Wednesday, 30 October 2013

ಹಬ್ಬಗಳ ರಾಜ ದೀಪಾವಳಿ

ಹಬ್ಬಗಳ ರಾಜ ದೀಪಾವಳಿ ಬಂದಿತೆಂದರೆ ಎಲ್ಲೆಲ್ಲೂ ಸಂಭ್ರಮ ಸಡಗರದ ವಾತಾವರಣ ಮನೆ ಮಾಡಿರುತ್ತದೆ. ಮೂರು ದಿನ ಮನೆಮಂದಿಯೆಲ್ಲ ಸೇರಿ ಸಿಹಿ ಮಾಡಿ, ಹೊಸ ಬಟ್ಟೆ ತೊಟ್ಟು, ಪಟಾಕಿ ಹೊಡೆಯುವ ಖುಷಿ ಎಲ್ಲರ ಮನದಲ್ಲೂ. ಭಾರತೀಯ ಹಬ್ಬಗಳು ಸಾಮಾನ್ಯವಾಗಿ ಧಾರ್ಮಿಕ ಹಾಗೂ ಪಾರಮಾರ್ಥಿಕ ರೀತಿಯಲ್ಲಿ ಆಸ್ತಿಕ ಮಂದಿಯ ಕಣ್ಣು ತೆರೆಯಿಸುವುದಲ್ಲದೆ, ಭಾರತೀಯ ಸಂಸ್ಕೃತಿಯ ಪ್ರತೀಕವೂ ಆಗಿದೆ. ಅದರಲ್ಲೂ ದೀಪಾವಳಿಯ೦ದು ಧರ್ಮದ ಹಂಗು ತೊರೆದು ಎಲ್ಲರೂ ಒಟ್ಟುಗೂಡುವ ಸಂದರ್ಭಗಳೇ ಹೆಚ್ಚು, ಹಾಗಾಗಿ ಈ ಹಬ್ಬ ರಾಷ್ಟ್ರೈಕತೆಯನ್ನು ತುಂಬುವುದೆಂದರೆ ಅತಿಶಯೋಕ್ತಿ ಎನಿಸುವುದಿಲ್ಲ, ಅಲ್ಲವೇ? ಅಲ್ಲದೆ ಈ ಹಬ್ಬಕ್ಕೊಂದು ವೈಜ್ಞಾನಿಕ ಹಿನ್ನೆಲೆಯೂ ಇದೆ, ಇದು ಬರುವ ಕಾರ್ತಿಕ ಮಾಸದಲ್ಲಿ ಸಂಜೆಯ ವೇಳೆ ಕತ್ತಲೆಯು ಹೆಚ್ಚು. ಆದ್ದರಿಂದ ಮಾಸವಿಡೀ ಮನೆಯ ಮುಂದೆ ದೀಪ ಹಚ್ಚಿಡಬೇಕೆಂಬ ಕಟ್ಟಳೆ ಮಾಡಿದ ನಮ್ಮ ಪೂರ್ವಿಕರು, ದಾರಿಹೋಕರಿಗೆ ನೆರವಾಗಲೆಂಬ ದೃಷ್ಟಿಯಿಂದಲೇ ಇದನ್ನು ಮಾಡಿದರೆನೋ? 

ಮೊದಲೇ ಹೇಳಿದಂತೆ ಈ ಹಬ್ಬ ನಮ್ಮ ನಾಡಿನಲ್ಲಿ ಮೂರು ದಿನ ಮುಖ್ಯವಾಗಿ ಆಚರಿಸಲ್ಪಟ್ಟರೆ, ದೇಶದ ಕೆಲವು ಕಡೆ ಐದು ದಿನದವರೆಗೂ ಹಬ್ಬದ ಸಂಭ್ರಮ ತುಂಬಿರುತ್ತದೆ. ಶ್ರೀಕೃಷ್ಣ, ಮಡದಿ ಸತ್ಯಭಾಮೆಯೊಡಗೂಡಿ ನರಕಾಸುರನ ಸಂಹಾರ ಮಾಡಿದ ದಿನದ ಪ್ರತೀಕವಾಗಿ ದೀಪಾವಳಿಯ ಮೊದಲ ದಿನ ನರಕ ಚತುರ್ದಶಿ ಆಚರಿಸಲ್ಪಡುತ್ತದೆ. ಇದರ ಮುನ್ನಾ ದಿನ ಹೆಣ್ಣುಮಕ್ಕಳು ಮನೆಯ ಸ್ನಾನದ ಹಂಡೆಯನ್ನು ತೊಳೆದು, ಹೊಸನೀರು ತುಂಬಿ ಅದರ ಮೇಲೆ ವಿಘ್ನ ವಿನಾಶಕನ ಪೂಜೆ ಮಾಡಿ ತಯಾರಿ ನಡೆಸಿರುತ್ತಾರೆ. ಚತುರ್ದಶಿಯ ದಿನ ಮುಂಜಾನೆ ಬೇಗನೆ ಎದ್ದು ಎಲ್ಲರೂ ಎಣ್ಣೆ ನೀರು ಹಾಕಿಕೊಂಡು, ಸಿಹಿ ಹಂಚಿ, ಪಟಾಕಿ ಹೊಡೆದು ಮಧುಸೂದನನ ವಿಜಯವನ್ನು ಆಚರಿಸುತ್ತಾರೆ. ಉತ್ತರ ಭಾರತದ ಕೆಲವೆಡೆ ಶ್ರೀರಾಮ ರಾವಣನ ಮೇಲೆ ವಿಜಯ ಸಾಧಿಸಿ, ಸೀತೆಯೊಂದಿಗೆ ಅಯೋಧ್ಯೆಯನ್ನು ಮರುಪ್ರವೇಶಿಸಿದ ದಿನವಾಗಿ ಈ ದಿನ ಆಚರಿಸಲ್ಪಡುತ್ತದೆ. ಆ ದಿನ ಮನೆಯೆಲ್ಲ ದೀಪದಿಂದ ಅಲಂಕರಿಸಿ ವಿಜಯೀ ರಾಮನನ್ನು ಸ್ವಾಗತಿಸಲಾಗುತ್ತದೆ.

ಮರುದಿನ ಲಕ್ಷ್ಮೀ ಪೂಜೆ, ಲಕ್ಷ್ಮಿ ಕ್ಷೀರ ಸಾಗರದಿಂದ ಉದಯಿಸಿದ ದಿನವಿದೆಂಬ ನಂಬಿಕೆ ಹಲವು ಕಡೆ ಇದೆ. ವ್ಯಾಪಾರ, ವಹಿವಾಟುದಾರರಿಗೆ ಅತ್ಯಂತ ಪ್ರೀತಿಯ ದಿನವಿದು. ಲಕ್ಷ್ಮಿಯನ್ನು ಪೂಜಿಸಿ, ಅವಳ ಅನುಗ್ರಹವಿರಲೆಂದು ಪ್ರಾರ್ಥಿಸುತ್ತಾರೆ.

ಮೂರನೆಯ ದಿನ ಬಲಿಪಾಡ್ಯಮಿ, ವಿಷ್ಣು ವಾಮನ ರೂಪಿಯಾಗಿ ಬಲಿ ಮಹಾರಾಜನನ್ನು ನರಕಕ್ಕೆ ತಳ್ಳಿದ ದಿನ, ಇದೇ ದಿನ ಉತ್ತರ ಭಾರತದಲ್ಲಿ, ಗೋವರ್ಧನ ಪೂಜೆಯಾಗಿ ನಡೆಸಲ್ಪಡುತ್ತದೆ. ಬಾಲಕ ಕೃಷ್ಣ ಇಂದ್ರನ ಬದಲಾಗಿ ಗೋವರ್ಧನ ಪೂಜೆಯನ್ನು ಸಾರಿ ಇಂದ್ರನ ಕೋಪದಿಂದ ತನ್ನವರನ್ನು ಕಾಪಾಡಲು ಗೋವರ್ಧನ ಗಿರಿಯನ್ನು ಎತ್ತಿದ ದಿನವದು. ಅಂದು ಅನ್ನಕೂಟವನ್ನು ಬೆಟ್ಟದ ಮಾದರಿಯಲ್ಲಿ ಮಾಡಿ ಸಿಂಗರಿಸಿ ಕೃಷ್ಣ ವಿಜಯವನ್ನು ಸಾರುತ್ತಾರೆ. ಅಂತೆಯೇ ಮರುದಿನವನ್ನು ಯಮ ದ್ವಿತೀಯ ಎಂದು ಅಲ್ಲಿನವರು ಆಚರಿಸುತ್ತಾರೆ. ಒಟ್ಟಿನಲ್ಲಿ ಕೆಡುಕಿನ ಮೇಲೆ ಒಳಿತಿನ ದಿಗ್ವಿಜಯವನ್ನು ಸಾರುವ ಹಬ್ಬ ದೀಪಾವಳಿ.

ಆದರೆ ಇಂದು, ಹಬ್ಬದ ಹಿನ್ನೆಲೆ ಆಚರಣೆಗಳಿಗಿಂತ ಪಟಾಕಿಯ ಹುಚ್ಚೇ ಹೆಚ್ಚಾಗಿದೆ. ಒಂದು ಅಧ್ಯಯನದ ಪ್ರಕಾರ ದೀಪಾವಳಿಯ ಒಂದೇ ದಿನ ಸುಮಾರು ೬೦,೩೪೦ ಟನ್ ಗಳಷ್ಟು ಇಂಗಾಲಾಮ್ಲ ನಮ್ಮ ವಾತಾವರಣವನ್ನು ಸೇರುತ್ತದೆ. ಇದು ಸರಿ ಸುಮಾರು ೧೨,೦೦೦ ಕಾರುಗಳು ಒಂದುವರ್ಷದ ಅವಧಿಯಲ್ಲಿ ಬಿಡುವ ಇಂಗಾಲಾಮ್ಲಕ್ಕೆ ಸಮ. ಮೊದಲೇ ಹದಗೆಟ್ಟಿರುವ ವಾತಾವರಣಕ್ಕೆ ನಾವು ಇಷ್ಟೆಲ್ಲಾ ಕೊಡುಗೆ ನೀಡಬೇಕೆ? ಇನ್ನು ಕಳೆದ ವರ್ಷ ನಡೆದ ದೀಪಾವಳಿಯ ಅಪಘಾತಗಳೋ ದೇವರಿಗೇ ಪ್ರೀತಿ.

ಪಟಾಕಿ ತಯಾರು ಮಾಡುವ ಶಿವಕಾಶಿಯಲ್ಲೇ, ಕಾರ್ಖಾನೆಯಲ್ಲಿ ನಡೆದ ಅಪಘಾತದಲ್ಲಿ ೩೦ ಜನ ಸತ್ತರು. ಬರೋಡ, ಅರಿಯಲೂರು, ಔರಿಯ ಇತರೆಡೆ ಇದೇ ರೀತಿ ಪಟಾಕಿ ಮಾರುಕಟ್ಟೆಯಲ್ಲಿ ನಡೆದ ಅಪಘಾತಗಳೆಷ್ಟೋ? ಸಾಲದ್ದಕ್ಕೆ ನಮ್ಮ ಜನ ಚಿಕ್ಕ ಮಕ್ಕಳ ಕೈಯಲ್ಲೆಲ್ಲ ಪಟಾಕಿಯನ್ನಿತ್ತು ಅವೆಷ್ಟೋ ಕಂದಮ್ಮಗಳು ಕಣ್ಣು ಕಳೆದು ಕೊಂಡಿವೆ, ಮೈಯೆಲ್ಲಾ ಸುಟ್ಟ ಗಾಯ ಮಾಡಿಕೊಂಡಿವೆ. ದೊಡ್ಡವರ ಪಾಡೂ ಅಷ್ಟೇ, ಬಹುಶಃ ತನ್ನ ಭಕ್ತರು ಈ ರೀತಿ ತನ್ನ ವಿಜಯವನ್ನು ಆಚರಿಸುತ್ತಾರೆಂದು ಕೃಷ್ಣ ಪರಮಾತ್ಮನೂ ಊಹಿಸಿರಲಾರನೇನೊ?

