮನದಲ್ಲಿ ನೂರಾರು ವಿಚಾರಗಳು, ನಾವೆಲ್ಲಾ ಎತ್ತ ಸಾಗುತ್ತಿದ್ದೇವೆ, ಎಂಬ ಅಳುಕು. ಇದೇ ವಾರಪತ್ರಿಕೆಯಲ್ಲಿ ತುಂಬ ಹಿಂದೆ ಓದಿದ ಒಂದು ಕಥೆಯಲ್ಲಿ, ಹೀಗೆ ಗುಬ್ಬಿಗಳ ಕ್ಷೇಮಕ್ಕಾಗಿ ಸಂಚಾರಿ ದೂರವಾಣಿಯನ್ನು ಬಳಸದೆ ಸ್ಥಿರವನ್ನು ನೆಚ್ಚಿಕೊಂಡಿದ್ದ ತಾಯಿಗೆ ದೂರದೇಶದಿಂದ ಬಂದ ಮಗಳು "ಸರ್ವೈವಲ್ ಆಫ್ ದ ಫಿಟ್ಟೆಸ್ಟ್" ಎಂಬ ಸಿದ್ಧಾಂತ ಹೇಳಿ, ಅವು ಸತ್ತರೆ ನಾವೇನು ಮಾಡೋದು, ತಂತ್ರಜ್ಞಾನ, ಅಭಿವೃದ್ಧಿಯ ವೇಗಕ್ಕೆ ಹೊಂದಿಕೊಂಡು ಯಾವ ಜೀವಿ ಬದುಕುವುದಿಲ್ಲವೋ ಅದು ಬದುಕುವುದಕ್ಕೆ ಯೋಗ್ಯವಲ್ಲ ಎಂದು ಉಪದೇಶ ಮಾಡಿದ ನೆನಪು. ಹಾಗಿದ್ದರೆ ನಮ್ಮ ಗುಬ್ಬಕ್ಕ ಇನ್ನು ಮುಂದೆ ಕಾಣುವುದೇ ಇಲ್ಲವಾ, ಅವಳ ಬಗ್ಗೆ ಯಾರಿಗೂ ಚಿಂತೆಯೇ ಇಲ್ಲವಾ ಅಂದುಕೊಂಡರೆ, ಈಗೊಂದು ಓಯಸಿಸ್ ಕಾಣುತ್ತಿದೆ.

ಹೌದು, ಎಲ್ಲರಿಗೂ ತಿಳಿದಿದೆಯೋ ಇಲ್ಲವೋ ಆದರೆ ಕಳೆದ ಇಪ್ಪತ್ತನೆ ತಾರೀಕು ಅಂದರೆ, ಪ್ರತಿ ವರ್ಷ ಮಾರ್ಚ್ 20, ಗುಬ್ಬಚ್ಚಿಗಳಿಗೆಂದೇ ಮೀಸಲಾದ ದಿನ. ಈ ದಿನವನ್ನು 'ವಿಶ್ವ ಗುಬ್ಬಚ್ಚಿಗಳ ದಿನ' ವನ್ನಾಗಿ ಆಚರಿಸಲಾಗುತ್ತಿದೆ. "ನೇಚರ್ ಫಾರ್ ಎವರ್" ಸಂಘಟನೆ, ಅಮೆರಿಕಾದ "ಕಾರ್ನೆಲ್ ಲ್ಯಾಬ್ ಆಫ್ ಆರ್ನಿಥಾಲಜಿ", ಫ್ರಾನ್ಸ್ ದೇಶದ "ಇಕೋಸಿಸ್ಟಂ ಆಕ್ಷನ್ ಫೌಂಡೇಶನ್", ಬ್ರಿಟನ್ ನ "ಏವನ್ ವೈಲ್ಡ್ ಲೈಫ್ ಟ್ರಸ್ಟ್" ಹಾಗೂ ಭಾರತದ "ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ"ಗಳು ಜತೆಗೂಡಿ ಈ ದಿನಾಚರಣೆಯನ್ನು ಯೋಜಿಸಿದ್ದಾರಂತೆ. ಓದಿ ಖುಷಿಯಾಯಿತು. ಜತೆಗೆ ಮರುಕವೂ ಉಂಟಾಯಿತು. ನಮ್ಮ ನಿರ್ಲಕ್ಷ್ಯ ಎಷ್ಟು ಬೆಳೆದು ಬಿಟ್ಟಿದೆಯಲ್ಲ ಎಂಬ ಭಾವನೆ. ಮನೆಯ ಸುತ್ತ-ಮುತ್ತ ಸುತ್ತುತ್ತಲೇ ಇರುತ್ತಿದ್ದ ಈ ಪುಟ್ಟ ಜೀವಿಗೆ ನಮ್ಮಿಂದ ಎಷ್ಟೊಂದು ಹಾನಿಯಾಗುತ್ತಿದೆಯಲ್ಲಾ ಅನ್ನುವ ಚಿಂತೆ.