ಒಳಿತಿನ ಮೇಲೆ ಕೆಡುಕಿನ ವಿಜಯವನ್ನಾಚರಿಸ ಹೋಗಿ ನಾವು ನಮ್ಮ ವಾತಾವರಣಕ್ಕೇ ಕೆಡುಕನ್ನುಂಟು ಮಾಡುತ್ತಿದ್ದೇವೆ. ಇಂತಹ ಆಚರಣೆ ಬೇಕೆ? ಈ ಬಾರಿಯಾದರೂ, ನಾವೊಬ್ಬರು ಮಾಡಿದರೆ ಏನಾಗುತ್ತದೆ ಎಂಬ ಸಿನಿಕತೆಯನ್ನು ಬಿಟ್ಟು, ಕೇವಲ ದೀಪಗಳೊಂದಿಗೆ ದೀಪಾವಳಿಯನ್ನಾಚರಿಸೋಣ. ಈ ಬಾರಿಯಾದರೂ ದೀಪಾವಳಿಯ ಅಪಘಾತದ ಸುದ್ದಿಗಳು ಬಂದು ಹಬ್ಬದ ಸಂಭ್ರಮಕ್ಕೆ ಸೂತಕ ತರದಿರಲಿ. ಎಲ್ಲರಿಗೂ ಹಬ್ಬದ ಶುಭಾಶಯಗಳು. 

Thursday, 24 October 2013

ಲಹರಿ

ಸುಮ್ಮನೇ ಬಯಸಿದಾಕ್ಷಣ ದೊರೆಯಲು,
ಕವಿತ್ವವೇನು ಹಾದಿಬದಿಯ ತಿಂಡಿಯೇನು?

ಮನದ ದೆಣಪೆಯಲಿ ಚಿಮ್ಮಬೇಕು ಮೊದಲು,
ಭಾವಗಳ ಒರತೆ.
ಒತ್ತಿ ಬಂದ ಭಾವಬೀಜಗಳ,
ಮನದಂಗಳದಲಿ ಬಿತ್ತಿ,
ಅರಿವಿನ ಮಳೆಗರೆದು,
ಪದಗೊಂಚಲ ಗೊಬ್ಬರ ಹೂಡಿ,
ಬೆಳೆಸಬೇಕೊಂದು ಕವಿತೆಯ, ಅರೆರೆ!
ಇನ್ನೂ ಮುಗಿಯದಿದರ ಬೇಡಿಕೆ!
ಪ್ರಾಸಾನುಪ್ರಾಸಗಳ ಅಲಂಕಾರದ ಚಪ್ಪರ
ಆಸರೆಗಾಗಿ ಬೇಕಂತೆ, ಬಳುಕುವ ಬಳ್ಳಿ ಕವನಕ್ಕೆ!

ಇಷ್ಟೆಲ್ಲಾ ಬೆವರು ಸುರಿಸಿ, ಅಲ್ಲಲ್ಲ
ಪ್ರೀತಿ ಹರಿಸಿ, ಮನದಂಗಳದೊಳು ಜಾಗವಿತ್ತರೂ,
ಕವಿಗಳ ಕಷ್ಟ ತಪ್ಪದು.
ಬೆಳೆದ ಕವನ ಓದುವವನದಂತೆ!
ಹರಿಸಿದ ಪ್ರೀತಿ ಪಡೆದವನದಂತೆ!
ಕವಿಯೆನಿಸಿಕೊಂಡವ, ಭಾವಝರಿಯ ಹುಡುಕುತ್ತಾ,
ಮತ್ತೆ ಸುರಿಸಬೇಕು ಹನಿ ಹನಿ ಪ್ರೀತಿಯ,
ಬೆಳೆಸಬೇಕು ಮತ್ತೊಂದು ಕಾವ್ಯ ಹಂದರ.

ಸುಮ್ಮನೇ ಬರುವುದಿಲ್ಲ ಕವಿತ್ವ!
ಅದಕ್ಕೂ ಸಿದ್ಧಿಸಬೇಕು ಲೋಕಪ್ರೀತಿಯ ಋಷಿತ್ವ!

Wednesday, 23 October 2013

ಅನ್ಯರೊರೆದುದನೆ

ಅನ್ಯರೊರೆದುದನೆ ಬರೆದುದನೆ ನಾ ಬರೆಬರೆದು
ಬಿನ್ನಗಾಗಿದೆ ಮನವು ಬಗೆಯೊಳಗನೇ ತೆರೆದು
ನನ್ನ ನುಡಿಯನೆ ಬಣ್ಣ ಬಣ್ಣದಲಿ ಬಣ್ಣಿಸುವ
ಪನ್ನತಿಕೆ ಬರುವನಕ, ನನ್ನ ಬಾಳಿದು ನರಕ.

ಹೀಗೆನ್ನುತ್ತಾರೆ ಅಡಿಗರು. ತಮ್ಮ ಭಾವಸಂಗಮದ ಕವನವೊಂದರಲ್ಲಿ. ಹೆಚ್ಚೂ ಕಡಿಮೆ ಬರೆಯಲು ಕೂಡುವ ಎಲ್ಲ ಹೊಸಬರ ಮನಃಸ್ಥಿತಿಗೆ ಹಿಡಿದ ಕೈಗನ್ನಡಿಯಂತಿವೆ ಸಾಲುಗಳಿವು. ನನಗೂ ಅಷ್ಟೇ, ಬರೆಯಲು ಕೂತರೆ ಪದಗಳೇ ಹುಟ್ಟುವುದಿಲ್ಲ. ಹಾಗೆಂದು ಬರೆಯದೆ ಸುಮ್ಮನೆ ಇರಲೂ ಆಗುವುದಿಲ್ಲ, ಏನೋ ಒಂದು ವಿಚಿತ್ರ ಚಡಪಡಿಕೆ. ಹಾಗೂ ಹೀಗೂ ಮಾಡಿ ಏನೇ ಬರೆದರೂ, ಬರೆದಿದ್ದೆಲ್ಲ ಬಾಲಿಶ ಎನಿಸಿ ಮತ್ತೊಬ್ಬರಿಗೆ ತೋರಿಸಲು ಹೋಗುವುದಿಲ್ಲ, ಬರೆದ ಅವೆಷ್ಟೋ ಸಾಲುಗಳು ಹೀಗೆ ನನ್ನೊಳಗೇ ಹುದುಗಿ ಹೋಗಿವೆ. ಇದರ ಮಧ್ಯೆ ಓದು ಬರಹಕ್ಕೆ ಬಿಡುವು ಕೊಡದ ವೈಯಕ್ತಿಕ ಕೆಲಸಗಳು, ಎಲ್ಲ ಸೇರಿ ನನ್ನ ಸಾಹಿತ್ಯ ಕೃಷಿ ಕುಂಟುತ್ತಾ ಸಾಗುತ್ತಿದೆ.


ಏನೇ ಬರೆದರೂ ಈ ರೀತಿ ಬರೆಯುವವರು ಸಾವಿರ ಮಂದಿ, ಎಲ್ಲಿ ನಾನು ಅವರನ್ನು ಅನುಕರಿಸಿದಂತಾಗುವುದೋ? ಎನಿಸಿ ನಿಲ್ಲಿಸಿದ್ದೇನೆ. ಅನುಕರಣೆಗಿಂತ ಅನುಸರಣೆ ಉತ್ತಮ ಎಂಬ ಅರಿವೇನೋ ಇದೆ. ಆದರೆ ಎರಡರ ಮಧ್ಯೆ ಇರುವ ಕೂದಲೆಳೆಯ ಅಂತರವನ್ನು ಅರ್ಥೈಸಿ, ಅದರಂತೆ ನಡೆಯುವುದೇ ಕಷ್ಟ. ಎಷ್ಟೋ ಸಲ ಕುಳಿತು ಬರೆದಾಗ, ಈ ಶೈಲಿಯ ಲೇಖನ ಯಾವುದೋ ಬ್ಲಾಗ್ ನಲ್ಲಿ ಓದಿದಂತಿದೆಯಲ್ಲ? ಆ ಶೈಲಿಯನ್ನೇ ನಾನು ನಕಲು ಮಾಡುತ್ತಿದ್ದೇನೆ, ಕೊನೆಪಕ್ಷ ನನ್ನದೇ ಆದ ಶೈಲಿಯೊಂದನ್ನಾದರೂ ರೂಪಿಸಿಕೊಳ್ಳಬೇಕು ಎನಿಸುತ್ತಿರುತ್ತದೆ. ಈ ಗೊಂದಲಕ್ಕೆಲ್ಲ ಕೊನೆಯೆಂದೋ?? ಇನ್ನೂ ಕಂಡಿಲ್ಲ.

ಯಾವುದೇ ನಿರ್ದಿಷ್ಟ ಉದ್ದೇಶ, ಸಿದ್ಧಾಂತ, ಗುರಿ ಇಟ್ಟುಕೊಂಡು ಬರೆಯುವವಳಲ್ಲ ನಾನು. ಮನಸ್ಸಿಗೆ ಬಂದಾಗ ಮೂಡಿದ್ದನ್ನೆಲ್ಲ ಗೀಚುವವಳು. ನನ್ನ ಗೊಂದಲ ತೀರಿ ಮನ ತಿಳಿಯಾಗುವವರೆಗೂ ಬಹುಶಃ ಇದೇ ಧಾಟಿಯ ಬರಹಗಳೇ ನನ್ನ ಬ್ಲಾಗ್ ಗೋಡೆ ತುಂಬಾ ಅಂಟಿಕೊಳ್ಳುತ್ತವೇನೋ??

Monday, 1 April 2013

ಏಕೆ ಓದಬೇಕು?

ಯಾವುದೋ ಒಂದು ಲಹರಿ ಮೂಡಬೇಕು, ಆ ಮೂಡಿನಲ್ಲಿದ್ದಾಗ ಮನದ ಸಂತಸವನ್ನೆಲ್ಲ ಅಕ್ಷರ ರೂಪದಲ್ಲಿ ಮೂಡಿಸಬೇಕು, ಲಹರಿ ಚೂರು ಅತ್ತಿತ್ತ ವಾಲಿತು ಅಂದರೆ ಮುಗಿಯಿತು, ಮನದ ಕ್ಯಾನ್ವಾಸಿನಲ್ಲಿ ಮತ್ತೇನೂ ಮೂಡಲಾರದು, ಹೀಗೆಲ್ಲ ಅಂದುಕೊಂಡೇ ನನ್ನ ಬರವಣಿಗೆ ಕುಂಟುತ್ತಾ ಸಾಗುತ್ತಿದೆ. ನೆನ್ನೆ ಸುಮ್ಮನೆ ಒಂದು ಯೋಚನೆ ಬಂತು, ಅಷ್ಟಕ್ಕೂ ಈ ಲಹರಿ ಅಂದರೇನು? ಅದಕ್ಕೇಕೆ ಕಾಯುತ್ತಾ ಕುಳಿತಿರುತ್ತೇನೆ ನಾನು? ಬರೆಯುವ ಹಂಬಲವಿರುವವರೆಲ್ಲರೂ ನನ್ನ ಹಾಗೆಯೇ ಕಾಯುತ್ತಾರ? ಅಥವಾ ಸುಮ್ಮನೆ ಅಕ್ಷರಗಳ ಗೊಂಚಲು ಪೋಣಿಸುತ್ತಾರ? ಎದುರಾಗುವ ಪ್ರತಿ ಸಂದರ್ಭವನ್ನೂ ಅನುಭವಿಸುವ, ಅದರಲ್ಲಿ ಸಂತಸವನ್ನು ಕಾಣುವ ಕಲೆ ಸಿದ್ಧಿಸಿದರೆ ಪ್ರತಿಕ್ಷಣವೂ ಒಳ್ಳೆ ಜೀವನಪಾಠವೇ ತಾನೇ? ಹಾಗಿದ್ದರೆ ಎಲ್ಲವನ್ನೂ ಅಕ್ಷರಗಳಲ್ಲಿ ಮೂಡಿಸಲು ಏಕೆ ಸಾಧ್ಯವಾಗುವುದಿಲ್ಲ? ಅಥವಾ ಸಾಧ್ಯವಿದೆಯೋ?

ಪ್ರತಿಯೊಂದು ಘಟನೆಗೂ ಎರಡು ಆಯಾಮಗಳಿರುತ್ತವೆ, ಇಬ್ಬರು ವ್ಯಕ್ತಿಗಳಿಗೆ ಒಂದೇ ಘಟನೆ ಬೇರೆ ಬೇರೆ ತೆರನಾಗಿ ಕಾಣಬಹುದು, ನಮ್ಮ ದೃಷ್ಟಿಕೋನವನ್ನು ತರ್ಕದ ಸಹಾಯದಿಂದ ಜಾಲಿಸುತ್ತಾ ಅಕ್ಷರಗಳಲ್ಲಿ ಹರವಿಡುತ್ತಾ ಹೋದರೆ ಅದನ್ನೇ ತಾನೆ ಸಾಹಿತ್ಯ ಎನ್ನುವುದು? ಕೆಲವರು ತಮ್ಮ ಅನುಭವಕ್ಕೆ, ಮನದ ಭಾವಕ್ಕೆ ಪ್ರಾಸದ ರೂಪ ನೀಡಿ ಪದ್ಯ ಬರೆಯುತ್ತಾರೆ, ಕೆಲವರು ಗಂಭೀರವಾದ ಚಿಂತನೆಗಳನ್ನು ಅಷ್ಟೇ ಗಂಭೀರವಾದ ಶೈಲಿಯಲ್ಲಿ  ವಾಕ್ಯರೂಪೇನ ಹರವಿಡುತ್ತಾರೆ. ಏನೇ ಆದರೂ ಎಲ್ಲದರ ಕೊನೆಯಲ್ಲಿ ಸಿಗುವುದು ಒಂದೇ, ಅಪಾರವಾದ ಜೀವನಾನುಭವ. ಹಾಗಿದ್ದರೆ ಮತ್ತೊಂದು ಪ್ರಶ್ನೆ ಮೂಡುತ್ತದೆ, ಸಾಹಿತ್ಯ  ರಚನೆಗೆ ಸ್ವಾನುಭವವೇ ಆಗಬೇಕೋ? ಅದಿಲ್ಲದಿದ್ದರೆ ಕಂಡ, ಕೇಳಿದ ಅನುಭವಗಳನ್ನು ನಾವು ಬರೆದರೂ ಆದೀತು ಎನ್ನುವುದಾದರೆ, ಅದು ನಮ್ಮ ಸ್ವಂತ ಎನಿಸಿಕೊಳ್ಳುವುದು ಹೇಗೆ?

ಹೀಗೆ ನನ್ನ ತರ್ಕ ತಲೆಬುಡವಿಲ್ಲದೆ ಎಲ್ಲಿಂದೆಲ್ಲಿಗೋ ಸಾಗುತ್ತಿತ್ತು. ಆದರೆ ಈ ಯೋಚನೆ ಮೂಡಲು ಕಾರಣವಾದ ಘಟನೆ ನಾನು ಮತ್ತೆ ಮತ್ತೆ ಯೋಚಿಸುವಂತೆ ಮಾಡುತ್ತಿತ್ತು. ಈಗ್ಗೆ ಸರಿಸುಮಾರು ತಿಂಗಳ ಕೆಳಗೆ ನಾನು ನನ್ನ ಗೆಳತಿ ಒಂದು ಪುಸ್ತಕದ ಮಳಿಗೆಗೆ ಹೋಗಿದ್ದೆವು, ಅವರು ಯಾವುದೋ ಪುಸ್ತಕ ಹುಡುಕುತ್ತಿದ್ದರು, ನಾನು ಭೈರಪ್ಪನವರ section ನೋಡುತ್ತಿದ್ದೆ, ನನ್ನ ಹಿಂದೇ ಸುತ್ತುತ್ತಿದ್ದ ಆ ಅಂಗಡಿಯ sales girl ಒಂದೊಂದೇ ಕಾದಂಬರಿಯ ಹೆಸರು ಓದಿ "ಇದೆಲ್ಲ ತೊಗೊಂಡ್ ಓದ್ತೀರಾ?" ಎಂದು ಕೇಳಿದಳು. ಅವಳ ಮುಖಭಾವ ನೋಡಿದರೆ ಯಾವುದೋ ಅದ್ಭುತವನ್ನು ಕಾಣುತ್ತಿದ್ದಾಳೇನೋ  ಎನ್ನುವಂತಿತ್ತು. ನಾನು ನಗುತ್ತಾ "ಮತ್ಯಾಕೆ ತೊಗೊಳ್ಳಿ? ಆಗ್ಲೇ ಎಲ್ಲಾ ಓದಾಗಿದೆ" ಎಂದೆ. ತಕ್ಷಣ ಅವಳ ಪ್ರತಿಕ್ರಿಯೆ ನಗುತರಿಸುವಂತಿತ್ತು, ಅಂತೆಯೇ ಯೋಚಿಸುವಂತೆಯೂ... ಬಾಯಿಮೇಲೆ ಕೈಯಿಟ್ಟು "ಯಪ್ಪಾ! ಇಷ್ಟ್ ದಪ್ಪ ದಪ್ಪ ಬುಕ್ಸ್ ಹೆಂಗ್ ಓದ್ತೀರಾ? ನಮ್ಗೆ ನಮ್ syllabus ಓದಿ ಮುಗ್ಸಿದ್ರೆ ಸಾಕಪ್ಪಾ ಅನ್ನಿಸಿಬಿಡುತ್ತೆ" ಅಂದಳು. ಅವಳಿಗೆ ಯಾರೋ ಇದೇ ಪ್ರಶ್ನೆಗೆ "ಇದನ್ನೆಲ್ಲಾ ಓದೋಕ್ಕಾಗುತ್ತ? ಸುಮ್ಮನೆ ಮನೆಗ್ ತೊಗೊಂಡ್ ಹೋಗಿ ಇಟ್ಕೊತೀವಿ, ನೋಡಿದೋರು ನಮ್ಮನ್ನ ಒಂದು standard ಅಂದ್ಕೋತಾರೆ" ಅಂದಿದ್ನಂತೆ, ಆ ಪುಣ್ಯಾತ್ಮ ಯಾರೋ ತಿಳಿದಿಲ್ಲ, ಆದರೆ ಅದನ್ನು ಕೇಳಿದಾಗ ಮಾತ್ರ ಬೇಸರವಾಯಿತು. ಜನ ಹೀಗೂ ಇರುತ್ತಾರ ಎನಿಸಿದ್ದಷ್ಟೇ ಅಲ್ಲ, ಗಂಭೀರ ಸಾಹಿತ್ಯದ ಪ್ರಕಾರವನ್ನು ತರ್ಕಬದ್ಧವಾಗಿ ಅಧ್ಯಯನ ಮಾಡುವ ಜನ ಎಷ್ಟಿದ್ದಾರೆ ಎಂಬ ಯೋಚನೆಯೂ ಬಂದಿತು.

ಒಂದು ಅಧ್ಯಯನದ ಪ್ರಕಾರ ಅಂತರ್ಜಾಲದ ಪ್ರಭಾವ ಎಷ್ಟೇ ಇದ್ದರೂ ಪ್ರಕಟಿತ ಪುಸ್ತಕಗಳಿಗೆ ಭಾರತ ಅತ್ಯಂತ ದೊಡ್ಡ ಮಾರುಕಟ್ಟೆ. ಪ್ರಕಟಿತ ಪುಸ್ತಕಗಳಿಗೆ ಇಲ್ಲಿ ಬೇಡಿಕೆ ಬಹಳ. ಆದರೆ ಪುಸ್ತಕ ಕೊಂಡವರಲ್ಲಿ ಎಷ್ಟು ಜನ ಅದನ್ನು ಓದುತ್ತಾರೆ ಎಂದು ಸಮೀಕ್ಷೆ ಮಾಡಲು ಸಾಧ್ಯವಿದೆಯ? ಬಹುಶಃ ಆ ಸಮೀಕ್ಷೆಯಾದರೆ ಬಹಳಷ್ಟು ಪುಸ್ತಕಗಳು ಕೇವಲ ಪ್ರದರ್ಶನದ ವಸ್ತುವಾಗುತ್ತಿವೆಯೆಂಬ ಅಂಶ ಬೆಳಕಿಗೆ ಬಂದೀತೇನೋ? ಇರಲಿ, ನನ್ನ ಮೂಲ ಸಮಸ್ಯೆ ಈ ವಿಚಾರದಲ್ಲಲ್ಲ. ಆ ಹುಡುಗಿ ಕೇಳಿದ ಎರಡನೇ ಪ್ರಶ್ನೆ ನನ್ನನ್ನು ಬಹಳ ದಿನದಿಂದ ಕಾಡಿಸುತ್ತಿದೆ. ಒಮ್ಮೊಮ್ಮೆ ಒಂದೊಂದು ಉತ್ತರವನ್ನೀಯುತ್ತಾ...

ಅವಳು ಕೇಳಿದಳು "ಇದ್ನೆಲ್ಲ ಯಾಕ್ ಓದ್ತೀರಾ? ನಾವ್ ಓದಿದ್ರೆ marks ಸಿಗುತ್ತೆ, ಪಾಸ್ ಆಗ್ತೀವಿ, ಇದ್ನೆಲ್ಲ ಓದಿದ್ರೆ ಏನು use?"
ಪ್ರಶ್ನೆ ಬಂದ ತಕ್ಷಣ ಸುಮ್ಮನಾದೆ, ಹೌದಲ್ಲಾ, ಯಾಕ್ ಓದ್ಬೇಕು ಇದ್ನೆಲ್ಲಾ ಅನ್ನೋದನ್ನೇ ಯೋಚಿಸುತ್ತಿದ್ದೆ. ಅವಳಿಗೆ ಏನೋ ಉತ್ತರ ಹೇಳಿ ನುಣುಚಿಕೊಂಡು ಬಂದಿದ್ದೆ, ಆದರೆ ನೆನ್ನೆ ಯೋಚಿಸುತ್ತಿದ್ದಾಗ ಮೇಲಿನ ಯೋಚನೆ ಬಂದಿತು. ಎಷ್ಟು ಮಹನೀಯರ, ಪ್ರತಿಭಾವಂತರ ಜೀವನಾನುಭವ ಅಡಕವಾಗಿರುತ್ತದೆ ಸಾಹಿತ್ಯದಲ್ಲಿ, ಪ್ರತಿಯೊಂದೂ ಜೀವನದ ಬಗೆಗೆ ಹೊಸದೊಂದು ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು, ಜೀವನದ ಬೆಲೆ ಅರಿಯಲು ಸಹಾಯ ಮಾಡುತ್ತವೆ. ನಮ್ಮ ಸ್ವಂತ ಅನುಭವಕ್ಕೆ ಬಾರದಂತಹ ಘಟನೆ, ನಮ್ಮ ಆಲೋಚನೆಗೆ ನಿಲುಕದ್ದು, ಬೇರೆಯವರ ಅನುಭವಕ್ಕೆ ಬಂದಿರಬಹುದು, ಅವರ ಆಲೋಚನೆಗೆ ನಿಲುಕಿರಬಹುದು, ಪ್ರತಿಯೊಂದು ಅನುಭವವನ್ನೂ ತರ್ಕದ ಮೂಸೆಯಡಿ ತಿಕ್ಕಿ ಸಾಮೂಹಿಕವಾಗಿ ಹಂಚಿಕೊಳ್ಳುವ ಮಾಧ್ಯಮವೇ ಸಾಹಿತ್ಯ, ಅಲ್ಲವೇ? ಅದಕ್ಕಾಗಿಯೆ ತಾನೇ ಓದಬೇಕು? ಬಹುಶಃ ಈ ತರ್ಕ ಬೇರೆ ರೂಪದಲ್ಲಿ ಬೇರೆಯವರ ಮನದಲ್ಲಿ ಮೂಡಿ ಅದೂ ಈಗಾಗಲೇ ಸಾಹಿತ್ಯದ ರೂಪು ಪಡೆದಿದೆಯೇನೋ? ಏನೇ ಆಗಲಿ ಇದನ್ನೆಲ್ಲಾ ಆ ಹುಡುಗಿಗೆ ಹೇಳಬೇಕು ಅನಿಸುತ್ತಿದೆ. ಅದು ಆ ಹುಡುಗಿಯಿಂದ ಅವಳ ಪ್ರಶ್ನೆಗೆ ಮೊದಲು ಉತ್ತರ ಕೊಟ್ಟ ವ್ಯಕ್ತಿಗೂ ಮುಟ್ಟುವಂತಿದ್ದರೆ ಚೆನ್ನಾಗಿರುತ್ತಿತ್ತೇನೋ.