ನಮ್ಮ ಮನೆಯ ಸುತ್ತ-ಮುತ್ತ ಅವು ಸುಳಿದರೆ ಅವಕ್ಕೊಂದಿಷ್ಟು ಅಕ್ಕಿ ಕಾಳು ಉದುರಿಸುವಷ್ಟೂ ಪುರುಸೊತ್ತಿಲ್ಲದ ರೇಸ್ ನಂತಹ ಬದುಕು ಬದುಕುತ್ತಿದ್ದೆವೇನೋ ಅನ್ನಿಸಲು ಶುರುವಿಟ್ಟುಕೊಂಡಿದೆ. ಮನುಷ್ಯ ತನ್ನ ಸಾಮಾಜಿಕ ಜವಾಬ್ದಾರಿಗಳನ್ನೆಲ್ಲ ಮರೆತು, ತೊರೆದು, ತನ್ನ ಸ್ವಾರ್ಥ, ಸ್ವಹಿತಾಸಕ್ತಿಯ ವ್ಯಾಪ್ತಿಯಿಂದಾಚೆಗೆ ಏನೂ ಇಲ್ಲವೇನೋ ಎಂಬಷ್ಟು ವ್ಯಸ್ತನಾಗಿ ಹೋಗಿದ್ದಾನೆ. ಇದರ ಮಧ್ಯೆ ಈ ಹಕ್ಕಿ-ಪಿಕ್ಕಿಗಳ ಬಗೆಗೆ ಯೋಚಿಸಲು ಸಮಯವೆಲ್ಲಿದೆ? ಅಲ್ಲವೇ..

ಆದರೆ ಈಗ ಸಮಯವಿಲ್ಲದಿದ್ದರೂ ಅಗತ್ಯವಿದೆ, ಹೌದು. ನಿಮ್ಮ ಮನೆಯೆದುರು ಗುಬ್ಬಚ್ಚಿ ಕಾಣಿಸಿದರೆ ನಿಮ್ಮಷ್ಟು ಅದೃಷ್ಟವಂತರು ಯಾರೂ ಇಲ್ಲವೆಂದು ಹೇಳುತ್ತವೆ ಈ ಸಂಘಟನೆಗಳು. ಕನಿಷ್ಠ ಪಕ್ಷ ಆ ಅದೃಷ್ಟ ನಮಗಿದ್ದರೆ, ಅವು ಕಂಡರೆ ದಯವಿಟ್ಟು ಅವನ್ನು ಆಕರ್ಷಿಸಿ. ಅವಕ್ಕೊಂದಿಷ್ಟು ಅಕ್ಕಿ ಕಾಳು, ಅನ್ನದ ಅಗುಳು ದೂರದಲ್ಲಿ ಹಾಕಿದರೆ ಅವು ಬರತೊಡಗುತ್ತವೆ. ಸಾಧ್ಯವಿದ್ದರೆ ಒಂದು ಚಿಪ್ಪಿನಲ್ಲಾದರೂ ಸರಿ, ನೀರನ್ನಿತ್ತು, ಅಳಿಲು-ಬೆಕ್ಕುಗಳಿಂದ ದೂರವಿರುವ ಸ್ಥಳದಲ್ಲಿ ಒಂದು ಮರದ ಹಲಗೆಯನ್ನೋ, ಚಿಕ್ಕ ರಟ್ಟಿನ ಡಬ್ಬಿಯನ್ನೂ ಇಟ್ಟರೆ, ಅವು ಅಲ್ಲಿ ಮನೆಮಾಡಿಕೊಳ್ಳುತ್ತವೆ ಎಂಬುದು ಇವರ ಪುಟ್ಟ ವಿನಂತಿ.

ಅಷ್ಟು ಮಾತ್ರ ಕರ್ತವ್ಯವನ್ನು ನಾವು ಮಾಡಬಹುದೆಂದುಕೊಳ್ಳುತ್ತೇನೆ. ನಾಳೆ ನಾವು ನಮ್ಮ ಮಕ್ಕಳಿಗೆ ಕಾಗಕ್ಕ-ಗುಬ್ಬಕ್ಕನ ಕಥೆ ಹೇಳಿದಾಗ, ಗುಬ್ಬಕ್ಕ ಅಂದರೆ ಯಾರಮ್ಮಾ ಎಂಬ ಪ್ರಶ್ನೆ ಬಂದರೆ ನಾವು ನಿರುತ್ತರರಾಗಬಾರದಲ್ಲಾ!!!

ನೂತನ ಸಂವತ್ಸರದ ಶುಭಾಶಯಗಳು.