Sunday, 10 February 2013

ರಿಮ್ ಝಿಮ್ ಗಿರೆ ಸಾವನ್ ....

ರಿಮ್ ಝಿಮ್ ಗಿರೆ ಸಾವನ್ 
ಸುಲಘ್ ಸುಲಘ್ ಜಾಯೆ ಮನ್ 
ಭೀಗೇ ಆಜ್ ಇಸ್ ಮೌಸಮ್ ಮೇ 
ಲಗಿ ಕೈಸೆ ಏ ಅಗನ್...

ಸಿಸ್ಟಮ್ ನಲ್ಲಿ ಈ ಹಾಡು ಪ್ಲೇ ಆಗುತ್ತಿದ್ದರೆ, ಹೊರಗೆ ಅಕಾಲಿಕವಾಗಿ ಸುರಿದ ಚುಮು ಚುಮು ಮಳೆ. ಒಂದಕ್ಕೊಂದು ಎಷ್ಟು ಆಪ್ತವಾಗಿ ಹೊಂದುತ್ತವೆ ಅಲ್ವಾ... ಹೊರಗೆ ತಣ್ಣನೆ ಗಾಳಿಗೆ ಮೈ ಒಡ್ಡಿಕೊಂಡು ಆಗಸದತ್ತ ಮೊಗಮಾಡಿ ಕುಳಿತಿದ್ದರೆ, ಇಂತಹ ಹಾಡು ಜತೆಯಾದರೆ ಮನಸ್ಸು ಹಗುರವಾದಂತಹ, ತೇಲಿದಂತಹ ಅನುಭೂತಿ. ಹಾಗೆಯೇ ಮಳೆಯಲ್ಲಿ ಹೋಗಿ ನಿಂತು ಹನಿಗಳನ್ನು ನನ್ನೊಳಗೆ ಎಳೆದುಕೊಳ್ಳಬೇಕು, ಯಾವ ಮೋಡದಿಂದ, ಯಾವ ಹನಿ ಬೀಳುತ್ತಿದೆ ಗಮನವಿಟ್ಟು ನೋಡಬೇಕು,  ಹನಿಗಳ ಕಚಗುಳಿಯನ್ನನುಭವಿಸುತ್ತಾ, ಹನಿ ಬಾಣವಾಗುವುದನ್ನು, ಬಾಣ ಬಿರುಸಾಗಿ ನನ್ನ ಮೇಲೆ ದಾಳಿ ಮಾಡಿದಾಗ ಆ ದಾಳಿಯನ್ನೂ ಎದುರಿಸಿ ಅಲ್ಲೇ ನಿಲ್ಲಬೇಕು.. ಮಳೆ ಬಂದರೆ ಇಂತಹವುವೇ ನನ್ನ ಹುಚ್ಚು ಆಸೆಗಳು ಗರಿಗೆದರುತ್ತವೆ.. ಆಗೆಲ್ಲ ಛೆ! ನಮ್ಮ ಮನೆಯೂ ದಟ್ಟ ಮಲೆನಾಡಿನ ಪುಟ್ಟ ಮೂಲೆಯಲ್ಲೆಲ್ಲಾದರೂ ಇರಬಾರದಿತ್ತೇ? ಅನಿಸಿ ಮಲೆನಾಡಿಗರ ಮೇಲೆ ಅಸೂಯೆಯೂ ಉಂಟಾಗುತ್ತದೆ. ಅಲ್ಲೆಲ್ಲಾ ಅಷ್ಟು ಕರುಣೆ ತೋರುವ ಮಳೆರಾಯ ನಮ್ಮೂರಿಗೆ ಮಾತ್ರ ಯಾಕೆ ಭೇದ ಮಾಡುವುದು, ಅಲ್ಲಿ ಬಂದಂತೆ ಇಲ್ಲಿಗೂ ಬರಲು ಅವನಿಗೇನು ಧಾಡಿ ಎಂದು ಅವನ ಮೇಲೆ ಕೋಪವೂ ಬರುತ್ತದೆ, ಮತ್ತೆ ಪಾಲಿಗೆ ಬಂದಷ್ಟೇ ಪಂಚಾಮೃತ ಎನಿಸಿ ನಮ್ಮೂರಿನ ಈ ಸಣ್ಣ ಮಳೆಯಲ್ಲೇ ತೃಪ್ತಿ ಪಟ್ಟುಕೊಳ್ಳುತ್ತೇನೆ.

ನೆನ್ನೆ ಅಕಾಲಿಕವಾಗಿ ಮಳೆ ಬಂತಲ್ಲಾ, ಬಹಳ ಮಜಾ ಇತ್ತು..  ಇದ್ದಕ್ಕಿದ್ದಂತೆ ಸುರಿದ ಈ ಮಳೆರಾಯನ ಆಟಕ್ಕೆ, ಒಬ್ಬೊಬ್ಬರಲ್ಲಿ ಒಂದೊಂದು ಭಾವ... ಇಲ್ಲಿ ನಾನು ಮನೆಯಲ್ಲಿ ಒಬ್ಬಳೇ ಕುಳಿತು ಹಾಡನ್ನು ಕೇಳುತ್ತಾ ಮಳೆಯನ್ನು ಆಸ್ವಾದಿಸುತ್ತಿದ್ದರೆ, ಇಲ್ಲೇ ಪಕ್ಕದಲ್ಲಿ, ರಸ್ತೆ ರಿಪೇರಿಯಲ್ಲಿ ತೊಡಗಿದ್ದ ಕಾರ್ಮಿಕರು ಮಳೆಗಿಷ್ಟು ಹಿಡಿ ಶಾಪ ಹಾಕುತ್ತಾ ಕೆಲಸ ಬಿಟ್ಟು ಅಲ್ಲಲ್ಲೇ ಆಸರೆ ಹುಡುಕಿಕೊಂಡು ನಿಂತಿದ್ದರು. ಶನಿವಾರದ ಅರ್ಧ ದಿನದ ರಜೆ ಆಡಲಾರದೆ ಹಾಳಾಯಿತಲ್ಲಾ ಎಂದು ಎದುರು ಮನೆ ಮಕ್ಕಳು ಮುನಿಸಿಕೊಂಡು ಕುಳಿತಿದ್ದರೆ, ನಮ್ಮೂರಿನ ಮೂಲೆಯೊಂದರಲ್ಲಿ, ಅಲ್ಲೆಲ್ಲೋ ತಮ್ಮ ಜಾತಿ ಸಂಘದ ಸಮಾವೇಶ ನಡೆಸುತ್ತಿದ್ದ ಜನಗಳಲ್ಲಿ, ಒಬ್ಬ ನಮ್ಮ ಸಮ್ಮೇಳನಕ್ಕೆ ವರುಣ ಪುಷ್ಪವೃಷ್ಟಿ ಮಾಡುತ್ತಿದ್ದಾನೆಂದು ಕೂಗಿ ಹೇಳಿ ಸಂಭ್ರಮಿಸುತ್ತಿದ್ದ. ಇನ್ನಷ್ಟು ಬರಬಾರದಿತ್ತೆ ಎಂಬ ಸಂಕಟ ರೈತನ ಮೊಗದಲ್ಲಿದ್ದರೆ, ಯಾಕಾದರೂ ಬಂದಿತೋ ಹೊತ್ತಲ್ಲದ ಹೊತ್ತಿನಲ್ಲಿ ಎಂಬ ಗೊಣಗಾಟ ಮತ್ತೊಬ್ಬನದ್ದು.

ಈ ಮಳೆ ತನ್ನಲ್ಲಿ ಎಷ್ಟೆಲ್ಲಾ ಭಾವಗಳನ್ನು ಹೊತ್ತು ತರುತ್ತದೆ, ಹಾಗೆಯೇ ಹೊತ್ತೊಯ್ಯುತ್ತದೆ, ಅಲ್ಲವಾ? ಕೆಲವರಿಗೆ ಅನ್ನ ದುಡಿಯುವ ದಾರಿ ಮಾಡಿಕೊಟ್ಟರೆ ಕೆಲವರಿಗೆ ದಿನದ ಕೂಳು ಕಿತ್ತುಕೊಳ್ಳುವ ಕ್ರೂರಿಯಾಗಿ ತೋರುತ್ತದೆ, ಕೆಲವರಿಗೆ ಕೆಟ್ಟ ಘಟನೆಗಳ ಸಂತೆಯನ್ನು ತಂದರೆ, ಕೆಲವರಿಗೆ ಪ್ರೀತಿ ಪಾತ್ರರ ನೆನಪನ್ನು ಹೊತ್ತು ತರುತ್ತದೆ.. ಮಾನವನ ಜಂಜಾಟ ಬಿಡಿ, ಪಶು ಪಕ್ಷಿಗಳೂ ಕೂಡ ಕೆಲವೊಮ್ಮೆ ಗೂಡು ಸೇರಲಾರದೆ ಪರಿತಪಿಸುತ್ತವೆ, ಆದರೂ ಮಳೆಯನ್ನು ಸ್ವಾಗತಿಸಿ ಪ್ರೀತಿಸುತ್ತವೆ. ಇದಾವುದರ ಪರಿವೆಯೂ ಇಲ್ಲದಂತೆ ವರುಣ ತನ್ನ ಪಾಡಿಗೆ ತಾನು ಧೋ ಎಂದು ಸುರಿಯುತ್ತಿರುತ್ತಾನೆ. ಯಾರು ಹೇಗಾದರೆ ತನಗೇನು, ತನ್ನ ಗುರಿ ತಾನು ಮುಟ್ಟಬೇಕು ಎಂದು ಜೀನು ಹಾಕಿದ ಕುದುರೆಯಂತೆ ಲಾಗಾಯ್ತಿನಿಂದ ನುಗ್ಗುತ್ತಿರುತ್ತಾನೆ.

ಭೂಮಿ ಕೊಳೆಯನ್ನು ತೊಳೆದುಕೊಂಡು, ಹೊಸ ಹಸಿರನ್ನು ಹೊದ್ದು ನಿಲ್ಲುತ್ತಾಳೆ, ವರುಣನ ಆಗಮನದ ಹರ್ಷವನ್ನು ಹಂಚುವ ರೀತಿ ಮಂದ ಮಾರುತ ತಂಪಾಗಿ ಬೀಸುತ್ತಿದ್ದರೆ, ಆ ಗಾಳಿಯಲ್ಲಿ ಹಾಗೇ ಒಂದು ಸಣ್ಣ ವಾಕಿಂಗ್ ತೆಗೆದರೆ ಅದರ ಮಜಾನೆ ಬೇರೆ.. 

ಅತೀ ಗ್ರಾಂಥಿಕವಾಯ್ತ?? ಗೊತ್ತಿಲ್ಲ. ಆದರೆ ನೆನ್ನೆ ಸಂಜೆಯ ಮಳೆ ನನ್ನಲ್ಲಿ ಈ ಎಲ್ಲ ಭಾವಗಳನ್ನೂ ಹುಟ್ಟು ಹಾಕಿದ್ದಂತೂ ನಿಜ. ಜತೆಗೆ ಎಪ್ಪತ್ತರ ದಶಕದ ಈ ಆಪ್ತವಾದ ಹಾಡು ಮನವನ್ನು ಬೇರೆಯೇ ಲೋಕಕ್ಕೆ ಕೊಂಡೊಯ್ದಿತ್ತು. ಹಾಗೆಯೇ ಒಂದು ವಾಕ್ ಹೋಗಿ ಬಂದೆ. ಬಹಳ ದಿನಗಳ ನಂತರ ಮತ್ತೆ ಬರೆಯಬೇಕೆನಿಸಿತು!

Tuesday, 2 October 2012

ಪ್ರಾಮಾಣಿಕತೆಯ ಸಾಕಾರ ಮೂರ್ತಿ, ಚಿರಂತನ ಸ್ಫೂರ್ತಿ

ಆರು ವರ್ಷದ ಒಬ್ಬ ಹುಡುಗ ತನ್ನ ಗೆಳೆಯರೊಡನೆ ಶಾಲೆ ಮುಗಿಸಿ ಬರುತ್ತಾ ಒಂದು ತೋಟಕ್ಕೆ ಹೋಗುತ್ತಾನೆ. ಗೆಳೆಯರ ಗುಂಪು ತೋಟದಲ್ಲಿ ಹಣ್ಣನ್ನು ಕದಿಯಲು ಹೊಂಚು ಹಾಕಿ, ಮರವನ್ನು ಹತ್ತುತ್ತಾರೆ, ಈ ಹುಡುಗ ಕಾವಲಿಗೆ ನಿಲ್ಲುವವನಂತೆ ಕೆಳಗೆ ನಿಂತಿರುತ್ತಾನೆ. ಎಲ್ಲರೂ ಮಾವಿನ ಹಣ್ಣನ್ನು ಕೀಳುತ್ತಿರುವಾಗ, ತೋಟದ ಒಡೆಯ ಬಂದು ಕೆಳಗೆ ನಿಂತಿದ್ದ ಇವನನ್ನು ಹಿಡಿದು ಥಳಿಸಲು ಪ್ರಾರಂಭಿಸುತ್ತಾನೆ. ತಪ್ಪಿಸಿಕೊಳ್ಳುವ ದಾರಿ ಕಾಣದೆ ಆ ಹುಡುಗ, ತಾನೊಬ್ಬ ಅನಾಥನೆಂದೂ ಆದ್ದರಿಂದ ತನ್ನನ್ನು ಬಿಡಬೇಕೆಂದೂ ಬೇಡಿದಾಗ, ಆ ವ್ಯಕ್ತಿ "ನೀನು ಅನಾಥ ಆಗಿರೋದ್ರಿಂದ, ಎಲ್ಲಕ್ಕಿಂತ ಮುಖ್ಯ ಒಳ್ಳೆ ನಡತೆ ಕಲಿತುಕೊಬೇಕು" ಎಂದು ಹೇಳಿ ಆ ಹುಡುಗನನ್ನು ಬಿಡುತ್ತಾನೆ, ಇದು ಆ ಹುಡುಗನ ಮೇಲೆ ಎಷ್ಟು ಪರಿಣಾಮ ಬೀರುತ್ತದೆಂದರೆ, ಮುಂದೆಂದೂ ಅವನು ಸುಳ್ಳನ್ನು ಹೇಳುವಂತಹ ಕೆಲಸ ಮಾಡುವುದೇ ಇಲ್ಲ. ತನ್ನ ಒಳ್ಳೆಯ ಗುಣದಿಂದ ನೈತಿಕತೆಗೆ ಇನ್ನೊಂದು ಹೆಸರು ಎಂಬಂತೆ ಬಾಳುತ್ತಾನೆ.

ಆ ವ್ಯಕ್ತಿ ಯಾರೆಂದರೆ "Force will be met by Force" ಎಂದು ಶತ್ರು ಸೈನ್ಯಕ್ಕೆ ಸಾರಿ ಹೇಳಿದ, ಹೇಳಿದಂತೆ ಮಾಡಿ ತೋರಿಸಿ ಭಾರತೀಯರ ಶೌರ್ಯವನ್ನು ಎತ್ತಿ ಹಿಡಿದ ಪ್ರಥಮ ವ್ಯಕ್ತಿ. ಪ್ರಾಮಾಣಿಕತೆಯ ಸಾಕಾರ ಮೂರ್ತಿ. ಇವರು ಭಾರತ ಸರ್ಕಾರದಲ್ಲಿ ಗೃಹಮಂತ್ರಿಯಾಗಿದ್ದಾಗ Home less Home minister ಎಂದೇ ಕರೆಸಿಕೊಳ್ಳುತ್ತಿದ್ದರು. ಭಾರತ ಸರ್ಕಾರದ ಗೃಹಮಂತ್ರಿಯಾಗಿದ್ದರೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು, ಅವರೇ ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರಿ.

ಇವರ ಹೆಸರು ನೋಡಿದವರನೇಕರು ಇವರು ಶಾಸ್ತ್ರಿ ಮನೆತನಕ್ಕೆ ಸೇರಿದ ಬ್ರಾಹ್ಮಣರಿರಬೇಕೆಂದು ಭ್ರಮಿಸುತ್ತಾರೆ, ಆದರೆ ಶಾಸ್ತ್ರಿ ಎಂಬುದು ಕಾಶಿ ವಿದ್ಯಾ ಪೀಠದಿಂದ ಅವರಿಗೆ ಸಿಕ್ಕ ಒಂದು ಪದವಿಯಷ್ಟೇ. ಅದು ಈಗಿನ ಕಾಲದ ಬ್ಯಾಚಲರ್ಸ್ ಡಿಗ್ರೀಗೆ ಸಮನಾದ ಒಂದು ಪದವಿ. ಆದರೆ ಅವರ ಹೆಸರಿನೊಡನೆ ಅವಿನಾಭಾವವಾಗಿ ಸೇರಿ ಹೋಯಿತು. ಇವರ ಜನನ 02 October 1904 ರಂದು ಮುಘಲ್ ಸರೈ (Mughalsarai) ಎಂಬಲ್ಲಿ. ತಂದೆ ಶಾರದಾ ಪ್ರಸಾದ್, ತಾಯಿ ರಾಮ್ ದುಲಾರಿ ದೇವಿ.

ಒಬ್ಬ ನಾಯಕರಾಗಿ ಅವರು ತಮ್ಮ ಪಾಲಿನ ಕರ್ತವ್ಯವನ್ನು ಚ್ಯುತಿಯಿಲ್ಲದೆ ನಿಭಾಯಿಸುತ್ತಿದ್ದರು. ಜವಾಬ್ದಾರಿಗಳನ್ನು ತನ್ನ ಹೆಗಲಿಗೆ ತೆಗೆದುಕೊಳ್ಳುತ್ತಿದ್ದರು, ಅವರ ಸರಳತೆ, ದೂರದೃಷ್ಟಿ, ಪ್ರಾಮಾಣಿಕತೆ,  ಕರ್ತೃತ್ವ ಶಕ್ತಿ ಇವುಗಳಿಂದ ಅವರು ರಾಜಕೀಯವಾಗಿ ಮೇಲೇರುತ್ತಾ ಹೋದರು, ಆದರೆ ಒಂದು ಕ್ಷಣಕ್ಕೂ ತಮ್ಮ ಸ್ವಾರ್ಥದ ಬಗೆಗೆ ಯೋಚಿಸಿದವರಲ್ಲ.

ಅವರು ಜವಾಬ್ದಾರಿಗಳನ್ನು ತಮ್ಮ ಹೆಗಲಿಗೆ ತೆಗೆದುಕೊಳ್ಳುತ್ತಿದ್ದ ಪರಿಗೆ ಸಾಕ್ಷಿ ಈ ಘಟನೆಗಳು - ರೈಲ್ವೆ ಇಲಾಖೆ ಇವರ ಅಡಿಯಲ್ಲಿದ್ದಾಗ 1956 ರ ಸೆಪ್ಟೆಂಬರ್ ನಲ್ಲಿ ಮಹಬೂಬ್ ನಗರದಲ್ಲಿ ನಡೆದ, 112 ಜನರನ್ನು ಬಳಿ ಪಡೆದ ರೈಲ್ವೆ ಅಪಘಾತದ ನೈತಿಕ ಹೊಣೆ ಹೊತ್ತು ತಕ್ಷಣವೇ ರಾಜಿನಾಮೆ ನೀಡಿದ್ದರು, ಅದು ಸ್ವೀಕಾರವಾಗಲಿಲ್ಲ. ಮೂರು ತಿಂಗಳುಗಳ ನಂತರ ತಮಿಳು ನಾಡಿನ ಅರಿಯಲುರ್ ನಲ್ಲಿ 144 ಜನರ ಬಲಿ ಪಡೆದ ರೈಲು ಅಪಘಾತದ ನಂತರ ಅವರು ಮತ್ತೆ ಆ ಪದವಿಯಲ್ಲಿ ಮುಂದುವರೆಯಲಿಲ್ಲ. ಅವರ ರಾಜಿನಾಮೆ ಸ್ವೀಕರಿಸುವಾಗ ಪ್ರಧಾನಿಯಾಗಿದ್ದ ನೆಹರು ಸಂಸತ್ತಿನಲ್ಲಿ, "ಶಾಸ್ತ್ರೀಜಿಯವರ ರಾಜಿನಾಮೆ ರಾಜಕೀಯದಲ್ಲಿ ಮುಂದಿನ ಪೀಳಿಗೆಗೆ ಒಂದು ಮಾದರಿಯಾಗಿ ನಿಲ್ಲುವುದೆಂಬ ಒಂದೇ ಕಾರಣಕ್ಕೆ ಇದನ್ನು ಸ್ವೀಕರಿಸುತ್ತಿದ್ದೇನಷ್ಟೇ, ನಡೆದ ಅಪಘಾತಗಳಿಗೆ ಶಾಸ್ತ್ರೀಜಿಯವರು ಹೊಣೆಗಾರರೆಂದು ಅಲ್ಲ" ಎಂದು ಘೋಷಿಸಿದ್ದರು. ಮಾದರಿಯೇನೋ ನೆಲೆ ನಿಂತಿತು, ಆದರೆ ಇಂದಿನ ರಾಜಕಾರಣದಲ್ಲಿ ಯಾರು ಅದನ್ನು ಪಾಲಿಸುತ್ತಿದ್ದಾರೆ?

27 May 1964 - ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಹೃದಯಾಘಾತದಿಂದ ಮರಣವನ್ನಪ್ಪಿದ ದಿನ. ರಾಷ್ಟ್ರೀಯ ಕಾಂಗ್ರೆಸ್ ದೃಷ್ಟಿಯಲ್ಲಿ ಪರ್ಯಾಯ ನಾಯಕನಾಗಿ ಕಂಡವರೇ ಶಾಸ್ತ್ರೀಜಿ. ಭಾರತದ ದ್ವಿತೀಯ ಪ್ರಧಾನಿಯಾಗಿ ಇವರು ಅಧಿಕಾರ ಸ್ವೀಕಾರ ಮಾಡಿದ ನಂತರ ಭಾರತದ ಚಿತ್ರಣವೇ ಬದಲಾಗುತ್ತಾ ಹೋಯಿತು.ಶ್ವೇತ ಕ್ರಾಂತಿಗೆ ಉತ್ತೇಜನ ಕೊಟ್ಟು ಅದರ ಹರಿಕಾರರೆನಿಸಿದರು. ಹಸಿರು ಕ್ರಾಂತಿಯ ಪ್ರಾರಂಭವೂ ಇವರ ಕಾಲದಲ್ಲೇ. ಪ್ರಧಾನಿಯಾಗಿ ಆರಿಸಿಬಂದ ಮೇಲೆ ಅವರ ಮೊದಲ ಭಾಷಣದಲ್ಲೇ ಅವರು ತಮ್ಮ ದೃಷ್ಟಿಯನ್ನು ಸ್ಪಷ್ಟಗೊಳಿಸಿದ್ದರು. "There comes a time in the life of every nation when it stands at the cross-roads of history and must choose which way to go. But for us there need be no difficulty or hesitation, no looking to right or left. Our way is straight and clear—the building up of a socialist democracy at home with freedom and prosperity for all, and the maintenance of world peace and friendship with all nations." ಎಂದು ಸಾರಿದ್ದರು. 

ಪ್ರಧಾನಿಗಳ ಮಕ್ಕಳಾಗಿದ್ದರೂ, ಅವರ ಮಕ್ಕಳು ಶಾಲೆಗೆ ಹೋಗಲು ಜಟಕಾವನ್ನು ಅವಲಂಬಿಸಿದ್ದರಂತೆ, ಒಮ್ಮೆ ತಿಂಗಳ ಅಂತ್ಯದಲ್ಲಿ ತುರ್ತಾಗಿ ಹಣದ ಅಗತ್ಯ ಬಂದಾಗ, ಭಾರತದ ಪ್ರಧಾನಿ ಕೈಲಿ ಹಣವಿಲ್ಲದೇ ಒದ್ದಾಡುತ್ತಿದ್ದರು. ಅವರ ಪತ್ನಿ ಹಣ ತಂದುಕೊಟ್ಟಾಗ ಆಕೆಗೆ ಅದು ಎಲ್ಲಿಂದ ಬಂತೆಂದು ಇವರು ಕೇಳುತ್ತಾರೆ, ಅವರ ತಿಂಗಳ ಸಂಬಳದಲ್ಲಿ ತಾನು ಹತ್ತು ರುಪಾಯಿ ಉಳಿತಾಯ ಮಾಡುತ್ತಿರುವುದಾಗಿ ಆಕೆ ಹೇಳಿದಾಗ, ಸರ್ಕಾರಕ್ಕೆ ಪತ್ರ ಬರೆದು ಇನ್ನು ಮುಂದೆ ತನಗೆ ಹತ್ತು ರುಪಾಯಿ ಸಂಬಳ ಕಡಿಮೆ ಕೊಡಬೇಕೆಂದು ಕೇಳಿಕೊಂಡಿದ್ದರು! ರೈಲ್ವೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ, ಸರ್ಕಾರಿ ವಸತಿಯಿಂದ ಅವರು ಹೊರಬಂದಾಗ ಅಕ್ಷರಶಃ ಅನಿಕೇತನರಾಗಿದ್ದರು. ವಾಸ ಮಾಡಲು ಮನೆಯೇ ಇಲ್ಲದೇ ಒದ್ದಾಡಿದ್ದರು.

ಪ್ರಧಾನಿಯಾದಾಗ, ಅವರ ಅಧಿಕಾರಾವಧಿಯಲ್ಲಿ ಅನೇಕ ಸಂಕಷ್ಟಗಳು ಬಂದರೂ ಧೃತಿಗೆಡಲಿಲ್ಲ. ಮದ್ರಾಸಿನಲ್ಲಿ ಶುರುವಾಗಿದ್ದ ಹಿಂದಿ ವಿರೋಧಿ ಅಭಿಯಾನ, ಆಹಾರ ಕೊರತೆ, ನೆರೆ ರಾಷ್ಟ್ರಗಳ ದಾಳಿಯ ಭೀತಿ, ಕಾಶ್ಮೀರ ಸಮಸ್ಯೆ ಹೀಗೆ ಅನೇಕ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಿದರು. ಆಹಾರ ಕೊರತೆಯುಂಟಾಗಿದ್ದಾಗ ಶಾಸ್ತ್ರೀಜಿ, ಜನ ವಾರದಲ್ಲಿ ಒಂದು ದಿನ ತಮ್ಮ ಒಪ್ಪೊತ್ತಿನ ಊಟ ಬಿಟ್ಟರೆ ಕೊರತೆಯನ್ನು ಸರಿದೂಗಿಸುವುದು ಸಾಧ್ಯ ಎಂಬ ಕರೆ ನೀಡಿದರು, ಇಡೀ ದೇಶಕ್ಕೆ ದೇಶವೇ ಅವರ ಕರೆಗೆ ಸ್ಪಂದಿಸಿ, ಕರೆ ಬಿತ್ತರಗೊಂಡ ಸೋಮವಾರದಿಂದ ಆರಂಭಿಸಿ ಪ್ರತಿ ಸೋಮವಾರ ಒಪ್ಪೊತ್ತು ಊಟ ಕೈಬಿಟ್ಟಿತು. ಆ ಸಮಸ್ಯೆ ತನ್ನ ಪರಿಹಾರದ ಹಾದಿಯನ್ನು ಕಂಡುಕೊಂಡಿತ್ತು. ದೇಶದ ಜನತೆಗೆ ತಮ್ಮ ಪ್ರಧಾನಿಯ ಮೇಲೆ ಇದ್ದ ನಂಬಿಕೆಗೆ, ಆ ವ್ಯಕ್ತಿ ಜನರ ಹೃದಯ ತಲುಪಿದ್ದರೆನ್ನಲು ಇದಕ್ಕಿಂತ ನಿದರ್ಶನ ಬೇಕೇ? ಇದೇ ನಂಬಿಕೆ, ಇದೇ ರಾಷ್ಟ್ರದ ಜನತೆಗೆ ಇಂದಿನ ಪ್ರಧಾನಿಯ ಮೇಲೆ ಇರುವುದೇ ಎಂದು ಕೇಳಿಕೊಂಡರೆ ಬಹುಶಃ ಪ್ರಶ್ನೆಯೇ ವ್ಯಂಗ್ಯವಾಗಬಹುದೇನೋ.

ಇನ್ನು ಅವರು ಶತ್ರು ರಾಷ್ಟ್ರಗಳನ್ನು ಅವರು ನಿಭಾಯಿಸಿದ ರೀತಿ ಅದೂ ಅದ್ಭುತ. 1962ರಲ್ಲಿ ಚೀನಾ ಆಕ್ರಮಣ ಮಾಡಿದಾಗ, ನಮ್ಮ ಸೇನೆಗೆ ಆದೇಶ ನೀಡಲು "ಹಿಂದಿ - ಚೀನೀ ಭಾಯಿ ಭಾಯಿ" ಮಂತ್ರ ಜಪಿಸುತ್ತಿದ್ದ ಪ್ರಧಾನಿ ನೆಹರು ಮೀನ ಮೇಷ ಎಣಿಸುತ್ತಿದ್ದರು, ಪರಿಣಾಮ ಭಾರತ ತನ್ನ ಅಧೀನದಲ್ಲಿದ್ದ ಅನೇಕ ಭೂ ಪ್ರದೇಶವನ್ನು ಕಳೆದುಕೊಂಡಿತು. ಆದರೆ 1965ರಲ್ಲಿ ಚುಕ್ಕಾಣಿ ಹಿಡಿದ್ದವರು ಇಂತಹ ಅನರ್ಥಕ್ಕೆ ಆಸ್ಪದ ಕೊಡಲಿಲ್ಲ. ಅನೇಕ ಪ್ರಮುಖ ದೇಶಗಳನ್ನು ಸುತ್ತಿದರು, ಅಲ್ಲಿನ ನಾಯಕರಿಗೆ ಭಾರತದ ನಿಲುವನ್ನು ಸ್ಪಷ್ಟಪಡಿಸಿದರು. ನೆರೆ ರಾಷ್ಟ್ರ ಪಾಕಿಸ್ತಾನ ತನ್ನ ಕುಚೇಷ್ಟೆಗಳನ್ನು ಪ್ರಾರಂಭಿಸಿತ್ತು, 1965ರ ಮೇ - ಜೂನ್ ನಲ್ಲಿ ಗುಜರಾತ್ ರಾಜ್ಯದ ಕಛ್ಹ್ ಪ್ರಾಂತ್ಯದಲ್ಲಿ ಆಕ್ರಮಣ ಮಾಡಿತು, ಶಾಸ್ತ್ರೀಜಿ ಹಿಂದೆ ಮುಂದೆ ಯೋಚಿಸಲಿಲ್ಲ, ನಮ್ಮ ಸೈನ್ಯವನ್ನು ಅಲ್ಲಿಗೆ ಅಟ್ಟಿದರು. ಪಾಕಿಸ್ತಾನದ ಪ್ರಯತ್ನ ವಿಫಲವಾಯಿತು, ನಂತರ ಎರಡೂ ದೇಶಗಳೂ ಹೋರಾಟ ನಿಲ್ಲಿಸಲು ಒಂದು ಒಪ್ಪಂದಕ್ಕೆ ಬಂದರು. ಕಛ್ಹ್ ನಲ್ಲೇನೋ ಸರಿ ಹೋಯಿತು, ಆದರೆ ಇನ್ನೂ ಒಪ್ಪಂದದ ಶಾಯಿ ಆರುವ ಮೊದಲೇ ಪಾಕಿಸ್ತಾನ ಮತ್ತೆ ತನ್ನ ನಿಜರೂಪ ತೋರಿತು, ಕಾಶ್ಮೀರದಲ್ಲಿ ಮತ್ತೆ ಆಕ್ರಮಣ ಮಾಡಿದ್ದಲ್ಲದೇ, ಶಾಸ್ತ್ರೀಜಿ ಒಬ್ಬ ಹಿಂದೂ ಎಂದು ಬಿಂಬಿಸಿ ಭಾರತೀಯ ಮುಸ್ಲಿಮರನ್ನು ಅವರ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನ ಮಾಡಿತು. ಒಂದು ಕಡೆ ಕಾಶ್ಮೀರದಲ್ಲಿ, ಇತ್ತ ಪೂರ್ವ ಪಾಕಿಸ್ತಾನದ (ಈಗಿನ ಬಾಂಗ್ಲಾದೇಶ) ಕಡೆಯಿಂದ ಒಟ್ಟಿಗೇ ಆಕ್ರಮಣವಾಗುವ ಸಾಧ್ಯತೆಯಿತ್ತು. ಅದೇ ಸಮಯದಲ್ಲಿ ಚೀನಾ ಇಲ್ಲದ ಆರೋಪ ಮಾಡುತ್ತಾ ಭಾರತಕ್ಕೆ ಬೆದರಿಕೆ ಹಾಕಲು ಪ್ರಾರಂಭಿಸಿತ್ತು, ಎಲ್ಲವನ್ನೂ ಶಾಸ್ತ್ರೀಜಿ ಉಕ್ಕಿನ ಗುಂಡಿಗೆ ತೋರಿ ನಿಭಾಯಿಸಿದರು. "Go Forward & Strike" ಎಂದು ಸೇನೆಯ ಕಮಾಂಡರ್ ಗೆ ಆದೇಶವಿತ್ತು ಅವನಿಗೆ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ಕೊಟ್ಟರು. "Force will be met by Force" ಎಂದು ಶತ್ರು ರಾಷ್ಟ್ರಕ್ಕೆ ಪ್ರತ್ಯುತ್ತರ ಕೊಟ್ಟರು.

ಆ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ನಿಂತು ಅವರು ಮಾಡಿದ ಭಾಷಣದಲ್ಲಿ  - "It does not matter if we are destroyed. We will fight to the last to maintain the high honor of the Indian nation and its flag." ಎಂದು ಘೋಷಿಸಿದ್ದರು. ಯಾರು ಏನೆಂದು ಭಾವಿಸಿದರೂ ಚಿಂತೆಯಿಲ್ಲ, ನಮ್ಮ ರಾಷ್ಟ್ರದ ಸಾರ್ವಭೌಮತ್ವಕ್ಕೆ ಧಕ್ಕೆ ಬರಲು ಕೊಡುವುದಿಲ್ಲ ಎಂದು ಗುಡುಗಿದ್ದರು. ಅಂತಹ ಧೀಮಂತ ನಾಯಕನನ್ನು ಕಂಡಿದ್ದ ದೇಶ, ಇಂದು ತನ್ನ ನಿಲುವನ್ನು ವಿಶ್ವಕ್ಕೆ ಸಾರಲು ಒಂದು ಧ್ವನಿಯಿಲ್ಲದೇ ಪರಿತಪಿಸುತ್ತಿರುವುದು ವಿಪರ್ಯಾಸವಲ್ಲವೇ? ಶತ್ರುಗಳಿಗೆ ಪ್ರತ್ಯುತ್ತರ ಕೊಡುವುದಿರಲಿ, ಮಾನವ ಹಕ್ಕು ಎಂಬ ಹೆಸರಿನಲ್ಲಿ ರಾಷ್ಟ್ರದ ಗೌರವಕ್ಕೆ ಧಕ್ಕೆಯುಂಟು ಮಾಡಿದ ಭಯೋತ್ಪಾದಕರಿಗೂ ರಕ್ಷಣೆ ಕೊಡುತ್ತಾ, ಅವರನ್ನು ಸಾಕುತ್ತಿದೆ ನಮ್ಮ ಸರ್ಕಾರ. ಮತಗಳ ಮೇಲೆ ಕಣ್ಣಿಟ್ಟು ಅವರನ್ನು ಶಿಕ್ಷಿಸದೆ, ಜನತೆಗೆ ನೆಪ ಹೇಳುತ್ತಾ ಕಾಲ ದೂಡುತ್ತಿದೆ.

ಶಾಸ್ತ್ರೀಜಿ ಕೇವಲ ರಾಷ್ಟ್ರದ ಜನತೆಗೆ ಹೇಳಿದುದಷ್ಟೇ ಅಲ್ಲ, ಚೀನಾ "ಭಾರತ ತನ್ನ ನೆಲದಲ್ಲಿ ಸೇನೆ ನಿಲ್ಲಿಸುತ್ತಿದೆ, ಅದು ತನ್ನ ಸೈನ್ಯ ಹಿಂತೆಗೆದುಕೊಳ್ಳಬೇಕು" ಎಂಬ ಸುಳ್ಳು ಆರೋಪವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಡಿದಾಗ, ಅದಕ್ಕೆ ಪ್ರತ್ಯುತ್ತರ ಕೊಡಲು ಸ್ವಲ್ಪವೂ ತಡ ಮಾಡಿರಲಿಲ್ಲ, ಪರಿಸ್ಥಿತಿ ಬಹಳ ಸೂಕ್ಷ್ಮವಾಗಿತ್ತು, ಸೈನ್ಯ ಹಿಂತೆಗೆದು ಕೊಂಡರೆ ಚೀನಾದ ಆರೋಪ ಸತ್ಯವೆಂದು ಒಪ್ಪಿಕೊಂಡಂತೆ ಆಗುತ್ತಿತ್ತು. ಬಹಳಷ್ಟು ದೇಶಗಳು ಭಾರತದ ಪ್ರತ್ಯುತ್ತರವೇನಿರಬಹುದೆಂಬ ನಿರೀಕ್ಷೆಯಲ್ಲಿದ್ದವು. ಆಗ ಲಾಲ್ ಬಹದ್ದೂರರು - "China's allegation is untrue. If China attacks India it is our firm resolve to fight for our freedom. The might of China will not deter us from defending our territorial integrity." ಎಂದು ಹೇಳಿ ಚೀನಾದ ಬಾಯಿ ಮುಚ್ಚಿಸಿದ್ದರು. 1965ರ ಇಂಡೋ-ಪಾಕ್ ಕದನದಲ್ಲಿ ಭಾರತ ಜಯ ಸಾಧಿಸಿ ಕಾಶ್ಮೀರವನ್ನು ವಶ ಪಡಿಸಿಕೊಂಡಿತಲ್ಲದೆ ಲಾಹೋರ್ ವರೆಗಿನ ಪಂಜಾಬ್ ನ ಭೂಮಿ ಭಾರತದ ವಶಕ್ಕೆ ಬಂದಿತ್ತು. ನಂತರ ಅಂತರರಾಷ್ಟ್ರೀಯ ಒತ್ತಡಕ್ಕೆ ಮಣಿದು, ಎರಡು ದೇಶಗಳೂ ಒಂದು ಒಪ್ಪಂದಕ್ಕೆ ಬರಲು ಒಪ್ಪುತ್ತವೆ, ಪಾಕಿಸ್ತಾನಕ್ಕೆ ಅದರಿಂದ ವಶಪಡಿಸಿಕೊಂಡ ಭೂಮಿಯನ್ನು ಅದಕ್ಕೆ ಹಿಂತಿರುಗಿಸುವುದೆಂದೂ, ಕಾಶ್ಮೀರ ವಿಚಾರವಾಗಿ ಪಾಕ್ ಇನ್ನೆಂದೂ ತಂಟೆ ಮಾಡುವುದಿಲ್ಲವೆಂದೂ, ಎರಡು ರಾಷ್ಟ್ರಗಳೂ ಸೌಹಾರ್ದದಿಂದ ವ್ಯವಹರಿಸಬೇಕೆಂದೂ ಒಪ್ಪಂದವಾಗಿರುತ್ತದೆ.

ಒಪ್ಪಂದಕ್ಕೆ ಸಹಿ ಹಾಕಲು ಶಾಸ್ತ್ರೀಜಿ ರಷ್ಯಾದ ತಾಷ್ಕೆಂಟ್ ಗೆ ತೆರಳುತ್ತಾರೆ, ಭಾರತದ ಪರವಾಗಿ ಒಪ್ಪಂದಕ್ಕೆ 11 ಜನವರಿ 1966ರಂದು ಸಹಿಯನ್ನೂ ಮಾಡುತ್ತಾರೆ, ಆದರೆ ಅದೇ ರಾತ್ರಿಯಂದು ಅವರಿಗೆ ಹೃದಯಾಘಾತವಾಗುತ್ತದೆ, ಅಲ್ಲೇ ಮರಣವನ್ನಪ್ಪುತ್ತಾರೆ. ಅವರ ದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಲು ಭಾರತ ಸರ್ಕಾರವೂ ಮುಂದೆ ಬರುವುದಿಲ್ಲ, ರಷ್ಯಾ ಸರ್ಕಾರವೂ ಅದರ ಅಗತ್ಯವಿಲ್ಲವೆಂದು, ಅವರಿಗೆ ಹೃದಯಾಘಾತವಾಗಿದ್ದೆ ನಿಜವೆಂದು ಸಾರಿ ಬಿಡುತ್ತವೆ. ಹೃದಯಾಘಾತವಾಗಿದ್ದರೆ ಅವರ ದೇಹವೇಕೆ ನೀಲಿಗಟ್ಟಿತ್ತು ಎಂಬ ಅವರ ಕುಟುಂಬವರ್ಗದವರ ಪ್ರಶ್ನೆಗೆ ಇದುವರೆಗೂ ಉತ್ತರ ದೊರೆತಿಲ್ಲ. 2009ರಲ್ಲಿ ಅವರ ಸಾವಿನ ಸತ್ಯಾಸತ್ಯತೆ ತಿಳಿಯಲು ಮಾಹಿತಿ ಹಕ್ಕು ಕಾಯ್ದೆಯಡಿ ಸರ್ಕಾರಕ್ಕೆ ಬಂದ ಅರ್ಜಿಯನ್ನು ಕೇಂದ್ರ ಸರ್ಕಾರ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರಬಹುದಾದ ಗೌಪ್ಯ ವಿಚಾರ ಎಂದು ಘೋಷಿಸಿ, ಮಾಹಿತಿ ನೀಡಲು ನಿರಾಕರಿಸುತ್ತದೆ. ಇದು ಅಂತಹ ಮಹಾನ್ ನಾಯಕನಿಗೆ ನಾವು ಸಲ್ಲಿಸಿದ ಕೃತಜ್ಞತೆ.

ಶಾಸ್ತ್ರೀಜಿ ಕಾಲದಲ್ಲಿದ್ದ, ರಾಷ್ಟ್ರದ ಪ್ರತಿಯೊಬ್ಬ ನಾಯಕರ ಜನ್ಮದಿನವನ್ನು ಒಂದಲ್ಲಾ ಒಂದು ದಿನಾಚರಣೆಯ ಹೆಸರಿನಲ್ಲಿ ಆಚರಿಸಲಾಗುತ್ತದೆ. ಇಂದು ಶಾಸ್ತ್ರೀಜಿಯವರ 108ನೇ ಜನ್ಮದಿನ, ಈ ದಿನ 2 October ಮಾತ್ರ ಗಾಂಧೀಜಿಯವರ ಗುಣಗಾನದಲ್ಲೇ ಕಳೆದು ಹೋಗುತ್ತದೆ. ಎಲ್ಲೋ ಕೆಲವೊಂದು ಶಾಲೆಗಳಲ್ಲಿ ಗಾಂಧೀಜಿಯವರ ಭಾವಚಿತ್ರದ ಪಕ್ಕದಲ್ಲಿ, ಶಾಸ್ತ್ರೀಜಿಯವರ ಪಟವನ್ನೂ ಇಟ್ಟಿರುತ್ತಾರಾದರೂ, ಮಕ್ಕಳಿಗೆ ಅವರ ಸಾಧನೆಗಳ ಬಗೆಗೆ ಪರಿಚಯ ಮಾಡಿಸಲು ಸಮಯವೇ ಸಾಲದು. ಗಾಂಧೀಜಿಯವರ ಜೀವನಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ನಾಯಕರಲ್ಲಿ ಶಾಸ್ತ್ರೀಜಿ ಅಗ್ರಗಣ್ಯರು, ಇಂದು ಕೇವಲ ಗಾಂಧೀಜಿಯವರ ಉಪದೇಶಗಳನ್ನು ನೆನಸಿಕೊಂಡರೆ ಸಾಲದು, ಶಾಸ್ತ್ರೀಜಿಯವರ ಕರ್ತವ್ಯ ರೀತಿ, ಅವರ ಕರ್ತೃತ್ವ ಶಕ್ತಿಗಳನ್ನೂ ಸ್ಮರಿಸಬೇಕು. ಇಂದಿನ ದಿನವನ್ನು ಅವರಿಗೆ ಮೀಸಲಾಗಿಡ ಬಹುದೇ???

Happy Birth Day Shastriji. Our country needs you today. 

Thursday, 2 August 2012

ಏಕೆ ಹೀಗೆ ನಮ್ಮ ಮನವು...

ಕೆಲವೊಮ್ಮೆ ನಮ್ಮ ಮನಸ್ಸೇಕೆ ಹೀಗೆ ರಚ್ಚೆ ಹಿಡಿದು ಕುಳಿತು ಬಿಡುತ್ತದೆ? ಏನು ಮಾಡಲೂ ಒಲ್ಲೆನೆಂದು ಹಠ ಮಾಡುತ್ತಾ, ಸುಮ್ಮನೇ ಒಂದು ಮೂಲೆಯಲ್ಲಿ ಯೋಚಿಸುತ್ತಾ ಕೂಡುವ ಭಾವವೇಕೆ ಮನವನ್ನಾವರಿಸಿಬಿಡುತ್ತದೆ? ಏನಾದರೂ ಸಮಸ್ಯೆಯೋ? ಇಲ್ಲ. ಆರ್ಥಿಕ ತೊಂದರೆ, ಕಷ್ಟ, ಪ್ರೇಮವೈಫಲ್ಯ, ಓದಿನಲ್ಲಿ ನಪಾಸು, ಕಛೇರಿಯಲ್ಲಿ ಕಿರುಕುಳ, ಉಹ್ಞುಂ, ಯಾವುದೂ ಇಲ್ಲ. ಹುಟ್ಟಾಸೋಮಾರಿಯೋ? ಅದಂತೂ ಖಂಡಿತಾ ಅಲ್ಲ. ಕೆಲಸಕ್ಕೆ ಹೋಗುವಾಗ, ತನ್ನ ಕಾರ್ಯದಕ್ಷತೆಗೆ ಹೆಸರಾಗಿ, ಅದಕ್ಕಾಗೇ ಗುರುತಿಸಲ್ಪಟ್ಟು ಪ್ರಶಸ್ತಿಯನ್ನೂ ಪಡೆದಿದ್ದ ಹುಡುಗಿ. ಕೆಲಸ ಶುರುವಿಟ್ಟುಕೊಂಡರೆ  ಊಟ, ತಿಂಡಿಯ ಪರಿವೆಯಿಲ್ಲದಂತೆ ಕಛೇರಿಯಲ್ಲಿದ್ದ ಒಂಭತ್ತು ತಾಸೂ ಕೆಲಸದ ಕಡೆಗೇ ಗಮನವಿಟ್ಟು ಕೂಡುತ್ತಿದ್ದವಳು, ಈಗ ಅನಿವಾರ್ಯ ಕಾರಣಗಳಿಂದ ಕೆಲಸ ಬಿಟ್ಟು ಮನೆಯಲ್ಲಿ ಕೂತರೆ, ಮನೆಕೆಲಸ ಮಾಡುವುದಕ್ಕೂ ಮನಸು ಬಾರದು.

ಅಮ್ಮನೇನೋ ತುಟಿಪಿಟಕ್ ಎನ್ನದೆ ತಮ್ಮ ಕೆಲಸವಿದೆಂದು ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಾರೆ. ಆದರೆ ಅವರು ಕೆಲಸ ಮಾಡುವುದನ್ನೂ ನಮ್ಮ ಹುಡುಗಿಗೆ ನೋಡಲಾಗದು. ಏನೋ ಕಸಿವಿಸಿ, ಸಂಕಟ ಒಳಗಿನಿಂದ ಒದ್ದುಕೊಂಡು ಬರುತ್ತದೆ. ತಾಯಿಯ ಮೇಲೆ ಎಲ್ಲಾ ಭಾರವನ್ನೂ ಹಾಕಿ ತಾನು ಆರಾಮಾಗಿ ಕುಳಿತಿರುವೆನೆಂಬ ಯೋಚನೆ ಮನಸ್ಸನ್ನು ಮುತ್ತಿ ನೋಯಿಸುತ್ತದೆ. ಆದರೆ, ಕೆಲಸ ಮಾಡಲು ಮಾತ್ರ ಏಳಲಾರಳು. ಕೈ ಕಾಲುಗಳು ಕುಳಿತಿರುವ ಜಾಗಕ್ಕೆ ಅಂಟಿ ಹೋಗಿವೆಯೇನೋ ಎಂಬಂತೆ, ಕುಳಿತಲ್ಲಿಂದ ಎದ್ದು ಹೋಗುವ ಮನಸ್ಸಾಗುವುದಿಲ್ಲ.

ಯಾವುದೋ ಒಂದು ಕೆಲಸಕ್ಕೆ ಬಾರದ ಹಿಂದಿ ಸೀರಿಯಲ್ಲು. ಅದನ್ನು ನೋಡಿ ಅಂತರ್ಜಾಲದಲ್ಲಿ ಅದರ ಕೊಂಡಿಯನ್ನು ಹುಡುಕುತ್ತಾ ಕೂಡುತ್ತಾಳೆ. ಅದರ ಹುಚ್ಚರಾಗಿರುವ ಕೆಲ ಜನ, ಅದರ ಬಗೆಗೆ ಬರೆಯುವ ಮುನ್ನೋಟಗಳನ್ನು, ಅದರ ಬಗೆಗೆ ಬರುವ ಸುದ್ದಿಗಳನ್ನು ನೋಡುತ್ತಾ ಕಾಲಯಾಪನೆ ಮಾಡುತ್ತಾಳೆ. ಅದನ್ನು ದಿನಕ್ಕೆ ನಾಲ್ಕು ಬಾರಿ ಮೂರ್ಖರ ಪೆಟ್ಟಿಗೆಯಲ್ಲಿ ಹಾಕಿದರೂ ತಪ್ಪದೇ ನೋಡುತ್ತಾಳೆ. ಅದೇ ಜಗವೆಂಬ ಭ್ರಮೆಯಲ್ಲಿದ್ದಾಳೆನೋ ಎಂದನಿಸುತ್ತದೆ, ಒಮ್ಮೊಮ್ಮೆ. ಅದು ತನ್ನ ಸಮಯ ಹಾಳುಮಾಡುತ್ತಿದೆ ಎಂದು ಅವಳೇ ಹೇಳುತ್ತಾಳೆ, ಆದರೆ ಅದನ್ನು ಬಿಡಲಾರಳು. ಹಾಗಿದ್ದರೆ ಮುಂಚಿಂದಲೂ ಟಿ. ವಿ. ದಾಸಿಯೋ, ಸೀರಿಯಲ್ಲುಗಳ ಹಾವಳಿಗೆ ತುತ್ತಾದವಳೋ? ಅಲ್ಲ. ಮನಸ್ಸು ಬಂದರೆ ಅದನ್ನು ಚಾಲೂ ಮಾಡುವ, ಇಲ್ಲದಿದ್ದರೆ ಇಲ್ಲ ಎಂಬಂತಿದ್ದಳು. ದಿನಕ್ಕೆ ಹದಿನೈದು ನಿಮಿಷ ಟಿ. ವಿ. ನೋಡಿದರೆ ಅದೇ ಹೆಚ್ಚು ಎನ್ನುವ ಸ್ವಭಾವ. ತಾನಾಯಿತು, ತನ್ನ ಕೆಲಸ, ಪುಸ್ತಕ, ಓದು ಇಷ್ಟೇ ಪ್ರಪಂಚವೆಂಬಂತಿದ್ದಳು. ಅವಳಲ್ಲಾದ ಬದಲಾವಣೆ ಸ್ವತಃ ಅವಳಿಗೂ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಟಿ. ವಿ. ನೋಡುವುದೇನೂ ಅಪರಾಧವಲ್ಲ ಬಿಡಿ. ಉಪಯುಕ್ತ ಕಾರ್ಯಕ್ರಮಗಳಾದರೆ ಸರಿ. ಆದರೆ ವರ್ಷಾನುಗಟ್ಟಲೆ ಸಾಗುವ ಈ ಧಾರಾವಾಹಿಗಳು ನುಂಗುವ ನಮ್ಮ ಸಮಯ?? ಅದರ ಬೆಲೆ ಕಟ್ಟಲಾದೀತೇ?

ಅವಳಿಗೆ ಇದೆಲ್ಲವೂ ಗೊತ್ತು. ನಿರಂತರ ಕಲಿಯುವ, ಕಲಿಸುವ ಮನಸ್ಸಿರುವ ಹುಡುಗಿ. ಆಕೆಗೆ ತನ್ನ ಸಮಯದ ಬೆಲೆಯೂ ಗೊತ್ತು. ಕಳೆದ ಕ್ಷಣಗಳು ಮರಳಿ ಬಾರವೆಂಬ ಅರಿವೂ ಇದೆ (ಹೇಳಿದೆನಲ್ಲ, ಅದನ್ನು ಅವಳೇ ಒಪ್ಪಿಕೊಳ್ಳುತ್ತಾಳೆಂದು). ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಬಹಳ ಆಳವಾಗಿ ಓದಬೇಕೆಂಬ ಆಸ್ಥೆಯೂ, ಇತರರಿಗೂ ಆ ಕ್ಷೇತ್ರದಲ್ಲಿ ಆಸಕ್ತಿ ಮೂಡಿಸಬೇಕೆಂಬ ಕಾಳಜಿಯೂ ಅವಳಲ್ಲಿ ಜಾಗ್ರತವಾಗಿವೆ. ಅದಕ್ಕೆ ಸಮಯ ಹೊಂದಿಸಲೆಂದೇ ಸಾಧಿಸಿದ್ದ ಕೆಲಸವನ್ನೂ ಬಿಟ್ಟಿದ್ದಾಳೆ. ಕಳೆದೊಂದಷ್ಟು ದಿನಗಳಲ್ಲಿ ತನ್ನ ಇಡೀ ಜೀವನವನ್ನು, ತನ್ನನ್ನು ಕಾಡುತ್ತಿರುವ ಆ ಧ್ಯೇಯಕ್ಕಾಗಿಯೇ ಮುಡಿಪಿಡಬೇಕೆಂಬ ನಿರ್ಧಾರವೂ ಆಗಿದೆ. ಅದಕ್ಕಾಗಿ ಕೆಲವರ ಕೈಯಲ್ಲಿ ಹುಚ್ಚಿಯೆಂದು ಬೈಸಿಕೊಂಡಿದ್ದೂ ಇದೆ. ಆದರೆ ಮನೆಯಲ್ಲಿ ಕೂತಾಗಿನಿಂದ.....

ರೆಪ್ಪೆಯಾಡಿಸುವಷ್ಟು ವೇಗದಲ್ಲಿ ದಿನಗಳು ಓಡುತ್ತಿವೆ. ಆದರೆ ಓದು??? ಒಂದಿಂಚೂ ಸಾಗಿಲ್ಲ. ಅತ್ತ ಓದಲು ಮನಸ್ಸಿದ್ದರೂ ಮನಸ್ಸು ಬರುತ್ತಿಲ್ಲ, ಇತ್ತ ಮನೆಕೆಲಸವನ್ನೂ ಮಾಡದ ಮೈಗಳ್ಳತನ ಆವರಿಸಿಕೊಳ್ಳುತ್ತಿದೆ. ಸಾಲದೆಂಬಂತೆ ಜತೆಗೆ ಮೂರ್ಖರ ಪೆಟ್ಟಿಗೆ!!! ತನ್ನ ನಡೆ ತಪ್ಪೆಂದು ತಿಳಿದಿದ್ದರೂ, ಏನು ಮಾಡಲೂ ತೋಚದೆ ಕುಳಿತಿರುವ ಅವಳಿಗೆ, ತಿದ್ದಿಕೊಳ್ಳಲು ಮಾರ್ಗ ತೋರಿಸುವ, ಅವಳ ಮನವನ್ನು ಅರ್ಥೈಸಿಕೊಂಡು, ಅವಳಿಗೆ ಕಿವಿಯಾಗಿ, ಅವಳ ಭಾವಕ್ಕೆ ಸ್ಪಂದಿಸುವ ಸ್ನೇಹಿತರೂ, ಹಿತೈಷಿಗಳೂ ಯಾರಿಲ್ಲ. ಸ್ನೇಹಿತರಿದ್ದರೂ, ಅವರಿಗೆ ಅವಳ ಮಾತನ್ನು ಆಲಿಸುವಷ್ಟು ತಾಳ್ಮೆಯಿಲ್ಲ.

ಕೆಲವೊಮ್ಮೆ ಮಾಯೆ ಯಾವುಯಾವುದೋ ರೂಪದಲ್ಲಿ ಬಂದು ಆವರಿಸಿಕೊಳ್ಳುತ್ತದೆ ಎಂದು ಕೇಳಿದ್ದೇನೆ. ಆದರೆ ಎಲ್ಲವೂ ತಿಳಿದಿದ್ದೂ ಅದರಿಂದ ಬಿಡಿಸಿಕೊಳ್ಳಲಾರದಷ್ಟು  ನಮ್ಮ ಮನ ಅಸಹಾಯಕವಾಗುತ್ತದಲ್ಲ, ಏಕೆ ಹೀಗೆ???